Narendra Modi: ಆರ್​ಆರ್​ಆರ್ ಹಾಡಿಗೆ ಕುಣಿದ ಕೊರಿಯನ್ನರು, ಭೇಷ್ ಎಂದ ಪ್ರಧಾನಿ ಮೋದಿ

ಕೊರಿಯನ್ ರಾಯಭಾರಿ ಕಚೇರಿಯ ಸಿಬ್ಬಂದಿ ಆರ್​ಆರ್​ಆರ್ ಸಿನಿಮಾದ ನಾಟು ನಾಟು ಹಾಡಿಗೆ ನೃತ್ಯ ಮಾಡಿದ್ದು, ವಿಡಿಯೋ ರೀಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಭೇಷ್ ಎಂದಿದ್ದಾರೆ.

Narendra Modi: ಆರ್​ಆರ್​ಆರ್ ಹಾಡಿಗೆ ಕುಣಿದ ಕೊರಿಯನ್ನರು, ಭೇಷ್ ಎಂದ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
ಮಂಜುನಾಥ ಸಿ.
|

Updated on: Feb 26, 2023 | 1:35 PM

ಆರ್​ಆರ್​ಆರ್ (RRR) ಸಿನಿಮಾದ ಹವಾ ವಿಶ್ವದೆಲ್ಲೆಡೆ ಹಬ್ಬಿದೆ. ಅಲ್ಲೂರಿ ಸೀತಾರಾಮ ರಾಜು-ಕೋಮರಂ ಭೀಮ್​ರ ಸ್ನೇಹಕ್ಕೆ, ಅವರ ಸಾಹಸಕ್ಕೆ ಫಿದಾ ಆಗಿರುವ ಜೊತೆಗೆ ಸಿನಿಮಾದ ನಾಟು-ನಾಟು ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದಾರೆ. ಅದರಲ್ಲಿಯೂ ವಿದೇಶಿ ಮಂದಿಗೆ ಗುಂಗು ಹಿಡಿಸಿದೆ ನಾಟು ನಾಟು ಹಾಡು. ಇದೀಗ ಕೆಲ ಕೊರಿಯನ್ ಅಧಿಕಾರಿಗಳು ನಾಟು-ನಾಟು ಹಾಡಿಗೆ ಕುಣಿದಿದ್ದು ಅವರ ನೃತ್ಯ ಕಂಡು ಸ್ವತಃ ಪ್ರಧಾನಿ ಮೋದಿ (Narendra Modi) ಶ್ಲಾಘಿಸಿದ್ದಾರೆ.

ಭಾರತದ ಕೊರಿಯನ್ ರಾಯಭಾರಿ ಕಚೇರಿಯ ಸಿಬ್ಬಂದಿ ನಾಟು-ನಾಟು ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದು ಅದರ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಕೊರಿಯ ರಾಯಭಾರಿ ಚಾಂಗ್ ಜೆ ಬೊಕ್ ಸಹ ತಮ್ಮ ಕಚೇರಿಯ ಅಧಿಕಾರಿಗಳೊಟ್ಟಿಗೆ ನಾಟು-ನಾಟು ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ಸಿನಿಮಾದಲ್ಲಿ ರಾಮ್ ಚರಣ್ ತೇಜ-ಜೂ ಎನ್​ಟಿಆರ್ ನಾಟು ನಾಟು ಹಾಡಿಗೆ ಮಾಡಿದ್ದ ಕೆಲವು ಹುಕ್ ಸ್ಟೆಪ್​ಗಳನ್ನೇ ಕೊರಿಯನ್ ರಾಯಭಾರಿ ಕಚೇರಿಯ ಅಧಿಕಾರಿಗಳು ಮಾಡಲು ಪ್ರಯತ್ನಿಸಿದ್ದು, ಬಹುಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಕಚೇರಿಯ ಮಹಿಳಾ ಉದ್ಯೋಗಿಗಳು, ಪುರುಷ ಉದ್ಯೋಗಿಗಳೆಲ್ಲರೂ ಒಟ್ಟಿಗೆ ಸೇರಿ, ಕೊರಿಯನ್ ಸಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಹಾಡಿಗೆ ಸ್ಟೆಪ್ ಹಾಕಿದ್ದು, ವಿಡಿಯೋ ಇದೀಗ ವೈರಲ್ ಆಗಿದೆ.

