ಸಾಲಿನಲ್ಲಿ ನಿಲ್ಲದೇ ಮುಂದೆ ಹೋಗಿ ಮತದಾನ ಮಾಡಿದ ಕಮಲ್ ಹಾಸನ್; ವಿಡಿಯೋ ನೋಡಿ ಜನರ ಟೀಕೆ

ಕಮಲ್ ಹಾಸನ್ ಮತ್ತು ಶ್ರುತಿ ಹಾಸನ್ ಅವರನ್ನು ಜನರು ಟ್ರೋಲ್ ಮಾಡುತ್ತಿದ್ದಾರೆ. ಸಾಮಾನ್ಯ ಮತದಾರರಂತೆ ಸಾಲಿನಲ್ಲಿ ನಿಲ್ಲದೇ, ವಿಶೇಷ ಸೌಲಭ್ಯ ಪಡೆದು ಅವರು ಮತದಾನ ಮಾಡಿದ್ದು ಟೀಕೆಗೆ ಕಾರಣ ಆಗಿದೆ. ಈ ತಂದೆ-ಮಗಳ ವಿಡಿಯೋ ವೈರಲ್ ಆಗಿದೆ. ಅದಕ್ಕೆ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ಮೂಡಿದೆ.

ಸಾಲಿನಲ್ಲಿ ನಿಲ್ಲದೇ ಮುಂದೆ ಹೋಗಿ ಮತದಾನ ಮಾಡಿದ ಕಮಲ್ ಹಾಸನ್; ವಿಡಿಯೋ ನೋಡಿ ಜನರ ಟೀಕೆ
Shruti Haasan, Kamal Haasan

Updated on: Apr 23, 2026 | 5:15 PM

ತಮಿಳುನಾಡು ವಿಧಾನಸಭಾ ಚುನಾವಣೆ (Tamil Nadu Election) ಇಂದು (ಏಪ್ರಿಲ್ 23) ನಡೆದಿದೆ. ಜನಸಾಮಾನ್ಯರ ಜೊತೆ ಅನೇಕ ಸೆಲೆಬ್ರಿಟಿಗಳು ಕೂಡ ಬಂದು ಮತ ಚಲಾಯಿಸಿದ್ದಾರೆ. ಮತದಾನ ಮಾಡಲು ಬಂದಿದ್ದ ನಟ ಕಮಲ್ ಹಾಸನ್ (Kamal Haasan) ಮತ್ತು ಅವರ ಪುತ್ರಿ ಶ್ರುತಿ ಹಾಸನ್ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಸರತಿಯ ಸಾಲನ್ನು ಮೀರಿ ನೇರವಾಗಿ ಒಳಗೆ ಹೋಗಿ ಮತ ಚಲಾಯಿಸಿದ್ದೇ ಈ ಟೀಕೆಗೆ ಕಾರಣ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಖಾರವಾಗಿ ಕಮೆಂಟ್ ಮಾಡುತ್ತಿದ್ದಾರೆ.

ಕಮಲ್ ಹಾಸನ್ ಮತ್ತು ಶ್ರುತಿ ಹಾಸನ್ ಅವರು ಮತದಾನ ಮಾಡಲು ಒಟ್ಟಿಗೆ ಬಂದರು. ಚೆನ್ನೈನ ಆಳ್ವಾರ್‌ಪೇಟೆ ಶಾಲೆಯ ಮತಗಟ್ಟೆಗೆ ಬಂದ ಅವರು ಸಾಲಿನಲ್ಲಿ ನಿಲ್ಲದೆ ನೇರವಾಗಿ ಹೋಗಿದ್ದನ್ನು ನೆಟ್ಟಿಗರು ಖಂಡಿಸುತ್ತಿದ್ದಾರೆ. ಎಎನ್​ಐ ಸುದ್ದಿ ಸಂಸ್ಥೆ ಪೋಸ್ಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ಜನರು ಗರಂ ಆಗಿದ್ದಾರೆ.

