
ಕನ್ನಡದ ಕೆಲವು ಕಿರುಚಿತ್ರಗಳು ಯೂಟ್ಯೂಬ್ನಲ್ಲಿ ಗಮನ ಸೆಳೆಯುತ್ತಿವೆ. ಅವುಗಳ ಸಾಲಿಗೆ ‘ಐಡೆಂಟಿಟಿ ಕಾರ್ಡ್’ ಕಿರುಚಿತ್ರ ಕೂಡ ಸೇರ್ಪಡೆ ಆಗಿದೆ. ‘ದೃಷ್ಟಿ ಸ್ಟುಡಿಯೋಸ್’ ಯೂಟ್ಯೂಬ್ ಮೂಲಕ ವೀಕ್ಷಣೆಗೆ ಲಭ್ಯವಾಗಿರುವ ಈ ಕಿರುಚಿತ್ರಕ್ಕೆ ನಿತಿನ್ ಪಿ. ಅವರು ನಿರ್ದೇಶನ ಮಾಡಿದ್ದಾರೆ. ಈ ಮೊದಲು ‘ಬಟರ್ ಫ್ಲೈ’ ಶಾರ್ಟ್ ಫಿಲ್ಮ್ ಮಾಡಿದ್ದ ಅವರು ಈಗ ‘ಐಡೆಂಟಿಟಿ ಕಾರ್ಡ್’ ಮೂಲಕ ಲಕ್ಷಾಂತರ ಜನರಿಗೆ ಕನೆಕ್ಟ್ ಆಗುವಂತಹ ಕಥೆಯನ್ನು ತೋರಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಲಸ ಮಾಡಿ ಹೊಸ ಜೀವನ ಕಟ್ಟಿಕೊಳ್ಳಬೇಕು ಎಂಬ ಆಸೆಯಿಂದ ಅಸಂಖ್ಯಾತ ಹಳ್ಳಿಗರು ಈ ಮಹಾನಗರಕ್ಕೆ ಬರುತ್ತಾರೆ. ಹಳ್ಳಿಯಲ್ಲಿ ಇದ್ದುಕೊಂಡು ಬೆಂಗಳೂರಿನ ಬಗ್ಗೆ ಅಂದುಕೊಳ್ಳುವುದೇ ಬೇರೆ, ಸ್ವತಃ ಬೆಂಗಳೂರಿಗೆ ಬಂದು ಇಲ್ಲಿ ಜೀವನ ಮಾಡುವಾಗ ಆಗುವ ಅನುಭವವೇ ಬೇರೆ. ಕಲ್ಪನೆಗೂ ವಾಸ್ತವಕ್ಕೂ ದೊಡ್ಡ ವ್ಯತ್ಯಾಸವಿದೆ. ಅದೇ ವಿಷಯವನ್ನು ಇಟ್ಟುಕೊಂಡು ‘ಐಡೆಂಟಿಟಿ ಕಾರ್ಡ್’ ಕಿರುಚಿತ್ರ ಮಾಡಲಾಗಿದೆ.
ಈ ಕಿರುಚಿತ್ರದ ನಿರ್ದೇಶಕ ನಿತಿನ್ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಇತ್ತು. ಸಿನಿಮಾ ಮೇಲಿನ ಆಸಕ್ತಿಯಿಂದಲೇ ಅವರು ಕೂಡ ವಿಜಯಪುರ ಜಿಲ್ಲೆಯ ತಿಕೋಟಾ ಎಂಬ ಗ್ರಾಮದಿಂದ ಬೆಂಗಳೂರಿಗೆ ಬಂದರು. ಬೆಂಗಳೂರಿಗೆ ಕಾಲಿಟ್ಟಾಗ ಅವರಿಗೆ ಆದ ಅನುಭವಗಳನ್ನೇ ಕೇಂದ್ರವಾಗಿ ಇಟ್ಟುಕೊಂಡು ಅವರು ಈಗ ‘ಐಡೆಂಟಿಟಿ ಕಾರ್ಡ್’ ಕಿರುಚಿತ್ರವನ್ನು ಮಾಡಿದ್ದಾರೆ. ತಮಗೆ ಆಗಿರುವ ಅನುಭವವೇ ಲಕ್ಷಾಂತರ ಜನರಿಗೆ ಆಗಿದೆ ಎಂಬ ಕಾರಣದಿಂದ ಅವರು ಈ ಕಥೆಯನ್ನು ಆಯ್ಕೆ ಮಾಡಿಕೊಂಡರು. ಈ ಕಿರುಚಿತ್ರ ನೋಡಿ ಕಮೆಂಟ್ ಮಾಡಿದ ಅನೇಕರು ಸಹಮತ ಸೂಚಿಸುತ್ತಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ಮೂಲದ ಮಂಜು ಮೂಲೆರ್ ಹಾಗೂ ಬಾಗಲಕೋಟೆ ಜಿಲ್ಲೆಯ ಕೆರೂರಿನವರಾದ ರಾಜೇಶ್ವರಿ ಯಂಡಿಗೇರಿ ಅವರು ‘ಐಡೆಂಟಿಟಿ ಕಾರ್ಡ್’ ಕಿರುಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಸಚಿನ್ ಬಿ.ಕೆ. ಅವರ ಛಾಯಾಗ್ರಹಣ, ಶಿವೋಂ ಅವರ ಸಂಗೀತ, ಸಿದ್ ಮತ್ತು ಸೃಜನ್ ಬೆಳ್ಳಿ ಅವರು ಸಂಕಲನದಲ್ಲಿ ಈ ಕಿರುಚಿತ್ರ ಸಿದ್ಧವಾಗಿದೆ.
ಇದನ್ನೂ ಓದಿ: ‘ನಗು ನಗುತ’: ಕಿರುಚಿತ್ರದಲ್ಲಿ ಅಭಿನಯಿಸಿದ ಖ್ಯಾತ ನಟ ವಿಜಯ್ ರಾಘವೇಂದ್ರ
‘ಗೊಲ್ಕ ಪ್ರೊಡಕ್ಷನ್’ ಮೂಲಕ ಅಂಜನ್ ನಾಗೇಂದ್ರ ಅವರು ಈ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ. ‘ದೃಷ್ಟಿ ಸ್ಟುಡಿಯೋಸ್’ ಮತ್ತು ‘ಶಿವೊಂ ಸ್ಟುಡಿಯೋಸ್’ ಕೂಡ ನಿರ್ಮಾಣದಲ್ಲಿ ಜೊತೆಯಾಗಿವೆ. ‘ಯಾವಾಗಲೂ ಕುಟುಂಬ ಸಮೇತರಾಗಿ ನೋಡುವ ಚಿತ್ರ ಮಾಡಬೇಕು ಎಂಬ ಆಸೆ ನನ್ನದು. ಅದೇ ನಿಟ್ಟಿನಲ್ಲಿ ಈಗ ಐಡೆಂಟಿಟಿ ಕಾರ್ಡ್ ಚಿತ್ರ ಮಾಡಿದ್ದೇನೆ’ ಎಂದು ನಿರ್ದೇಶಕ ನಿತಿನ್ ಪಿ. ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.