AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ; ಮಾಡಿದ ಸಾಧನೆಯ ಪಟ್ಟಿ ದೊಡ್ಡದಿದೆ

ಖ್ಯಾತ ಮಲಯಾಳಂ ನಟ, ನಿರ್ದೇಶಕ ಶ್ರೀನಿವಾಸನ್ 69ನೇ ವಯಸ್ಸಿಗೆ ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ನಟ, ಬರಹಗಾರ, ನಿರ್ದೇಶಕರಾಗಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಅವರ ನಿಧನ ಮಲಯಾಳಂ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ಅವರ ಸಾಧನೆ ಸದಾ ಸ್ಮರಣೀಯ.

ಖ್ಯಾತ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ; ಮಾಡಿದ ಸಾಧನೆಯ ಪಟ್ಟಿ ದೊಡ್ಡದಿದೆ
ಶ್ರೀನಿವಾಸನ್
ರಾಜೇಶ್ ದುಗ್ಗುಮನೆ
|

Updated on:Dec 20, 2025 | 11:06 AM

Share

ಖ್ಯಾತ ಮಲಯಾಳಂ ನಟ, ನಿರ್ದೇಶಕ ಶ್ರೀನಿವಾಸನ್ ಇಂದು (ಡಿಸೆಂಬರ್ 20) ನಿಧನ ಹೊಂದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ಅವರು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಕೇರಳದ ಉದಯಂಪೆರೂರ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿದ್ದಾರೆ.

ಶ್ರೀನಿವಾಸನ್ ಅವರಿಗೆ ಕೆಲವು ಅನಾರೋಗ್ಯ ಸಮಸ್ಯೆಗಳು ಇದ್ದವು. ಕಳೆದ ಕೆಲ ವರ್ಷಗಳಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ, ಸಿನಿಮಾ ರಂಗದಲ್ಲಿ ಅವರು ಅಷ್ಟಾಗಿ ಆ್ಯಕ್ಟೀವ್ ಆಗಿರಲಿಲ್ಲ. ಇತ್ತೀಚೆಗೆ ಅವರನ್ನು ಆಸ್ಪತ್ರೆಗೂ ದಾಖಲು ಮಾಡಲಾಗಿತ್ತು. ಆದರೆ, ಅವರನ್ನು ಬದುಕಿಸಿಕೊಳ್ಳಲು ವೈದ್ಯರ ಬಳಿ ಸಾಧ್ಯವಾಗಿಲ್ಲ.

ನಟನಾಗಿ, ಸಿನಿಮಾ ಬರಹಗಾರನಾಗಿ, ನಿರ್ದೇಶಕನಾಗಿ ಅವರು ಗುರುತಿಸಿಕೊಂಡಿದ್ದರು. ಅವರ ನಿಧನವು ಮಲಯಾಳಂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಾವಿಗೆ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ. ಮಲಯಾಳಂ ಚಿತ್ರರಂಗದ ಸ್ಟಾರ್ ಹೀರೋಗಳ ಜೊತೆ ಅವರಿಗೆ ಒಳ್ಳೆಯ ಒಡನಾಟ ಇತ್ತು. ಕೇರಳದ ಕಣ್ಣೂರ್ ಜಿಲ್ಲೆಯಲ್ಲಿ 1956ರ ಏಪ್ರಿಲ್ 6ರಂದು ಶ್ರೀನಿವಾಸನ್ ಜನಿಸಿದರು. ಅವರು ಅರ್ಥ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಆ ಬಳಿಕ ಚೆನ್ನೈನಲ್ಲಿ ಅವರು ಫಿಲ್ಮ್​ ಆ್ಯಂಡ್ ಟೆಲಿವಿಷನ್ ಸಂಸ್ಥೆಯಲ್ಲಿ ಸಿನಿಮಾ ಸಂಬಂಧಿತ ತರಬೇತಿ ಪಡೆದರು.

1976ರ ‘ಮನಿಮುಳಕ್ಕಮ್’ ಅವರ ನಟನೆಯ ಮೊದಲ ಸಿನಿಮಾ. ಆ ಬಳಿಕ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರು. ವೃತ್ತಿ ಜೀವನದುದ್ದಕ್ಕೂ 2-3 ತಮಿಳು ಸಿನಿಮಾ ಮಾಡಿದ್ದು ಹೊರತುಪಡಿಸಿ ಉಳಿದ ಎಲ್ಲಾ ಚಿತ್ರಗಳನ್ನು ಅವರು ಮಾಡಿದ್ದು ಮಲಯಾಳಂನಲ್ಲಿಯೇ. ಸುಮಾರು 40 ವರ್ಷಗಳ ಕಾಲ ಚಿತ್ರರಂಗದಲ್ಲಿ ಶ್ರಮಿಸಿದ ಅವರು, 200ಕ್ಕೂ ಅಧಿಕ ಸಿನಿಮಾ ಮಾಡಿದ್ದಾರೆ. ಅವರು ಕೊನೆಯ ಬಾರಿಗೆ ಬಣ್ಣ ಹಚ್ಚಿದ್ದು 2018ರಲ್ಲಿ.

ಚಿತ್ರಕಥೆ ಬರಹಗಾರನಾಗಿಯೂ ಶ್ರೀನಿವಾಸನ್ ಕೆಲಸ ಮಾಡಿದ್ದಾರೆ. ಅವರು ಮಮ್ಮೂಟ್ಟಿ ಹಾಗೂ ನಿವೀನ್ ಪೌಳಿಗೆ ತಲಾ ಒಂದೊಂದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಎರಡು ಸಿನಿಮಾ ನಿರ್ಮಿಸಿದ್ದಾರೆ. ಶ್ರೀನಿವಾಸನ್ ಅವರು, ರಾಷ್ಟ್ರ ಪ್ರಶಸ್ತಿ, ಕೇರಳ ರಾಜ್ಯ ಪ್ರಶಸ್ತಿ, ಫಿಲ್ಮ್​ ಫೆರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಟನಾಗಿ, ಬರಹಗಾರನಾಗಿ ಈ ಗೌರವ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ಮಲಯಾಳಂ ನಟ ದಿಲೀಪ್ ನಿರ್ದೋಷಿ; ಕೋರ್ಟ್ ತೀರ್ಪು

ಶ್ರೀನಿವಾಸನ್​ಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಮಕ್ಕಳಾದ ವಿನೀತ್ ಹಾಗೂ ಧ್ಯಾನ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ವಿನೀತ್ ನಿರ್ದೇಶನದ ‘ಹೃದಯಪೂರ್ವಂ’ ಸೂಪರ್ ಹಿಟ್ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:05 am, Sat, 20 December 25