‘ಪ್ರಶಾಂತ್ ನೀಲ್ ಅವಕಾಶ ಕೊಡಲಿಲ್ಲ, ಆದರೆ ಅದೃಷ್ಟ ಕೈ ಹಿಡಿಯಿತು’

Malavika Mohanan: ಈ ಹಿಂದೆ ಕನ್ನಡದ ‘ನಾನು ಮತ್ತು ವರಲಕ್ಷ್ಮಿ’ ಸಿನಿಮಾನಲ್ಲಿ ನಟಿಸಿರುವ ಮಾಳವಿಕಾ ಮೋಹನನ್, ಆ ನಂತರ ತಮ್ಮ ಪ್ರತಿಭೆಯಿಂದ ಕೆಲ ದೊಡ್ಡ ಸಿನಿಮಾಗಳ ಭಾಗವಾಗಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು 13 ವರ್ಷಗಳ ಬಳಿಕ ಇದೀಗ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಮಾಳವಿಕಾ ಮೋಹನನ್. ಪ್ರಶಾಂತ್ ನೀಲ್ ಸಿನಿಮಾನಲ್ಲಿ ನಟಿಸಬೇಕಿದ್ದ ನಟಿಗೆ ಅದೃಷ್ಟ ಕೈಕೊಟ್ಟಿತಾದರೂ ಬಳಿಕ ಅದೃಷ್ಟ ಕೈಹಿಡಿದಿದೆ.

‘ಪ್ರಶಾಂತ್ ನೀಲ್ ಅವಕಾಶ ಕೊಡಲಿಲ್ಲ, ಆದರೆ ಅದೃಷ್ಟ ಕೈ ಹಿಡಿಯಿತು’
Malavika Mohanan

Updated on: Jan 02, 2026 | 4:02 PM

ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಉತ್ತಮ ನಟಿಯರಿದ್ದಾರೆ. ಬಾಲಿವುಡ್​ನಲ್ಲಿ (Bollywood) ಈಗ ಜನಪ್ರಿಯವಾಗಿರುವ ಕೆಲ ಯುವ ಮತ್ತು ‘ಸ್ಟಾರ್’ ನಟಿಯರಿಗೆ ಹೋಲಿಸಿದರೆ ದಕ್ಷಿಣ ಭಾರತದ ನಟಿಯರು ಬಹಳ ಪ್ರತಿಭಾವಂತರು, ನಟನೆ ಬಲ್ಲವರು ಸಹ. ಬಾಲಿವುಡ್ ನಟಿಯರಂತೆ ಗ್ಲಾಮರ್ ಮತ್ತು ಜೀರೋ ಸೈಜ್, ಬಿಕಿನಿ ದೇಹ ಇಲ್ಲದಿದ್ದರೂ ಪ್ರತಿಭೆಗಂತೂ ಕೊರತೆ ಇಲ್ಲ. ಅಂಥಹಾ ನಟಿಯರಲ್ಲಿ ಮಾಳವಿಕಾ ಮೋಹನನ್ ಸಹ ಒಬ್ಬರು. ಈ ಹಿಂದೆ ಕನ್ನಡದ ‘ನಾನು ಮತ್ತು ವರಲಕ್ಷ್ಮಿ’ ಸಿನಿಮಾನಲ್ಲಿ ನಟಿಸಿರುವ ಮಾಳವಿಕಾ ಮೋಹನನ್, ಆ ನಂತರ ತಮ್ಮ ಪ್ರತಿಭೆಯಿಂದ ಕೆಲ ದೊಡ್ಡ ಸಿನಿಮಾಗಳ ಭಾಗವಾಗಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು 13 ವರ್ಷಗಳ ಬಳಿಕ ಇದೀಗ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಮಾಳವಿಕಾ ಮೋಹನನ್.

