
ಕೋವಿಡ್ ಬಳಿಕ ಭಾರತದ ಸಿನಿಮಾಗಳು ವಿಶ್ವಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿವೆ. ಅದರಲ್ಲೂ ಭಾರತದ ಪ್ರಾದೇಶಿಕ ಭಾಷೆಯ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಪ್ರೇಕ್ಷಕರನ್ನು ಸೆಳೆಯುವುದು ಮಾತ್ರವೇ ಅಲ್ಲದೆ, ಆಸ್ಕರ್ ಅಂಥಹಾ ವಿಶ್ವ ಶ್ರೇಷ್ಠ ವೇದಿಕೆಗಳಲ್ಲಿ ಸ್ಥಾನ ಪಡೆಯುತ್ತಿದೆ. ‘ಆರ್ಆರ್ಆರ್’ ಸಿನಿಮಾ ಆಸ್ಕರ್ ಅಂಗಳಕ್ಕೆ ಕಾಲಿರಿಸಿದ್ದು ಮಾತ್ರವೇ ಅಲ್ಲದೆ ಆಸ್ಕರ್ ಗೆದ್ದು ಇತಿಹಾಸ ಸೃಷ್ಟಿಸಿದೆ. ಭಾರತದ ಕೆಲ ಡಾಕ್ಯುಮೆಂಟರಿಗಳು ಸಹ ಆಸ್ಕರ್ ಗೆದ್ದಿವೆ. ಮಾತ್ರವಲ್ಲದೆ ಖುದ್ದು ಆಸ್ಕರ್, ಹಲವು ಭಾರತೀಯ ಸಿನಿಮಾಗಳನ್ನು ಗುರುತಿಸಿ ವಿಶೇಷ ಗೌರವವನ್ನು ನೀಡಿದೆ. ಹೀಗಿರುವಾಗ ಇದೀಗ ಮತ್ತೊಂದು ಆಸ್ಕರ್ ಹತ್ತಿರವಾಗುತ್ತಿದ್ದು, ಭಾರತದಿಂದ ಈ ಬಾರಿ ಅಳೆದು-ತೂಗಿ ಮರಾಠಿ ಸಿನಿಮಾ ಒಂದನ್ನು ಅಧಿಕೃತ ಆಯ್ಕೆಯನ್ನಾಗಿ ಪರಿಗಣಿಸಿ ಕಳಿಸಲಾಗಿದೆ.
99ನೇ ಆಸ್ಕರ್ ಈ ಬಾರಿ ನಡೆಯಲಿದ್ದು, ಈ ಬಾರಿಯ ಆಸ್ಕರ್ಗೆ ಭಾರತದಿಂದ ಮರಾಠಿ ಸಿನಿಮಾ ‘ಗೊಂಧಲ್’ ಭಾರತದ ಸಿನಿಮಾ ಫೆಡರೇಷನ್ ಕಳಿಸಿಕೊಟ್ಟಿದೆ. ‘ಗೊಂಧಲ್’ ಸಿನಿಮಾವು ಆಸ್ಕರ್ನ ವಿದೇಶಿ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿಗಾಗಿ ಸ್ಪರ್ಧೆ ಮಾಡಲಿದೆ. ‘ಗೊಂಧಲ್’ ಸಿನಿಮಾವು ಮಹಾರಾಷ್ಟ್ರದಲ್ಲಿ ನಡೆಯುವ ಒಂದು ಆಚರಣೆಯ ಕುರಿತಾದ ಕತೆಯನ್ನು ಒಳಗೊಂಡಿರುವ ಸಿನಿಮಾ ಆಗಿದೆ. ಸಂಸ್ಕೃತಿ, ಆಚರಣೆಯನ್ನು ಸಾರುವ ಕತೆಯನ್ನು ಸಿನಿಮಾ ಒಳಗೊಂಡಿದೆ.
