Liger Movie Review: ರೋಷ, ಆವೇಶ, ಪ್ರೀತಿ, ಸೆಂಟಿಮೆಂಟ್ ಮಿಶ್ರಣ ಈ ‘ಲೈಗರ್’
ವಿಜಯ್ ದೇವರಕೊಂಡ ಬಾಕ್ಸರ್ ಆಗಿ ಕಾಣಿಸಿಕೊಂಡಿರುವ ‘ಲೈಗರ್’ ಸಿನಿಮಾ ಇಂದು (ಆಗಸ್ಟ್ 25) ರಿಲೀಸ್ ಆಗಿದೆ. ಪುರಿ ಜಗನ್ನಾಥ್ ನಿರ್ದೇಶನದ ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ‘ಲೈಗರ್’ ಚಿತ್ರದ ವಿಮರ್ಶೆ ಇಲ್ಲಿದೆ.
ಚಿತ್ರ: ಲೈಗರ್
ಪಾತ್ರವರ್ಗ: ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ, ರಮ್ಯಾ ಕೃಷ್ಣ, ಮೈಕ್ ಟೈಸನ್ ಮೊದಲಾದವರು
ನಿರ್ದೇಶನ: ಪುರಿ ಜಗನ್ನಾಥ್
ನಿರ್ಮಾಣ: ಪುರಿ ಜಗನ್ನಾಥ್, ಚಾರ್ಮಿ ಕೌರ್, ಕರಣ್ ಜೋಹರ್
ವಿಜಯ್ ದೇವರಕೊಂಡ ಅವರು ಟಾಲಿವುಡ್ನಲ್ಲಿ ತಮ್ಮದೇ ಹವಾ ಸೃಷ್ಟಿ ಮಾಡಿದ್ದಾರೆ. ನಿರ್ದೇಶಕ ಪುರಿ ಜಗನ್ನಾಥ್ ಅವರು ಟ್ರೆಂಡ್ ಸೆಟರ್. ಇಬ್ಬರ ಕಾಂಬಿನೇಷನ್ನಲ್ಲಿ ‘ಲೈಗರ್’ ಸಿನಿಮಾ ಮೂಡಿ ಬಂದಿದೆ. ಮೈಕ್ ಟೈಸನ್ ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಸಿನಿಮಾ ಹೇಗಿದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಲೈಗರ್ (ವಿಜಯ್ ದೇವರಕೊಂಡ) ಸಾಕಷ್ಟು ಕನಸುಗಳೊಂದಿಗೆ ಕಲಾಸಿಪಾಳ್ಯದಿಂದ ಮುಂಬೈಗೆ ತೆರಳಿರುತ್ತಾನೆ. ಆತನ ಮೈಯಲ್ಲಿ ಹರಿಯುತ್ತಿರುವುದೆಲ್ಲ ಆಕ್ರೋಶ, ರೋಷ ಮಾತ್ರ. ಲೈಗರ್ ಮುಂಬೈಗೆ ಹೋಗಿ ಚಹಾ ಅಂಗಡಿ ನಡೆಸುವುದರ ಹಿಂದೆ ವಿಶ್ವ ಮಟ್ಟದಲ್ಲಿ ನಡೆವ ಮಿಕ್ಸ್ಡ್ ಮಾರ್ಷಲ್ ಆರ್ಟ್ ಚಾಂಪಿಯನ್ಶಿಪ್ ಗೆಲ್ಲಬೇಕು ಎಂಬ ದೊಡ್ಡ ಕನಸಿದೆ. ಆ ಕನಸಿಗೆ ಸಾಕಷ್ಟು ಮಂದಿ ಬೆಂಬಲವಾಗಿ ನಿಲ್ಲುತ್ತಾರೆ. ಈ ಪಯಣದಲ್ಲಿ ಆತನಿಗೆ ತಾನ್ಯಾ (ಅನನ್ಯಾ ಪಾಂಡೆ) ಸಿಗುತ್ತಾಳೆ. ನಂತರ ನಡೆಯುವುದನ್ನು ಎಲ್ಲಾ ಪ್ರೇಕ್ಷಕರು ಸಲೀಸಾಗಿ ಊಹಿಸಬಹುದು.
ವಿಜಯ್ ದೇವರಕೊಂಡ ಅವರು ಈ ಚಿತ್ರಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಬಾಡಿ ಟ್ರಾನ್ಸ್ಫಾರ್ಮೇಷನ್ ಕೂಡ ತೆರೆಯಲ್ಲಿ ಎದ್ದು ಕಾಣುತ್ತದೆ. ಕಟ್ಟು ಮಸ್ತಾದ ಅವರ ಬಾಡಿ ನೋಡಿ ಪ್ರೇಕ್ಷಕರಿಂದ ಸಿಳ್ಳೆ ಬೀಳೋದು ಪಕ್ಕಾ. ವಿಜಯ್ ದೇವರಕೊಂಡ ಅವರು ಸಖತ್ ಮಾಸ್ ಆಗಿ ಮಿಂಚಿದ್ದಾರೆ. ಹಿಂದೆಂದೂ ನೋಡಿರದ ಅವತಾರದಲ್ಲಿ ಪ್ರೇಕ್ಷಕರ ಎದುರು ಅವರು ಪ್ರತ್ಯಕ್ಷರಾಗಿದ್ದಾರೆ. ಸಾಹಸ ದೃಶ್ಯ, ಫೈಟಿಂಗ್ ರಿಂಗ್ನ ಬಡಿದಾಟ ಮಾಸ್ ಪ್ರಿಯರಿಗೆ ಇಷ್ಟವಾಗುತ್ತದೆ. ಲೈಗರ್ ಮಾತನಾಡುವಾಗ ಉಗ್ಗುತ್ತದೆ. ಈ ಕಾರಣಕ್ಕೋ ಏನೋ ನಾಯಕ ಬಾಯಿಗಿಂತ, ಕೈ ಕಾಲನ್ನೇ ಹೆಚ್ಚು ಬಳಸಿದ್ದಾನೆ.
