ಅಮೆರಿಕದಲ್ಲಿ ಪರಸ್ಪರ ಹೊಡೆದಾಡಿಕೊಂಡ ಜೂ ಎನ್​ಟಿಆರ್ ಹಾಗೂ ನಾರಾ ಲೋಕೇಶ್ ಅಭಿಮಾನಿಗಳು

|

Updated on: Jul 09, 2023 | 7:30 PM

Jr NTR: ಜೂ ಎನ್​ಟಿಆರ್ ಹಾಗೂ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘಟನೆ ನಡೆದಿರುವುದು ಅಮೆರಿಕದಲ್ಲಿ.

ಅಮೆರಿಕದಲ್ಲಿ ಪರಸ್ಪರ ಹೊಡೆದಾಡಿಕೊಂಡ ಜೂ ಎನ್​ಟಿಆರ್ ಹಾಗೂ ನಾರಾ ಲೋಕೇಶ್ ಅಭಿಮಾನಿಗಳು
ಜೂ ಎನ್​ಟಿಆರ್-ಲೋಕೇಶ್
Follow us on

ತೆಲುಗಿನ ಪ್ರಮುಖ ರಾಜಕೀಯ ಹಾಗೂ ಸಿನಿಮಾ ಕುಟುಂಬವಾದ ಎನ್​ಟಿಆರ್ (NTR) ಅಥವಾ ನಂದಮೂರಿ ಕುಟುಂಬದಲ್ಲಿ (Nandamuri Family) ಎಲ್ಲವೂ ಸರಿಯಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ. ಚಂದ್ರಬಾಬು ನಾಯ್ಡು (Chandrababu Naidu) ಹಾಗೂ ಬಾಲಕೃಷ್ಣ (Balakrishna) ಅವರುಗಳು ಜೂ ಎನ್​ಟಿಆರ್ (Jr NTR) ಅನ್ನು ಕುಟುಂಬದಿಂದ, ಕುಟುಂಬದ ಕಾರ್ಯಕ್ರಮಗಳಿಂದ ಹೊರಗಿಟ್ಟಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಪೂರಕವಾಗಿ ಎನ್​ಟಿಆರ್ ಜನ್ಮಶತಮಾನೋತ್ಸವ ಕಾರ್ಯಕ್ರಮಗಳಿಗೆ ಜೂ ಎನ್​ಟಿಆರ್​ಗೆ ಆಹ್ವಾನ ನೀಡಿರಲಿಲ್ಲ. ಚಂದ್ರಬಾಬು ನಾಯ್ಡು, ತಮ್ಮ ಪುತ್ರ ನಾರಾ ಲೋಕೇಶ್ ಅನ್ನು ಟಿಡಿಪಿ ಪಕ್ಷದ ಪ್ರಮುಖನನ್ನಾಗಿಸಬೇಕು ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಜೂ ಎನ್​ಟಿಆರ್ ಅನ್ನು ದೂರ ಇರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಜೂ ಎನ್​ಟಿಆರ್ ಅನ್ನು ನಂದಮೂರಿ ಕುಟುಂಬಸ್ಥರು ಕಡೆಗಣಿಸಿರುವುದು ಅವರ ಅಭಿಮಾನಿಗಳಿಗೆ ಬೇಸರ, ಸಿಟ್ಟು ತರಿಸಿದೆ. ಅದರಲ್ಲಿಯೂ ನಾರಾ ಲೋಕೇಶ್​ ಲಾಭಕ್ಕಾಗಿ ಜೂ ಎನ್​ಟಿಆರ್ ಅನ್ನು ಕಡೆಗಣಿಸಿರುವುದರಿಂದ ಜೂ ಎನ್​ಟಿಆರ್ ಅಭಿಮಾನಿಗಳ ಸಿಟ್ಟು ನಾರಾ ಲೋಕೇಶ್ ಹಾಗೂ ಅವರ ಬೆಂಬಲಿಗರ ವಿರುದ್ಧ ತಿರುಗಿದೆ. ನಿನ್ನೆಯಷ್ಟೆ ಅಮೆರಿಕದ ತೆಲುಗು ಜನರ ಕಾರ್ಯಕ್ರಮದಲ್ಲಿ ಜೂ ಎನ್​ಟಿಆರ್ ಹಾಗೂ ನಾರಾ ಲೋಕೇಶ್ ಬೆಂಬಲಿಗರು ಪರಸ್ಪರ ಜಗಳವಾಡಿದ್ದು ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ರಾಜಕೀಯ ಚರ್ಚೆ ಎಬ್ಬಿಸಿದ ಜೂ ಎನ್​ಟಿಆರ್ ಅಭಿಮಾನಿಯ ಸಾವು: ಕೊಲೆಯಾ? ಆತ್ಮಹತ್ಯೆಯಾ?

