
‘ರಾಧಾ ರಮಣ’ ಸೇರಿದಂತೆ ಇನ್ನೂ ಕೆಲ ಧಾರಾವಾಹಿಗಳಲ್ಲಿ ನಟಿಸಿರುವ ಕಾವ್ಯಾ ಗೌಡ (Kavya Gowda) ಅವರ ಕುಟುಂಬದ ಜಗಳ ಬೀದಿ ರಂಪವಾಗಿ ಬದಲಾಗಿದೆ. ಕಾವ್ಯಾ ಮತ್ತು ಅವರ ಓರಗಿತ್ತಿ ಪ್ರೇಮ ಹಾಗೂ ಕಾವ್ಯಾರ ಪತಿ ಹಾಗೂ ಪ್ರೇಮಾರ ಪತಿಯ ನಡುವೆ ಜಗಳ, ಕಾದಾಟಗಳು ನಡೆದಿದ್ದವು. ಕೆಲ ದಿನಗಳ ಹಿಂದೆ ಕಾವ್ಯಾ ಹಾಗೂ ಅವರ ಪತಿ ಈ ಬಗ್ಗೆ ದೂರು ದಾಖಲಿಸಿದ್ದರು. ಪ್ರೇಮಾ ಸಹ ಆ ಬಳಿಕ ಕಾವ್ಯಾ ವಿರುದ್ಧ ದೂರು ದಾಖಲಿಸಿದ್ದರು. ಆದರೆ ಇದೀಗ ಕಾವ್ಯಾ ಅವರು ವಿಡಿಯೋ ಸಾಕ್ಷಿ ಬಿಡುಗಡೆ ಮಾಡಿದ್ದು, ಪ್ರೇಮಾನೇ ಹಲ್ಲೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷ್ಯ ಒದಗಿಸಿದ್ದಾರೆ.
ಪ್ರೇಮಾ ಅವರೇ ತಮ್ಮ ಮೇಲೆ ಚಪ್ಪಲಿ ಎಸೆದು, ಹಲ್ಲೆ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಕಾವ್ಯಾ ಇದೀಗ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಆ ಬಗ್ಗೆ ಮಾತನಾಡಿರುವ ಕಾವ್ಯಾ, ‘ನಾನು ಜನವರಿ 26ರಂದೇ ವಿಡಿಯೋ ಬಿಡುಗಡೆ ಮಾಡಬಹುದಿತ್ತು, ಆದರೆ ನಮ್ಮ ವಕೀಲರು ನೀಡಿದ ಸಲಹೆಯಿಂದಾಗಿ ಸುಮ್ಮನಾದೆ. ಸಾಕಷ್ಟು ವಿಡಿಯೋ ಸಾಕ್ಷಿ ನನ್ನ ಬಳಿ ಇದ್ದು, ಅದರಲ್ಲಿ ಕೆಲವಷ್ಟನ್ನೇ ಬಿಡುಗಡೆ ಮಾಡಿದ್ದೀನಿ. ಇನ್ನುಳಿದ ವಿಡಿಯೋಗಳನ್ನು ನ್ಯಾಯಾಲಯಕ್ಕೆ ನೀಡಲಿದ್ದೇನೆ’ ಎಂದಿದ್ದಾರೆ ಕಾವ್ಯಾ.
ವಿಡಿಯೋದಲ್ಲಿ ರೆಕಾರ್ಡ್ ಆಗಿರುವ ಘಟನೆಯ ಹಿನ್ನೆಲೆ ನೀಡಿರುವ ಕಾವ್ಯಾ, ‘ಮಾತಿಗೆ ಮಾತು ಬೆಳೆಯುತ್ತಾ ಹೋದಾಗ ಅವರು ನನ್ನ ಮಗಳನ್ನು ‘ಕಳ್ಳಿ’ ಎಂದು ಕರೆದರು. ಒಬ್ಬ ತಾಯಿಯಾಗಿ ಅದನ್ನು ಸಹಿಸಲು ಸಾಧ್ಯವಾಗಲಿಲ್ಲ. ನನ್ನ ನಂಬಿಕೆ ಮತ್ತು ನನ್ನ ಮಗಳಿಗಾಗಿ ನಾನು ಧ್ವನಿ ಎತ್ತಬೇಕಾಯಿತು. ವಿಡಿಯೋದಲ್ಲಿ ನೀವು ನೋಡುತ್ತಿರುವುದಕ್ಕಿಂತ ಹೆಚ್ಚಿನ ನೋವನ್ನು ನಾನು ಅನುಭವಿಸಿದ್ದೇನೆ. ಅದನ್ನೆಲ್ಲಾ ನೋಡಿದರೆ ನಿಮಗೂ ಬೇಜಾರಾಗುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ:ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು?
ನಾನು ಎಲ್ಲೂ ಕೆಟ್ಟ ಪದಗಳನ್ನು ಬಳಸಿ ಮಾತನಾಡಿಲ್ಲ. ಕಾನೂನಿನ ಮೇಲೆ ನನಗೆ ನಂಬಿಕೆಯಿದೆ. ಸತ್ಯವಂತೂ ಹೊರಬಂದೇ ಬರುತ್ತದೆ. ನನ್ನ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು, ಅದಕ್ಕಾಗಿಯೇ ನಾನು ಈ ನಿರ್ಧಾರ ತಳೆಯಬೇಕಾಯಿತು. ನಾನು ಕಳೆದ 14 ವರ್ಷಗಳಿಂದ ಚಿತ್ರರಂಗದಲ್ಲಿ ಕಷ್ಟಪಟ್ಟು ಈ ಸ್ಥಾನಕ್ಕೆ ಬಂದಿದ್ದೇನೆ. ನಾನು ಯಾವತ್ತೂ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದವಳಲ್ಲ. ಆದರೆ ಇಂತಹ ಪರಿಸ್ಥಿತಿ ಬಂದಾಗ ನನ್ನ ಹೆಸರು ಹಾಳಾಗುತ್ತದೆ ಎನ್ನುವ ಆತಂಕವಿತ್ತು’ ಎಂದಿದ್ದಾರೆ. ಅಲ್ಲದೆ, ತಮ್ಮ ಬೆಡ್ರೂಂನಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿಸಿರುವ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ, ನನ್ನ ಮಗಳ ಭದ್ರತೆಗಾಗಿ ನಾವು ಕ್ಯಾಮೆರಾ ಹಾಕಿಸಿದ್ದೇವೆ ಬೇರೆ ಉದ್ದೇಶಗಳಿಗಲ್ಲ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:34 pm, Sun, 22 February 26