Kabza Distribution: ಕಬ್ಜ ಹಾಡು ಬಿಡುಗಡೆ ಮಾಡಲಿರುವ ಅತಿಥಿಗಳಿವರು, ಸಿನಿಮಾ ವಿತರಕರ ಪಟ್ಟಿಯೂ ಇಲ್ಲಿದೆ

|

Updated on: Feb 26, 2023 | 6:01 PM

ಉಪೇಂದ್ರ ನಟಿಸಿ, ಆರ್ ಚಂದ್ರು ನಿರ್ದೇಶಿಸಿರುವ ಕಬ್ಜ ಸಿನಿಮಾವನ್ನು ಬೇರೆ ಬೇರೆ ಭಾಷೆಗಳಲ್ಲಿ ವಿತರಣೆ ಮಾಡುತ್ತಿರುವ ವಿತರಕರ ಮಾಹಿತಿ ಇಲ್ಲಿದೆ.

Kabza Distribution: ಕಬ್ಜ ಹಾಡು ಬಿಡುಗಡೆ ಮಾಡಲಿರುವ ಅತಿಥಿಗಳಿವರು, ಸಿನಿಮಾ ವಿತರಕರ ಪಟ್ಟಿಯೂ ಇಲ್ಲಿದೆ
ಕಬ್ಜ
Follow us on

ಉಪೇಂದ್ರ (Upendra) ನಟಿಸಿ, ಆರ್ ಚಂದ್ರು (R Chandru) ನಿರ್ದೇಶನ ಮಾಡಿರುವ ಕಬ್ಜ (Kabza) ಸಿನಿಮಾ ದೊಡ್ಡ ಮಟ್ಟಿಗಿನ ನಿರೀಕ್ಷೆ ಹುಟ್ಟು ಹಾಕಿದೆ. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಸಿನಿಮಾವನ್ನು ದೊಡ್ಡ ಸ್ಕೇಲ್​ನಲ್ಲಿ ನಿರ್ಮಾಣ ಮಾಡಲಾಗಿದೆ. ಸಿನಿಮಾದ ಪ್ರಚಾರಕ್ಕೂ ಸಹ ಭಾರಿ ಹಣವನ್ನೇ ಖರ್ಚು ಮಾಡುತ್ತಿದೆ ಚಿತ್ರತಂಡ. ಸಿನಿಮಾದ ಹಾಡು ಬಿಡುಗಡೆ ಇಂದು ನಡೆಯಲಿದ್ದು, ಇದಕ್ಕಾಗಿ ಅದ್ಧೂರಿ ಕಾರ್ಯಕ್ರಮ ಆಯೋಜಿತವಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಅತಿಥಿಗಳ ಪಟ್ಟಿ ಇಲ್ಲಿದೆ.

ಆರ್.ಚಂದ್ರು ಅವರು ಓದಿ ಕಲಿತ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದ ಶಾಲೆಯ ಮೈದಾನದಲ್ಲಿಯೇ ಕಬ್ಜ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಲವು ಅತಿಥಿಗಳು ಸಹ ಭಾಗವಹಿಸಲಿದ್ದಾರೆ.