ಉತ್ತರ ಅಮೆರಿಕದ ತೆಲುಗು ಜನರ ಸಂಸ್ಥೆ ತೆಲುಗು ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕ (TANA) ವತಿಯಿಂದ ಅಮೆರಿಕದ ಫಿಲಿಡೆಲ್ಫಿಯಾ ನಗರದಲ್ಲಿನ ಪೆನ್ಸಿಲ್​ವೇನಿಯಾ ಕನ್​ವೆನ್ಷನ್ ಸೆಂಟರ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೂ ಎನ್​ಟಿಆರ್ ಹಾಗೂ ನಾರಾ ಲೋಕೇಶ್ ಅಭಿಮಾನಿಗಳು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಈ ಗಲಾಟೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಜುಲೈ 8ರಂದು ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕ ಸಂಸ್ಥೆಯ 25ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟಿಸಿದರು. ಆ ನಂತರ ನಡೆದ ಕಾರ್ಯಕ್ರಮಗಳಲ್ಲಿ ಹಲವು ಟಿಡಿಪಿ ಪ್ರಮುಖರು ಸಹ ಭಾಗವಹಿಸಿದ್ದರು. ಟಿಡಿಪಿ ಪಕ್ಷಕ್ಕೆ ಸಂಬಂಧಿಸಿದ ಚರ್ಚೆಯ ವೇಳೆ ಕೆಲವು ಯುವಕರು ಜೂ ಎನ್​ಟಿಆರ್ ಪರವಾಗಿ ಘೋಷಣೆ ಕೂಗಿದರು. ಒಬ್ಬರಂತೂ ಎದ್ದು ನಾರಾ ಲೋಕೇಶ್ ಮುಂದಾಳತ್ವದಲ್ಲಿ 2024ರ ಚುನಾವಣೆಗೆ ಹೋದರೆ ಮತ್ತೆ ಸೋಲು ಗ್ಯಾರೆಂಟಿ ಮೊದಲು ಅವನನ್ನು ಪಕ್ಷದಿಂದ ತೆಗೆದು ಆ ಸ್ಥಾನಕ್ಕೆ ಜೂ ಎನ್​ಟಿಆರ್ ಅನ್ನು ಕರೆತನ್ನಿ, ಮುಳುಗುತ್ತಿರುವ ಟಿಡಿಪಿಯನ್ನು ಜೂ ಎನ್​ಟಿಆರ್ ಮಾತ್ರವೇ ಉಳಿಸಬಲ್ಲರು ಎಂದರು.

ಯುವಕನ ಈ ಮಾತುಗಳು ಸಭೆಯಲ್ಲಿ ಭಿನ್ನಾಭಿಪ್ರಾಯಗಳನ್ನು ಮೂಡಿಸಿ ಸಭೆಯು ಎರಡು ಗುಂಪುಗಳಾಗಿ ವಿಭಜನೆಗೊಂಡಿತು. ಒಂದು ಗುಂಪನ್ನು ಸ್ಥಳೀಯ ಮುಖಂಡರಾದ ಸತೀಶ್ ವೇಮನ್ನ ಹಾಗೂ ಮತ್ತೊಂದು ತಾರಾನಿ ಪರಚೂರಿ ಅವರುಗಳು ಮುನ್ನಡೆಸಿ ವಾಗ್ವಾದ ಆರಂಭಿಸಿದರು. ವಾಗ್ವಾದ ಮಿತಿ ಮೀರಿ ಪರಸ್ಪರ ಗುಂಪುಗಳು ಕೈ-ಕೈ ಮಿಲಾಯಿಸಿದವು. ಎರಡೂ ಗುಂಪುಗಳು ಪರಸ್ಪರ ಕೋಲುಗಳಿಂದ ಬಡಿದಾಡಿಕೊಂಡಿದ್ದು ಹಲವರ ಬಟ್ಟೆಗಳನ್ನು ಸಹ ಹರಿದು ಹಾಕಿದ್ದಾರೆ. ಈ ಜಗಳವು ಟಿಡಿಪಿ ಪಕ್ಷದ ಎನ್​ಆರ್​ಐ ಸಂಘಟಕ ಕೋಮಾಟಿ ಜಯರಾಂ ಎದುರೇ ನಡೆದಿದೆ. ಅಮೆರಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