‘ಕಲ್ಕಿ 2898 ಎಡಿ’ ಸಿನಿಮಾ ಎರಡನೇ ವಾರವೂ ಒಳ್ಳೆಯ ಗಳಿಕೆ ಮಾಡಿದೆ. ಸೈಂಟಿಫಿಕ್ ಫಿಕ್ಷನ್ ಶೈಲಿಯಲ್ಲಿ ಮೂಡಿ ಬಂದಿರೋ ‘ಕಲ್ಕಿ 2898 ಎಡಿ’ ಚಿತ್ರ ಭಾರತದ ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಕೇವಲ 11 ದಿನಕ್ಕೆ ಈ ಸಿನಿಮಾ ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಮಿತಾಭ್ ಬಚ್ಚನ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ಎರಡನೇ ಭಾನುವಾರ (ಜುಲೈ 7) ಈ ಸಿನಿಮಾ ಭಾರತದಲ್ಲಿ 41 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 506.87 ಕೋಟಿ ರೂಪಾಯಿ ಆಗಿದೆ. ಶೀಘ್ರವೇ ಈ ಚಿತ್ರ ‘ಬಾಹುಬಲಿ 2’, ‘ಪಠಾಣ್’ ಚಿತ್ರಗಳ ಗಳಿಕೆಯನ್ನು ಹಿಂದಿಕ್ಕುವ ಸಾಧ್ಯತೆ ಇದೆ. ಎರಡನೇ ವೀಕೆಂಡ್ನಲ್ಲೂ ಸಿನಿಮಾ ಇಷ್ಟೊಂದು ಉತ್ತಮ ಗಳಿಕೆ ಮಾಡಿರೋದು ವಿಶೇಷ.
ಕಲ್ಕಿ ವಿಶ್ವ ಬಾಕ್ಸ್ ಆಫೀಸ್ನಲ್ಲೂ ಮಿಂಚುತ್ತಿದೆ. ಅಮೆರಿಕ, ಆಸ್ಟ್ರೇಲಿಯಾ ಮೊದಲಾದ ಕಡೆಗಳಲ್ಲಿ ಸಿನಿಮಾ ಮೆಚ್ಚುಗೆ ಪಡೆಯುತ್ತಿದೆ. ಈ ಚಿತ್ರ ವಿಶ್ವಾದ್ಯಂತ 800 ಕೋಟಿ ರೂಪಾಯಿ ಗಳಿಸಿದೆ. ಶೀಘ್ರವೇ ಚಿತ್ರ 1000 ಕೋಟಿ ರೂಪಾಯಿ ಕ್ಲಬ್ ಸೇರುವ ಸಾಧ್ಯತೆ ಇದೆ.
ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 2ಡಿ ಜೊತೆಗೆ 3ಡಿಯಲ್ಲೂ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದ ಬಜೆಟ್ 600 ಕೋಟಿ ರೂಪಾಯಿ ಎನ್ನಲಾಗಿದೆ. ಈ ಕಾರಣದಿಂದಲೇ ಸಿನಿಮಾ ದೊಡ್ಡ ಮೊತ್ತದ ಗಳಿಕೆ ಮಾಡೋ ಅವಶ್ಯಕತೆ ಇತ್ತು. ಸದ್ಯ ಆಗಿರೋ ಗಳಿಕೆಯಿಂದ ನಿರ್ಮಾಪಕರಿಗೆ ಇನ್ನೂ ದೊಡ್ಡ ಲಾಭವೇನು ಆಗಿಲ್ಲ. ‘ಕಲ್ಕಿ 2898 ಎಡಿ’ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಿಲೀಸ್ ಆಗಿದೆ. ವೈಜಯಂತಿ ಮೂವಿಸ್ ಮೂಲಕ ಅಶ್ವಿನಿ ದತ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಮಹಾಭಾರತ ಯುದ್ಧ ಪೂರ್ಣಗೊಂಡ ಬಳಿಕದಿಂದ ‘ಕಲ್ಕಿ 2898 ಎಡಿ’ ಚಿತ್ರ ಪ್ರಾರಂಭ ಆಗುತ್ತದೆ. ಅಶ್ವತ್ಥಾಮನಿಗೆ ಕೃಷ್ಣ ಶಾಪ ನೀಡುತ್ತಾನೆ. ಜೊತೆಗೆ ವಿಷ್ಣುವಿನ ಕೊನೆಯ ಅವತಾರ ಕಲ್ಕಿಯು ಕಲಿಯುಗದ ಕೊನೆಯಲ್ಲಿ ಜನಿಸುತ್ತಾನೆ ಮತ್ತು ಆತನ ರಕ್ಷಣೆ ನಿನ್ನದು ಎಂದು ಆತನಿಗೆ ವಿಶೇಷ ಜವಾಬ್ದಾರಿಯನ್ನು ನೀಡುತ್ತಾನೆ ಕೃಷ್ಣ. ನಂತರ ಕಥೆ ತೆರೆದುಕೊಳ್ಳೋದು ಕ್ರಿಸ್ತಶಕ 2898 ಎಡಿಯಲ್ಲಿ. ಭೂಮಿ ಸಂಪೂರ್ಣವಾಗಿ ನಾಶವಾಗುವ ಹಂತಕ್ಕೆ ಬಂದಿರುತ್ತದೆ. ಈ ರೀತಿಯಲ್ಲಿ ಸಿನಿಮಾ ಮೂಡಿ ಬಂದಿದೆ.
ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್ಗೆ ಇಲ್ಲ ಹೆಚ್ಚು ಸ್ಕ್ರೀನ್ಸ್ಪೇಸ್; ನಟನಿಗೆ ಬೇಸರ?
‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದ್ದ ಪ್ರಭಾಸ್ ಅವರು ‘ಕಲ್ಕಿ 2898 ಎಡಿ’ಯ ಎರಡನೇ ಪಾರ್ಟ್ನಲ್ಲಿ ಪ್ರಮುಖ ವಿಲನ್ ಎನಿಸಿಕೊಳ್ಳಲಿದ್ದಾರೆ. ಈಗಾಗಲೇ ಸಿನಿಮಾಗೆ ಶೇ. 20 ಶೂಟಿಂಗ್ ಪೂರ್ಣಗೊಂಡಿದೆ ಎಂದು ನಾಗ್ ಅಶ್ವಿನ್ ಅವರು ಈ ಮೊದಲು ಮಾಹಿತಿ ನೀಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:56 am, Mon, 8 July 24