ಕಮಲ್ ಹಾಸನ್ ಹೇಳಿಕೆ ವಿರುದ್ಧ ಧ್ವನಿ ಎತ್ತಿದ ಅಹಿಂಸಾ ಚೇತನ್; ಉಳಿದ ಸೆಲೆಬ್ರಿಟಿಗಳ ಮೌನವೇಕೆ?

ಕಮಲ್ ಹಾಸನ್ ಅವರ ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂಬ ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅಹಿಂಸಾ ಚೇತನ್ ಅವರು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಆದರೆ, ಅನೇಕ ಕನ್ನಡ ಸೆಲೆಬ್ರಿಟಿಗಳು ಮೌನವಾಗಿರುವುದು ನಿರಾಶಾದಾಯಕ. ಕನ್ನಡದ ಗೌರವಕ್ಕಾಗಿ ಒಗ್ಗಟ್ಟಿನ ಅಗತ್ಯವಿದೆ ಎಂಬುದು ಈ ಘಟನೆಯಿಂದ ಸ್ಪಷ್ಟವಾಗಿದೆ.

ಕಮಲ್ ಹಾಸನ್ ಹೇಳಿಕೆ ವಿರುದ್ಧ ಧ್ವನಿ ಎತ್ತಿದ ಅಹಿಂಸಾ ಚೇತನ್; ಉಳಿದ ಸೆಲೆಬ್ರಿಟಿಗಳ ಮೌನವೇಕೆ?
ಅಹಿಂಸಾ ಚೇತನ್-ಕಮಲ್ ಹಾಸನ್

Updated on: May 28, 2025 | 12:06 PM

ಕಮಲ್ ಹಾಸನ್ (Kamal Haasan) ಅವರು ತಮ್ಮ ನಟನೆಯ ‘ಥಗ್ ಲೈಫ್’ ಸಿನಿಮಾ ಪ್ರಚಾರ ಮಾಡುವ ವೇಳೆ ಅಚಾತುರ್ಯ ಮಾಡಿದ್ದಾರೆ. ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂಬರ್ಥದಲ್ಲಿ ಅವರು ಮಾತನಾಡಿರೋದು ಚರ್ಚೆಯನ್ನು ಹುಟ್ಟುಹಾಕಿದೆ. ಈಗ ಈ ವಿಚಾರದಲ್ಲಿ ಅಹಿಂಸಾ ಚೇತನ್ ಅವರು ಟ್ವೀಟ್ ಮಾಡಿದ್ದು, ಕಮಲ್ ಹಾಸನ್ ಹೇಳಿಕೆ ತಪ್ಪು ಎಂದಿದ್ದಾರೆ. ಆದರೆ, ಉಳಿದ ಸೆಲೆಬ್ರಿಟಿಗಳು ಈ ಬಗ್ಗೆ ಮೌನ ವಹಿಸಿದ್ದಾರೆ. ಈ ಬಗ್ಗೆ ಎಲ್ಲರೂ ಒಂದಾಗುವ ಅಗತ್ಯವಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಮಣಿರತ್ನಂ ನಿರ್ದೇಶನದ ‘ಥಗ್ ಲೈಫ್’ ಸಿನಿಮಾ ಜೂನ್ 5ರಂದು ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಕಮಲ್ ಹಾಸನ್ ನಾಯಕ. ಇತ್ತೀಚೆಗೆ ತಮಿಳುನಾಡಿನಲ್ಲಿ ಈ ಸಿನಿಮಾದ ಈವೆಂಟ್ ನಡೆದಿದೆ. ಈ ವೇಳೆ ಕಮಲ್ ಹಾಸನ್ ಅವರು ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದು ನೇರವಾಗಿ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅವರ ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲು ಬಿಡಬಾರದು ಎನ್ನುವ ಆಗ್ರಹ ಕೇಳಿ ಬಂದಿದೆ. ಇದರ ಜೊತೆಗೆ ಕೆಲವೇ ಕೆಲವು ಸೆಲೆಬ್ರಿಟಿಗಳು ಕಮಲ್ ಹಾಸನ್ ಬಗ್ಗೆ ಅಪಸ್ವರ ತೆಗೆದಿದ್ದಾರೆ.

