Bhargavi Narayan Birthday : ಕಬ್ಬಕ್ಕಿಗಳಂತೆ ಘಮಘಮಿಸುವ ಬಿಸಿಬಿಸಿ ಬಾದಾಮಿ ಹಾಲನ್ನು ಆನಂದದಿಂದ ಕುಡಿದೆವು!

| Updated By: ಶ್ರೀದೇವಿ ಕಳಸದ

Updated on: Feb 04, 2022 | 4:38 PM

Hospitality : “ನೀವು 10ಗಂಟೆಗೆ ಗಂಟೆಗೆ ಹೊರಟರೆ ಸಾಕು - ಬೆಂಗಳೂರು ಟ್ರೈನ್ ಹಿಡಿಯಬಹುದು. ರೈಲ್ವೆ ಸ್ಟೇಷನ್ ಇಲ್ಲಿಗೆ ತುಂಬ ಹತ್ತಿರವಿದೆ. ನಮ್ಮ ಯಜಮಾನರು ನಿಮ್ಮನ್ನು ಕರೆದುಕೊಂಡು ಹೋಗಿ ಟ್ರೈನ್ ಹತ್ತಿಸಿ ಬರುತ್ತಾರೆ‘‘ (ಅಷ್ಟು ಕಾಳಜಿಯಿಂದ ನಮ್ಮ ಮನೆಯವರೂ ಎಂದೂ ಟ್ರೈನ್ ಹತ್ತಿಸಲು ಬಂದಿರಲಿಲ್ಲ.

Bhargavi Narayan Birthday : ಕಬ್ಬಕ್ಕಿಗಳಂತೆ ಘಮಘಮಿಸುವ ಬಿಸಿಬಿಸಿ ಬಾದಾಮಿ ಹಾಲನ್ನು ಆನಂದದಿಂದ ಕುಡಿದೆವು!
ಭಾರ್ಗವಿ ನಾರಾಯಣ
Follow us on

ಭಾರ್ಗವಿ ನಾರಾಯಣ | Bhargavi Narayan : ಅವರ ಮನೆಗೆ ಹೋಗಿ, ಮಹಡಿಯ ನಮ್ಮ ಕೋಣೆಗೆ ಹೋಗಿ ಮಲಗಲು ಸಿದ್ದವಾಗುತ್ತಿದ್ದಂತೆ, ಆ ಹುಡುಗಿ, ಅವರ ಮಗಳು (ಮಂಗಳಾನೋ – ಲಕ್ಷ್ಮಿಯೋ ಮರೆತುಬಿಟ್ಟೆ) ಬಿಸಿಬಿಸಿ ಬಾದಾಮಿ ಹಾಲಿನ ಲೋಟದೊಡನೆ ಬಂದಳು. ಶ್ರೀಮಂತ ಮನೆತನದ ಹುಡುಗಿ – ಇಂಜಿನೀಯರಿಂಗ್ ವಿದ್ಯಾರ್ಥಿನಿ – ಒಂದಿಷ್ಟೂ ಜಂಭ-ಬಡಿವಾರಗಳಿಲ್ಲದೆ ತಾನೇ, ಯಾರೋ ಎಂದೂ ಕಂಡರಿಯದ Self invited guestಗಳಿಗೆ ಉಪಚಾರ ಮಾಡಿದ್ದನ್ನ ಈ ಜನ್ಮದಲ್ಲೇ ಮರೆಯಲು ಸಾಧ್ಯವಿಲ್ಲ. ಅವಳು ನಿಂತಿರುವವರೆಗೂ ಘನವಾಗಿ ಕೂತಿದ್ದವರು, ಅವಳು ಕಣ್ಮರೆಯಾಗುತ್ತಿದ್ದಂತೆಯೇ ಕಬ್ಬಕ್ಕಿಗಳಂತೆ ಘಮಘಮಿಸುವ ಬಿಸಿ ಬಾದಾಮಿ ಹಾಲನ್ನು ಆನಂದದಿಂದ ಕುಡಿದು ಲೋಟಗಳನ್ನು ಕೆಳಗೆ ಇಡುತ್ತಿದ್ದಂತೆ, ಮತ್ತೆ ಹುಡುಗಿ ಪ್ರತ್ಯಕ್ಷಳಾದಳು. ಕುಡಿದಿಟ್ಟಿದ್ದ ಲೋಟಗಳನ್ನು ಜೋಡಿಸಿಕೊಳ್ಳುತ್ತಾ ಕೇಳಿದಳು – “ನೀವು ಇದೇ ಮೊದಲನೆಯ ಸಲವಾ ಈ ಊರಿಗೆ ಬಂದಿರುವುದು” ಎಂದು. “ಹೌದು” ಎಂದೆವು.

