ಬೆಳಗಾವಿ ವಂಚನೆ ಪ್ರಕರಣ: ಸನ್ನಿ ಲಿಯೋನಿಗೆ ನೊಟೀಸ್ ನೀಡಿದ ಕರ್ನಾಟಕ ಸಿಐಡಿ ಪೊಲೀಸರು

Sunny Leone: ಬೆಳಗಾವಿಯ ‘ಶಿವಂ ಅಸೋಸಿಯೇಟ್ಸ್’ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರಿಗೆ ಕರ್ನಾಟಕ ಅಪರಾಧ ತನಿಖಾ ಇಲಾಖೆ (CID) ನೋಟಿಸ್ ಜಾರಿ ಮಾಡಿದೆ. ಕಂಪನಿಯ ಮಾಲೀಕ ಶಿವಾನಂದ ನೀಲಣ್ಣವರ, ಸಾರ್ವಜನಿಕರಿಂದ ಕಾನೂನುಬಾಹಿರವಾಗಿ ಸಂಗ್ರಹಿಸಿದ ಹಣದ ಒಂದು ದೊಡ್ಡ ಭಾಗವನ್ನು ಸನ್ನಿ ಲಿಯೋನ್ ಸೇರಿದಂತೆ ಹಲವು ಚಿತ್ರರಂಗದ ಪ್ರಮುಖ ನಟ-ನಟಿಯರಿಗೆ ವರ್ಗಾವಣೆ ಮಾಡಿರುವುದು ಸಿಐಡಿ ತನಿಖೆಯಿಂದ ಬಹಿರಂಗವಾಗಿದೆ.

ಬೆಳಗಾವಿ ವಂಚನೆ ಪ್ರಕರಣ: ಸನ್ನಿ ಲಿಯೋನಿಗೆ ನೊಟೀಸ್ ನೀಡಿದ ಕರ್ನಾಟಕ ಸಿಐಡಿ ಪೊಲೀಸರು
Sunny Leone

Updated on: Jun 09, 2026 | 5:48 PM

ಕರ್ನಾಟಕ ಸಿಐಡಿ ಪೊಲೀಸರು ನಟಿ ಸನ್ನಿ ಲಿಯೋನಿಗೆ (Sunny Leone) ನೊಟೀಸ್ ನೀಡಿದ್ದಾರೆ. ಹೆಚ್ಚಿನ ಬಡ್ಡಿ ಕೊಡುವುದಾಗಿ ಆಮಿಷವೊಡ್ಡಿ ಸಾವಿರಾರು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಬೆಳಗಾವಿಯ ‘ಶಿವಂ ಅಸೋಸಿಯೇಟ್ಸ್’ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರಿಗೆ ಕರ್ನಾಟಕ ಅಪರಾಧ ತನಿಖಾ ಇಲಾಖೆ (CID) ನೋಟಿಸ್ ಜಾರಿ ಮಾಡಿದೆ. ಕಂಪನಿಯ ಮಾಲೀಕ ಶಿವಾನಂದ ನೀಲಣ್ಣವರ, ಸಾರ್ವಜನಿಕರಿಂದ ಕಾನೂನುಬಾಹಿರವಾಗಿ ಸಂಗ್ರಹಿಸಿದ ಹಣದ ಒಂದು ದೊಡ್ಡ ಭಾಗವನ್ನು ಸನ್ನಿ ಲಿಯೋನ್ ಸೇರಿದಂತೆ ಹಲವು ಚಿತ್ರರಂಗದ ಪ್ರಮುಖ ನಟ-ನಟಿಯರಿಗೆ ವರ್ಗಾವಣೆ ಮಾಡಿರುವುದು ಸಿಐಡಿ ತನಿಖೆಯಿಂದ ಬಹಿರಂಗವಾಗಿದೆ.

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಿಐಡಿ ಡಿಐಜಿ ಭೀಮಾಶಂಕರ ಗುಳೇದ ಅವರು, ‘ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಸಾರ್ವಜನಿಕರ ಹಣವನ್ನು ಸಿನಿಮಾ ನಟರಿಗೆ ನೀಡಿರುವ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಸನ್ನಿ ಲಿಯೋನ್ ಸೇರಿದಂತೆ ಹಣ ಪಡೆದ ಇತರೆ ನಟ-ನಟಿಯರಿಗೂ ನೋಟಿಸ್ ನೀಡಿ ವಿಚಾರಣೆಗೆ ಕರೆಯಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

