23 ವರ್ಷವಾದರೂ ಮಾಸದ ‘ಮಾಯಾಮೃಗ’ ಹಾಡು ಕಂಪೋಸ್ ಆಗಿದ್ದು ಲಂಚ್ ಬ್ರೇಕ್ನ ಕೆಲವೇ ನಿಮಿಷಗಳಲ್ಲಿ; ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
Mayamruga Kannada Serial: ಭಾರಿ ಮೋಡಿ ಮಾಡಿದ ‘ಮಾಯಾಮೃಗ’ ಶೀರ್ಷಿಕೆ ಗೀತೆಗೆ ರಾಗ ಸಂಯೋಜನೆ ಮಾಡಿದವರು ಸಿ. ಅಶ್ವತ್. ಅದಕ್ಕೆ ಸಾಹಿತ್ಯ ಬರೆದವರು ಕೆ.ಎಸ್. ನರಸಿಂಹಸ್ವಾಮಿ. ಅಚ್ಚರಿ ಎಂದರೆ ಈ ಗೀತೆ ಸಿದ್ಧವಾಗಿದ್ದು ಮಧ್ಯಾಹ್ನ ಊಟದ ಬ್ರೇಕ್ನ ಕೆಲವೇ ನಿಮಿಷಗಳಲ್ಲಿ!
1998ರಲ್ಲಿ ದೂರದರ್ಶನ ವಾಹಿನಿಯಲ್ಲಿ ಪ್ರಸಾರ ಆರಂಭಿಸಿದ ‘ಮಾಯಾಮೃಗ’ ಧಾರಾವಾಹಿ ನಂತರ 2014ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮರುಪ್ರಸಾರವನ್ನೂ ಕಂಡಿತ್ತು. ಇಂದಿಗೂ ಈ ಸೀರಿಯಲ್ ಬಗ್ಗೆ ಜನರು ಮಾತನಾಡುತ್ತಾರೆ. ಅಷ್ಟರಮಟ್ಟಿಗೆ ಫೇಮಸ್ ಆಗಿತ್ತು ಮಾಯಾಮೃಗ. ಟಿಎನ್ ಸೀತಾರಾಮ್, ಪಿ. ಶೇಷಾದ್ರಿ, ನಾಗೇಂದ್ರ ಶಾ ಸೇರಿ ನಿರ್ದೇಶಿಸಿದ ಈ ಸೀರಿಯಲ್ ಇನ್ನು ಕೆಲವೇ ದಿನಗಳಲ್ಲಿ ಮತ್ತೆ ವೀಕ್ಷಣೆಗೆ ಲಭ್ಯವಾಗಲಿದೆ. ವೆಬ್ ಸಿರೀಸ್ ರೂಪದಲ್ಲಿ ಪ್ರಸಾರ ಮಾಡಲು ಸಿದ್ಧತೆ ನಡೆದಿದೆ. ಈ ಪ್ರಯುಕ್ತ ‘ಮಾಯಾಮೃಗ’ದ ಶೀರ್ಷಿಕೆ ಗೀತೆಯ ಕುರಿತು ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ತಂಡ ಹಂಚಿಕೊಂಡಿದೆ.
‘1988ರ ಸಮಯದಲ್ಲಿ ಸಂಜೆ ನಾಲ್ಕೂವರೆಗೆ ಟಿವಿಯಲ್ಲಿ ಮಾಯಾಮೃಗ ಧಾರಾವಾಹಿಯ ಶೀರ್ಷಿಕೆ ಗೀತೆ ಕೇಳಿಸಿದ ತಕ್ಷಣ ಬೆಂಗಳೂರಿನ ಬೀದಿಗಳು ಖಾಲಿ ಆಗಿ ಬಿಡುತ್ತಿದ್ದವು’ ಎನ್ನುವ ಮೂಲಕ ಅದರ ಜನಪ್ರಿಯತೆಯನ್ನು ನೆನಪಿಸಿಕೊಳ್ಳುತ್ತಾರೆ ನಟ ದತ್ತಣ್ಣ. ‘ಇಂದಿಗೂ ನಾನು ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಮಾಯಾಮೃಗದ ಹಾಡು ಹೇಳುವಂತೆ ಜನರು ಒತ್ತಾಯಿಸುತ್ತಾರೆ’ ಎನ್ನುತ್ತಾರೆ ಎಂ.ಡಿ. ಪಲ್ಲವಿ. ಇಷ್ಟೆಲ್ಲ ಮೋಡಿ ಮಾಡಿದ ಶೀರ್ಷಿಕೆ ಗೀತೆಗೆ ರಾಗ ಸಂಯೋಜನೆ ಮಾಡಿದವರು ಸಿ. ಅಶ್ವತ್. ಅದಕ್ಕೆ ಸಾಹಿತ್ಯ ಬರೆದವರು ಕೆ.ಎಸ್. ನರಸಿಂಹಸ್ವಾಮಿ. ಅಚ್ಚರಿ ಎಂದರೆ ಈ ಗೀತೆ ಸಿದ್ಧವಾಗಿದ್ದು ಲಂಚ್ ಬ್ರೇಕ್ನ ಕೆಲವೇ ನಿಮಿಷಗಳಲ್ಲಿ!
