ಅಭಿಮಾನಿಗಳಿಗೆ ಕಿಚ್ಚನ್ ಸರ್​​ಪ್ರೈಸ್; ಸುದೀಪ್ ಕಡೆಯಿಂದ ಬ್ಯಾಕ್ ಟು ಬ್ಯಾಕ್ ಸಿನಿಮಾ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಚಿತ್ರರಂಗದಿಂದ ಪಡೆದಿದ್ದ ಬಿಡುವಿಗೆ ತೆರೆ ಬಿದ್ದಿದೆ. ಜೂನ್ 26ರಿಂದ ಅವರ ಬಹುನಿರೀಕ್ಷಿತ 'BRB' ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ಈಗಾಗಲೇ 4 ಪ್ರಮುಖ ಸ್ಕ್ರಿಪ್ಟ್‌ಗಳನ್ನು ಲಾಕ್ ಮಾಡಿದ್ದಾರೆ. ಅಭಿಮಾನಿಗಳ ನಿರಂತರ ಪ್ರಶ್ನೆಗಳಿಗೆ ಸ್ವತಃ ಸುದೀಪ್ ಅವರೇ ಟ್ವಿಟರ್ ಮೂಲಕ ಉತ್ತರ ನೀಡಿದ್ದು, ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ.

ಅಭಿಮಾನಿಗಳಿಗೆ ಕಿಚ್ಚನ್ ಸರ್​​ಪ್ರೈಸ್; ಸುದೀಪ್ ಕಡೆಯಿಂದ ಬ್ಯಾಕ್ ಟು ಬ್ಯಾಕ್ ಸಿನಿಮಾ
ಸುದೀಪ್

Updated on: Jun 10, 2026 | 10:06 AM

‘ಮಾರ್ಕ್’ ಸಿನಿಮಾದ  ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಬಳಿಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು (Kichcha Sudeep) ಚಿತ್ರರಂಗದಿಂದ ಕೊಂಚ ಬಿಡುವು ಪಡೆದುಕೊಂಡಿದ್ದರು. ಸುದೀಪ್ ಅವರ ಬ್ರೇಕ್‌ನಿಂದಾಗಿ, ಅವರ ಮುಂದಿನ ಸಿನಿಮಾಗಳು ಯಾವುವು? ಶೂಟಿಂಗ್ ಯಾವಾಗ ಆರಂಭವಾಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ನಿರಂತರವಾಗಿ ಪ್ರಶ್ನೆ ಮಾಡುತ್ತಲೇ ಇದ್ದರು. ಈಗ ಸ್ವತಃ ಸುದೀಪ್ ಅವರೇ ತಮ್ಮ ಮುಂಬರುವ ಚಿತ್ರಗಳ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ.

ಕಿಚ್ಚ ಸುದೀಪ್ ಅವರು ಟ್ವಿಟರ್ (X) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮುಂದಿನ ಸಿನಿಮಾಗಳ ಅಪ್‌ಡೇಟ್ ನೀಡಿ ಅಭಿಮಾನಿಗಳ ಕುತೂಹಲಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ‘ನಿಮ್ಮ ಪ್ರೀತಿಯನ್ನು ನಾನೆಂದೂ ಲಘುವಾಗಿ ಪರಿಗಣಿಸಿಲ್ಲ’ ಎಂದು ಸಾಲನ್ನು ಆರಂಭಿಸಿದ್ದಾರೆ ಸುದೀಪ್.

