ಖುಷ್ಬುಗೆ ಕೇರಳ ದೇವಾಲಯದಲ್ಲಿ ಪೂಜೆ, ಧನ್ಯ ಎಂದ ನಟಿ
Khushboo: ನಟಿ ಖುಷ್ಬುಗೆ ಹಲವು ದೇವಾಲಯಗಳನ್ನು ಅಭಿಮಾನಿಗಳು ಕಟ್ಟಿ ಪೂಜಿಸುತ್ತಿದ್ದಾರೆ. ಆದರೆ ಕೇರಳದಲ್ಲಿ ನಿಜವಾಗಿಯೂ ಖುಷ್ಬುರ ಪಾದ ತೊಳೆದು ಪೂಜೆ ಮಾಡಲಾಗಿದೆ.
ಬಹುಭಾಷಾ ನಟಿ ಖುಷ್ಬುರ (Khushboo) ಹಲವು ದೇವಾಲಯನ್ನು ಅವರ ಅಭಿಮಾನಿಗಳು ತಮಿಳುನಾಡು, ಆಂಧ್ರ-ತೆಲಂಗಾಣಗಳಲ್ಲಿ ನಿರ್ಮಿಸಿದ್ದಾರೆ. ಅಲ್ಲಿ ಪ್ರತಿನಿತ್ಯ ಅವರಿಗೆ ಪೂಜೆ ಸಹ ನಡೆಯುತ್ತದೆ. ಆದರೆ ಕೇರಳದಲ್ಲಿ ನಿಜವಾಗಿಯೂ ಖುಷ್ಬು ಪಾದ ತೊಳೆದು ಪೂಜೆ ಮಾಡಲಾಗಿದೆ. ಖುಷ್ಬುಗೆ ಅರ್ಚಕರು ಪೂಜೆ ಮಾಡಿರುವ ಚಿತ್ರಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕೇರಳದ ತ್ರಿಶೂರ್‌ನ ವಿಷ್ಣುಮಯ ದೇವಾಲಯದಲ್ಲಿ ನಟಿ, ರಾಜಕಾರಣಿ ಖುಷ್ಬು ಅವರಿಗೆ ಅರ್ಚಕರು ಪೂಜೆ ಮಾಡಿದ್ದಾರೆ. ಚಿತ್ರಗಳನ್ನು ಸ್ವತಃ ಖುಷ್ಬು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ದೇವರಿಂದ ದೈವಿಕ ಆಶೀರ್ವಾದ ಪಡೆದ ಅನುಭವವಾಯ್ತು. ತ್ರಿಶೂರ್‌ನ ವಿಷ್ಣುಮಯ ದೇವಸ್ಥಾನದಿಂದ ‘ನಾರಿಪೂಜೆ’ ಗೆ ಆಹ್ವಾನ ಪಡೆದಿದ್ದು ನನ್ನ ಸುಕೃತ ಎಂದು ಭಾವಿಸುತ್ತೇನೆ. ಕೆಲವರನ್ನು ಮಾತ್ರವೇ ನಾರಿಪೂಜೆಗೆ ಆಹ್ವಾನಿಸಲಾಗುತ್ತದೆ, ಆ ವ್ಯಕ್ತಿಯನ್ನು ದೇವಿಯೇ ಆರಿಸುತ್ತಾಳೆ ಎಂಬುದು ಅಲ್ಲಿನ ನಂಬಿಕೆ. ನನಗೆ ಅಂತಹ ಗೌರವವನ್ನು ನೀಡಿ ಆಶೀರ್ವದಿಸಿದ ದೇವಸ್ಥಾನದ ಎಲ್ಲರಿಗೂ ನನ್ನ ವಿನಮ್ರ ಕೃತಜ್ಞತೆಗಳು. ನಮ್ಮನ್ನು ರಕ್ಷಿಸುವ ಮಹಾಶಕ್ತಿ ಇದೆ ಎಂದು ನಂಬುವ ಪ್ರತಿದಿನ ಒಳಿತಿಗಾಗಿ ಪ್ರಾರ್ಥಿಸುವ ಎಲ್ಲರಿಗೂ ಇದು ಇನ್ನಷ್ಟು ನಂಬಿಕೆಯನ್ನು ತರುತ್ತದೆ ಎಂಬುದು ನನ್ನ ವಿಶ್ವಾಸ. ನನ್ನ ಪ್ರೀತಿಪಾತ್ರರ ಒಳಿತಿಗಾಗಿ ಮತ್ತು ನಾವು ವಾಸಿಸುತ್ತಿರುವ ಈ ಜಗತ್ತು ಉತ್ತಮ, ಸಂತೋಷ ಮತ್ತು ಶಾಂತಿಯುತ ಸ್ಥಳವಾಗಲಿ ಎಂದು ಪ್ರಾರ್ಥಿಸಿದೆ” ಎಂದಿದ್ದಾರೆ.
