Bhargavi Narayan Birthday : ರಾತ್ರಿ ನಮ್ಮನೇಲಿದ್ದು ಬೆಳಗ್ಗೆ ರೈಲಿಗೆ ಹೋಗಿ ಎಂದರು ಆ ಪುಣ್ಯಾತ್ಮ
Ladies Trip : ದೇವಸ್ಥಾನದ ಇನ್ನೊಂದು ಗೋಡೆಯನ್ನು ಬಳಸಿ ಹೊರಟೆವು. ರಾತ್ರಿ ಒಂಬತ್ತು ಘಂಟೆ ಮೀರಿತ್ತು. ಆ ರಸ್ತೆಯಲ್ಲಿ ಹೆಚ್ಚು ಜನರ ಓಡಾಟವಿರಲಿಲ್ಲ. ಬರೀ ಹೆಂಗಸರೇ ಹೋಗುತ್ತಿದ್ದೆವಲ್ಲಾ, ಯಾವನೋ ಸೈಕಲ್ ಸವಾರ ಹಿಂದೆ ಬರಲಾರಂಭಿಸಿದ - ಅಶ್ಲೀಲವಾಗಿ ಮಾತುಗಳನ್ನಾಡುತ್ತಾ, ಹೆದರಿ ಬೇಗ ಬೇಗ ನಡೆಯಲು ಪ್ರಾರಂಭಿಸಿದೆವು.
ಭಾರ್ಗವಿ ನಾರಾಯಣ | Bhargavi Narayan : “ನಾನು Mrs. BNN. ಹೀಗೇ ನಾವು ಕನ್ಯಾಕುಮಾರಿ ಇಂದ ಬಂದಿವಿ ಟ್ಯಾಕ್ಸಿ ಮಾಡ್ಕೊಂಡು. ಇಲ್ಲಿಂದ ಬೆಂಗಳೂರಿಗೆ ಹೋಗೋದು ಅಂದುಕೊಂಡು. ಆದರೆ ಬಸ್ ಇಲ್ಲ. ಟ್ರೈನ್ ನಾಳೆ ಬೆಳಗ್ಗೆ 11.30ಕ್ಕೆ ಇರೋದು. ಯಾವುದಾದ್ರೂ ಹೋಟೆಲ್‌ನಲ್ಲಿ ರೂಮ್ ಮಾಡೋಕೆ ಹೆದರಿಕೆ. ಬರೀ ಹೆಣ್ಣುಮಕ್ಕಳಷ್ಟೇ ಇದ್ಧಾರೆ. ಕಾಣದ ಜಾಗ” ಅಂತ ಹೇಳಿದೆ ನನ್ನ Sob-Storyನ ಭಾರಿ ಅಸಹಾಯಕ ಹೆಣ್ಣುಮಗಳಂತೆ. ಮತ್ತೆ ಹೇಳೋಲ್ಲ ದೇವರ ಹಾಗೆ ಅಂತ. ಆದರೆ ಹೇಳದೆ ವಿಧಿ ಇಲ್ಲ. ದೇವರಂತಹ ಮನುಷ್ಯ ಅಂತ ಹೇಳದೆ ಹೋದ್ರೆ ಮನಸ್ಸು ಕೇಳೋಲ್ಲ. ಆತ ತಕ್ಷಣ “ಅಯ್ಯೋ ಅದಕ್ಕಾಕಮ್ಮಾ ಚಿಂತೆ ಮಾಡ್ತೀರಿ. ಇಲ್ಲೇ ಹತ್ತಿರಾನೇ ನಮ್ಮ ಮನೆ ಇದೆ. ರಾತ್ರಿ ನಮ್ಮನೇಲಿದ್ದು ಬೆಳಗಿನ ರೈಲಿಗೆ ಹೋಗಿ” ಅಂದು, ತನ್ನ ಸಹಾಯಕರಿಗೆ ಅಂಗಡಿ ನೋಡಿಕೊಳ್ಳಲು ಹೇಳಿ, ತಮ್ಮ ಕಾರಿನಲ್ಲಿ ಅವರ ಮನೆಗೆ ಕರೆದುಕೊಂಡು ಹೋಗಿ, ಹೆಂಡತಿಗೆ ಪರಿಚಯಿಸಿ, ಮತ್ತೆ ಅಂಗಡಿಗೆ ಹೊರಟುಹೋದರು. ಯಾರೋ ಹತ್ತಿರದ ನೆಂಟರು ಮನೆಗೆ ಬಂದಿರುವಂತೆ ಅಸಾಧ್ಯ ಪ್ರೀತಿ ವಿಶ್ವಾಸದಿಂದ ನೋಡಿಕೊಂಡರು. ರಾತ್ರಿ ಊಟಕ್ಕೆ ತಯಾರು ಮಾಡುವುದೇ” ಎಂದು ಆಕೆ ಹೇಳಿದಾಗ, ‘ಹೂಂ’ ಎನ್ನಲು ಸಂಕೋಚ. ‘ಬೇಡ, ಹೊಟ್ಟೆ ತುಂಬಿದೆ’ ಎಂದು ಸುಳ್ಳು ಹೇಳಿದೆವು.