‘ನಿಮ್ಮೆಲ್ಲರ ಮಾತುಗಳು ನನಗೆ ಕೇಳಿಸುತ್ತಿವೆ. ನನ್ನನ್ನು ನಾನು ಬೇರೆ ಕೆಲಸಗಳಲ್ಲಿ ಬ್ಯುಸಿ ಇಟ್ಟುಕೊಂಡಿದ್ದೆ ಎಂದರೆ, ನಿಮ್ಮ ಪ್ರೀತಿಯನ್ನಾಗಲಿ ಅಥವಾ ಈ ಸುಂದರವಾದ ಚಿತ್ರರಂಗದ ವೃತ್ತಿಜೀವನವನ್ನಾಗಲಿ ನಾನು ಲಘುವಾಗಿ ಪರಿಗಣಿಸಿದ್ದೇನೆ ಎಂದರ್ಥವಲ್ಲ. ನನಗೆ ಸಿನಿಮಾಗಳನ್ನು ಮಾಡುವುದು, ಕಥೆಗಳನ್ನು ಹೇಳುವುದು ಮತ್ತು ನಿಮ್ಮನ್ನು ರಂಜಿಸುವುದಕ್ಕಿಂತ ಹೆಚ್ಚಾಗಿ ನಾನು ಯಾವುದನ್ನೂ ಪ್ರೀತಿಸುವುದಿಲ್ಲ. ನಿಮ್ಮ ಈ ‘ವೇಕ್ ಅಪ್’ ಪ್ರಯತ್ನಗಳು ನನ್ನ ಕೆಲಸದ ಮೇಲಿರುವ ನಿಮ್ಮ ಪ್ರೀತಿಯನ್ನು ತೋರಿಸುತ್ತವೆ, ಎಲ್ಲರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು ಬ್ರೇಕ್‌ನ ಅಸಲಿ ಕಾರಣ ಬಿಚ್ಚಿಟ್ಟಿರುವ ಅವರು, ‘ನನ್ನ ಉಪಸ್ಥಿತಿ ಮತ್ತು ಬೆಂಬಲದ ಅಗತ್ಯವಿದ್ದ ಕೆಲವು ವ್ಯಕ್ತಿಗಳು ಮತ್ತು ಪರಿಸ್ಥಿತಿಗಳು ಎದುರಾಗಿದ್ದವು. ಹೀಗಾಗಿ ಈ ಸಣ್ಣ ಬ್ರೇಕ್‌ನಲ್ಲೂ ನಾನು ಒಂದು ಜವಾಬ್ದಾರಿಯುತ ಕೆಲಸದಲ್ಲೇ ಬ್ಯುಸಿಯಾಗಿದ್ದೆ’ ಎಂದಿದ್ದಾರೆ.

ಜೂನ್ 26ರಿಂದ BRB ಆರಂಭ; 4 ಸ್ಕ್ರಿಪ್ಟ್ ಲಾಕ್!

ಇದೇ ಪೋಸ್ಟ್‌ನಲ್ಲಿ ತಮ್ಮ ಮುಂದಿನ ಲೈನ್‌ಅಪ್ ಘೋಷಿಸಿರುವ ಕಿಚ್ಚ, ಅಭಿಮಾನಿಗಳಿಗೆ ಡಬಲ್ ಧಮಾಕಾ ನೀಡಿದ್ದಾರೆ. ಇದೇ ತಿಂಗಳು ಜೂನ್ 26ರಿಂದ ಸುದೀಪ್ ಅವರ ಬಹುನಿರೀಕ್ಷಿತ ‘ಬಿಆರ್​​ಬಿ’ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಇದರ ಬೆನ್ನಲ್ಲೇ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುವುದಾಗಿ ಸುದೀಪ್ ಪ್ರಕಟಿಸಿದ್ದಾರೆ. ಈಗಾಗಲೇ ಅವರು 4 ಪ್ರಮುಖ ಸ್ಕ್ರಿಪ್ಟ್‌ಗಳನ್ನು (ಕಥೆಗಳನ್ನು) ಲಾಕ್ ಮಾಡಿದ್ದು, ಅವುಗಳನ್ನು ಶೀಘ್ರದಲ್ಲೇ ಆರಂಭಿಸಲು ತಾವೂ ಕೂಡ ಅಷ್ಟೇ ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಸುದೀಪ್ ನೆಪೋಟಿಸಂ ಹೇಳಿಕೆ ಬೆನ್ನಲ್ಲೇ ಶಿವಣ್ಣ ಖಡಕ್ ಉತ್ತರ

ಇಷ್ಟು ದಿನ ಕಿಚ್ಚನ ಸಿನಿಮಾಗಳ ಅಪ್‌ಡೇಟ್ ಇಲ್ಲದೆ ಕಾಯುತ್ತಿದ್ದ ಅಭಿಮಾನಿ ಬಳಗಕ್ಕೆ ಈ ಒಂದೇ ಒಂದು ಪೋಸ್ಟ್ ಈಗ ಹಬ್ಬದ ವಾತಾವರಣ ತಂದಿದೆ. ಜೂನ್ 26ರಿಂದ ಕಿಚ್ಚ ಅಖಾಡಕ್ಕೆ ಇಳಿಯುತ್ತಿರುವುದು ಗಾಂಧಿನಗರದಲ್ಲೂ ಹೊಸ ಸಂಚಲನ ಸೃಷ್ಟಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us