ಸಿಐಡಿ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ಶಿವಾನಂದ ನೀಲಣ್ಣವರ ಒಟ್ಟು 40,700 ಹೂಡಿಕೆದಾರರಿಂದ ಬರೊಬ್ಬರಿ 2,400 ಕೋಟಿ ರೂಪಾಯಿಗಳನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿದ್ದಾನೆ. ಇದರಲ್ಲಿ ಸುಮಾರು 10,000 ಹೂಡಿಕೆದಾರರು ನೆರೆಯ ಮಹಾರಾಷ್ಟ್ರ ರಾಜ್ಯದವರಾಗಿದ್ದಾರೆ. ಸಂಗ್ರಹಿಸಿದ ಭಾರಿ ಮೊತ್ತದಲ್ಲಿ 540 ಕೋಟಿ ರೂಪಾಯಿಗಳನ್ನು ಆತ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿ, ಅದರಲ್ಲಿ 170 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾನೆ. ಈ ವಂಚನೆಯ ಜಾಲವನ್ನು ನಡೆಸಲು ಆತ ಸುಮಾರು 30 ಬ್ಯಾಂಕ್ ಖಾತೆಗಳನ್ನು ಬಳಸಿದ್ದು, ಕೇವಲ ಒಂದು ಖಾತೆಯಲ್ಲೇ 36,200 ಪುಟಗಳಷ್ಟು ದೀರ್ಘವಾದ ವಹಿವಾಟಿನ ಇತಿಹಾಸ ಇರುವುದು ಪತ್ತೆಯಾಗಿದೆ.

ಆರೋಪಿ ಶಿವಾನಂದ ನೀಲಣ್ಣವರ ಹಣಕಾಸು ವಂಚನೆಗೆ ಜಾಲವನ್ನು ಬಳಸುತ್ತಿದ್ದ. ಹೊಸದಾಗಿ ಸೇರುತ್ತಿದ್ದ ಹೂಡಿಕೆದಾರರಿಂದ ಬರುತ್ತಿದ್ದ ಹಣವನ್ನು, ಹಳೆಯ ಹೂಡಿಕೆದಾರರಿಗೆ ಮಾಸಿಕ ಬಡ್ಡಿ ಅಥವಾ ಲಾಭಾಂಶದ ರೂಪದಲ್ಲಿ ಹಂಚುತ್ತಿದ್ದ. ಸಾರ್ವಜನಿಕರು ಬಡ್ಡಿಯ ದುರಾಸೆಗೆ ಬಿದ್ದು ಹಣ ಹೂಡಿಕೆ ಮಾಡಿದ್ದರು. ಅಚ್ಚರಿಯ ವಿಷಯವೆಂದರೆ, ಆರೋಪಿಯನ್ನು ಪೊಲೀಸರು ಬಂಧಿಸಿದ ನಂತರವೂ ಜನರ ಮೂಢನಂಬಿಕೆ ಕಡಿಮೆಯಾಗಿಲ್ಲ. ಬಂಧನದ ಕೇವಲ 20 ದಿನಗಳ ಅವಧಿಯಲ್ಲೂ ವಂಚಕನ ಖಾತೆಗೆ ಸಾರ್ವಜನಿಕರು ಮತ್ತೆ 5 ಕೋಟಿಗೂ ಅಧಿಕ ಹಣವನ್ನು ವರ್ಗಾವಣೆ ಮಾಡಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ:ಬಣ್ಣಗಳ ನಡುವೆ ಮಾದಕವಾಗಿ ಡ್ಯಾನ್ಸ್ ಮಾಡಿದ ಸನ್ನಿ ಲಿಯೋನಿ

ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ, ವಂಚನೆಯ ಹಣದಿಂದ ಖರೀದಿಸಲಾದ ಆಸ್ತಿಗಳನ್ನು ಜಪ್ತಿ ಮಾಡಲು ಮುಂದಾಗಿದೆ. ಶಿವಾನಂದ ನೀಲಣ್ಣವರ ಕಂಪನಿಯ ಹಣವನ್ನು ತನ್ನ ಸ್ವಂತ ಖಾತೆಗೆ ವರ್ಗಾಯಿಸಿಕೊಂಡು ಸುಮಾರು 55 ಕೋಟಿ ರೂ. ವೆಚ್ಚದಲ್ಲಿ ಐಷಾರಾಮಿ ವೆಲ್ಫೈರ್, ಎರಡು ಮರ್ಸಿಡಿಸ್ ಬೆಂಜ್, ಡಿಫೆಂಡರ್, ವರ್ನಾ ಮತ್ತು ವೋಲ್ವೋ ಎಕ್ಸ್‌ಸಿ90 ಸೇರಿದಂತೆ ಹಲವು ದುಬಾರಿ ಕಾರುಗಳನ್ನು ಖರೀದಿಸಿದ್ದಾನೆ. ಈ ವಾಹನಗಳು ಬೇರೆ ಬೇರೆ ರಾಜ್ಯಗಳಲ್ಲಿ ನೋಂದಣಿಯಾಗಿದ್ದು, ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಇದರೊಂದಿಗೆ, ಆರಂಭದಲ್ಲಿ ನಿಯಮ ಮೀರಿ ಕಂಪನಿಯಿಂದ ಅತಿಯಾದ ಲಾಭಾಂಶ ಪಡೆದ ಹಳೆಯ ಹೂಡಿಕೆದಾರರಿಗೂ ನೋಟಿಸ್ ನೀಡಿ, ಅವರಿಂದ ಒಟ್ಟು 400 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿ ಇತರೆ ಸಂತ್ರಸ್ತರಿಗೆ ತಲುಪಿಸಲು ಸಿಐಡಿ ಸಿದ್ಧತೆ ನಡೆಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Tue, 9 June 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us