‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ವಿರುದ್ಧ ನಡೆದ ಹುನ್ನಾರ ಒಂದೆರಡಲ್ಲ; ಎಲ್ಲವನ್ನೂ ವಿವರಿಸಿದ ನಿರ್ದೇಶಕ

The Kashmir Files | Oscar Awards: ಆರಂಭದಿಂದಲೂ ಚರ್ಚೆಯ ಕೇಂದ್ರಬಿಂದು ಆಗಿರುವ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಬಗ್ಗೆ ಮತ್ತೆ ವಿವಾದ ಶುರು ಆಗಿದೆ. ಕೆಲವು ವಿಚಾರಗಳನ್ನು ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಹೊರಹಾಕಿದ್ದಾರೆ.

‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ವಿರುದ್ಧ ನಡೆದ ಹುನ್ನಾರ ಒಂದೆರಡಲ್ಲ; ಎಲ್ಲವನ್ನೂ ವಿವರಿಸಿದ ನಿರ್ದೇಶಕ
ವಿವೇಕ್ ಅಗ್ನಿಹೋತ್ರಿ
TV9kannada Web Team

| Edited By: Madan Kumar

Aug 19, 2022 | 8:18 AM

ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಘಟನೆಯನ್ನು ಆಧರಿಸಿ ಮೂಡಿಬಂದ ‘ದಿ ಕಾಶ್ಮೀರ್​ ಫೈಲ್ಸ್​’ (The Kashmir Files) ಸಿನಿಮಾ ಮಾರ್ಚ್​ 11ರಂದು ರಿಲೀಸ್​ ಆಗಿ ದೊಡ್ಡ ಮಟ್ಟದ ಯಶಸ್ಸು ಪಡೆಯಿತು. ಅದಾಗಿ 5 ತಿಂಗಳು ಕಳೆದಿದ್ದರೂ ಈ ಸಿನಿಮಾ ಬಗೆಗಿನ ಚರ್ಚೆ ಇನ್ನೂ ನಿಂತಿಲ್ಲ. ಈಗ ಇನ್ನೊಂದು ಕಾರಣಕ್ಕಾಗಿ ಈ ಸಿನಿಮಾ ಮತ್ತೆ ಸುದ್ದಿ ಮಾಡುತ್ತಿದೆ. ಬಾಲಿವುಡ್​ನಲ್ಲಿ ಅನೇಕರು ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾವನ್ನು ತುಳಿಯಲು ಪ್ರಯತ್ನಿಸಿದ್ದರು ಎಂಬ ವಿಷಯವನ್ನು ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಹೇಳಿದ್ದಾರೆ. ಈ ಕುರಿತು ಅವರು ನೇರವಾಗಿ ಮಾತನಾಡಿದ್ದಾರೆ. ಭಾರತದಿಂದ ಈ ಚಿತ್ರವನ್ನು ಆಸ್ಕರ್​ ಸ್ಪರ್ಧೆಗೆ ಆಯ್ಕೆ ಮಾಡಬೇಕೋ ಅಥವಾ ಬೇಡವೋ ಎನ್ನುವ ಕುರಿತು ಪರ-ವಿರೋಧದ ಅಭಿಪ್ರಾಯ ಕೇಳಿಬರುತ್ತಿದೆ. ಈ ಸಂದರ್ಭದಲ್ಲಿ ನಿರ್ದೇಶಕ ಅನುರಾಗ್​ ಕಶ್ಯಪ್​ (Anurag Kashyap) ಅವರ ಒಂದು ಹೇಳಿಕೆಯಿಂದ ವಿವಾದ ಸೃಷ್ಟಿ ಆಗಿದೆ.