‘ಧಾರಾವಾಹಿಗೆ ಶೀರ್ಷಿಕೆ ಗೀತೆ ಮಾಡಿಸಲು ನಾವು ಸಿ. ಅಶ್ವತ್ಥ್ ಬಳಿ ಹೋದಾಗ ಅವರು ಸ್ಟುಡಿಯೋದಲ್ಲಿ ಬೇರೆ ಯಾವುದೋ ಹಾಡನ್ನು ರೆಕಾರ್ಡ್ ಮಾಡಿಸುತ್ತಿದ್ದರು. ಅಶ್ವತ್ಥ್ ಅವರಿಗೆ ದೈನಂದಿನ ಧಾರಾವಾಹಿಗಳ ಕಲ್ಪನೆಯೇ ಇರಲಿಲ್ಲ. ಜನರು ಪ್ರತಿ ದಿನ ನೋಡುತ್ತಾರಾ ಎಂದು ಅವರು ಪ್ರಶ್ನೆ ಮಾಡಿದರು. ನಂತರ ರಾಗ ಸಂಯೋಜನೆ ಮಾಡಲು ಒಪ್ಪಿಕೊಂಡರು. ಊಟದ ಬ್ರೇಕ್ನಲ್ಲೇ ಒಂದು ಹಾರ್ಮೋನಿಯಂ ತೆಗೆದುಕೊಂಡು ಸಂಗೀತ ಸಂಯೋಜಿಸಿದರು. ಕೇವಲ ಒಂದೂವರೆ ನಿಮಿಷದಲ್ಲಿ ರಾಗ ಸಂಯೋಜನೆ ಮಾಡಿದರು. ಇಂದಿಗೂ ಅದು ಅದ್ಭುತವಾದ ಹಾಡಾಗಿ ಉಳಿದುಕೊಂಡಿದೆ’ ಎಂದು ಆ ದಿನಗಳ ನೆನಪು ಮೆಲುಕು ಹಾಕಿದ್ದಾರೆ ಟಿಎನ್ ಸೀತಾರಾಮ್.
‘ಲಂಚ್ ಬ್ರೇಕ್ ಮುಗಿಯುವುದರೊಳಗೆ ಹಾಡು ಸಿದ್ಧವಾಯ್ತು. ಅರ್ಚನಾ ಮತ್ತು ನಾನು ಕೋರಸ್ ಹಾಡಿದೆವು. ಮಂಜುಳಾ ಗುರುರಾಜ್ ಧ್ವನಿಯಲ್ಲಿ ಹಾಡು ಮೂಡಿಬಂತು. ತುಂಬ ಒಳ್ಳೆಯ ಗೀತೆ ಎಷ್ಟು ಟೈಮ್ ತೆಗೆದುಕೊಂಡಿತು ಎನ್ನುವುದು ಅಚ್ಚರಿ ಆಗುತ್ತದೆ. ಆ ಹಾಡಿನಲ್ಲಿ ಎಲ್ಲವೂ ಚೆನ್ನಾಗಿ ಕೂಡಿ ಬಂದಿದೆ’ ಎಂಬುದು ಎಂಡಿ ಪಲ್ಲವಿ ಮಾತುಗಳು.
ಇದನ್ನೂ ಓದಿ:
ವೆಬ್ ಸಿರೀಸ್ ರೂಪದಲ್ಲಿ ಬರಲಿದೆ ಕನ್ನಡದ ಸೂಪರ್ ಹಿಟ್ ಧಾರಾವಾಹಿ ಮಾಯಾಮೃಗ; ಪ್ರೇಕ್ಷಕರಿಗೆ ಗುಡ್ ನ್ಯೂಸ್
ಟಿ.ಎನ್. ಸೀತಾರಾಮ್ ಹೊಸ ಧಾರಾವಾಹಿಗೆ ಟೈಟಲ್ ಫಿಕ್ಸ್; ಮೇಧಾ ವಿದ್ಯಾಭೂಷಣ ನಾಯಕಿ!