*

(ಭಾಗ- 5)

“ಹಾಗಿದ್ದರೆ ನೀವು ದೇವರನ್ನು ನೋಡಬೇಕು ಅಲ್ಲವಾ?”

“ಹೂಂ. ಈಗ ತಾನೇ ದೇವಸ್ಥಾನಕ್ಕೆ ಹೋಗಿ ಬಂದವು.”

“ದೇವರನ್ನು ಹತ್ತಿರದಿಂದ ನೋಡಲು ಬಿಟ್ಟರಾ ನಿಮ್ಮನ್ನು?

“ಇಲ್ಲ – ಯಾರನ್ನೂ ಬಿಡುವುದಿಲ್ಲವಂತೆ – ಆ ಕಟೆ ಕಟೆ ಹಾಕಿದ್ದರಲ್ಲಾ – ಅದರಿಂದ ಮುಂದೆ”

“ಹೌದು. ಆದರೆ ನಮ್ಮ ತಂದೆ ಆ ದೇವಸ್ಥಾನದ ಕಮಿಟಿಯಲ್ಲಿದ್ದಾರೆ. ಪ್ರತಿದಿನವೂ ನಮ್ಮ ಮನೆಯದೇ ಮೊದಲ ಪೂಜೆ. ಹಾಗಾಗಿ ನಮ್ಮನ್ನು ಗರ್ಭಗುಡಿಯವರೆಗೂ ಬಿಡುತ್ತಾರೆ. ನಿಮಗೂ ಬರುವ ಇಚ್ಛೆಯಿದ್ದರೆ ಬನ್ನಿ – ನಾನು ಕರೆದುಕೊಂಡು ಹೋಗುತ್ತೇನೆ”

ಯಾರಿಗುಂಟು ಯಾರಿಗಿಲ್ಲ – ಅಂತಹ ಸೌಭಾಗ್ಯ, ನಾವು ಬರುತ್ತೇವೆ ಎಂದು ಹೇಳಿದೆವು.

“ಹಾಗಿದ್ದರೆ 4.30ಕ್ಕೆಲ್ಲಾ ಅಲ್ಲಿ, ದೇವಸ್ಥಾನದಲ್ಲಿರಬೇಕು. 4ಕ್ಕೆ ಅಲಾರಾಂ ಇಟ್ಟಿರುತ್ತೇನೆ. ನೀವು ನಿಮ್ಮ ಬಾತ್‌ರೂಮ್‌ನಲ್ಲಿ ಗೀಸರ್ ಸ್ವಿಚ್ ಹಾಕಿ ಮಲಗಿಕೊಳ್ಳಿ. ರೆಡಿ ಆಗಿ – ನಾನು ಕರೆದುಕೊಂಡು ಹೋಗುತ್ತೇನೆ” ಅಂದಳು ಆ ಪುಣ್ಯಾತ್ಮಿ.

ಇದೇನು ಇಂತಹ ಅಲಭ್ಯ ಲಾಭ ಎಂದು ಆಶ್ಚರ್ಯಪಟ್ಟುಕೊಂಡು ನಮಗೆ ರೈಲು-ಬಸ್ಸು ಸಿಗದೇ ಇದ್ದುದ್ದೇ ಅದೃಷ್ಟ ಎನಿಸಿತು. ಅಷ್ಟಲ್ಲದೆ ದಾಸರು ಹಾಡಿದ್ದಾರೆಯೇ – “ಆದದ್ದೆಲ್ಲಾ ಒಳಿತೇ ಆಯಿತು” ಅಂತ.