(ಭಾಗ 4)
ಮಹಡಿ ಮೇಲೆ ರೂಮ್ ಅಣಿ ಮಾಡಿಕೊಟ್ಟಳು ಅವರ ಮಗಳು. ಹೆಸರು ಮರೆತಿದೆ. ಬಿ.ಇ. ಓದುತ್ತಿದ್ದ ಹುಡುಗಿ, ನಮಗೆ ಹಸಿವು – ಎನ್ನಲು ಸಂಕೋಚ. “ಬೇಡ, ಹೊಟ್ಟೆ ತುಂಬಿದೆ” ಎಂದು ಸುಳ್ಳು ಹೇಳಿದೆವು. ಹಾಯಾಗಿ ದೇವರೇ ಎಂದು ಮಲಗಬಹುದಿತ್ತು. ಹೊಟ್ಟೆ ತಾಳ ಹಾಕುತ್ತಿತ್ತು. ಲಕ್ಷಣವಾಗಿ ಕೈಕಾಲು ಮುಖ ತೊಳೆದುಕೊಂಡು – “ಇನ್ನೂ 8.15 ಗಂಟೆ. ಇಲ್ಲೇ ಒಂದು ಸುತ್ತು ಹಾಕಿ ಬರುತ್ತೇವೆ” ಎಂದು ಹೇಳಿ ಹೊರಟೆವು. ನಾನು, ಲೀಲಾ, ಸುಧಾ ಹಾಗೂ ಅನು. ಏನಿಲ್ಲ ಇನ್ನೇನಿಲ್ಲದಿದ್ದರೂ ಎರಡೆರಡು ಬಾಳೆಹಣ್ಣು ತಿಂದು ಮಲಗುವ – ಎನ್ನುವ ಯೋಜನೆ ಅಷ್ಟೆ.
ಹಿಂದುಮುಂದು ಗೊತ್ತಿಲ್ಲದ ಊರು. ಅವರ ಮನೆ ಇದ್ದುದ್ದು ಅನಂತಶಯನನ ದೇವಸ್ಥಾನದ ಹತ್ತಿರವೇ. ದೇವಸ್ಥಾನ ನೋಡಿ ಬರುವ ಮೊದಲು ಅಲ್ಲೇ ಒಂದು ಅಂಗಡಿಯಲ್ಲಿ ಒಂದಷ್ಟು ಐಸ್ ಕ್ರೀಮ್ ತಿಂದು, ದೇವಸ್ಥಾನದ ಒಳಹೊಕ್ಕೆವು. ಟೂರಿಸ್ಟ್ಗಳನ್ನು ಗರ್ಭಗುಡಿಯಿಂದ ಒಂದಷ್ಟು ದೂರದಲ್ಲಿಯೇ ನಿಲ್ಲಿಸುತ್ತಾರೆ. ಎಷ್ಟು ದೂರ ನಿಲ್ಲಿಸಿದರೂ ಢಾಳಾಗಿ ಕಾಣುವಷ್ಟು ದೊಡ್ಡ ಮೂರ್ತಿ. ಗರ್ಭಗುಡಿಗೆ ಮೂರು ಬಾಗಿಲು, ಒಂದು ಬಾಗಿಲಲ್ಲಿ ದೇವರ ತಲೆ, ಎರಡನೆಯ ಬಾಗಿಲಲ್ಲಿ ಹೊಟ್ಟೆ ಹಾಗೂ ಮೂರನೆಯ ಬಾಗಿಲಲ್ಲಿ ಪಾದಗಳನ್ನು ನೋಡಬೇಕು. ಹಾಗೆ ವಿಸ್ತಾರವಾಗಿ ಹಾವಿನ ಮೇಲೆ ಮಲಗಿ, ವಿಶ್ರಮಿಸುತ್ತಿದ್ದ ಮೂರ್ತಿಯನ್ನು ಕಂಡು ಕಣ್ಣು ಪಾವನವಾಯಿತು ಎಂದು ಮನಸ್ಸಿನಲ್ಲಿ ಅಂದುಕೊಂಡು ಅಲ್ಲಿಂದ ಹೊರಬಿದ್ದೆವು.
ಎರಡನೇ ಭಾಗ : Bhargavi Narayan Birthday : ‘ಕಡೇ ಸ್ಟೇಷನ್ನಿನಲ್ಲಿ ನಿಲ್ಲಿಸಿದ ರೈಲಿನಲ್ಲಿ ಹತ್ತಿ ಕುಳಿತಿದ್ದೆವು!’
