ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದ ಜನಪ್ರಿಯ ನಟ ಡ್ಯಾನಿಯಲ್ ಬಾಲಾಜಿ (Daniel balaji) ಮಾರ್ಚ್ 29ರ ತಡರಾತ್ರಿ ಹೃದಯಾಘಾತದಿಂದ ಚೆನ್ನೈನಲ್ಲಿ ನಿಧನ ಹೊಂದಿದ್ದಾರೆ. ಕಮಲ್ ಹಾಸನ್ ಸೇರಿದಂತೆ ಚಿತ್ರರಂಗದ ಹಲವು ದಿಗ್ಗಜರು ಡ್ಯಾನಿಯಲ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿಂದಿ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿರುವ ಕನ್ನಡದ ನಟ ಕಿಶೋರ್, ಡ್ಯಾನಿಯಲ್ ಜೊತೆಗೆ ಆತ್ಮೀಯರಾಗಿದ್ದರು. ತಮ್ಮ ಗೆಳೆಯನ ಅಗಲಿಕೆಗೆ ಕಿಶೋರ್ ಭಾವುಕವಾಗಿ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಪೊಲ್ಲಾಧವನ್’ ಸಿನಿಮಾ ನಮಗೆಲ್ಲ ಸಿನಿಮಾ ಆಗಿರಲಿಲ್ಲ. ಅದು ಮನೆಯಾಗಿತ್ತು, ಕುಟುಂಬವಾಗಿತ್ತು. ನಮ್ಮ ನಡುವೆ ನಿರಂತರ ಮಾತುಕತೆ ಇಲ್ಲದೇ ಹೋದರೂ ಸಹ ಪರಸ್ಪರರ ಬಗ್ಗೆ ಸುದ್ದಿ ಕೇಳಿದಾಗ, ಪರಸ್ಪರರ ಸಿನಿಮಾಗಳು ಯಶಸ್ವಿಯಾದಾಗ, ಪಾತ್ರಗಳಿಗೆ ಪ್ರಶಂಸೆ ಬಂದಾಗ ಮುಖದ ಮೇಲೊಂದು ಮುಗುಳ್ನಗೆ ಮೂಡುತ್ತಿತ್ತು. ಪರಸ್ಪರರ ಬಗ್ಗೆ ಇತರರೊಟ್ಟಿಗೆ ಮಾತನಾಡುವಾಗ ಹೆಮ್ಮೆ ತನ್ನಿಂದತಾನೇ ಮೂಡುತ್ತಿತ್ತು. ನಮ್ಮಗಳಲ್ಲಿ ಯಾರೇ ಒಳ್ಳೆಯ ಕೆಲಸ ಮಾಡಿದರೂ ಅದು ಎಲ್ಲರಿಗೂ ಹೆಮ್ಮೆ ಎನಿಸುತ್ತಿತ್ತು. ನಾನು ಎಲ್ಲೇ ಹೋದರು ಜನ ‘ವಡಚೆನ್ನೈ 2’ ಯಾವಾಗ ಎಂದು ಕೇಳುತ್ತಲೇ ಇರುತ್ತಾರೆ. ‘ವೆಟ್ರಿಮಾರನ್ಗೆ ಈಗಿರುವ ಪ್ರಾಜೆಕ್ಟ್ ಎಲ್ಲ ಮುಗಿದು ವಡಚೆನ್ನೈ 2 ಪ್ರಾರಂಭ ಮಾಡುವ ಹೊತ್ತಿಗೆ ನಮಗೆ 70 ವರ್ಷ ವಯಸ್ಸಾಗಿರುತ್ತದೆ’ ಎಂದು ಹಾಸ್ಯ ಮಾಡುತ್ತಿರುತ್ತೇನೆ. ಈಗಲೇ ನಿನಗೆ ಕರೆ ಮಾಡಬೇಕು ಅನಿಸುತ್ತಿದೆ. ನಿನ್ನದೇ ಕಂಠದಲ್ಲಿ ‘ಅನ್ನ ಎಪ್ಪುಡಿ ಇರುಕೀಂಗೆ’ ಎಂದು ನೀನು ಹೇಳುವುದನ್ನು ಕೇಳಬೇಕು ಅನಿಸುತ್ತಿದೆ. ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ ಸಹೋದರ’ ಎಂದು ಕಿಶೋರ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಕಪಿಲ್ ಶರ್ಮಾ ಶೋನಲ್ಲಿದ್ದಾರೆ ಖ್ಯಾತ ಕಾಮಿಡಿಯನ್ಸ್; ಇವರ ಆಸ್ತಿ ಎಷ್ಟು ಕೋಟಿ ರೂಪಾಯಿ?