ಅದೇ ಇರಲಿ) ಬೆಳಗಾಯ್ತು. ಆ ಮಂಗಳಾಂಗಿ (ಅದೇ ಆ ಹುಡುಗಿಗೆ ಒಪ್ಪುವ ಹೆಸರು, ಬಂದು ಎಬ್ಬಿಸಿದಳು. ನಾವು ಸ್ನಾನ ಮಾಡಿ ಸಿದ್ಧವಾಗುವ ವೇಳೆಗೆ – ಕೆಳಗೆ ಡೈನಿಂಗ್ ಟೇಬಲ್ ಮೇಲೆ ನಮಗೆಲ್ಲರಿಗೂ ಬಿಸಿ ಬಿಸಿ ಕಾಫಿ, ಬಿಸ್ಕತ್ ಸಿದ್ಧವಾಗಿತ್ತು. ಅವಳೊಡನೆ ದೇವಸ್ಥಾನಕ್ಕೆ ಹೋದೆವು. ಗರ್ಭಗುಡಿಯ ಸಮೀಪದಲ್ಲಿ ನಿಂತು ಮೊದಲ ಪೂಜೆಯನ್ನು ವೀಕ್ಷಿಸಿ ತೀರ್ಥ ಪ್ರಸಾದಗಳನ್ನು ಸೇವಿಸಿದವು. ಆ ರಂಗನಾಥನ ದಯೆಯೇ ನಮ್ಮನ್ನು ಕಾಪಾಡುತ್ತಿದ್ದುದು ಎಂಬುದರ ಬಗ್ಗೆ ಯಾವ ಸಂಶಯವೂ ಇರಲಿಲ್ಲ. ಸಂಶಯ ಇದ್ದುದು ಒಂದೇ ವಿಷಯದಲ್ಲಿ – ಯಾಕೆ ಈ ಮಹಾಪುರುಷ – ದೇವದೇವ ನಮ್ಮಂತಹ ಸಾಮಾನ್ಯರ ಬಗ್ಗೆ ಇಷ್ಟು ಕಾಳಜಿ ಇಟ್ಟಿದ್ದಾನೆ ಎನ್ನುವುದರ ಬಗ್ಗೆ, ತಂದೆ-ತಾಯಿಯರು ಮಾಡಿದ ಪುಣ್ಯ ಅವರ ಮಕ್ಕಳನ್ನು ಕಾಯುತ್ತದೆ ಎಂದು ತಿಳಿದವರು ಹೇಳುವುದು ಇದಕ್ಕಾಗೇ ಇರಬಹುದು.

ದೇವಸ್ಥಾನದಿಂದ ಬರುತ್ತಿದ್ದಂತೆ ಮಂಗಳನ ತಾಯಿ ಕೇಳಿದರು – “ನೀವು 10ಗಂಟೆಗೆ ಗಂಟೆಗೆ ಹೊರಟರೆ ಸಾಕು – ಬೆಂಗಳೂರು ಟ್ರೈನ್ ಹಿಡಿಯಬಹುದು. ರೈಲ್ವೆ ಸ್ಟೇಷನ್ ಇಲ್ಲಿಗೆ ತುಂಬ ಹತ್ತಿರವಿದೆ. ನಮ್ಮ ಯಜಮಾನರು ನಿಮ್ಮನ್ನು ಕರೆದುಕೊಂಡು ಹೋಗಿ ಟ್ರೈನ್ ಹತ್ತಿಸಿ ಬರುತ್ತಾರೆ’’ (ಅಷ್ಟು ಕಾಳಜಿಯಿಂದ ನಮ್ಮ ಮನೆಯವರೂ ಎಂದೂ ಟ್ರೈನ್ ಹತ್ತಿಸಲು ಬಂದಿರಲಿಲ್ಲ. ನೀವು ಈಗ ತಿಂಡಿ ತಿಂದು, ಊಟ ತೆಗೆದುಕೊಂಡು ಹೋಗುತ್ತೀರೋ ಅಥವಾ ಊಟ ಮಾಡಿ, ತಿಂಡಿ ಪ್ಯಾಕ್ ಮಾಡಿಕೊಂಡು ಹೋಗುತ್ತೀರೋ” ಎಂದು.