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾನಲ್ಲಿ ಮಾಳವಿಕಾ ಮೋಹನನ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಮೂವರು ನಾಯಕಿಯರಿದ್ದು, ಅವರಲ್ಲಿ ಭೈರವಿ ಪಾತ್ರದಲ್ಲಿ ಮಾಳವಿಕಾ ನಟಿಸಿದ್ದಾರೆ. ಇದು ಅವರ ಮೊಟ್ಟ ಮೊದಲ ತೆಲುಗು ಸಿನಿಮಾ. ಅಂದಹಾಗೆ ಅವರು ಈ ಹಿಂದೆ ಪ್ರಭಾಸ್ ಸಿನಿಮಾ ಮೂಲಕವೇ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಸ್ವತಃ ಕರೆ ಮಾಡಿ ಆಫರ್ ಮಾಡಿದ್ದರಂತೆ. ಆದರೆ ಅದು ಕೈಗೂಡಿರಲಿಲ್ಲ. ಈ ಬಗ್ಗೆ ಸ್ವತಃ ಮಾಳವಿಕಾ ಮೋಹನನ್ ಮಾತನಾಡಿದ್ದಾರೆ.

‘ದಿ ರಾಜಾ ಸಾಬ್’ ಸಿನಿಮಾದ ಪ್ರಚಾರಾರ್ಥ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಾಳವಿಕಾ ಮೋಹನನ್, ‘ತಮಿಳಿನ ‘ಮಾಸ್ಟರ್’ ಸಿನಿಮಾದ ಬಳಿಕ ನನಗೆ ಪ್ರಶಾಂತ್ ನೀಲ್ ಅವರ ಕಡೆಯಿಂದ ಕರೆ ಬಂತು. ಪ್ರಭಾಸ್ ಅವರ ‘ಸಲಾರ್’ ಸಿನಿಮಾದ ನಾಯಕಿ ಪಾತ್ರಕ್ಕೆ ನನ್ನನ್ನು ಕೇಳಲಾಯ್ತು. ನಾನು ಅವರನ್ನು ಭೇಟಿ ಆದೆ. ಅವರೇ ಖುದ್ದಾಗಿ ನನ್ನ ಕೆಲವು ಚಿತ್ರಗಳನ್ನು ತೆಗೆದುಕೊಂಡರು. ನಾನು ಮಾಡರ್ನ್ ಬಟ್ಟೆಯಲ್ಲಿ ಹೇಗೆ ಕಾಣುತ್ತೀನಿ, ಭಾರತೀಯ ಉಡುಪಿನಲ್ಲಿ ಹೇಗೆ ಕಾಣುತ್ತೀನಿ ಎಂದೆಲ್ಲ ನೋಡಿದರು. ಆದರೆ ಆ ಸಿನಿಮಾಕ್ಕೆ ಬೇರೆ ನಟಿಯನ್ನು (ಶ್ರುತಿ ಹಾಸನ್) ಅವರನ್ನು ಆಯ್ಕೆ ಮಾಡಿದರು. ಆಗ ನನಗೆ ಬಹಳ ಬೇಸರ ಆಗಿತ್ತು’ ಎಂದಿದ್ದಾರೆ ಮಾಳವಿಕಾ.

ಇದನ್ನೂ ಓದಿ:ಪ್ರಭಾಸ್ ಸಿನಿಮಾ ನಿರ್ದೇಶಕನ ಸಂಭಾವನೆ ಎಷ್ಟು ಕೋಟಿ ಗೊತ್ತೆ?

