ನಾಗ್ ಅಶ್ವಿನ್ ನಿರ್ದೇಶನ ಮಾಡಿರುವ ‘ಕಲ್ಕಿ 2898 ಎಡಿ’ ಸಿನಿಮಾದಿಂದ ನಿರ್ಮಾಪಕರಿಗೆ ಹಣದ ಹೊಳೆ ಹರಿದು ಬಂದಿದೆ. ಭಾರತ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಲ್ಲೂ ಕೂಡ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಈವರೆಗೆ ಯಶಸ್ವಿಯಾಗಿ 8 ದಿನಗಳ ಕಾಲ ಪ್ರದರ್ಶನ ಕಂಡಿರುವ ಈ ಸಿನಿಮಾಗೆ ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್ ಆಗಿದೆ. 8 ದಿನಕ್ಕೆ ಸಿನಿಮಾದ ಒಟ್ಟು ಕಲೆಕ್ಷನ್ 774 ಕೋಟಿ ರೂಪಾಯಿ ಎಂಬ ಮಾಹಿತಿ ಸಿಕ್ಕಿದೆ. ಈ ಸಿನಿಮಾದಿಂದ ನಟ ಪ್ರಭಾಸ್ ಅವರ ವೃತ್ತಿ ಜೀವನಕ್ಕೆ ದೊಡ್ಡ ಮೈಲೇಜ್ ಸಿಕ್ಕಂತಾಗಿದೆ.
‘ಕಲ್ಕಿ 2898 ಎಡಿ’ ಸಿನಿಮಾಗೆ ‘ವೈಜಯಂತಿ ಮೂವೀಸ್’ ಮೂಲಕ ಅಶ್ವಿನಿ ದತ್ ಅವರು ಬಂಡವಾಳ ಹೂಡಿದ್ದಾರೆ. ನಿರ್ಮಾಣ ಸಂಸ್ಥೆಯ ಕಡೆಯಿಂದ 8 ದಿನಗಳ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವುದುಕ್ಕೂ ಮುನ್ನವೇ ಟ್ರೇಡ್ ಅನಲಿಸ್ಟ್ ರಮೇಶ್ ಬಾಲಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ವಿಶ್ವಾದ್ಯಂತ 8 ದಿನಕ್ಕೆ 774 ಕೋಟಿ ಕಲೆಕ್ಷನ್ ಆಗಿದ್ದು, 8ನೇ ದಿನದ ಕಲೆಕ್ಷನ್ 49 ಕೋಟಿ ರೂಪಾಯಿ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
#Kalki2898AD 8 Days WW gross – ₹ 774+ Crs..
8th day WW gross – ₹ 49 Cr
— Ramesh Bala (@rameshlaus) July 5, 2024
ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ತೆರೆಕಂಡಿದೆ. ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. 3ಡಿ ಮತ್ತು 2ಡಿ ವರ್ಷನ್ಗಳಲ್ಲಿ ಸಿನಿಮಾವನ್ನು ನೋಡಿ ಜನರು ಎಂಜಾಯ್ ಮಾಡುತ್ತಿದ್ದಾರೆ. ಮೊದಲ ವಾರದ ರೀತಿ ಎರಡನೇ ವೀಕೆಂಡ್ನಲ್ಲೂ ‘ಕಲ್ಕಿ 2898 ಎಡಿ’ ಸಿನಿಮಾಗೆ ಭರ್ಜರಿ ಕಲೆಕ್ಷನ್ ಆಗುತ್ತಿದೆ.
ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಸಿನಿಮಾ ನೋಡಲು ಜಪಾನ್ನಿಂದ ಭಾರತಕ್ಕೆ ಬಂದ ಪ್ರಭಾಸ್ ಫ್ಯಾನ್ಸ್
ಪ್ರಭಾಸ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ದಿಶಾ ಪಟಾನಿ ಮುಂತಾದ ಕಲಾವಿದರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಪಾತ್ರವರ್ಗದ ಕಾರಣದಿಂದಾಗಿ ಸಿನಿಮಾದ ತಾರಾ ಮೆರುಗು ಹೆಚ್ಚಿದೆ. ಈ ಸಿನಿಮಾದಲ್ಲಿ ನಿರ್ದೇಶಕ ನಾಗ್ ಅಶ್ವಿನ್ ಹೇಳಿದ ಕಥೆಯು ಪ್ರೇಕ್ಷಕರಿಗೆ ಇಷ್ಟ ಆಗಿದೆ. ಈ ಸಿನಿಮಾಗೆ ಸೀಕ್ವೆಲ್ ಕೂಡ ಮೂಡಿಬರಲಿದೆ. ಅದರ ಚಿತ್ರೀಕರಣ ಶೇಕಡ 60ರಷ್ಟು ಪೂರ್ಣಗೊಂಡಿದೆ ಎಂದು ಇತ್ತೀಚೆಗೆ ನಿರ್ಮಾಪಕರೇ ತಿಳಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.