‘ಡಾನ್ 3’ ನಿರ್ದೇಶಕ ಫರ್ಹಾನ್ ಅಖ್ತರ್ ನಿವಾಸಕ್ಕೆ ಕಿಯಾರಾ ಅಡ್ವಾಣಿ ಭೇಟಿ; ಅಭಿಮಾನಿಗಳಲ್ಲಿ ಮೂಡಿತು ಕುತೂಹಲ
‘ಡಾನ್ -3’ ಸಿನಿಮಾ ಇತ್ತೀಚೆಗೆ ಘೋಷಣೆ ಆಗಿದೆ. ಈ ಸಿನಿಮಾ ಆರಂಭದಲ್ಲೇ ಸಖತ್ ಸುದ್ದಿ ಮಾಡುತ್ತಾ ಇದೆ. ಈ ಮೊದಲು ಸಿನಿಮಾದ ನಾಯಕನಾಗಿ ಶಾರುಖ್ ಖಾನ್ ಬದಲು ರಣವೀರ್ ಸಿಂಗ್ ಕಾಣಿಸಿಕೊಳ್ಳುತ್ತಾರೆ ಎಂದಾಗ ಭಾರಿ ಚರ್ಚೆ ನಡೆದಿತ್ತು. ಈಗ ಸಿನಿಮಾದಲ್ಲಿ ಪ್ರಿಯಾಂಕಾ ಬದಲು ಕಿಯಾರಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
‘ಡಾನ್’ ಸರಣಿಯಲ್ಲಿ ಈಗಾಗಲೇ ಎರಡು ಸಿನಿಮಾಗಳು ರಿಲೀಸ್ ಆಗಿ ಹಿಟ್ ಆಗಿವೆ. ಈ ಸರಣಿಯ ಮೂರನೇ ಸಿನಿಮಾ ಇತ್ತೀಚೆಗೆ ಘೋಷಣೆ ಆಯಿತು. ನಿರ್ದೇಶಕ ಫರ್ಹಾನ್ ಅಖ್ತರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆದರೆ, ಶಾರುಖ್ ಖಾನ್ ಬದಲಿಗೆ ರಣವೀರ್ ಸಿಂಗ್ (Ranveer Singh) ಅವರು ಈ ಚಿತ್ರದಲ್ಲಿ ಹೀರೋ ಆಗುತ್ತಿದ್ದಾರೆ. ಈಗ ಈ ಚಿತ್ರದ ನಾಯಕಿ ಯಾರು ಎನ್ನುವ ಪ್ರಶ್ನೆ ಮೂಡಿತ್ತು. ಕಿಯಾರಾ ರಣವೀರ್ ಸಿಂಗ್ಗೆ ಜೊತೆಯಾಗಲಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡಿತ್ತು. ಈ ಸುದ್ದಿ ನಿಜವಾಗುವ ಸೂಚನೆ ಸಿಕ್ಕಿದೆ. ನಟಿ ಕಿಯಾರಾ ಅವರು ಫರ್ಹಾನ್ ಅಖ್ತರ್ ಕಚೇರಿಗೆ ಭೇಟಿ ನೀಡಿದ್ದು, ಸಿನಿಮಾ ಮಾತುಕತೆ ನಡೆದಿರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.
ಕಿಯಾರಾ ಅವರು ಫರ್ಹಾನ್ ಕಚೇರಿಗೆ ಭೇಟಿ ನೀಡಿದ ವಿಡೀಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಿಯಾರಾ ನಗುತ್ತಾ ಕ್ಯಾಮೆರಾ ಕಡೆಗೆ ಕೈ ಬೀಸಿದ್ದಾರೆ. ‘ಡಾನ್ -3’ ಚಿತ್ರದಲ್ಲಿ ಕಿಯಾರಾ ನಟಿಸುತ್ತಿರುವುದು ಪಕ್ಕಾ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ‘ಡಾನ್’ ಹಾಗೂ ‘ಡಾನ್ 2’ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದರು. ಈಗ ಅವರು ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಅವರು ಬಾಲಿವುಡ್ ಕಡೆ ಬರುವ ಆಲೋಚನೆಯಲ್ಲಿಲ್ಲ. ಹೀಗಾಗಿ, ಬೇರೆ ನಟಿಯನ್ನು ಹುಡುಕುವ ಅನಿವಾರ್ಯತೆ ಫರ್ಹಾನ್ ಅಖ್ತರ್ ಅವರಿಗೆ ಎದುರಾಗಿತ್ತು. ಈ ಕಾರಣದಿಂದ ಕಿಯಾರಾ ಜೊತೆ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.
