‘ಕಣ್ಣಪ್ಪ’ ಟ್ರೇಲರ್ ರಿಲೀಸ್, ಈತ ಭಕ್ತ ಕಣ್ಣಪ್ಪ ಅಲ್ಲ, ಫೈಟರ್ ಕಣ್ಣಪ್ಪ
Kannapa movie: ಮಂಚು ವಿಷ್ಣು ನಟನೆಯ ಬಹು ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ‘ಕಣ್ಣಪ್ಪ’ದ ಟ್ರೈಲರ್ ಇಂದು (ಜೂನ್ 14) ಬಿಡುಗಡೆ ಆಗಿದೆ. ಟ್ರೈಲರ್ನಲ್ಲೇ ಎಲ್ಲ ಅತಿಥಿ ಪಾತ್ರಗಳ ದರ್ಶನವನ್ನು ಮಾಡಿಸಿದ್ದಾರೆ. ಕನ್ನಡಿಗರು ನೋಡಿದ ‘ಬೇಡರ ಕಣ್ಣಪ್ಪ’, ‘ಶಿವ ಮೆಚ್ಚಿದ ಕಣ್ಣಪ್ಪ’ನಿಗೂ ತೆಲುಗರ ‘ಕಣ್ಣಪ್ಪ’ನಿಗೂ ಅಜಗಜಾಂತರ ಅಂತರವಿದೆ. ತೆಲುಗಿನ ಕಣ್ಣಪ್ಪ, ಭಕ್ತ ಕಣ್ಣಪ್ಪನಲ್ಲ, ಮಾಸ್ ಹೀರೋ ಕಣ್ಣಪ್ಪ.

ಕಣ್ಣಪ್ಪ ಎಂದೊಡನೆ ಕನ್ನಡಿಗರಿಗೆ ನೆನಪಾಗುವುದು ಡಾ ರಾಜ್ಕುಮಾರ್ ಅವರು ಮೊದಲು ನಾಯಕ ನಟನಾಗಿ ನಟಿಸಿದ ‘ಬೇಡರ ಕಣ್ಣಪ್ಪ’ ಸಿನಿಮಾ. ಭಕ್ತಿರಸ ಹೊಂದಿದ್ದ ಆ ಸಿನಿಮಾ 1954 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆಗಿ 60ಕ್ಕೂ ಹೆಚ್ಚು ವರ್ಷವಾದರೂ ಜನರಿಗೆ ಇನ್ನೂ ನೆನಪಿದೆ. ಅದೇ ಸಿನಿಮಾ ಆಧರಿಸಿ ‘ಶಿವ ಮೆಚ್ಚಿದ ಕಣ್ಣಪ್ಪ’ ಸಿನಿಮಾನಲ್ಲಿ ಶಿವರಾಜ್ ಕುಮಾರ್ ಬೇಡರ ಕಣ್ಣಪ್ಪ ಪಾತ್ರದಲ್ಲಿ ನಟಿಸಿದ್ದರು. ಇದೀಗೆ ನೆರೆಯ ತೆಲುಗು ಚಿತ್ರರಂಗದಲ್ಲಿ ಇದೇ ಬೇಡರ ಕಣ್ಣಪ್ಪ ಕತೆಯನ್ನು ಸಿನಿಮಾ ಮಾಡಿದ್ದಾರೆ. ಆದರೆ ಅವರು ಪ್ಯಾನ್ ಇಂಡಿಯಾ ಸ್ಟೈಲ್ಗೆ ತಕ್ಕಂತೆ ಕಣ್ಣಪ್ಪನನ್ನು ಆಕ್ಷನ್ ಹೀರೋ, ಮಾಸ್ ಹೀರೋ ಕಣ್ಣಪ್ಪನನ್ನಾಗಿಸಿದ್ದಾರೆ.