ಪುರಿ ಜಗನ್ನಾಥ್ ಅವರು ಹಲವು ಹಿಟ್ ಚಿತ್ರಗಳು ನೀಡಿದ್ದಾರೆ. ‘ಲೈಗರ್’ ಮೂಲಕವೂ ಅವರು ದೊಡ್ಡ ಮಟ್ಟದ ಯಶಸ್ಸು ಪಡೆಯಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಅವರ ಈ ಮಾಸ್ ಮಸಾಲ ಚಿತ್ರವನ್ನು ಪ್ರೇಕ್ಷಕರು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಅದ್ದೂರಿ ಸಿನಿಮಾ ಮಾಡಬೇಕು ಎಂಬ ಕಾರಣಕ್ಕೋ ಏನೋ ಆರಂಭದಿಂದ ಕೊನೆಯವರೆಗೆ ಫೈಟಿಂಗ್ ಹಾಗೂ ಸಾಂಗ್ಗಳ ಮಿಶ್ರಣವನ್ನು ಅಗತ್ಯಕ್ಕಿಂತ ಕೊಂಚ ಹೆಚ್ಚೇ ಬೆರೆಸಿದ್ದಾರೆ ಪುರಿ ಜಗನ್ನಾಥ್. ಆದರೆ, ಯಾವ ಸಾಂಗ್ಗಳೂ ಕಿವಿಗೆ ಹಿತ ಎನಿಸುವುದಿಲ್ಲ, ಕಣ್ಣಿಗೆ ಮುದ ನೀಡುವುದಿಲ್ಲ.
ಲೈಗರ್ನ ತಾಯಿ ಪಾತ್ರದಲ್ಲಿ ರಮ್ಯಾ ಕೃಷ್ಣ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಅನನ್ಯಾ ಪಾಂಡೆ ಅವರ ನಟನೆ ನೋಡಿದಾಗೆಲ್ಲ ‘50 ರೂಪಾಯ್ ಕಾಟ್ ಓವರ್ ಆ್ಯಕ್ಟಿಂಗ್ ಕಾ’ (ಓವರ್ ಆ್ಯಕ್ಟಿಂಗ್ ಮಾಡಿದ್ದಕ್ಕೆ 50 ರೂ. ಕಟ್ ಮಾಡಿ) ಎಂಬ ಅಕ್ಷಯ್ ಕುಮಾರ್ ಸಿನಿಮಾ ಡೈಲಾಗ್ ನೆನಪಾಗುತ್ತದೆ. ಮೊದಲಾರ್ಧ ಮಾತ್ರ ತೆರೆಮೇಲೆ ಕಾಣಿಸಿಕೊಳ್ಳುವ ಅವರು, ಎರಡನೇ ಪಾರ್ಟ್ನಲ್ಲಿ ಬೆರಳೆಣಿಕೆ ದೃಶ್ಯಕ್ಕೆ ಬಂದು ಹೋಗುತ್ತಾರೆ. ಉಳಿದಂತೆ ರೋಣಿತ್ ರಾಯ್, ವಿಶ್ ಮೊದಲಾದವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಲಿ ತೆರೆಮೇಲೆ ಇದ್ದಷ್ಟು ಹೊತ್ತು ನಗಿಸುತ್ತಾರೆ.
ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್ ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಅವರು ಈ ಚಿತ್ರದಲ್ಲಿ ನಟಿಸದೆ ಇದ್ದರೂ ಅಂತಹ ಬದಲಾವಣೆ ಏನೂ ಆಗುತ್ತಿರಲಿಲ್ಲ. ‘ಲೈಗರ್’ ಸಿನಿಮಾದಲ್ಲಿ ಎಲ್ಲಿಯೂ ತಿರುವುಗಳಿಲ್ಲ. ತಿರುವುಗಳಿದ್ದರೂ ಎಲ್ಲರೂ ಊಹಿಸಬಹುದಾದ ತಿರುವುಗಳೇ. ಅದ್ದೂರಿತನಕ್ಕೆ ಕೊಟ್ಟಷ್ಟೇ ಒತ್ತನ್ನು ನಿರ್ದೇಶಕರು ಕಥೆಗೂ ನೀಡಿದ್ದರೆ ಸಿನಿಮಾ ಮತ್ತಷ್ಟು ಸುಂದರವಾಗಿ ಮೂಡಿ ಬರುತ್ತಿತ್ತು.
Published On - 12:34 pm, Thu, 25 August 22