ಮಲಯಾಳಂ ಕಿರುತೆರೆ ನಟಿ ರೆಂಜುಶಾ ಮೆನನ್ (Renjusha Menon) ಅವರ ಮೃತದೇಹ ಪತ್ತೆ ಆಗಿದೆ. ನಟಿಗೆ 35 ವರ್ಷ ವಯಸ್ಸಾಗಿತ್ತು. ತಿರುವನಂತಪುರದಲ್ಲಿರುವ ತಮ್ಮ ಫ್ಲಾಟ್ನಲ್ಲಿ ರೆಂಜುಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ (ಅಕ್ಟೋಬರ್ 30) ಮುಂಜಾನೆ ಅವರ ಸಾವಿನ ಸುದ್ದಿ ಹೊರಬಿದ್ದಿದೆ. ಇದು ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದಾಗ್ಯೂ ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.
ರೆಂಜುಶಾ ಅವರು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಪತಿ ಮನೋಜ್ ಜೊತೆ ಫ್ಲಾಟ್ನಲ್ಲಿ ವಾಸವಾಗಿದ್ದರು. ಮನೋಜ್ ಕೂಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ದೇಹದ ಮೇಲೆ ಯಾವುದೇ ಗಾಯ ಇಲ್ಲ. ಹೀಗಾಗಿ, ಇದು ಕೊಲೆ ಅಲ್ಲ, ಆತ್ಮಹತ್ಯೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುವ ಮೂಲಕ ರೆಂಜುಶಾ ಅವರು ಫೇಮಸ್ ಆದರು. ‘ಆನಂದ ರಾಗಮ್’ ಧಾರಾವಾಹಿಯಲ್ಲಿ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದರು. ಇದಲ್ಲದೆ, ಹಲವು ಧಾರಾವಾಹಿಗಳಲ್ಲಿ ಅವರು ಮಾಡಿದ ಪಾತ್ರಗಳು ಗಮನ ಸೆಳೆದಿದ್ದವು. ಇನ್ನು, ರಿಯಾಲಿಟಿ ಶೋ ಮೂಲಕವೂ ಅವರು ಫೇಮಸ್ ಆಗಿದ್ದಾರೆ. ಸೆಲೆಬ್ರಿಟಿ ಕುಕಿಂಗ್ ಶೋ, ‘ಸೆಲೆಬ್ರಿಟಿ ಕಿಚನ್ ಮ್ಯಾಜಿಕ್’ನಲ್ಲಿ ಅವರು ಕಾಣಿಸಿದ್ದರು. ‘ಸಿಟಿ ಆಫ್ ಗಾಡ್’ ಮೊದಲಾದ ಸಿನಿಮಾಗಳಲ್ಲಿ ರೆಂಜುಶಾ ನಟಿಸಿದ್ದಾರೆ.
ರೆಂಜುಶಾ ಅವರು ಧಾರಾವಾಹಿಗಳಲ್ಲಿ ನಟಿಸಿದ ಹೊರತಾಗಿಯೂ ಅವರಿಗೆ ಹೇಳಿಕೊಳ್ಳುವಂಥ ಸಂಭಾವನೆ ಬರುತ್ತಿರಲಿಲ್ಲ. ಹೀಗಾಗಿ, ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಈ ಕಾರಣದಿಂದಲೇ ರೆಂಜುಶಾ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ಕೂಡ ಹೇಳಲಾಗುತ್ತಿದೆ. ಅವರ ಪತಿ ಮನೋಜ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಯಾವುದಾದರೂ ವಿಚಾರಕ್ಕೆ ಮನಸ್ತಾಪ ಆಗಿತ್ತೇ ಎನ್ನುವ ಬಗ್ಗೆ ಪ್ರಶ್ನೆ ಮಾಡಲಾಗಿದೆ.
ಇದನ್ನೂ ಓದಿ: ಕೇಳಿದ ತಕ್ಷಣ ಸೊಸೆ ‘ಟೀ’ ಕೊಡಲಿಲ್ಲ ಎಂದು ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡ ಮಾವ
ಚಿತ್ರರಂಗದ ಅನೇಕರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಸಾಕಷ್ಟಿದೆ. ಏನಾದರೂ ಸಾಧನೆ ಮಾಡಬೇಕು ಎಂಬ ಕನಸು ಇಟ್ಟುಕೊಂಡು ಅನೇಕರು ಬಣ್ಣದ ಲೋಕಕ್ಕೆ ಬರುತ್ತಾರೆ. ಆದರೆ, ಒಳ್ಳೆಯ ಅವಕಾಶ ಸಿಗದೆ ಒದ್ದಾಡಿದ ಅನೇಕರಿದ್ದಾರೆ. ಕೆಲವರು ಯಶಸ್ಸು ಪಡೆದ ನಂತರ ಸಾಲು ಸಾಲು ಫ್ಲಾಪ್ ನೀಡಿ ವೃತ್ತಿ ಬದಲಿಸಿದ್ದಾರೆ. ರೆಂಜುಶಾ ಕೂಡ ಬಣ್ಣದ ಲೋಕದಲ್ಲಿ ದೊಡ್ಡ ಗೆಲುವು ಕಾಣದೆ ಮೃತಪಟ್ಟಿರುವುದು ದುಃಖದ ವಿಚಾರ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