ಮಂಚು ಮನೋಜ್ ನಟಿಸಿರುವ ‘ಕಣ್ಣಪ್ಪ’ ಸಿನಿಮಾದ ಟ್ರೈಲರ್ ಇಂದು (ಜೂನ್ 14) ಬಿಡುಗಡೆ ಆಗಿದೆ. ಸಿನಿಮಾ ಅನ್ನು ಗೆಲ್ಲಿಸಿಯೇ ತೀರಬೇಕು ಎಂಬ ಹಠದಲ್ಲಿ ಹಲವು ಸ್ಟಾರ್ ನಟರನ್ನು ಅತಿಥಿ ಪಾತ್ರಗಳಿಗೆ ಹಾಕಿಕೊಳ್ಳಲಾಗಿದೆ. ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ಲಾಲ್, ಶರತ್ ಕುಮಾರ್, ಮೋಹನ್ಬಾಬು ಇನ್ನೂ ಹಲವರು ಈ ಸಿನಿಮಾದ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಟ್ರೈಲರ್ನಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:‘ಕಣ್ಣಪ್ಪ’ ಸಿನಿಮಾ ಹಾರ್ಡ್ಡ್ರೈವ್ ಕಳವು, ನಟನ ಮೇಲೆ ಆರೋಪ
ಕನ್ನಡಿಗರು ನೋಡಿರುವ ಕಣ್ಣಪ್ಪನಿಗೂ ತೆಲುಗಿನವರ ಕಣ್ಣಪ್ಪನಿಗೂ ಅಜಗಜಾಂತರ ಅಂತರವಿದೆ. ತೆಲುಗರು ಕಣ್ಣಪ್ಪನನ್ನು ಮಾಸ್ ಹೀರೋ, ಆಕ್ಷನ್ ಹೀರೋ ಆಗಿ ತೋರಿಸಲು ಏನೇನೋ ಕಸರತ್ತು ಮಾಡಿರುವುದು ಟ್ರೈಲರ್ನಿಂದಲೇ ಗೊತ್ತಾಗುತ್ತಿದೆ. ಚಿತ್ರ-ವಿಚಿತ್ರ ಮುಖಗಳನ್ನು ಹೊಂದಿರುವ ವಿಲನ್ಗಳು, ವಾಯು ಲಿಂಗದ ಸಸ್ಪೆನ್ಸ್, ಆ ವಾಯುಲಿಂಗವನ್ನು ತನ್ನ ಬುಡಕಟ್ಟಿಗಾಗಿ ಕಾವಲು ಕಾಯುತ್ತಿರುವ ಬೇಡರ ಕಣ್ಣಪ್ಪ ಹೀಗೆ ಏನೇನೋ ಸನ್ನಿವೇಶಗಳು ಸಿನಿಮಾನಲ್ಲಿವೆ.
ಈಗ ಬಿಡುಗಡೆ ಆಗಿರುವ ಟ್ರೈಲರ್ನಲ್ಲಿ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ಲಾಲ್, ಶರತ್ ಕುಮಾರ್, ದೇವರಾಜ್ ಇನ್ನೂ ಕೆಲವರ ಪಾತ್ರಗಳು ಕಾಣುತ್ತವೆ. ಸಿನಿಮಾನಲ್ಲಿ ಪ್ರೀತಿ ಮುಕುಂದನ್ ನಾಯಕಿಯಾಗಿ ನಟಿಸಿದ್ದು, ಭಕ್ತಿರಸದ ಸಿನಿಮಾನಲ್ಲಿಯೂ ಸಖತ್ ಗ್ಲಾಮರಸ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಬ್ರಹ್ಮಾನಂದಂ, ವೆಂಕಟ್ ಪ್ರಭು ಅವರುಗಳು ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ಕಣ್ಣಪ್ಪ’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಸಿನಿಮಾ ಅನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಮಂಚು ವಿಷ್ಣು ಮತ್ತು ಮೋಹನ್ಬಾಬು ಬಂಡವಾಳ ಹೂಡಿದ್ದಾರೆ. ಸಿನಿಮಾದ ಕತೆ ಬರೆದಿರುವುದು ಮಂಚು ವಿಷ್ಣು ಅವರೇ. ಸಂಗೀತ ನೀಡಿರುವುದು ಸ್ಟಿಫನ್ ದೇವಸ್ಸಿ. ಸಿನಿಮಾ ಜೂನ್ 27ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




