‘ಇಡೀ ಕುಟುಂಬ ಶಪಿಸಿತು’; ಜೂ. ಎನ್​​ಟಿಆರ್ ಈ ಸ್ಥಿತಿಗೆ ಪ್ರಶಾಂತ್ ನೀಲ್ ಕಾರಣ

ಜೂನಿಯರ್ ಎನ್​​ಟಿಆರ್ ಅವರ ತೀವ್ರ ತೂಕ ಇಳಿಕೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ನಿರ್ದೇಶಕ ಪ್ರಶಾಂತ್ ನೀಲ್, ಇದು ಸಿನಿಮಾದ ಹಂತಕನ ಪಾತ್ರಕ್ಕಾಗಿ ಮಾಡಿದ ಕಠಿಣ ಪರಿಶ್ರಮ ಎಂದಿದ್ದಾರೆ. 15-16 ಕೆಜಿ ತೂಕ ಕಳೆದುಕೊಂಡ NTR ಅವರ ಸಮರ್ಪಣೆ, ಅವರ ಪಾತ್ರದ ಬಗೆಗಿನ ಅಚಲ ಬದ್ಧತೆಯನ್ನು ತೋರಿಸುತ್ತದೆ.

‘ಇಡೀ ಕುಟುಂಬ ಶಪಿಸಿತು’; ಜೂ. ಎನ್​​ಟಿಆರ್ ಈ ಸ್ಥಿತಿಗೆ ಪ್ರಶಾಂತ್ ನೀಲ್ ಕಾರಣ
ಎನ್​​ಟಿಆರ್​-ಪ್ರಶಾಂತ್ ನೀಲ್

Updated on: May 21, 2026 | 7:01 AM

ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್​​ಟಿಆರ್ (JR NTR) ಇತ್ತೀಚಿನ ದಿನಗಳಲ್ಲಿ ಅತಿಯಾಗಿ ತೆಳ್ಳಗಾಗಿ ಕಾಣಿಸಿಕೊಂಡಿದ್ದಾರೆ. ಇದು ಅವರ ಆರೋಗ್ಯದ ಬಗ್ಗೆ ಸಾಕಷ್ಟು ಆತಂಕ ಮೂಡಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹತ್ತಾರು ಪ್ರಶ್ನೆಗಳು ಎದ್ದಿದ್ದವು. ಆದರೆ, ಅವರು ಈ ರೀತಿ ಬದಲಾಗಲು ಯಾವುದೇ ಅನಾರೋಗ್ಯ ಕಾರಣವಲ್ಲ, ಬದಲಿಗೆ ತಮ್ಮ ಮುಂಬರುವ ಚಿತ್ರದ ಪಾತ್ರಕ್ಕಾಗಿ ಅವರು ಮಾಡಿದ ಕಠಿಣ ಪರಿಶ್ರಮ ಕಾರಣ ಎಂಬ ಅಸಲಿ ರಹಸ್ಯವನ್ನು ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಈಗ ಬಹಿರಂಗಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಶಾಂತ್ ನೀಲ್, ‘ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಮುಗಿಸಿ ಶೂಟಿಂಗ್ ಆರಂಭಿಸಲು ನಾವು ಸಿದ್ಧರಾಗಿದ್ದೆವು. ಆ ಸಮಯದಲ್ಲಿ ಜೂನಿಯರ್ ಎನ್​​ಟಿಆರ್ ಅವರಿಗೆ ಒಂದು ಲುಕ್ ಟೆಸ್ಟ್ ಮಾಡಲಾಯಿತು. ಆ ಲುಕ್ ಟೆಸ್ಟ್ ಮುಗಿದ ನಂತರ, ನಾನು ಅವರ ಬಳಿ ಹೋಗಿ, ನೀವು ನಿರ್ವಹಿಸುತ್ತಿರುವ ಹಂತಕ ಪಾತ್ರಕ್ಕೆ ಸ್ವಲ್ಪ ತೆಳ್ಳಗಾದರೆ ಚೆನ್ನಾಗಿರುತ್ತದೆ, ಅದು ಚಿತ್ರಕ್ಕೆ ಸಹಾಯ ಮಾಡುತ್ತದೆ ಎಂದು ಕೇವಲ ಒಂದು ಮಾತು ಹೇಳಿದ್ದೆ’ ಎಂದಿದ್ದಾರೆ.