ಕೊರಿಯಾ ರಾಯಭಾರಿ ಕಚೇರಿ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ರೀಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ರಾಯಭಾರಿ ಕಚೇರಿ ಸಿಬ್ಬಂದಿಯ ಉತ್ಸಾಹಭರಿತ ಟೀಂ ವರ್ಕ್ ಅನ್ನು ಶ್ಲಾಘಿಸಿದ್ದಾರೆ ಜೊತೆಗೆ ವಿಡಿಯೋ ಚೆನ್ನಾಗಿದೆಯೆಂದು ಹೇಳಿ ಥಮ್ಸ್ ಅಪ್​ ಸಹ ನೀಡಿದ್ದಾರೆ.

ವಿಡಿಯೋ ಹಂಚಿಕೊಂಡಿರುವ ಭಾರತದ ಕೊರಿಯನ್ ರಾಯಭಾರಿ ಕಚೇರಿ, ”ನಿಮಗೆ ನಾಟು-ನಾಟು ಗೊತ್ತೆ? ಕೊರಿಯನ್ ರಾಯಭಾರಿ ಕಚೇರಿಯ ನಾಟು-ನಾಟು ಸಾಂಗ್ ಕವರ್ ಅನ್ನು ನಾವು ಪ್ರಸ್ತುತ ಪಡಿಸುತ್ತಿದ್ದೇವೆ. ಕೊರಿಯನ್ ರಾಯಭಾರಿ ಚಾಂಗ್ ಜೆ ಬೊಕ್ ಸಹ ಕಚೇರಿಯ ಎಲ್ಲ ಸಿಬ್ಬಂದಿಗಳೊಂದಿಗೆ ಡ್ಯಾನ್ಸ್ ಮಾಡಿರುವುದು ಕಾಣಬಹುದು” ಎಂದು ಬರೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಪಾಕಿಸ್ತಾನದ ಜನಪ್ರಿಯ ನಟಿ ಹನಿಯಾ ಆಮಿರ್, ಪಾಕಿಸ್ತಾನದ ವಿವಾಹವೊಂದರಲ್ಲಿ ನಾಟು-ನಾಟು ಹಾಡಿಗೆ ಮೈಮರೆತು ಡ್ಯಾನ್ಸ್ ಮಾಡಿದ್ದರು. ಅವರ ನೃತ್ಯದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.

RRR: ನಾಟು-ನಾಟು ಹಾಡಿಗೆ ಮೈಮರೆತು ಕುಣಿದ ಪಾಕ್ ನಟಿ, ವಿಡಿಯೋ ವೈರಲ್

ನಾಟು-ನಾಟು ಹಾಡು ಜನಮನ್ನಣೆ ಗಳಿಸಿರುವುದು ಮಾತ್ರವೇ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಸಹ ಭಾಜನವಾಗಿದೆ. ಗೋಲ್ಡನ್ ಗ್ಲೋಬ್, ಕ್ರಿಟಿಕ್ ಚಾಯ್ಸ್ ಅವಾರ್ಡ್, ಹಾಲಿವುಡ್ ಕ್ರಿಟಿಕ್ ಅಸೋಸಿಯೇಷನ್ ಅವಾರ್ಡ್ ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗೆ ಭಾಜವಾಗಿರುವ ಈ ಹಾಡು ಆಸ್ಕರ್​ಗೂ ನಾಮಿನೇಟ್ ಆಗಿದ್ದು ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