ಸಿನಿಮಾದ ನಾಯಕ ನಟ ಉಪೇಂದ್ರ ಜೊತೆಗೆ, ನಾಯಕಿ ಶ್ರಿಯಾ ಶರಣ್ ಜೊತೆಗೆ, ಉಪ್ಪಿ ಹಾಗೂ ಚಂದ್ರು ಇಬ್ಬರಿಗೂ ಆಪ್ತರಾಗಿರುವ ನಟ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್​ ಅವರುಗಳು ಮುಖ್ಯ ಅತಿಥಿಗಳಾಗಿದ್ದಾರೆ. ಇವರ ಜೊತೆಗೆ ಚಿಕ್ಕಬಳ್ಳಾಪುರದವರೇ ಆದ ಆರೋಗ್ಯ ಸಚಿವ ಸುಧಾಕರ್ ಸಹ ಭಾಗವಹಿಸಲಿದ್ದಾರೆ. ನೆರೆಯ ಹೊಸಕೋಟೆ ಕ್ಷೇತ್ರದ ಬಿಜೆಪಿ ಮುಖಂಡ ಎಂಟಿಬಿ ನಾಗರಾಜ್ ಸಹ ವೇದಿಕೆಯಲ್ಲಿರಲಿದ್ದಾರೆ. ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿರುವುದು ಎಂಟಿಬಿ ನಾಗರಾಜ್ ಅವರೇ. ನಟ ದುನಿಯಾ ವಿಜಯ್ ಸಹ ಇರಲಿದ್ದಾರೆ. ಕಿಚ್ಚ ಸುದೀಪ್ ಸಹ ಬರುತ್ತಾರೆ ಎಂಬ ಸುದ್ದಿಯಿದೆಯಾದರೂ ಖಾತ್ರಿಯಾಗಿಲ್ಲ.

ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ವಿವಿಧ ಭಾಷೆಗಳಲ್ಲಿ ವಿತರಣೆ ಮಾಡುವವರ ಪರಿಚಯವನ್ನೂ ಸಹ ಇಂದು ಕಾರ್ಯಕ್ರಮದಲ್ಲಿ ಮಾಡಿಕೊಡಲಾಗುತ್ತಿದೆ. ಸಿನಿಮಾದ ಹಿಂದಿ ಭಾಷಾ ಆವೃತ್ತಿಯನ್ನು ಆನಂದ್ ಪಂಡಿತ್ ವಿತರಣೆ ಮಾಡಲಿದ್ದಾರೆ. ತೆಲುಗು ಆವೃತ್ತಿಯನ್ನು ಸುಧಾಕರ್ ರೆಡ್ಡಿ..ಲಕ್ಷ್ಮಿಕಾಂತ್ ರೆಡ್ಡಿ ಎವಿ ಸ್ಪೀಚ್ ಮಾಡಲಿದ್ದಾರೆ. ಮಲಯಾಳಂ ಆವೃತ್ತಿಯನ್ನು ಎಲ್ ಜಿಎಫ್ ಫಿಲಂಮ್ಸ್ ವಿತರಣೆ ಮಾಡಲಿದೆ. ಉತ್ತರ ಅಮೆರಿಕದಲ್ಲಿ ನಿರಂಜನ್ ರೆಡ್ಡಿ, ಗಲ್ಫ್ ದೇಶಗಳಲ್ಲಿ ಮನು ಲೆಹರ್ ಮೂವೀಸ್ ಸಂಸ್ಥೆ, ಆಸ್ಟ್ರೇಲಿಯಾನಲ್ಲಿ ಜಿರೋನ್ ವಿತರಣೆ ಮಾಡಲಿದ್ದಾರೆ.

ಸುಮಾರು ಐವತ್ತು ಸಾವಿರ ಜನ ಕಾರ್ಯಕ್ರಮ ನೋಡುವಂತೆ ವ್ಯವಸ್ಥೆ ಮಾಡಲಾಗಿದ್ದು, ವಿಐಪಿ, ವಿವಿಐಪಿ ಬಿಟ್ಟು ಸುಮಾರು ಐದು ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ನಡೆಯುತ್ತಿರುವ ವೇದಿಕೆ ಸುತ್ತ, ನಟ ಉಪೇಂದ್ರ ಹಾಗೂ ಸುದೀಪ್ ಅವರ ಕಟೌಟ್​ಗಳು ರಾರಾಜಿಸುತ್ತಿವೆ. ಜೊತೆಗೆ ನಿರ್ದೇಶಕ ಆರ್.ಚಂದ್ರು ಅವರ ಪೋಸ್ಟರ್​ಗಳು ಸಹ ಅಲ್ಲಲ್ಲಿ ರಾರಾಜಿಸುತ್ತಿವೆ. ಸಂಜೆ ಏಳು ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