ಕಂಡು ಕೇಳರಿಯದ ಊರು ಎಂದು ಮೊದಲೇ ಹೇಳಿದ್ದೇನೆ. ಯಾವ ದಾರಿಯಲ್ಲಿ ದೇವಸ್ಥಾನಕ್ಕೆ ಬಂದೆವೋ ಅದೇ ದಾರಿಯಲ್ಲಿ ಹೋಗಬೇಕು ತಾನೆ. ಇನ್ನೊಂದು ದಾರಿಯಲ್ಲಿ ಬಳಸಿ ಹೋಗುವುದೆಂದು ನಿರ್ಧರಿಸಿ ಹೊರಟೆವು. ಆ ದೇವಸ್ಥಾನ ಒಂದು ಊರಿನ ಬಡಾವಣೆಯಷ್ಟು ದೊಡ್ಡದು.
ದೇವಸ್ಥಾನದ ಇನ್ನೊಂದು ಗೋಡೆಯನ್ನು ಬಳಸಿ ಹೊರಟೆವು. ರಾತ್ರಿ ಒಂಬತ್ತು ಘಂಟೆ ಮೀರಿತ್ತು. ಆ ರಸ್ತೆಯಲ್ಲಿ ಹೆಚ್ಚು ಜನರ ಓಡಾಟವಿರಲಿಲ್ಲ. ಬರೀ ಹೆಂಗಸರೇ ಹೋಗುತ್ತಿದ್ದೆವಲ್ಲಾ, ಯಾವನೋ ಸೈಕಲ್ ಸವಾರ ಹಿಂದೆ ಬರಲಾರಂಭಿಸಿದ – ಅಶ್ಲೀಲವಾಗಿ ಮಾತುಗಳನ್ನಾಡುತ್ತಾ, ಹೆದರಿ ಬೇಗ ಬೇಗ ನಡೆಯಲು ಪ್ರಾರಂಭಿಸಿದೆವು. ಅವನೂ ಅಷ್ಟೇ ಬೇಗ ಹಿಂದೆ ಬರುತ್ತಿದ್ದ. ಬಂದವನೇ ಕೊನೆಯಲ್ಲಿ ಬರುತ್ತಿದ್ದ ಸುಧಾಳ ಬೆನ್ನಿಗೆ ಬಲವಾಗಿ ಹೊಡೆದು ಚಿತ್ರವಿಚಿತ್ರ ಅಂಗಚೇಷ್ಟೆ ಮಾಡುತ್ತಾ ಬರುತ್ತಿದ್ದ. ನಮ್ಮ ದುರಾದೃಷ್ಟಕ್ಕೆ ನಾವಿಳಿದುಕೊಂಡಿದ್ದಾತನ ಮನೆಯ ಗುರುತೂ ತಿಳಿಯಲಿಲ್ಲ. ಸದ್ಯಕ್ಕೆ ಆ ಪುಣ್ಯಾತ್ಮನ ಹೆಸರು ನೆನಪಿತ್ತು. ಅಲ್ಲೇ ಓಡಿ ಹೋಗಿ, ಇನ್ನೇನು ಮುಚ್ಚಲು ಉದ್ಯುಕ್ತನಾಗುತ್ತಿದ್ದ ಅಂಗಡಿಯವರಲ್ಲಿ “ಇಂಥವರ ಮನೆ ಎಲ್ಲಿ” ಎಂದು ಕೇಳಿದೆವು. ಆ ವೇಳೆಗೆ ಆ ಸೈಕಲ್ ಸವಾರನಿಗೆ ಸಮಾಧಾನ ಸಿಕ್ಕಿತ್ತೇನೋ – ತನ್ನ ಪ್ರತಾಪ ಪ್ರದರ್ಶನದಿಂದ ಹೊರಟು ಹೋಗಿದ್ದ. ಅಂಗಡಿಯವರು ದಾರಿ ತಿಳಿಸಿದ ಮೇಲೆ, ಬದುಕಿದೆಯಾ ಬಡ ಜೀವವೇಂತ ಅವರ ಮನೆ ತಲುಪಿದೆವು.
(ಮುಂದಿನ ಭಾಗ ನಿರೀಕ್ಷಿಸಿ)
ಹಿಂದಿನ ಭಾಗ : Bhargavi Narayan Birthday: ಬೆಪ್ಪುತಕ್ಕಡಿಗಳು ದಿಟ್ಟ ಪಾರ್ವತಿಗಳ ಹಾಗೆ ದಿಕ್ಕಾಪಾಲಾಗಿ ಓಡಾಡಿದ್ದರು!