ಅಷ್ಟು ಬೇಗ ಅಡಿಗೆ ಮಾಡುವುದು ಕಷ್ಟವಾಗುತ್ತೋ ಏನೋ ಎಂಬ ಸಂಕೋಚ ನಮಗೆ. “ತಿಂಡಿ ರೆಡಿ ಆಗಿದ್ದರೆ ತಿಂಡಿ ತಿನ್ನುತ್ತೇವೆ – ಅಡಿಗೆ ರೆಡಿ ಆದರೆ ಊಟ ಮಾಡಿ ಹೋಗುತ್ತೇವೆ. ನಿಮಗೆ ಯಾವುದು ಅನುಕೂಲವೋ ಹಾಗೆ ಮಾಡುತ್ತೇವೆ.

“ತಿಂಡಿ ಆಗಿದೆ. ಇನ್ನು ಒಂದು ಗಂಟೆಯೊಳಗೆ ಒಳಗೆ ಅಡಿಗೆಯೂ ಆಗುತ್ತದೆ. ನನ್ನ ಮಗಳು ಊಟ ಮಾಡಿಕೊಂಡು ಕಾಲೇಜ್‌ಗೆ ಹೋಗುತ್ತಾಳೆ. ಹತ್ತು ಗಂಟೆ ಹೊತ್ತಿಗೆ ಯಜಮಾನರು ತಿಂಡಿ ತಿಂದು ಅಂಗಡಿಗೆ ಹೋಗುವಾಗ ನಿಮ್ಮನ್ನು ರೈಲ್ವೆ ಸ್ಟೇಷನ್‌ಗೆ ಕರೆದುಕೊಂಡು ಹೋಗುತ್ತಾರೆ.

3ನೇ ಭಾಗ : Bhargavi Narayan Birthday: ಬೆಪ್ಪುತಕ್ಕಡಿಗಳು ದಿಟ್ಟ ಪಾರ್ವತಿಗಳ ಹಾಗೆ ದಿಕ್ಕಾಪಾಲಾಗಿ ಓಡಾಡಿದ್ದರು!

ಪತಿ ನಾರಾಯಣ (ಮೇಕಪ್ ನಾಣಿ) ಅವರೊಂದಿಗೆ ಭಾರ್ಗವಿ

“ಸರಿ, ಹಾಗಿದ್ದರೆ. ಊಟ ಮಾಡಿಕೊಂಡೇ ಹೋಗುತ್ತೇವೆ. ಆದರೆ ಟ್ರೈನ್‌ಗೆ ಏನೂ ತೆಗೆದುಕೊಂಡು ಹೋಗುವುದಿಲ್ಲ. ಅಲ್ಲೇ ಏನಾದರೂ ತೆಗೆದುಕೊಳ್ಳುತ್ತೇವೆ” ಎಂದು ಹೇಳಿ ನಮ್ಮ ರೂಮಿಗೆ ಹೋದೆವು. ಯಾವ Five star hotelನಲ್ಲೂ ಸಿಗದ ರಾಜೋಪಚಾರ. ಯಾವ ಜನ್ಮದ ಪುಣ್ಯವೋ.

