ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಚಿತ್ರರಂಗದ ಸ್ವರೂಪ ಬದಲಾಗಿದೆ. ಹಿಂದಿ ಭಾಷೆಯ ಸಿನಿಮಾಗಳೇ ರಾರಾಜಿಸುತ್ತಿದ್ದ ಒಂದು ಕಾಲ ಇತ್ತು. ಆದರೆ ಈಗ ಎಲ್ಲ ಭಾಷೆಯ ಚಿತ್ರಗಳು ಕೂಡ ಸಖತ್ ಸೌಂಡು ಮಾಡುತ್ತಿವೆ. ಬೇರೆ ಬೇರೆ ಭಾಷೆಯ ಚಿತ್ರರಂಗಗಳ ನಡುವೆ ಅಂತರವೇ ಉಳಿದುಕೊಂಡಿಲ್ಲ. ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಒಂದು ಹೊಸ ಸಲಹೆ ನೀಡಿದ್ದಾರೆ. ಆಯಾ ಭಾಷೆಯ ನಿರ್ದೇಶಕ ಎಂದು ಯಾರನ್ನಾದರೂ ಗುರುತಿಸುವ ಬದಲು, ಭಾರತೀಯ ನಿರ್ದೇಶಕ ಅಂತ ಗುರುತಿಸಬೇಕು ಎಂದು ವಿವೇಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ‘ಸೈಮಾ’ ಪ್ರಶಸ್ತಿ (SIIMA Awards 2022) ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಅವರು ಈ ವಿಚಾರ ಹಂಚಿಕೊಂಡಿದ್ದಾರೆ.
2021ರಲ್ಲಿ ತೆರೆಕಂಡ ದಕ್ಷಿಣ ಭಾರತದ ಸಿನಿಮಾಗಳಿಗೆ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಪ್ರಶಸ್ತಿ ನೀಡಲಾಗಿದೆ. ‘ಅತ್ಯುತ್ತಮ ಹೊಸ ನಿರ್ದೇಶಕ’ ಪ್ರಶಸ್ತಿಯನ್ನು ‘ಬಡವ ರಾಸ್ಕಲ್’ ಚಿತ್ರಕ್ಕಾಗಿ ಶಂಕರ್ಗುರು ಪಡೆದುಕೊಂಡಿದ್ದಾರೆ. ವೇದಿಕೆ ಮೇಲೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದು ವಿವೇಕ್ ಅಗ್ನಿಹೋತ್ರಿ. ಈ ವೇಳೆ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
‘ಸೈಮಾ ಸಮಾರಂಭದಲ್ಲಿ ನಿರ್ದೇಶಕ ಶಂಕರ್ ಗುರು ಅವರಿಗೆ ಈ ಪ್ರಶಸ್ತಿ ನೀಡಲು ಖುಷಿ ಎನಿಸಿತು. ಬೆಸ್ಟ್ ಕನ್ನಡ ನಿರ್ದೇಶಕ ಎಂದು ಕರೆಯುವ ಬದಲು, ಕನ್ನಡದ ಬೆಸ್ಟ್ ಭಾರತೀಯ ನಿರ್ದೇಶಕ ಎಂದು ಕರೆಯೋಣ. ಅದನ್ನೇ ನಾನು ನಂಬಿದ್ದೇನೆ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಟ್ವೀಟ್ ಮಾಡಿದ್ದಾರೆ. ಇದೇ ಮಾತನ್ನು ವೇದಿಕೆ ಮೇಲೆ ಅವರು ಹೇಳಿದ್ದು, ಅದರ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ವಿವೇಕ್ ಅಗ್ನಿಹೋತ್ರಿ ಅವರ ಈ ಮಾತುಗಳಿಗೆ ನೆಟ್ಟಿಗರು ಸಹಮತ ಸೂಚಿಸಿದ್ದಾರೆ.
It was an honour to give always Best Debut Director award to @dir_shankarguru for #BadavaRascal at #SIIMA2022
“Rather than calling as best Kannada/Telugu director, let’s start calling best Indian Director of Kannada language”.
This is what I believe. Listen. pic.twitter.com/iDooPPdZ1y— Vivek Ranjan Agnihotri (@vivekagnihotri) September 11, 2022
10ನೇ ವರ್ಷದ ಸೈಮಾ ಸಮಾರಂಭ ನಡೆದಿದೆ. ಈ ಬಾರಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಜರುಗಿದ್ದು ವಿಶೇಷ. ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ದಕ್ಷಿಣ ಭಾರತದ ಭಾಷೆಗಳ ಸ್ಟಾರ್ ಕಲಾವಿದರಾದ ಶಿವರಾಜ್ಕುಮಾರ್, ಯಶ್, ಕಮಲ್ ಹಾಸನ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಮುಂತಾದವರು ಇದರಲ್ಲಿ ಭಾಗಿ ಆಗಿದ್ದಾರೆ. ಬಾಲಿವುಡ್ ನಟ ರಣವೀರ್ ಸಿಂಗ್, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮುಂತಾದವರು ಆಗಮಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:31 am, Mon, 12 September 22