ಇದನ್ನೂ ಓದಿ
ನಟಿ ದೀಪಿಕಾಗೆ ಕ್ಯಾನ್ಸರ್; ಹೊಟ್ಟೆಯಲ್ಲಿದೆ ಟೆನಿಸ್ ಬಾಲ್ ಆಕಾರದ ಗಡ್ಡೆ
RCB ಗೆಲುವಿನ ಖುಷಿಯಲ್ಲಿ ವಿರಾಟ್​ಗೆ ಮುತ್ತಿನ ಸುರಿಮಳೆ ಸುರಿಸಿದ ಅನುಷ್ಕಾ
ಕಮಲ್ ಹಾಸನ್ ವಿವಾದ: ಕನ್ನಡಿಗರ ಕೆರಳಿಸಿದ ನಟನ​ ಚಿತ್ರಕ್ಕೆ ಸಂಕಷ್ಟ
‘ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ’; ಅನುಶ್ರೀಗೆ ನೇರವಾಗಿ ಹೇಳಿದ ಮನೋಜ್

ಇದನ್ನೂ ಓದಿ: ಕನ್ನಡಿಗರ ಕೆರಳಿಸಿದ ಕಮಲ್ ಹಾಸನ್​ ಚಿತ್ರಕ್ಕೆ ಸಂಕಷ್ಟ; ‘ಥಗ್ ಲೈಫ್’ಗೆ ಸವಾಲಾದ ವಿವಾದ

ಅಹಿಂಸಾ ಚೇತನ್ ಟ್ವೀಟ್

ಕಮಲ್ ಹಾಸನ್ ಹೇಳಿಕೆಗೆ ಸಂಬಂಧಿಸಿದಂತೆ ನಟ ಅಹಿಂಸಾ ಚೇತನ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ‘ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಕಮಲ್ ಹಾಸನ್‌ ಅವರು ಹೇಳಿದ್ದಾರೆ. ಆದರೆ, ಇದು ನಿಜವಲ್ಲ. ತಮಿಳು ಕನ್ನಡಕ್ಕಿಂತ ಹಳೆಯದು ಇರಬಹುದು. ಆದರೆ, ಕನ್ನಡ ಅದರ ಉತ್ಪನ್ನವಲ್ಲ. ಎರಡೂ ಭಾಷೆಗಳು ಒಂದೇ ಮೂಲವನ್ನು ಹೊಂದಿವೆ. ಅಕ್ಕ-ತಂಗಿಯರಂತೆ ಪ್ರತ್ಯೇಕ ಮಾರ್ಗಗಳಲ್ಲಿ ಬೆಳದುಕೊಂಡು ಬಂದಿವೆ. ನಟ ಕಮಲ್ ಹಾಸನ್ ಹೇಳಿಕೆ ದೋಷಪೂರಿತ’ ಎಂದು ಬರೆದುಕೊಂಡಿದ್ದಾರೆ.

ಉಳಿದ ಸೆಲೆಬ್ರಿಟಿಗಳ ಮೌನ

ಕಮಲ್ ಹಾಸನ್ ಟ್ವೀಟ್​ಗೆ ಕನ್ನಡದ ಕೆಲವೇ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಬಹುತೇಕ ಸೆಲೆಬ್ರಿಟಿಗಳು ಈ ವಿಚಾರದಲ್ಲಿ ಮೌನ ತಾಳಿದ್ದಾರೆ. ಕನ್ನಡದ ಭಾಷಾ ವಿಚಾರ, ನೀರಿನ ವಿಚಾರ ಬಂದಾಗ ರಾಜ್​ಕುಮಾರ್ ಕಾಲದಲ್ಲಿ ಸೆಲೆಬ್ರಿಟಿಗಳು ಒಗ್ಗಟ್ಟಾಗಿ ಬೀದಿಗೆ ಇಳಿದು ಪ್ರತಿಭಟನೆ ಮಾಡಿದ ಉದಾಹರಣೆ ಸಾಕಷ್ಟಿದೆ. ಆದರೆ, ಇತ್ತೀಚೆಗೆ ಈ ಒಗ್ಗಟ್ಟು ಕಡಿಮೆ ಆಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿವೆ. ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡಿದಾಗ ಪ್ರತಿಭಟನೆ ಮಾಡೋದು ಹಾಗಿರಲಿ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ವಿರೋಧಿಸುವುದನ್ನು ಕೂಡ ಅನೇಕ ಸೆಲೆಬ್ರಿಟಿಗಳು ಮರೆತಿದ್ದಾರೆ.

ಕರವೇ ಅಧ್ಯಕ್ಷ ನಾರಾಯಣಗೌಡ ಖಂಡನೆ

‘ನಟ, ರಾಜಕಾರಣಿ ಕಮಲ್ ಹಾಸನ್ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು. ದುರುದ್ದೇಶಪೂರಿತ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹದ್ದಾಗಿದೆ. ಈ ಹೇಳಿಕೆ ಕಮಲ್ ಹಾಸನ್ ಅವರ ಅಜ್ಞಾನವನ್ನು ಬಯಲುಗೊಳಿಸುತ್ತದೆ. ಕನ್ನಡ ಮತ್ತು ತಮಿಳು ಭಾಷೆಗಳು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ್ದರೂ, ಇವು ತಮ್ಮದೇ ಆದ ಸ್ವತಂತ್ರ ಇತಿಹಾಸ, ಸಾಹಿತ್ಯ, ಸಂಸ್ಕೃತಿಯನ್ನು ಹೊಂದಿವೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.