ಧಮ್ ಇದ್ರೆ ನನ್ನ ಬ್ಯಾನ್ ಮಾಡಿ: ಮಾಧ್ಯಮಗಳಿಗೆ ಸವಾಲು ಹಾಕಿದ ನಿರ್ಮಾಪಕ

|

Updated on: Apr 01, 2025 | 4:22 PM

ನಿರ್ಮಾಪಕ ನಾಗವಂಶಿ ಅವರು ಗರಂ ಆಗಿದ್ದಾರೆ. ಧಮ್ ಇದ್ದರೆ ತಮ್ಮ ಸಿನಿಮಾಗಳನ್ನು ಬ್ಯಾನ್ ಮಾಡಿ ಎಂದು ಅವರು ಸುದ್ದಿಗೋಷ್ಠಿಯಲ್ಲೇ ಸವಾಲು ಹಾಕಿದ್ದಾರೆ. ತಾವು ನಿರ್ಮಾಣ ಮಾಡಿದ ‘ಮ್ಯಾಡ್ ಸ್ಕ್ವೇರ್’ ಸಿನಿಮಾಗೆ ನೆಗೆಟಿವ್ ವಿಮರ್ಶೆ ಸಿಕ್ಕಿದ್ದಕ್ಕೆ ನಾಗವಂಶಿ ಅವರು ಈ ಪರಿ ಸಿಟ್ಟಾಗಿದ್ದಾರೆ.

ಧಮ್ ಇದ್ರೆ ನನ್ನ ಬ್ಯಾನ್ ಮಾಡಿ: ಮಾಧ್ಯಮಗಳಿಗೆ ಸವಾಲು ಹಾಕಿದ ನಿರ್ಮಾಪಕ
Naga Vamsi
Follow us on

ಟಾಲಿವುಡ್​ನ (Tollywood) ಖ್ಯಾತ ನಿರ್ಮಾಪಕ ನಾಗವಂಶಿ ಅವರು ಕೋಪಗೊಂಡಿದ್ದಾರೆ. ಅವರು ನಿರ್ಮಾಣ ಮಾಡಿರುವ ‘ಮ್ಯಾಡ್ ಸ್ಕ್ವೇರ್’ (Mad Square) ಸಿನಿಮಾ ಬಿಡುಗಡೆ ಆದ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡುವಾಗಿ ನಾಗವಂಶಿ ಅವರು ಗರಂ ಆಗಿದ್ದಾರೆ. ‘ಮ್ಯಾಡ್ ಸ್ಕ್ವೇರ್’ ಚಿತ್ರಕ್ಕೆ ಕೆಲವು ಮಾಧ್ಯಮಗಳು ನೀಡಿರುವ ವಿಮರ್ಶೆಯನ್ನು ನಾಗವಂಶಿ ಇಷ್ಟಪಟ್ಟಿಲ್ಲ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕ ಕಾರಣದಿಂದ ಅವರು ಸಿಟ್ಟಾಗಿದ್ದಾರೆ. ‘ನಿಮಗೆ ತಾಕತ್ತಿದ್ದರೆ ನನ್ನನ್ನು ಬ್ಯಾನ್ ಮಾಡಿ’ ಎಂದು ನಾಗವಂಶಿ (Naga Vamsi) ಅವರು ಮಾಧ್ಯಮಗಳಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.

‘ಮ್ಯಾಡ್ ಸ್ಕ್ವೇರ್’ ಸಿನಿಮಾ ಮಾರ್ಚ್ 28ರಂದು ಬಿಡುಗಡೆ ಆಯಿತು. ಪ್ರೀಕ್ವೆಲ್​ಗೆ ಹೋಲಿಸಿದರೆ ಸೀಕ್ವೆಲ್ ಚೆನ್ನಾಗಿಲ್ಲ ಎಂಬ ಅಭಿಪ್ರಾಯ ಕೇಳಿಬಂತು. ಅಲ್ಲದೇ ಸಿನಿಮಾದ ಬಾಕ್ಸ್ ಆಫೀಸ್​ ನಂಬರ್​ ಬಗ್ಗೆಯೂ ಅನೇಕರು ಅನುಮಾನ ವ್ಯಕ್ತಪಡಿಸಿದರು. ಸಿನಿಮಾಗೆ ಉತ್ತಮ ಕಲೆಕ್ಷನ್ ಆಗದೇ ಇದ್ದರೂ ಕೂಡ ನಿರ್ಮಾಪಕರು ಸುಳ್ಳು ಲೆಕ್ಕ ನೀಡುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದವು. ಇದರಿಂದ ನಿರ್ಮಾಪಕ ನಾಗವಂಶಿ ಅವರಿಗೆ ಕೋಪ ಬಂದಿದೆ.

