‘ಕೆಜಿಎಫ್: ಚಾಪ್ಟರ್ 2’ ಸಿನಿಮಾ (KGF: Chapter 2) ತೆರೆಕಂಡು 20 ದಿನ ಕಳೆದರೂ ಅಭಿಮಾನಿಗಳು ಚಿತ್ರವನ್ನು ಕಣ್ತುಂಬಿಕೊಳ್ಳುವುದನ್ನು ನಿಲ್ಲಿಸಿಲ್ಲ. ಈ ಸಿನಿಮಾ ಹಿಂದಿ ಬಾಕ್ಸ್ ಆಫೀಸ್ನಲ್ಲಿ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡುವತ್ತ ಹೆಜ್ಜೆ ಹಾಕುತ್ತಿದೆ. ಈ ಸಿನಿಮಾದ ಯಶಸ್ಸಿನ ತಂತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಅನೇಕ ಸ್ಟಾರ್ ನಿರ್ದೇಶಕರು ಸಿನಿಮಾವನ್ನು ಮಾದರಿ ಆಗಿ ತೆಗೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಜ್ಯೂ.ಎನ್ಟಿಆರ್ (Jr. NTR) ಸ್ಟಾರ್ ನಿರ್ದೇಶಕನಿಗೆ ಸಿನಿಮಾ ನೋಡಿ ಕಲಿಯುವಂತೆ ಸೂಚನೆ ನೀಡಿದ್ದಾರೆ ಎಂದು ವರದಿ ಆಗಿದೆ.
ಜ್ಯೂ.ಎನ್ಟಿಆರ್ ‘ಆರ್ಆರ್ಆರ್’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರದ ನಂತರ ಅವರ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ನಿರ್ದೇಶಕ ರಾಜಮೌಳಿ ಜತೆ ಕೆಲಸ ಮಾಡಿದ ನಂತರ ಬೇರೆ ನಿರ್ದೇಶಕರ ಜತೆ ಕೈ ಜೋಡಿಸಿದರೆ ಸೋಲು ಪಕ್ಕಾ ಎನ್ನುವ ಮಾತಿದೆ. ಇದು ಅನೇಕ ಬಾರಿ ಸಾಬೀತಾಗಿದೆ. ರಾಮ್ ಚರಣ್ ವಿಚಾರದಲ್ಲಿ ಇದು ಮರುಕಳಿಸಿದೆ. ಈ ಮಾತನ್ನು ಸುಳ್ಳು ಮಾಡಲು ಜ್ಯೂ.ಎನ್ಟಿಆರ್ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಮುಂದಿನ ಸಿನಿಮಾ ಬಗ್ಗೆ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ.
ಕೊರಟಾಲ ಶಿವ ನಿರ್ದೇಶನದ ಮುಂದಿನ ಸಿನಿಮಾಗೆ ಜ್ಯೂ.ಎನ್ಟಿಆರ್ ಹೀರೋ. ಅವರ ನಿರ್ದೇಶನದ ‘ಆಚಾರ್ಯ’ ಸಿನಿಮಾ ಅತೀ ಹೀನಾಯವಾಗಿ ಸೋತಿದೆ. ಇದರಿಂದ ಜ್ಯೂ.ಎನ್ಟಿಆರ್ಗೆ ಭಯ ಹೆಚ್ಚಿದೆ. ಹೀಗಾಗಿ, ಮುಂದಿನ ಸಿನಿಮಾದ ಸ್ಕ್ರಿಪ್ಟ್ ಬಗ್ಗೆ ಗಮನ ಹರಿಸಲು ಅವರು ಕೊರಟಾಲ ಶಿವಗೆ ಸೂಚನೆ ನೀಡಿದ್ದಾರೆ.
ಕೊರಟಾಲ ಶಿವ ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಹೀಗಾಗಿ, ಅವರ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇತ್ತು. ‘ಆಚಾರ್ಯ’ ಸಿನಿಮಾ ಸೋಲಿನಿಂದ ಅವರ ಮೇಲಿದ್ದ ನಂಬಿಕೆ ತಗ್ಗಿದೆ. ಇದು ಸಹಜವಾಗಿಯೇ ಜ್ಯೂ.ಎನ್ಟಿಆರ್ ಮುಂದಿನ ಸಿನಿಮಾ ಮೇಲೆ ಪ್ರಭಾವ ಬೀರೋದು ಪಕ್ಕಾ ಎನ್ನಲಾಗುತ್ತಿದೆ.
‘ಕೆಜಿಎಫ್ 2’ ಹಾಗೂ ‘ಆರ್ಆರ್ಆರ್’ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಹೀಗಾಗಿ, ಈ ಸಿನಿಮಾಗಳನ್ನು ನೋಡಿ ಆ ಚಿತ್ರಗಳು ಗೆಲುವಿನ ಕಾರಣಗಳನ್ನು ಅರ್ಥೈಸಿಕೊಳ್ಳುವಂತೆ ಜ್ಯೂ.ಎನ್ಟಿಆರ್ ಅವರು ಕೊರಟಾಲ ಶಿವಗೆ ಸೂಚನೆ ನೀಡಿದ್ದಾರೆ ಎಂದು ವರದಿ ಆಗಿದೆ. ಜ್ಯೂ.ಎನ್ಟಿಆರ್ ಹಾಗೂ ಕೊರಟಾಲ ಶಿವ ಕಾಂಬಿನೇಷನ್ ಸಿನಿಮಾ ಹೇಗೆ ಮೂಡಿ ಬರಲಿದೆ ಅನ್ನೋದು ಸದ್ಯದ ಕುತೂಹಲ.
ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.