ಒಂಬತ್ತೂವರೆಗೆ ಬಂದು ಕೂತೆವು ಊಟಕ್ಕೆ, ಪಲ್ಯ, ಕೋಸಂಬರಿ, ಪಾಯಸ, ಹಪ್ಪಳ, ಸಾರು, ಉಪ್ಪಿನಕಾಯಿ, ಮೊಸರು – ರಸಕವಳ ತಿಂದೆವು ಆನಂದವಾಗಿ, ಮನಸ್ಪೂರ್ತಿಯಾಗಿ ಮನೆಯೊಡತಿಯನ್ನು ವಂದಿಸಿ ಹೊರಟೆವು. ಮನೆಯ ಯಜಮಾನರು (ನರಸಿಂಹನ್ ಇರಬೇಕು ಅವರ ಹೆಸರು) ಕಾರ್ ತೆಗೆದುಕೊಂಡು ಬಂದರು. ರೈಲ್ವೆ ಸ್ಟೇಷನ್‌ಗೆ ಬಂದು ಬಿಟ್ಟು ಹೊರಟು ಹೋಗಲಿಲ್ಲ. ನಾವು ಟಿಕೆಟ್ ತೆಗೆದುಕೊಂಡ ಮೇಲೆ ಭಾಸ್ಕರ್‌ ಎನ್ನುವ T.C. ಅವರಿಗೆ ನಮಗೆ ಹೇಗಾದರೂ ಬರ್ತ್​ ಕೊಡಿಸಬೇಕೆಂದು ಹೇಳಿ, ನಮಗೆ ವಿದಾಯ ಹೇಳಿ ಹೊರಟರು ಆ ಪುಣ್ಯಾತ್ಮ. ಗುಂಡುಗುಂಡಗೆ ನಮ್ಮ ಮೈಸೂರು ಮಹಾರಾಜರಂತಿದ್ದ T.C. ನಮಗೆ ಬರ್ತ್​ ಕೊಡಿಸಿದರು. ಸುಖವಾಗಿ ಬೆಂಗಳೂರು ತಲುಪಿದೆವು. ಆ T.C. ಒಳ್ಳೆ ಸೋದರಮಾವನ ಹಾಗೆ ಆಸಕ್ತಿ ವಹಿಸಿದರು. ನಮಗೆ ಬರ್ತ್ ಸಂಪಾದಿಸಿಕೊಡಲು. ಅದಕ್ಕೆ ಇರಬೇಕು “Shakespear, Julius Ceaser ಬಾಯಲ್ಲಿ ಹೇಳಿಸಿರುವುದು -“Let me have-fat people around me” ಅಂತ ವಿಶಾಲ ದೇಹಿಗಳ ಮನಸ್ಸೂ ವಿಶಾಲವೆಂದು ತೋರುತ್ತದೆ.

ನಿನ್ನ ಜೊತೇಲಿ ಪ್ರಯಾಣ ಅಂದರೆ, ಅದು ಎಲ್ಲರ ಹಾಗೆ ಸಾಮಾನ್ಯ ಪ್ರಯಾಣ ಅಂತೂ ಆಗಿರೋಲ್ಲ. ಅದರಲ್ಲಿ ಏನೋ ಸಾಹಸ, ವಿಶೇಷತೆ ಇರೇ ಬೇಕು – ಅಲ್ಲವಾ” ಅಂತ ನಮ್ಮತ್ತಿಗೆ ಇದ್ದೇ ಹೇಳಿದ್ದು ನಿಜ. ಯಾಕೇಂದ್ರೆ ನಾವು ಯಾವತ್ತು ಎಲ್ಲಿಗೆ ಹೋದ್ರೂ ಏನೋ ಒಂದು ತಕರಾರು ತಾಪತ್ರಯ ಇರ್ತಾ ಇತ್ತು. ಅಷ್ಟೇ ಅಲ್ಲ – ಆ ತಾಪತ್ರಯ – ಅಷ್ಟೇ ಸಲೀಸಾಗಿ ನಿವಾರಣೇನೂ ಆಗ್ತಾ ಇತ್ತು. Some thrill in life, ಇರಬೇಕಲ್ವಾ…

(ಮುಗಿಯಿತು) 

ಹಿಂದಿನ ಭಾಗ : Bhargavi Narayan Birthday : ರಾತ್ರಿ ನಮ್ಮನೇಲಿದ್ದು ಬೆಳಗ್ಗೆ ರೈಲಿಗೆ ಹೋಗಿ ಎಂದರು ಆ ಪುಣ್ಯಾತ್ಮ

ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/bhargavi-narayan-birthday

Published On - 4:37 pm, Fri, 4 February 22