ಸುದ್ದಿಗೋಷ್ಠಿಯಲ್ಲಿ ನಾಗವಂಶಿ ಅವರು ಕೂಗಾಡಿದ್ದಾರೆ. ‘ನೀವು ನನ್ನನ್ನು ಅಷ್ಟು ದ್ವೇಷಿಸುತ್ತೀರಿ ಎಂಬುದಾದರೆ ನನ್ನ ಸಿನಿಮಾಗಳನ್ನು ಬ್ಯಾನ್ ಮಾಡಿ. ನನ್ನ ಸಿನಿಮಾಗಳ ಬಗ್ಗೆ ಬರೆಯಬೇಡಿ. ನನ್ನಿಂದ ಜಾಹೀರಾತುಗಳನ್ನು ಪಡೆಯಬೇಡಿ. ನಿಮ್ಮ ಬೆಂಬಲ ಇಲ್​ಲದೇ ನನ್ನ ಸಿನಿಮಾವನ್ನು ಹೇಗೆ ಪ್ರಚಾರ ಮಾಡುತ್ತೇನೆ ಎಂಬುದನ್ನು ನಿಮಗೆ ನಾನು ತೋರಿಸುತ್ತೇನೆ. ಪ್ರಚಾರದ ತಲೆನೋವು ನನಗೇ ಇರಲಿ’ ಎಂದು ನಾಗವಂಶಿ ಅವರು ಹೇಳಿದ್ದಾರೆ.

ಇದನ್ನೂ ಓದಿ
ಚಿರಂಜೀವಿ ಜೊತೆ ನಟಿಸಲಿದ್ದಾರೆ 90ರ ದಶಕದ ಸ್ಟಾರ್ ಬಾಲಿವುಡ್ ನಟಿ
ಹೆಣ್ಣು ಮಕ್ಕಳ ಬಗ್ಗೆ ಚಿರಂಜೀವಿ ಹೇಳಿಕೆಗೆ ತೀವ್ರ ಆಕ್ರೋಶ
ಖ್ಯಾತ ನಿರ್ದೇಶಕನ ಕಚೇರಿಯಲ್ಲಿ ದೊಡ್ಡದಾಗಿ ಹಾಕಲಾಗಿದೆ ಚಿರಂಜೀವಿ ಫೋಟೋ
ಊಟಿಯಲ್ಲಿ 6 ಎಕರೆ ಖರೀದಿಸಿದ ಚಿರಂಜೀವಿ; ಬೆಲೆ ಎಷ್ಟು?

‘ತಮಗೆ ಏನು ಇಷ್ಟ, ಏನು ಇಷ್ಟ ಇಲ್ಲ ಎಂಬುದು ಜನರಿಗೆ ತಿಳಿದಿಲ್ಲವಾ? ವಿಮರ್ಶಕರಿಗೆ ಎಲ್ಲ ಗೊತ್ತಾ? ಚಿತ್ರರಂಗದಲ್ಲಿ ಒಟ್ಟಿಗೆ ಬದುಕುವುದನ್ನು ನಾವು ಕಲಿಯಬೇಕು. ನಾವು ಸಂದರ್ಶನ ನೀಡಿ, ಕಂಟೆಂಟ್ ಕೊಟ್ಟರೆ ಮಾತ್ರ ನಿಮ್ಮ ವೆಬ್​ಸೈಟ್ ಹಾಗೂ ಯೂಟ್ಯೂಬ್ ಚಾನಲ್ ನಡೆಯುವುದು. ನಿಮಗೆ ನಾವು ಜಾಹೀರಾತು ಕೂಡ ನೀಡುತ್ತೇವೆ. ಹಾಗಾಗಿ ಚಿತ್ರರಂಗವನ್ನು ಸಾಯಿಸಬೇಡಿ. ಯಾಕೆಂದರೆ ನೀವು ಬದುಕುತ್ತಿರುವುದು ಕೂಡ ಚಿತ್ರರಂಗದಿಂದ’ ಎಂದಿದ್ದಾರೆ ನಾಗವಂಶಿ.

ಇದನ್ನೂ ಓದಿ: ಮೋಹನ್​ಲಾಲ್ ನಟನೆಯ ‘ಎಲ್2:ಎಂಪುರಾನ್’ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ

ಪ್ರೇಕ್ಷಕರು ವಿಮರ್ಶೆಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಕೂಡ ನಾಗವಂಶಿ ಹೇಳಿದ್ದಾರೆ. ‘ವಿಮರ್ಶೆ ಎಂಬುದು ವೈಯಕ್ತಿಕ ಅಭಿಪ್ರಾಯ. ಬಹುಮತವನ್ನು ಪರಿಗಣಿಸುವ ಚುನಾವಣೆ ಫಲಿತಾಂಶದ ರೀತಿ ಅಲ್ಲ. ಮನೆಯಲ್ಲಿ ಹೆಂಡತಿ ಜೊತೆ ಜಗಳ ಮಾಡಿಕೊಂಡು ಬಂದು ಸಿನಿಮಾ ನೋಡಿದವನು ಕೆಟ್ಟ ವಿಮರ್ಶೆ ಬರೆದರೆ ಅಚ್ಚರಿ ಏನಿಲ್ಲ. ಹಾಗಾಗಿ ವಿಮರ್ಶೆಗಳನ್ನು ನಂಬಬೇಡಿ’ ಎಂದು ನಾಗವಂಶಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.