ಈ ಬಾರಿ ‘ಧುರಂಧರ್’ ಸಿನಿಮಾವನ್ನು ಆಸ್ಕರ್ಗೆ ಕಳಿಸಬೇಕು ಎಂಬ ಒತ್ತಡ ಜ್ಯೂರಿ ಸದಸ್ಯರ ಮೇಲಿತ್ತು. ಅದರ ಜೊತೆಗೆ ನಾಗಾ ಸಿನಿಮಾ ‘ಅಂಗ’ ಮತ್ತು ತಮಿಳು ಸಿನಿಮಾ ‘ಡೊರೊತಿ’ ಸಹ ರೇಸಿನಲ್ಲಿದ್ದವು. ಆದರೆ ಅದ್ಯಾವುದನ್ನೂ ಅಲ್ಲದೆ, ಮರಾಠಿ ಸಿನಿಮಾ ‘ಗೋಂಧಲ್’ ಅನ್ನು ಸದಸ್ಯರು ಆಯ್ಕೆ ಮಾಡಿದ್ದಾರೆ. ಭಾರತೀಯ ಸಂಸ್ಕೃತಿ, ಆಚರಣೆಗಳ ಜೊತೆಗೆ ಸಿನಿಮಾದ ಕತೆಯಲ್ಲಿರುವ ಮಾನವನ ವ್ಯಕ್ತಿತ್ವದ ಅನಾವರಣ ಈ ಸಿನಿಮಾವನ್ನು ಆಸ್ಕರ್ ಆಯ್ಕೆಗೆ ಅರ್ಹವೆಂದು ಜ್ಯೂರಿ ಸದಸ್ಯರು ಪರಿಗಣಿಸಿದ್ದಾರೆ.
ಇದನ್ನೂ ಓದಿ:‘ಆಸ್ಕರ್ ಸಿಗಲೇ ಬೇಕು’: ‘ರಾಮಾಯಣ’ ಸಿನಿಮಾವನ್ನು ಕೊಂಡಾಡಿದ ಮಹಾರಾಷ್ಟ್ರ ಸಿಎಂ
‘ಗೋಂಧಾಲ್’ ಎಂಬುದು ರಾತ್ರಿ ಪೂರ್ತಿ ನಡೆಯುವ ಒಂದು ಪೂಜೆ ಆಚರಣೆ. ಈಗ ಆಸ್ಕರ್ಗೆ ಆಯ್ಕೆ ಆಗಿರುವ ಸಿನಿಮಾ ‘ಗೋಂಧಾಲ್’ ‘ಸುಮನ್’ ಎಂಬ ಪಾತ್ರದ ಸುತ್ತುವ ಕತೆಯನ್ನು ಒಳಗೊಂಡಿದೆ. ಹಳ್ಳಿಯೊಂದಕ್ಕೆ ಸೊಸೆಯಾಗಿ ಬರುವ ಸುಮನ್, ಪತಿ ಆನಂದ್ ಜೊತೆಗೆ ಆರಾಮದ ಜೀವನ ನಡೆಸುತ್ತಿರುತ್ತಾಳೆ. ಆದರೆ ಆಕೆ, ‘ಗೋಂಧಾಲ್’ ಆಚರಣೆಯಲ್ಲಿ ಪ್ರಮುಖನಾದ ಗೋಂಧಾಲಿ ಸಾಹೇಬ ಎಂಬಾತನ ಮೇಲೆ ಪ್ರೀತಿ ಬೆಳೆಸಿಕೊಳ್ಳುತ್ತಾಳೆ. ಆಕೆ ತನ್ನ ಪತಿಯಿಂದ ದೂರಾಗಲು ಪತಿಯ ಸಂಬಂಧಿಯೊಬ್ಬನ ಸಹಾಯ ಪಡೆಯುತ್ತಾಳೆ. ಆದರೆ ಆಕೆ ಮದುವೆ ಸಂಕೋಲೆಯಿಂದ ಸ್ವಾತಂತ್ರ್ಯ ಪಡೆಯಲು ಮಾಡುವ ಈ ಪ್ರಯತ್ನದಲ್ಲಿ ಒಂದು ಕೊಲೆ ನಡೆದು ಹೋಗುತ್ತದೆ. ಬಳಿಕ ಪ್ರತಿಯೊಬ್ಬರೂ ಸಹ ತಮ್ಮನ್ನು ತಾವು ಕಾಪಾಡಿಕೊಳ್ಳುವ ಮಾಡುವ ಪ್ರಯತ್ನಗಳು ಸಿನಿಮಾದ ಕತೆಗೆ ಥ್ರಿಲ್ಲರ್ ಗುಣವನ್ನು ಸೇರಿಸಿದೆ. ಈ ಸಿನಿಮಾವನ್ನು ಸಂತೋಷ್ ದಾವ್ಕರ್ ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