ಬಾಲಿವುಡ್ ನಟ ಕಮಾಲ್ ಆರ್. ಖಾನ್ (Kamaal R. Khan) ವಿರುದ್ಧ ಇತ್ತೀಚೆಗೆ ಕೇಸ್ ದಾಖಲಾಗಿತ್ತು. ಲೈಂಗಿಕ ಕಿರುಕುಳ ಹಾಗೂ ಆಕ್ಷೇಪಾರ್ಹ ಟ್ವೀಟ್ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಅವರನ್ನು ಹತ್ಯೆ ಮಾಡಲು ಸಂಚು ನಡೆದಿದೆ ಎಂದು ಅವರ ಮಗ ಆರೋಪಿಸಿದ್ದರು. ಆದರೆ, ಅವರ ಮಗ ಮಾಡಿದ ಆರೋಪದ ರೀತಿ ಯಾವುದೂ ನಡೆದಿಲ್ಲ. ಕಮಾಲ್ ಅವರು ಸುರಕ್ಷಿತವಾಗಿ ಜೈಲಿನಿಂದ ಹೊರ ಬಂದಿದ್ದಾರೆ. ಈ ಮಧ್ಯೆ ಅವರು ಹೊಸ ಟ್ವೀಟ್ ಮಾಡಿದ್ದು, ಸಿನಿಮಾ ವಿಮರ್ಶೆ ಮಾಡುವುದನ್ನೇ ನಿಲ್ಲಿಸುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಬಾಲಿವುಡ್ ಮಾಫಿಯಾ ಕಾರಣ ಎಂಬುದು ಅವರ ಆರೋಪ.
ಕಮಾಲ್ ಅವರು ಸಿನಿಮಾ ರಂಗದಲ್ಲಿ ವೃತ್ತಿಜೀವನ ಆರಂಭಿಸಿದರು. ಆದರೆ ನಟನೆ ಅವರ ಕೈ ಹಿಡಿಯಲಿಲ್ಲ. ಅವರ ಸಿನಿಮಾಗಳು ಹೀನಾಯವಾಗಿ ಸೋತವು. ಅ ಬಳಿಕ ಕಮಾಲ್ ಅವರು ಆಯ್ಕೆ ಮಾಡಿಕೊಂಡಿದ್ದು ಸಿನಿಮಾ ವಿಮರ್ಶೆ. ಸ್ಟಾರ್ ಸಿನಿಮಾಗಳನ್ನು ಅವರು ಕಟುವಾಗಿ ಟೀಕಿಸಿದ್ದಾರೆ. ಈ ಕಾರಣಕ್ಕೆ ಹಲವರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ಈಗ ಅವರ ಹೊಸ ಟ್ವೀಟ್ ಸಾಕಷ್ಟು ಅಚ್ಚರಿ ಮೂಡಿಸಿದೆ.
ಕಮಾಲ್ ಆರ್. ಖಾನ್ ಅವರು ಸಿನಿಮಾ ವಿಮರ್ಶೆ ನಿಲ್ಲಿಸುತ್ತಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ನನ್ನ ಬಳಿ ಎರಡು ಆಯ್ಕೆಗಳು ಇದ್ದವು. ಶಾಶ್ವತವಾಗಿ ಮುಂಬೈ ತೊರೆಯುವುದು ಒಂದನೇ ಆಯ್ಕೆ ಆದರೆ, ಎರಡನೇ ಆಯ್ಕೆ ಸಿನಿಮಾ ವಿಮರ್ಶೆ ಮಾಡುವುದನ್ನು ನಿಲ್ಲಿಸುವುದು. ನಾನು ಎರಡನೇ ಆಯ್ಕೆಯನ್ನು ಸೆಲೆಕ್ಟ್ ಮಾಡಿದೆ. ಏಕೆಂದರೆ ಮುಂಬೈನಲ್ಲಿ ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲು ಬಾಲಿವುಡ್ ಮಂದಿ ಸಾಕಷ್ಟು ರಾಜಕೀಯ ಬೆಂಬಲವನ್ನು ಹೊಂದಿದ್ದಾರೆ’ ಎಂದಿದ್ದಾರೆ ಅವರು.
I was having only 2 choices.
1) Leave Mumbai forever.
2) Stop reviewing films.
So I did choose 2nd one. Because Bollywood people are having enough political support in Mumbai to file fake cases against me.— KRK (@kamaalrkhan) September 26, 2022
ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕಮಾಲ್ ಖಾನ್ಗೆ ಜಾಮೀನು; ಆದರೂ ಇಲ್ಲ ಬಿಡುಗಡೆಗೆ ಅವಕಾಶ
ನಟ ಸಲ್ಮಾನ್ ಖಾನ್, ನಿರ್ಮಾಪಕ ಕರಣ್ ಜೋಹರ್ ವಿರುದ್ಧ್ ಕಮಾಲ್ ಖಾನ್ ಗುಡುಗಿದ್ದೂ ಇದೆ. ತಮ್ಮ ಕರಿಯರ್ ನಾಶ ಮಾಡಲು ಇವರು ಪ್ರಯತ್ನಿಸುತ್ತಿದ್ದಾರೆ ಎಂದು ಕಮಾಲ್ ಈ ಮೊದಲಿನಿಂದಲೂ ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಬಾಲಿವುಡ್ ಮಾಫಿಯಾ ವಿಚಾರವನ್ನು ಅನೇಕ ಬಾರಿ ಅವರು ಚರ್ಚೆ ಮಾಡಿದ್ದರು. ಈಗ ತಮ್ಮ ವಿರುದ್ಧ ಕೇಸ್ ದಾಖಲಾಗಲು ಇವರೇ ಕಾರಣ ಮತ್ತು ಅದು ಫೇಕ್ ಎಂಬುದನ್ನು ಈ ಟ್ವೀಟ್ ಮೂಲಕ ಮತ್ತೊಮ್ಮೆ ಬಹಿರಂಗವಾಗಿ ಅವರು ಹೇಳಿಕೊಂಡಂತೆ ಆಗಿದೆ.
Published On - 4:25 pm, Mon, 26 September 22