ಮತ್ತೆ ಬರಲಿದೆ ‘ಮಹಾರಾಜ’ ಈ ಬಾರಿ ಕತೆ ಬೇರೆ, ಪಾತ್ರಗಳೂ ಬೇರೆ

Maharaja Tamil movie: ವಿಜಯ್ ಸೇತುಪತಿ, ಅನುರಾಗ್ ಕಶ್ಯಪ್ ನಟಿಸಿದ್ದ ‘ಮಹಾರಾಜ’ ಸಿನಿಮಾ ಕಳೆದ ವರ್ಷ ಅತ್ಯುತ್ತಮ ಸಿನಿಮಾ ಆಗಿ ಹೊರಹೊಮ್ಮಿತ್ತು. ಇದೀಗ ಮತ್ತೊಮ್ಮೆ ವಿಜಯ್ ಸೇತುಪತಿ, ನಿತಿಲನ್ ಸ್ವಾಮಿನಾಥನ್ ಜೊತೆ ಕೈ ಜೋಡಿಸುತ್ತಿದ್ದು ‘ಮಹಾರಾಜ 2’ ಸಿನಿಮಾ ಕುರಿತು ಕೆಲಸ ಆರಂಭವಾಗಿದೆ. ಈ ಬಾರಿ ಕತೆ ಹಾಗೂ ಪಾತ್ರಗಳು ಭಿನ್ನವಾಗಿರಲಿವೆ.

ಮತ್ತೆ ಬರಲಿದೆ ‘ಮಹಾರಾಜ’ ಈ ಬಾರಿ ಕತೆ ಬೇರೆ, ಪಾತ್ರಗಳೂ ಬೇರೆ
Maharaja

Updated on: May 08, 2025 | 10:39 AM

ವಿಜಯ್ ಸೇತುಪತಿ (Vijay Sethupathi), ಅನುರಾಗ್ ಕಶ್ಯಪ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ‘ಮಹಾರಾಜ’ ಸಿನಿಮಾ ಕಳೆದ ವರ್ಷದ ಅತ್ಯುತ್ತಮ ಸಿನಿಮಾ ಎನಿಸಿಕೊಂಡಿದೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ. ಸರಳವಾದ ಕತೆಯನ್ನು ಅದ್ಭುತವಾದ ನಿರೂಪಣೆ ಮೂಲಕ ನಿರ್ದೇಶಕ ನಿತಿಲನ್ ಸಾಮಿನಾಥನ್ ಕಟ್ಟಿಕೊಟ್ಟಿದ್ದರು. ಕಳೆದು ಹೋದ ಕಸದ ಡಬ್ಬಿಯನ್ನು ಹುಡುಕುವ ನಾಯಕನ ಕತೆ ಪ್ರೇಕ್ಷಕರನ್ನು ಅಲ್ಲಾಡಿಸಿಬಿಟ್ಟಿತ್ತು. ಸಿನಿಮಾಕ್ಕೆ ಭಾರತದಲ್ಲಿ ಮಾತ್ರವಲ್ಲ ದುಬೈ, ಜಪಾನ್, ಅಮೆರಿಕ ಇನ್ನೂ ಹಲವು ಕಡೆ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ‘ಮಹಾರಾಜ 2’ ಬರಲು ಸಜ್ಜಾಗಿದೆ.