ಕಿಶೋರ್ ಹಾಗೂ ಡ್ಯಾನಿಯಲ್ ಆತ್ಮೀಯ ಗೆಳೆಯರಾಗಿದ್ದರು. ‘ಪೊಲ್ಲಾಧವನ್’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಈ ಇಬ್ಬರು ಒಟ್ಟಿಗೆ ನಟಿಸಿದ್ದರು. ವಿಶೇಷವಾಗಿ ‘ವಡಚೆನ್ನೈ’ ಸಿನಿಮಾನಲ್ಲಿ ಗೆಳೆಯರಾಗಿ ಈ ಇಬ್ಬರು ಕಾಣಿಸಿಕೊಂಡಿದ್ದರು. ಡ್ಯಾನಿಯಲ್, ‘ಕಾಕಾ ಕಾಕ’, ‘ಪೊಲ್ಲಾಧವನ್’, ಕಮಲ್ ಹಾಸನ್ ಜೊತೆ ‘ವೇಟ್ಟೆಯಾಡು ವಿಲೆಯಾಡು’, ‘ವಡಚೆನ್ನೈ 2’, ಕನ್ನಡದಲ್ಲಿ ‘ಕಿರಾತಕ’, ‘ಶಿವಾಜಿನಗರ’ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ ನಿರ್ದೇಶಕ ಹರಿ ಸಂತು, ಡ್ಯಾನಿಯಲ್ ಬಗ್ಗೆ ಮಾತನಾಡಿದ್ದು, ‘ಡೇನಿಯಲ್ ಒಬ್ಬ ಒಳ್ಳೆ ನಟ, ಭಿನ್ನ ಪಾತ್ರಗಳನ್ನ ಒಪ್ಪಿಕೊಂಡು ಅದ್ಭುತ ನಟನೆ ನೀಡುತ್ತಿದ್ದರು. ಸಂಭಾವನೆಗಿಂತಲೂ ಒಳ್ಳೆ ಪಾತ್ರಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದರು. ಚೆನ್ನೈನಲ್ಲಿರೋ ಅವರ ನಿವಾಸಕ್ಕೂ ನಾನು ಹೋಗಿದ್ದೆ, ಆಗೆಲ್ಲ ಅವರು ಅವರ ಜೊತೆ ಇರೋ ಹುಡುಗರನ್ನು ಮಾತನಾಡಿದ್ದೆ. ಕಳೆದ 9 ವರ್ಷಗಳಿಂದ ಅವರ ಪರಿಚಯ ಇತ್ತು, ಹಲವು ಭಾರಿ ಮಾತಾಡಿದ್ದೇವೆ, ‘ವೇಟ್ಟೆಯಾಡು ವಿಲೆಯಾಡು’ ಸಿನಿಮಾದಲ್ಲಿ ಕಮಲ್ ಹಾಸನ್ ಅವರಿಗೇ ಟಕ್ಕರ್ ಕೊಟ್ಟು ಅಭಿನಯ ಮಾಡಿದ್ದರು. ಮದುವೆ, ಇನ್ನಿತರೆ ವಯಕ್ತಿಕ ವಿಚಾರದ ಬಗ್ಗೆ ಅಷ್ಟೊ ಗೊತ್ತಿಲ್ಲ, ಇತ್ತೀಚೆಗೆ ದೇವಸ್ಥಾನ ಕಟ್ಟಿಸಿದ್ದರು. ಆಧ್ಯಾತ್ಮದತ್ತ ವಾಲಿದ್ದರು ಅಂತ ಕೇಳಿದ್ದೆ, ಅವರ ಅಗಲಿಕೆಯಿಂದ ಒಳ್ಳೆ ನಟನನ್ನ ಕಳೆದುಕೊಂಡಿದ್ದೇವೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