ಅಸಲಿಗೆ, ಕಮಲ್ ಹಾಸನ್ ಮತ್ತು ಶ್ರುತಿ ಹಾಸನ್ ಅವರು ಮತಗಟ್ಟೆಯ ಸಾಲಿನಲ್ಲಿ ನಿಂತಿದ್ದರು. ಆದರೆ, ಅಲ್ಲಿ ನೆರೆದಿದ್ದ ಕ್ಯಾಮೆರಾಗಳು ಮತ್ತು ಮಾಧ್ಯಮದವರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬುದನ್ನು ಅಲ್ಲಿದ್ದ ಭದ್ರತಾ ಸಿಬ್ಬಂದಿ ಅಥವಾ ಅವರ ತಂಡದವರು ತಿಳಿಸಿದ್ದಾರೆ. ಕೂಡಲೇ ಪೊಲೀಸರು ಕಮಲ್ ಮತ್ತು ಶ್ರುತಿ ಅವರಿಗೆ ನೇರವಾಗಿ ಒಳಗೆ ಹೋಗಲು ಸೂಚಿಸಿದ್ದಾರೆ.

ಈ ವೇಳೆ ಶ್ರುತಿ ಹಾಸನ್ ಮತ್ತು ಕಮಲ್ ಹಾಸನ್ ಅವರು ತಮ್ಮ ಮುಂದೆ ನಿಂತಿದ್ದ ವ್ಯಕ್ತಿಯಲ್ಲಿ ಕ್ಷಮೆ ಕೇಳಿ, ನಂತರವೇ ನೇರವಾಗಿ ಮತದಾನದ ಕೊಠಡಿಯೊಳಗೆ ತೆರಳಿದ್ದಾರೆ. ಆದರೂ ಟೀಕೆ ತಪ್ಪಿಲ್ಲ. ಕಮಲ್ ಹಾಸನ್ ಅವರು ಸಮಾಜವಾದ, ಸಮಾನತೆ ಮತ್ತು ಆದರ್ಶಗಳ ಬಗ್ಗೆ ನೀಡುವ ಭಾಷಣಗಳನ್ನು ನೆನಪಿಸಿರುವ ನೆಟ್ಟಿಗರು, ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಬಡತನ, ಸಮಾಜವಾದ ಮತ್ತು ಆದರ್ಶಗಳ ಬಗ್ಗೆ ಭಾಷಣ ಬಿಗಿಯುವ ನಟ ಕಮಲ್ ಹಾಸನ್, ಅತ್ಯಂತ ಐಷಾರಾಮಿ ಕಾರಿನಲ್ಲಿ ಬಂದು ಸಾಮಾನ್ಯ ಜನರ ಸಾಲನ್ನು ಮುರಿದು ಮತದಾನ ಮಾಡಿದ್ದಾರೆ. ಅವರಿಗೆ ಎರಡು ನಿಮಿಷ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲವೇ’ ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ. ‘ಉದ್ದನೆಯ ಸಾಲುಗಳು ಕೇವಲ ಬಡವರಿಗೆ ಮಾತ್ರ ಎಂಬಂತಿದೆ ಇವರ ವರ್ತನೆ’ ಎಂದು ಮತ್ತೊಬ್ಬರು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಚುನಾವಣೆಯಲ್ಲಿ ಮತ ಹಾಕಿದ ಸೆಲೆಬ್ರಿಟಿಸ್; ಇಲ್ಲಿವೆ ಫೋಟೋಸ್

ಈ ಮಧ್ಯೆ ಕೆಲವರು ಕಮಲ್ ಹಾಸನ್ ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ. ‘ದೊಡ್ಡ ನಟರು ಸಾಲಿನಲ್ಲಿ ನಿಂತರೆ ಅವರನ್ನು ನೋಡಲು ಜನ ಮುಗಿಬೀಳುತ್ತಾರೆ. ಇದರಿಂದ ಮತದಾನಕ್ಕೆ ಮತ್ತಷ್ಟು ವಿಳಂಬವಾಗುತ್ತದೆ ಮತ್ತು ಭದ್ರತಾ ಸಮಸ್ಯೆಗಳು ಉಂಟಾಗುತ್ತವೆ. ಜನಜಂಗುಳಿಯನ್ನು ನಿಯಂತ್ರಿಸಲು ಪೊಲೀಸರೇ ಅವರಿಗೆ ಮುಂದೆ ಹೋಗಲು ಅನುಮತಿ ನೀಡಿದ್ದಾರೆ’ ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us