ನಿತಿಲನ್ ಸ್ವಾಮಿನಾಥನ್ ಅವರು ‘ಮಹಾರಾಜ 2’ ಸಿನಿಮಾ ನಿರ್ದೇಶಿಸುವ ನಿರ್ಧಾರ ಮಾಡಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ‘ಬಾಹುಬಲಿ 2’ ಸಿನಿಮಾದ ಹೊರತಾಗಿ ಮೊದಲ ಭಾಗಕ್ಕಿಂತಲೂ ಉತ್ತಮವಾಗಿ ಮೂಡಿಬಂದ ಸಿನಿಮಾಗಳು ಭಾರತದಲ್ಲಿ ಕಡಿಮೆ. ‘ಕೆಜಿಎಫ್ 2’, ‘ಪುಷ್ಪ 2’ ಸಿನಿಮಾಗಳು ಮೊದಲ ಭಾಗಕ್ಕಿಂತಲೂ ಹೆಚ್ಚಿಗೆ ಹಣ ಗಳಿಸಿರಬಹುದು ಆದರೆ ಮೊದಲ ಭಾಗಕ್ಕಿಂತಲೂ ಒಳ್ಳೆಯ ಸಿನಿಮಾ ಎನಿಸಿಕೊಂಡಿಲ್ಲ. ಈಗ ‘ಮಹಾರಾಜ’ ಸಿನಿಮಾದ ಮೊದಲ ಭಾಗ ಭಾರಿ ದೊಡ್ಡ ಹಿಟ್ ಆಗಿದ್ದು, ಪ್ರೇಕ್ಷಕರ ನಿರೀಕ್ಷೆಯನ್ನು ಆಕಾಶಕ್ಕೆ ಕೊಂಡೊಯ್ದಿದೆ. ಹೀಗಿರುವಾಗ ‘ಮಹಾರಾಜ 2’ ಸಿನಿಮಾ ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಮೂಡಿ ಬರಲಿದೆಯೇ ಎಂಬುದು ಅನುಮಾನ.

ಇದನ್ನೂ ಓದಿ:‘ಡಾಕು ಮಹಾರಾಜ್’ ಸಿನಿಮಾದಿಂದ ರಕುಲ್ ಪ್ರೀತ್ ದೃಶ್ಯಗಳು ಕಟ್?

‘ಮಹಾರಾಜ 2’ ಸಿನಿಮಾವನ್ನು ನಿತಿಲನ್ ಸ್ವಾಮಿನಾಥನ್ ಅವರೇ ನಿರ್ದೇಶನ ಮಾಡಲಿದ್ದು, ಮೊದಲ ಸಿನಿಮಾ ನಿರ್ಮಾಣ ಮಾಡಿದ್ದ ಸುಧನ್ ಸುಂದರಮ್, ಜಗದೀಶ್ ಪಳನಿಸ್ವಾಮಿ ಹಾಗೂ ವಿಜಯ್ ಸೇತುಪತಿ ಅವರುಗಳೇ ನಿರ್ಮಾಣ ಮಾಡಲಿದ್ದಾರೆ. ವಿಜಯ್ ಸೇತುಪತಿ ಈ ಸಿನಿಮಾದ ನಾಯಕ ಪಾತ್ರದಲ್ಲಿ ನಟಿಸಲಿದ್ದಾರೆ. ಆದರೆ ಇತರೆ ಪಾತ್ರಗಳು ಬದಲಾಗಲಿವೆ. ಸಿನಿಮಾದ ಕತೆಯೂ ಸಹ ಬದಲಾಗಲಿದೆ. ಮೊದಲ ಭಾಗದ ಕತೆಗೂ ಎರಡನೇ ಭಾಗದ ಕತೆಗೂ ಯಾವುದೇ ಸಂಬಂಧ ಇರುವುದಿಲ್ಲ ಎನ್ನಲಾಗುತ್ತಿದೆ.

‘ಮಹಾರಾಜ 2’ ಸಿನಿಮಾ ಚೀನಾನಲ್ಲಿ ‘ಬಾಹುಬಲಿ 2’ ಸಿನಿಮಾದ ದಾಖಲೆಯನ್ನೇ ಮುರಿದು ಹಾಕಿತ್ತು. ಜಪಾನ್​ನಲ್ಲೂ ಸಹ ತಮಿಳಿನ ಇನ್ಯಾವ ಸಿನಿಮಾವೂ ಗಳಿಸದಷ್ಟು ದೊಡ್ಡ ಮೊತ್ತವನ್ನು ಗಳಿಸಿತ್ತು ಈ ಸಿನಿಮಾ. ಸುಮಾರು 15 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾದ ‘ಮಹಾರಾಜ’ ಸಿನಿಮಾ 300 ಕೋಟಿಗೂ ಹೆಚ್ಚು ಮೊತ್ತವನ್ನು ಬಾಕ್ಸ್ ಆಫೀಸ್​ನಲ್ಲಿ ಗಳಿಸಿತು. ‘ಮಹಾರಾಜ 2’ ಸಿನಿಮಾನಲ್ಲಿ ವಿಜಯ್ ಸೇತುಪತಿ ಎದುರು ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್ ಇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