ಆಸ್ಕರ್​ ಸ್ಪರ್ಧೆಗೆ ಭಾರತದಿಂದ ‘ಆರ್​ಆರ್​ಆರ್​’ ಸಿನಿಮಾ ಆಯ್ಕೆ ಆಗಬಹುದು ಎಂದು ಅನುರಾಗ್​ ಕಶ್ಯಪ್​ ಹೇಳಿದ್ದಾರೆ. ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರ ಆಯ್ಕೆ ಆಗದಿರಲಿ ಎಂದು ಕೂಡ ಅವರು ಹೇಳಿದ್ದಾರೆ. ಈ ಮಾತಿಗೆ ವಿವೇಕ್​ ಅಗ್ನಿಹೋತ್ರಿ ಪ್ರತ್ಯುತ್ತರ ನೀಡಿದ್ದಾರೆ. ಮೊದಲಿನಿಂದಲೂ ಅನೇಕರು ಈ ಸಿನಿಮಾ ವಿರುದ್ಧ ಹುನ್ನಾರ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

‘ಬಾಲಿವುಡ್​ನಲ್ಲಿ ಯಾವಾಗಲೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇದ್ದವು. ಅಮಿತಾಭ್​ ಬಚ್ಚನ್​ ಕಾಂಗ್ರೆಸ್​ನಲ್ಲಿದ್ದರು. ಧರ್ಮೇಂದ್ರ ಬಿಜೆಪಿಯಲ್ಲಿ ಹಾಗೂ ಜಯಾ ಬಚ್ಚನ್​ ಸಮಾಜವಾದಿ ಪಾರ್ಟಿಯಲ್ಲಿ ಇದ್ದರು. ಆದರೂ ಅವರೆಲ್ಲ ಜೊತೆಯಾಗಿ ಸಿನಿಮಾ ಮಾಡಿದರು. ಆದರೆ ಬಾಲಿವುಡ್​ ಹಾಗೂ ಮಾಧ್ಯಮದ ಒಂದು ಗುಂಪು ಮಾತ್ರ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ತಯಾರಾಗಬಾರದು ಅಂತ ಬಯಸಿದ್ದರು’ ಎಂಬುದು ವಿವೇಕ್​ ಅಗ್ನಿಹೋತ್ರಿ ಆರೋಪ.

‘ಸಿನಿಮಾ ತಯಾರಾದ ಬಳಿಕ ರಿಲೀಸ್​ ಆಗದಂತೆ ತಡೆಯಲು ಯತ್ನಿಸಿದರು. ರಿಲೀಸ್​ ಆದ ನಂತರ ಯಶಸ್ವಿ ಆಗಬಾರದು ಅಂತ ಬಯಸಿದರು. ಈಗ ಆಸ್ಕರ್​ಗೆ ಆಯ್ಕೆ ಆಗಬಾರದು ಎನ್ನುತ್ತಿದ್ದಾರೆ. ಇದು ನೈತಿಕವಾಗಿ ಸರಿಯಲ್ಲ’ ಎಂದು ಅನುರಾಗ್​ ಕಶ್ಯಪ್​ ಮತ್ತು ಇನ್ನಿತರರ ವಿರುದ್ಧ ವಿವೇಕ್​ ಅಗ್ನಿಹೋತ್ರಿ ಆರೋಪ ಮಾಡಿದ್ದಾರೆ. ‘ಆಸ್ಕರ್​ಗೆ ತೆಲುಗಿನ ಆರ್​ಆರ್​ಆರ್​ ಸಿನಿಮಾ ಆಯ್ಕೆಯಾಗಲಿ ಎಂದು ಹೇಳುವುದು ಓಕೆ. ಆದರೆ ಇನ್ನೊಂದು ಸಿನಿಮಾ ಆಯ್ಕೆ ಆಗಬಾರದು ಅಂತ ಅಪಪ್ರಚಾರ ಮಾಡುವುದು ಸರಿಯಲ್ಲ’ ಎಂಬುದು ವಿವೇಕ್​ ಅಗ್ನಿಹೋತ್ರಿ ಮಾತು.

ಇದನ್ನೂ ಓದಿ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada