ಮಲಯಾಳಂ ಸ್ಟಾರ್ ನಟ ಉನ್ನಿ ಮುಕುಂದನ್ ವಿರುದ್ಧ ದೂರು, ಹಲ್ಲೆ ಆರೋಪ
Unni Mukundan: ಇತ್ತೀಚೆಗೆ ಬಿಡುಗಡೆ ಆದ ಮಲಯಾಳಂನ ಚಿತ್ರರಂಗದ ವಿವಾದಿತ ಜೊತೆಗೆ ಸೂಪರ್ ಹಿಟ್ ಸಿನಿಮಾ ‘ಮಾರ್ಕೊ’ದ ನಾಯಕ ಉನ್ನಿ ಮುಕುಂದನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಉನ್ನಿ ಮುಕುಂದನ್ ವಿರುದ್ಧ ಅವರ ಮ್ಯಾನೇಜರ್ ಅವರೇ ದೂರು ನೀಡಿದ್ದಾರೆ. ಉನ್ನಿ ಮುಕುಂದನ್ ವಿರುದ್ಧ ದೂರು ನೀಡಿದವರ್ಯಾರು? ಕಾರಣ ಏನು?

ಕೆಲ ತಿಂಗಳ ಹಿಂದಷ್ಟೆ ಬಿಡುಗಡೆ ಆದ ಮಲಯಾಳಂನ (Malayalam) ವಿವಾದಿತ ಜೊತೆಗೆ ಸೂಪರ್ ಹಿಟ್ ಸಿನಿಮಾ ‘ಮಾರ್ಕೊ’ದ ನಾಯಕ ಉನ್ನಿ ಮುಕುಂದನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಉನ್ನಿ ಮುಕುಂದನ್ ವಿರುದ್ಧ ಅವರ ಮ್ಯಾನೇಜರ್ ಅವರೇ ದೂರು ನೀಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟ ಉನ್ನಿ ಮುಕುಂದನ್ ನನ್ನ ಮೇಲೆ ಹೇರಲಾಗಿರುವ ಆರೋಪಗಳೆಲ್ಲ ಸುಳ್ಳು ಎಂದಿದ್ದಾರೆ.
ನಟ ಉನ್ನಿ ಮುಕುಂದನ್ ಅವರ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವಿಪಿನ್ ಎಂಬುವರು ಕೇರಳದ ಕೊಚ್ಚಿಯಲ್ಲಿ ಉನ್ನಿ ಮುಕುಂದನ್ ವಿರುದ್ಧ ದೂರು ನೀಡಿದ್ದಾರೆ. ಉನ್ನಿ ಮುಕುಂದನ್ ತಮ್ಮ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವುದು ಮಾತ್ರವೇ ಅಲ್ಲದೆ ಅಶ್ಲೀಲ ಪದಗಳನ್ನು ಬಳಸಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ವಿಪಿನ್, ಕೊಚ್ಚಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ನಟ ಉನ್ನಿ ಮುಕುಂದನ್, ‘ನನ್ನ ಮೇಲೆ ವಿಪಿನ್ ಮಾಡಿರುವ ಎಲ್ಲ ಆರೋಪಗಳು ಸುಳ್ಳು. ನಾನು ಹಾಗೂ ವಿಪಿನ್ ಭೇಟಿ ಮಾಡಿದ ಸಂದರ್ಭದ ಸಿಸಿಟಿವಿ ದೃಶ್ಯಾವಳಿ ಸಾಕ್ಷಿಯಾಗಿದೆ. ಅಲ್ಲದೆ ವಿಪಿನ್ ನನ್ನ ಖಾಸಗಿ ಮ್ಯಾನೇಜರ್ ಆಗಿಯೇ ಇರಲಿಲ್ಲ’ ಎಂದಿದ್ದಾರೆ ಉನ್ನಿ ಮುಕುಂದನ್.
ಇದನ್ನೂ ಓದಿ: ನನ್ನ ರೀತಿ ಸಿಗರೇಟ್ ಸೇದಬೇಡಿ, ಸಿಕ್ಸ್ ಪ್ಯಾಕ್ ಮಾಡಿ: ಅಭಿಮಾನಿಗಳಿಗೆ ನಟನ ಬುದ್ಧಿಮಾತು
ತಮ್ಮ ಹಾಗೂ ವಿಪಿನ್ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವೇನು ಎಂದು ವಿವರಿಸಿರುವ ಉನ್ನಿ ಮುಕುಂದನ್, ‘ಮಲಯಾಳಂನ ಕೆಲವು ನಟಿಯರನ್ನು ಭೇಟಿ ಆಗುತ್ತಿದ್ದ ವಿಪಿನ್, ಮುಕುಂದನ್ ಅನ್ನು ಮದುವೆ ಆಗುವಂತೆ ನಟಿಯರನ್ನು ಕೇಳುತ್ತಿದ್ದ, ಇದೇ ಕಾರಣಕ್ಕೆ ನನ್ನ ಹಾಗೂ ವಿಪಿನ್ ನಡುವೆ ಭಿನ್ನಾಭಿಪ್ರಾಯ ಮೂಡಿತು. 2018 ರಲ್ಲಿ ಆ ವ್ಯಕ್ತಿ ತಮ್ಮ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣ ಮಾಡುವುದಾಗಿ ನನ್ನ ಪರಿಚಯ ಬೆಳೆಸಿಕೊಂಡ. ತಾನು ಮಲಯಾಳಂ ಚಿತ್ರರಂಗದ ಜನಪ್ರಿಯ ಸ್ಟಾರ್ ನಟರ ಪಿಆರ್ ಹ್ಯಾಂಡಲ್ ಮಾಡುವುದಾಗಿ ಹೇಳಿಕೊಂಡಿದ್ದ’ ಎಂದಿದ್ದಾರೆ ಮುಕುಂದನ್.
‘ಈ ವ್ಯಕ್ತಿ ವಿಷ. ಚಿತ್ರರಂಗದಲ್ಲಿ ನನ್ನ ಬಗ್ಗೆ ಹಲವು ಗಾಸಿಪ್ಗಳನ್ನು ಹರಿಯಬಿಟ್ಟಿದ್ದಾನೆ. ಇದರಿಂದಾಗಿ ನನ್ನ ವೃತ್ತಿ ಜೀವನ ಹಾಗೂ ಖಾಸಗಿ ಜೀವನ ಸಮಸ್ಯೆಗೆ ಸಿಲುಕಿದೆ. ಈ ವ್ಯಕ್ತಿಯಿಂದಾಗಿ ನಾನು ಕೆಲವು ಗೆಳೆಯರನ್ನು ಕಳೆದುಕೊಳ್ಳಬೇಕಾಯ್ತು, ನನ್ನ ಇಮೇಜು ಹಾಳಾಯ್ತು, ಕೆಲವು ಸಿನಿಮಾಗಳು ಸಹ ನನ್ನ ಕೈತಪ್ಪಿದವು’ ಎಂದಿದ್ದಾರೆ ಉನ್ನಿ ಮುಕುಂದನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




