ಪವನ್ ಕಲ್ಯಾಣ್ ಎಚ್ಚರಿಕೆಗೆ ವಿನಮ್ರ ಪ್ರತಿಕ್ರಿಯೆ ನೀಡಿದ ನಟ ಕಾರ್ತಿ

Pawan Kalyan-Karthi: ತಿರುಪತಿ ಲಡ್ಡು ಬಗ್ಗೆ ಮಾತನಾಡಿದ್ದ ನಟ ಕಾರ್ತಿಯ ಮಾತುಗಳಿಗೆ ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ನಟ ಕಾರ್ತಿ ಟ್ವೀಟ್ ಮೂಲಕ ಪವನ್ ಕಲ್ಯಾಣ್ ಬಳಿ ಕ್ಷಮೆ ಕೇಳಿದ್ದಾರೆ.

ಪವನ್ ಕಲ್ಯಾಣ್ ಎಚ್ಚರಿಕೆಗೆ ವಿನಮ್ರ ಪ್ರತಿಕ್ರಿಯೆ ನೀಡಿದ ನಟ ಕಾರ್ತಿ
Follow us
ಮಂಜುನಾಥ ಸಿ.
|

Updated on: Sep 24, 2024 | 3:30 PM

ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಪತ್ತೆಯಾಗಿರುವ ಪ್ರಕರಣ ದೇಶದಲ್ಲೆಲ್ಲ ಚರ್ಚೆಗೆ ಕಾರಣವಾಗಿದೆ. ಇನ್ನು ಆಂಧ್ರ ಪ್ರದೇಶದಲ್ಲಿ ಇದು ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಸಹ ಕಾರಣವಾಗಿದೆ. ಆಂಧ್ರ ಡಿಸಿಎಂ ನಟ ಪವನ್ ಕಲ್ಯಾಣ್, ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಪತ್ತೆಯಾದ ಬಳಿಕ 11 ದಿನದ ಪ್ರಾಯಶ್ಚಿತ್ತ ದೀಕ್ಷೆ ತೆಗೆದುಕೊಂಡಿದ್ದಾರೆ. ಮಾತ್ರವಲ್ಲದೆ ಕನಕದುರ್ಗ ದೇವಾಲಯದ ಸ್ವಚ್ಛತೆಯಲ್ಲಿಯೂ ಸಹ ತೊಡಗಿಸಿಕೊಂಡಿದ್ದಾರೆ ಪವನ್ ಕಲ್ಯಾಣ್. ಲಡ್ಡು ವಿಷಯವನ್ನು ಬಹು ಗಂಭೀರವಾಗಿ ಪರಿಗಣಿಸಿರುವ ನಟ ಪವನ್ ಕಲ್ಯಾಣ್, ಲಡ್ಡು ಬಗ್ಗೆ ಲಘುವಾಗಿ ಮಾತನಾಡಿದ್ದ ತಮಿಳು ನಟ ಕಾರ್ತಿಗೆ ಎಚ್ಚರಿಕೆ ನೀಡಿದ್ದರು. ಇದೀಗ ಕಾರ್ತಿ, ಪವನ್ ಕಲ್ಯಾಣ್ ಬಳಿ ಕ್ಷಮೆ ಕೇಳಿದ್ದಾರೆ.

ತಮಿಳು ನಟ ಕಾರ್ತಿ ನಟಿಸಿರುವ ತಮಿಳು ಸಿನಿಮಾ ‘ಮೆಯಿಳಾಗನ್’ ಸೆಪ್ಟೆಂಬರ್ 27ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾ ತಮಿಳಿನ ಜೊತೆಗೆ ತೆಲುಗಿನಲ್ಲಿ ‘ಸತ್ಯಂ-ಸುಂದರಂ’ ಹೆಸರಿನಲ್ಲಿ ತೆರೆಗೆ ಬರುತ್ತಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಕಾರ್ತಿ ಇತ್ತೀಚೆಗಷ್ಟೆ ಹದರಾಬಾದ್​ಗೆ ಆಗಮಿಸಿದ್ದರು. ಈ ವೇಳೆ ನಿರೂಪಕಿ, ‘ಲಡ್ಡು ಬೇಕಾ’ ಎಂದು ಜಾಹೀರಾತಿನ ಡೈಲಾಗ್ ಒಂದನ್ನು ತಮಾಷೆಗೆ ಹೇಳಿದರು. ಅದಕ್ಕೆ ಕಾರ್ತಿ, ‘ಲಡ್ಡು ವಿಷಯ ಈಗ ಬೇಡ, ಅದು ಬಹಳ ಸೆನ್ಸಿಟಿವ್ (ಸೂಕ್ಷ್ಮ) ವಿಷಯ ಆಗಿದೆ, ಲಡ್ಡು ಈಗ ಬೇಡ’ ಎಂದು ನಗುತ್ತಾ ಹೇಳಿದರು, ಅದಕ್ಕೆ ನಿರೂಪಕಿ, ‘ನಿಮಗಾಗಿ ಮೋತಿಚೂರ್ ಲಡ್ಡು ತರಿಸಿಕೊಡುತ್ತೇವೆ’ ಎನ್ನುತ್ತಾರೆ. ಅದಕ್ಕೆ ‘ಕಾರ್ತಿ, ಈಗ ಬೇಡ, ಲಡ್ಡು ಈಗ ಬೇಡ’ ಎಂದು ನಗುತ್ತಾ ಹೇಳಿದ್ದರು, ಇದರ ಬಗ್ಗೆ ಪವನ್ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಲಡ್ಡು ಬಗ್ಗೆ ಮಾತನಾಡಿದ ನಟ ಕಾರ್ತಿಗೆ ಪವನ್ ಕಲ್ಯಾಣ್ ಎಚ್ಚರಿಕೆ

