
ಖ್ಯಾತ ರಿಯಾಲಿಟಿ ಶೋ ‘ಲಾಕ್ ಅಪ್’ ಈಗ ಎರಡನೇ ಸೀಸನ್‌ನೊಂದಿಗೆ ಮರಳಿ ಬರುತ್ತಿದೆ. ಈ ಬಾರಿ ಶೋಗೆ ‘ಲಾಕ್ ಅಪ್: ಸಚ್ ಯಾ ಸಜಾ’ ಎಂದು ಹೆಸರಿಡಲಾಗಿದೆ. ಆದರೆ ಈ ಸೀಸನ್‌ನಲ್ಲಿ ಕೆಲವು ದೊಡ್ಡ ಬದಲಾವಣೆಗಳು ಆಗಿವೆ. ಮೊದಲ ಸೀಸನ್ ನಡೆಸಿಕೊಟ್ಟಿದ್ದ ನಟಿ ಕಂಗನಾ ರಣಾವತ್ ಈ ಬಾರಿ ಶೋನಲ್ಲಿ ಇರುವುದಿಲ್ಲ. ಅವರ ಬದಲಿಗೆ ನಿರ್ದೇಶಕಿ ಫರಾ ಖಾನ್ ಮತ್ತು ನಟ ರಿತೇಶ್ ದೇಶ್‌ಮುಖ್ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ. ಕಂಗನಾ ರಣಾವತ್ ಶೋನಿಂದ ಹೊರಗುಳಿಯಲು ಅಸಲಿ ಕಾರಣ ಏನೆಂಬುದನ್ನು ನಿರ್ಮಾಪಕಿ ಏಕ್ತಾ ಕಪೂರ್ ಬಿಚ್ಚಿಟ್ಟಿದ್ದಾರೆ. ಮುಂಬೈನಲ್ಲಿ ನಡೆದ ಶೋ ಲಾಂಚ್ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
‘ಈ ಬಾರಿ ಶೋನ ಸಂಪೂರ್ಣ ಫಾರ್ಮ್ಯಾಟ್ ಬದಲಾಗಿದೆ. ನಮ್ಮ ಆಲೋಚನೆ ಮತ್ತು ಜೈಲರ್-ಜಡ್ಜ್ ಕಾನ್ಸೆಪ್ಟ್ ಎಲ್ಲವೂ ಹೊಸದಾಗಿದೆ. ಹಳೆಯ ಶೋನ ಯಾವುದೇ ಅಂಶವನ್ನು ನಾವು ಉಳಿಸಿಕೊಂಡಿಲ್ಲ. ಜೈಲರ್ ಆಗಲಿ ಅಥವಾ ನಿರೂಪಕರಾಗಲಿ ಯಾರೂ ಹಳಬರಿಲ್ಲ. ಶೋಗೆ ಹೊಸ ರೂಪ ನೀಡಲು ಈ ಬದಲಾವಣೆ ಅಗತ್ಯವಾಗಿತ್ತು. ಇದನ್ನು ಕಂಗನಾ ಕೂಡ ಅರ್ಥ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದು ಏಕ್ತಾ ಕಪೂರ್ ಹೇಳಿದ್ದಾರೆ. ಈಗ ಕಂಗನಾ ಅವರು ಸಂಸದೆ. ಈ ಕಾರಣದಿಂದಲೂ ಅವರು ಶೋ ಮಾಡಲು ಹಿಂದೇಟು ಹಾಕಿರಬಹುದು.
‘ಲಾಕ್ ಅಪ್’ ರಿಯಾಲಿಟಿ ಶೋನ ಮೊದಲ ಸೀಸನ್ 2022 ರಲ್ಲಿ ALTBalaji ಮತ್ತು MX Player ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರ ಕಂಡಿತ್ತು. ಈ ಬಾರಿ ‘ಲಾಕ್ ಅಪ್ 2’ ಓಟಿಟಿ ದೈತ್ಯ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ‘ಲಾಕ್ ಅಪ್ ನನಗೆ ತುಂಬಾ ವಿಶೇಷವಾದ ಶೋ. ಇದು ಕೇವಲ ರಿಯಾಲಿಟಿ ಶೋ ಅಲ್ಲ. ಇದೊಂದು ಸಾಮಾಜಿಕ ಪ್ರಯೋಗ. ನೆಟ್‌ಫ್ಲಿಕ್ಸ್ ಮೂಲಕ ಈ ಶೋ ಅನ್ನು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ’ ಎಂದು ಏಕ್ತಾ ಕಪೂರ್ ಸಂತಸ ಹಂಚಿಕೊಂಡಿದ್ದಾರೆ.
ಈ ಹೊಸ ಸೀಸನ್‌ನಲ್ಲಿ ಒಟ್ಟು 14 ಜನ ಪ್ರಸಿದ್ಧ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ. ಇವರನ್ನು ಆರು ವಾರಗಳ ಕಾಲ ಜೈಲಿನಂತಹ ವಾತಾವರಣದಲ್ಲಿ ಲಾಕ್ ಮಾಡಲಾಗುತ್ತದೆ. ಹೊರಗಿನ ಪ್ರಪಂಚದ ಸಂಪರ್ಕವಿಲ್ಲದೆ ಅವರು ಕಠಿಣ ಟಾಸ್ಕ್ ಮತ್ತು ಶಿಕ್ಷೆಗಳನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ: ಲಾಕ್ಅಪ್ ಶೋ ಗೆದ್ದ ಮುನಾವರ್ ಫರೂಖಿ; ವಿನ್ನರ್ಗೆ ಸಿಕ್ಕ ಹಣ ಎಷ್ಟು, ಸವಲತ್ತುಗಳೇನು?
ಬಾಲಾಜಿ ಟೆಲಿಫಿಲ್ಮ್ಸ್ ಮತ್ತು ಕೊಲೊಸಿಯಮ್ ಸಂಸ್ಥೆಗಳು ಜಂಟಿಯಾಗಿ ಈ ಶೋ ನಿರ್ಮಿಸುತ್ತಿವೆ. ಜೂನ್ 27 ರಿಂದ ಈ ಶೋ ಕೇವಲ ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರ ಸ್ಟ್ರೀಮ್ ಆಗಲಿದೆ. ಪ್ರತಿ ಶನಿವಾರದಿಂದ ಬುಧವಾರದವರೆಗೆ ರಾತ್ರಿ 8 ಗಂಟೆಗೆ ಶೋ ಪ್ರಸಾರವಾಗಲಿದೆ. ಹೊಸ ರೂಪದಲ್ಲಿ ಬರುತ್ತಿರುವ ಈ ಶೋ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.