‘ಮೊದಲ ತೆಲುಗು ಸಿನಿಮಾ ಪ್ರಭಾಸ್ ಜೊತೆಗೆ ನಟಿಸಬೇಕು ಎಂದಾಗ ಸಹಜವಾಗಿಯೇ ನನಗೆ ಖುಷಿ ಆಗಿತ್ತು. ಆದರೆ ಪಾತ್ರ ಕೈತಪ್ಪಿದಾಗ ನನಗೆ ಬೇಸರವೂ ಆಗಿತ್ತು. ಆದರೆ ಅದಾದ ಐದಾರು ತಿಂಗಳಲ್ಲೇ ನನಗೆ ಮತ್ತೆ ಕರೆ ಬಂದು, ಪ್ರಭಾಸ್ ಸಿನಿಮಾನಲ್ಲಿ ನಟಿಸಬೇಕು ಎಂದರು. ಆದರೆ ನಾನು ಅವರು ‘ಸಲಾರ್’ಗಾಗಿಯೇ ಕೇಳುತ್ತಿದ್ದಾರೆ ಎಂದುಕೊಂಡು, ಇಲ್ಲ ಬೇರೆ ನಟಿಯ ಆಯ್ಕೆ ಆಗಿರಬೇಕು ನೋಡಿ ಎಂದೆ. ಆದರೆ ಅವರು ಇಲ್ಲ ಇದು ಬೇರೆ ಸಿನಿಮಾಕ್ಕಾಗಿ ಕೇಳುತ್ತಿದ್ದೇವೆ ಎಂದಾಗ ನಾನು ಖುಷಿಯಿಂದ ಒಪ್ಪಿಕೊಂಡೆ’ ಎಂದಿದ್ದಾರೆ ಮಾಳವಿಕಾ.

‘ದಿ ರಾಜಾ ಸಾಬ್’ ಸಿನಿಮಾನಲ್ಲಿ ಭೈರವಿ ಪಾತ್ರದಲ್ಲಿ ನಟಿಸಿದ್ದೇನೆ. ಇದು ಬಹಳ ಭಿನ್ನವಾದ ಪಾತ್ರ. ಹಾಸ್ಯ, ರೊಮಾಂಟಿಕ್, ಆಕ್ಷನ್, ಸೆಂಟಿಮೆಂಟ್ ಎಲ್ಲ ರೀತಿಯ ದೃಶ್ಯಗಳಲ್ಲಿಯೂ ನಾನು ನಟಿಸಿದ್ದೇನೆ. ನನ್ನ ಮಟ್ಟಿಗೆ ಇದು ಸಂಪೂರ್ಣ ಪ್ಯಾಕೇಜ್ ಆಗಿದೆ. ನಿರ್ದೇಶಕ ಮಾರುತಿ ಅವರೇ ಹೇಳಿರುವಂತೆ, ಈ ಸಿನಿಮಾನಲ್ಲಿ ನನ್ನ ಎಲ್ಲ ವರ್ಷನ್ ಅನ್ನೂ ತೋರಿಸಿದ್ದಾರೆ. ಸಿನಿಮಾ ಗೆಲ್ಲುವ ವಿಶ್ವಾಸವಿದೆ. ಪ್ರಭಾಸ್ ಜೊತೆ ನಟಿಸಿದ ಖುಷಿಯೂ ಇದೆ’ ಎಂದಿದ್ದಾರೆ ಮಾಳವಿಕಾ.

ಮಾಳವಿಕಾ ಮೋಹನನ್ ದಕ್ಷಿಣದ ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ್ದಾರೆ. ರಜನೀಕಾಂತ್ ಜೊತೆ ‘ಪೆಟ್ಟ’, ವಿಜಯ್ ಜೊತೆಗೆ ‘ಮಾಸ್ಟರ್’, ಮಮ್ಮುಟಿ ಜೊತೆಗೆ ‘ದಿ ಗ್ರೇಟ್ ಫಾದರ್’ ಮೋಹನ್​​ಲಾಲ್ ಜೊತೆಗೆ ‘ಹೃದಯಪೂರ್ವಂ’, ಧನುಶ್ ಜೊತೆಗೆ ‘ಮಾರನ್’ ಇನ್ನೂ ಕೆಲವಾರು ದೊಡ್ಡ ಸಿನಿಮಾಗಳಲ್ಲಿ ಮಾಳವಿಕಾ ನಟಿಸಿದ್ದು, ‘ದಿ ರಾಜಾ ಸಾಬ್’ ಅವರ ಮೊದಲ ತೆಲುಗು ಸಿನಿಮಾ ಆಗಿದೆ. ಜನವರಿ 9 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