ಈ ಬಗ್ಗೆ ಮಾತನಾಡಿದ್ದ ನಟ ಪವನ್ ಕಲ್ಯಾಣ್, ನಿಮಾ ಮಂದಿಗೆ ನಾನು ಎಚ್ಚರಿಕೆ ನೀಡಲು ಬಯಸುತ್ತೇನೆ. ಲಡ್ಡು ವಿಷಯದ ಬಗ್ಗೆ ಮಾತನಾಡುವುದಾದರೆ ಗಂಭೀರವಾಗಿ ಮಾತನಾಡಿ, ಇಲ್ಲವಾದರೆ ಮೌನವಾಗಿ ಇದ್ದು ಬಿಡಿ. ಅದನ್ನು ಬಿಟ್ಟು ನಿಮಗೆ ಅನಿಸಿದಂತೆ ಅಪಹಾಸ್ಯ ಮಾಡಿದರೆ ಮಾತ್ರ ಪ್ರಜೆಗಳು ನಿಮ್ಮನ್ನು ಕ್ಷಮಿಸರು. ಇದು ನಮಗೆ ಬಹಳ ತೀವ್ರವಾದ ನೋವು, ನೀವು ಲಡ್ಡು ಬಗ್ಗೆ ಜೋಕ್ ಮಾಡುತ್ತಿದ್ದೀರಿ. ನಿನ್ನೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಸಹ ನೋಡಿದ್ದೀನಿ, ‘ಲಡ್ಡು ಸೆನ್ಸಿಟಿವ್ ಇಶ್ಯೂ’ ಎಂದಿದ್ದಾರೆ. ಹಾಗೆ ಮಾತನಾಡಬೇಡಿ, ಎಂದಿಗೂ ಹಾಗೆ ಮಾತನಾಡುವ ಧೈರ್ಯ ಮಾಡಬೇಡಿ. ನಿಮ್ಮನ್ನು ನಟರಾಗಿ ನಾನು ಗೌರವಿಸುತ್ತೀನಿ. ಆದರೆ ಸನಾತನ ಧರ್ಮದ ವಿಷಯ ಬಂದಾಗ ನೀವು ಸಾವಿರ ಬಾರಿ ಯೋಚನೆ ಮಾಡಿ ಮಾತನಾಡಿ’ ಎಂದು ಎಚ್ಚರಿಕೆ ನೀಡಿದ್ದರು.

ಇದೀಗ ಪವನ್ ಕಲ್ಯಾಣ್​ ಮಾತಿಗೆ ಪ್ರತಿಕ್ರಿಯೆ ನೀಡಿರುವ ನಟ ಕಾರ್ತಿ, ‘ಪ್ರೀತಿಯ ಪವನ್ ಕಲ್ಯಾಣ್ ಅವರೇ, ನಿಮ್ಮ ಬಗ್ಗೆ ಅಪಾರ ಗೌರವ, ಪ್ರೀತಿ ಇದೆ. ಈಗ ಉಂಟಾಗಿರುವ ಉದ್ದೇಶಪೂರ್ವಕ ತಪ್ಪುಗ್ರಹಿಕೆಗೆ ನಾನು ಕ್ಷಮೆಯಾಚಿಸುತ್ತೇನೆ. ವೆಂಕಟೇಶ್ವರ ಸ್ವಾಮಿಯ ವಿನಮ್ರ ಭಕ್ತನಾಗಿರುವ ನಾನು, ನಾನು ಯಾವಾಗಲೂ ನಮ್ಮ ಸಂಪ್ರದಾಯಗಳ ಬಗ್ಗೆ ಗೌರವ ಇಟ್ಟುಕೊಂಡಿರುವ ವ್ಯಕ್ತಿವಾಗಿದ್ದೇನೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