‘ನಾರಿ ಪೂಜೆ’ ಪ್ರಯುಕ್ತ ಖುಷ್ಬು ಸುಂದರ್ ಅವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಕೇರಳದ ಹಲವು ದೇವಾಲಯಗಳಲ್ಲಿ ನಾರಿಪೂಜೆಯನ್ನು ಪ್ರತಿವರ್ಷ ಮಾಡಲಾಗುತ್ತದೆ. ಜಾತಿ, ಧರ್ಮ ಇನ್ನಿತರೆಗಳನ್ನು ನೋಡದೆ ನಾರಿಪೂಜೆಗೆ ಮಹಿಳೆಯರನ್ನು ದೇವಾಲಯದವರೇ ಆಯ್ಕೆ ಮಾಡುತ್ತಾರೆ. ಆಯ್ಕೆ ಮಾಡಿದ ನಾರಿಯರ ಪಾದ ತೊಳೆದು ಅರ್ಚಕರು ಪೂಜೆ ಮಾಡುತ್ತಾರೆ.
ಇದನ್ನೂ ಓದಿ:ನಟಿ ಖುಷ್ಬು ವಿರುದ್ಧ ವಿವಾದಾತ್ಮಕ ಹೇಳಿಕೆ: ಹಿರಿಯ ಶಾಸಕನ ಬಂಧನ
ಧನು ಮಾಸದ ಮೊದಲ ಶುಕ್ರವಾರ ಈ ನಾರಿ ಪೂಜೆ ಮಾಡಲಾಗುತ್ತದೆ. ದೇವಾಲಯದ ಪ್ರಧಾನ ಅರ್ಚಕರೇ ಈ ನಾರಿಪೂಜೆಯನ್ನು ನೆರವೇರಿಸುತ್ತಾರೆ. ಪೀಠದಲ್ಲಿ ಮಹಿಳೆಯನ್ನು ಕೂರಿಸಿ ಶಾಸ್ತ್ರೋಕ್ತವಾಗಿ ಪೂಜೆ ಮಾಡಲಾಗುತ್ತದೆ. ಹಲವು ಜನಪ್ರಿಯ ಮಹಿಳೆಯರಿಗೆ ಈ ಪೂಜೆಯ ಗೌರವ ಧಕ್ಕಿದೆ. ಜನಪ್ರಿಯ ಗಾಯಕ ಚಿತ್ರಾ, ಮಲಯಾಳಂ ಖ್ಯಾತ ನಟಿ ಮಂಜು ವಾರಿಯರ್ ಇನ್ನೂ ಹಲವರಿಗೆ ಪೂಜೆ ಮಾಡಲಾಗಿದೆ.
ಕೇರಳದ ತ್ರಿಶೂರ್ ಮಾತ್ರವೇ ಅಲ್ಲದೆ ಅಲಪ್ಪುಳ ಸೇರಿದಂತೆ ಕೇರಳದ ಹಲವು ದೇವಾಲಯಗಳಲ್ಲಿ ನಾರಿಪೂಜೆ ಮಾಡಲಾಗುತ್ತದೆ. ದೇವಾಲಯಗಳವರೇ ಜನಪ್ರಿಯ ಮಹಿಳೆಯರನ್ನು ಆರಿಸಿ ಅವರಿಗೆ ಪೂಜೆ ಮಾಡುತ್ತಾರೆ.
ಖುಷ್ಬುಗೆ ನಾರಿಪೂಜೆ ಗೌರವ ನೀಡಿದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. ಕೆಲವರು ಕುಹುಕವಾಡಿದ್ದಾರೆ ಸಹ. ಮುಸ್ಲಿಂ ಮಹಿಳೆಗೆ ಈ ರೀತಿ ಗೌರವ ಬೇಕಿರಲಿಲ್ಲ ಎಂದು ಕೆಲವರು ಹೇಳಿದರೆ, ದೇವಾಲಯದ ಆಡಳಿತ ಮಂಡಳಿ ಬಿಜೆಪಿಯವರೇ ಆಗಿರಬೇಕು ಎಂದು ಒಬ್ಬರು ಹೇಳಿದ್ದಾರೆ. ಮುಸ್ಲೀಮರನ್ನು ಬ್ರಾಹ್ಮಣರನ್ನಾಗಿ ಬದಲಾಯಿಸುವ ಹುನ್ನಾರ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