‘ಡಾನ್ 3’ ಸಿನಿಮಾಗೆ ರಣವೀರ್ ಸಿಂಗ್ ಹೀರೋ ಎಂಬುದನ್ನು ಫರ್ಹಾನ್ ಅಖ್ತರ್ ಟೀಸರ್ ಮೂಲಕ ತಿಳಿಸಿದ್ದರು. ಅವರನ್ನು ಆಯ್ಕೆ ಮಾಡಿಕೊಂಡ ಬಗ್ಗೆ ಹಲವು ವಿರೋಧಗಳು ಕೇಳಿ ಬಂದಿವೆ. ಈ ಬಗ್ಗೆ ಫರ್ಹಾನ್ ಮಾತನಾಡಿದ್ದರು. ‘ರಣವೀರ್ ಆಯ್ಕೆಯನ್ನು ಅನೇಕರು ವಿರೋಧಿಸಿದ್ದಾರೆ. ಆದರೆ ನಮಗೆ ಸಿನಿಮಾ ನಿರ್ಮಾಣವಾಗುವುದು ಎಲ್ಲಕ್ಕಿಂತ ಮುಖ್ಯ. ರಣವೀರ್ ಸಿಂಗ್ ಉತ್ತಮ ನಟ. ಪಾತ್ರಕ್ಕೆ ಸರಿಯಾದ ನ್ಯಾಯ ಒದಗಿಸುತ್ತಾರೆ ಎಂಬ ಭರವಸೆಯಿದೆ’ ಎಂದಿದ್ದರು.
1978ರಲ್ಲಿ ‘ಡಾನ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ಅಮಿತಾಭ್ ಡಾನ್ ಪಾತ್ರ ಮಾಡಿದ್ದರು. ನಂತರ ಶಾರುಖ್ ಖಾನ್ ಅವರು ಡಾನ್ ಪಾತ್ರ ಮಾಡುವಾಗ ಅನೇಕರು ವಿರೋಧಿಸಿದ್ದರು. ಆದಾಗ್ಯೂ ಸಿನಿಮಾ ಹಿಟ್ ಆಯಿತು. ಈ ಉದಾಹರಣೆಯನ್ನು ಫರ್ಹಾನ್ ಅಖ್ತರ್ ನೀಡಿದ್ದರು.
View this post on Instagram
ಇದನ್ನೂ ಓದಿ: ರಣವೀರ್ ಡಾನ್ ಆದ ಬಗ್ಗೆ ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಫರ್ಹಾನ್ ಅಖ್ತರ್
ಶಾರುಖ್ ಅಭಿನಯದ ‘ಡಾನ್’ ಚಿತ್ರ 2006ರಲ್ಲಿ ಬಿಡುಗಡೆಯಾಗಿತ್ತು. 38 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ಈ ಸಿನಿಮಾ 106.34 ಕೋಟಿ ರೂಪಾಯಿ ಗಳಿಸಿಕೊಂಡಿತ್ತು. 2006ರಲ್ಲಿ ‘ಡಾನ್ -2’ ಸಿನಿಮಾ ಬಿಡುಗಡೆಗೊಂಡಿತ್ತು. ಈ ಚಿತ್ರ ಕೂಡ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಮಾಯಿ ಮಾಡಿತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:18 pm, Sat, 2 September 23