ನಿರ್ದೇಶಕರು ಹೇಳಿದ ಆ ಒಂದು ಮಾತನ್ನು ಜೂನಿಯರ್ ಎನ್​​ಟಿಆರ್ ಅತ್ಯಂತ ಗಂಭೀರವಾಗಿ ತೆಗೆದುಕೊಂಡರಂತೆ. ‘ಮುಂದಿನ ನಾಲ್ಕು ತಿಂಗಳುಗಳ ಕಾಲ ಅವರು ಶೂಟಿಂಗ್ ಮಾಡದೆ ಕೇವಲ ತೂಕ ಇಳಿಸಿಕೊಳ್ಳುವತ್ತಲೇ ಗಮನ ಹರಿಸಿದರು. ನೋಡನೋಡುತ್ತಿದ್ದಂತೆ ಅವರು ಬರೋಬ್ಬರಿ 15 ರಿಂದ 16 ಕೆಜಿಯಷ್ಟು ತೂಕವನ್ನು ಇಳಿಸಿಕೊಂಡರು. ನೀವು ಬರೆದಿರುವ ಕಥೆಗೆ ಮತ್ತು ನಿಮ್ಮ ಕಲ್ಪನೆಗೆ ತಕ್ಕಂತೆ ನಾನು ಬದಲಾಗುತ್ತೇನೆ ಎಂದು ಹಠಕ್ಕೆ ಬಿದ್ದವರಂತೆ ಜೂನಿಯರ್ ಎನ್​​ಟಿಆರ್ ಪರಿಶ್ರಮ ಪಟ್ಟರು’ ಎಂದು ನೀಲ್ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಜೂ.ಎನ್​​ಟಿಆರ್​​ಗೆ ವಿಶ್ ಮಾಡಿದ ಹೊಂಬಾಳೆ ಫಿಲ್ಮ್ಸ್; ಇದರ ಹಿಂದಿದೆ ದೊಡ್ಡ ಲೆಕ್ಕಾಚಾರ?

ಒಂದು ಹಂತದಲ್ಲಿ ಎನ್​​ಟಿಆರ್ ತುಂಬಾ ಸುಸ್ತಾಗಿ, ಪೇಲವವಾಗಿ ಕಾಣಿಸಲು ಆರಂಭಿಸಿದಾಗ ಪ್ರಶಾಂತ್ ನೀಲ್ ಅವರೇ ಗಾಬರಿಯಾಗಿ, ತೂಕ ಇಳಿಸುವುದನ್ನು ನಿಲ್ಲಿಸುವಂತೆ ಹಲವು ಬಾರಿ ಮನವಿ ಮಾಡಿದ್ದರಂತೆ. ಅಷ್ಟೇ ಅಲ್ಲದೆ, ಎನ್​​ಟಿಆರ್ ಅವರ ಈ ಕಠಿಣ ಡಯಟ್ ನೋಡಿ ಅವರ ಪತ್ನಿ, ತಾಯಿ, ಸ್ನೇಹಿತರು ಹಾಗೂ ಪ್ರಶಾಂತ್ ನೀಲ್ ಅವರ ಇಡೀ ಚಿತ್ರತಂಡವೇ ನೀಲ್ ಅವರ ಮೇಲೆ ಕೋಪ ಮಾಡಿಕೊಂಡಿತ್ತಂತೆ. ಸಿನಿಮಾ ಪಾತ್ರಕ್ಕಾಗಿ ಎನ್​​ಟಿಆರ್ ಅನುಭವಿಸಿದ ಆ ನಾಲ್ಕು ತಿಂಗಳ ಕಷ್ಟ ಮತ್ತು ಅವರಲ್ಲಿದ್ದ ಆ ಹಠ ಬೇರೆಲ್ಲೂ ನೋಡಲು ಸಾಧ್ಯವಿಲ್ಲ ಎಂದು ಪ್ರಶಾಂತ್ ನೀಲ್ ಕೊಂಡಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us