ಜನಮೆಚ್ಚಿದ ‘ರಾಮಾಯಣ’ ಧಾರಾವಾಹಿಯಲ್ಲಿ ರಾಮನ ಪಾತ್ರ ಮಾಡಿದ್ದ ನಟ ಅರುಣ್ ಗೋವಿಲ್ (Arun Govil) ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಭಾರತೀಯ ಜನತಾ ಪಾರ್ಟಿಯಿಂದ ಟಿಕೆಟ್ ಸಿಕ್ಕಿದೆ. ಉತ್ತರ ಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರದಿಂದ ಅರುಣ್ ಗೋವಿಲ್ ಅವರು ಸ್ಪರ್ಧಿಸಲಿದ್ದಾರೆ. ಅವರಿಗೆ ಟಿಕೆಟ್ ಸಿಕ್ಕಿರುವುದಕ್ಕೆ ಅಭಿಮಾನಿಗಳಿಗೆ ಖುಷಿ ಆಗಿದೆ. ತಮಗೆ ಈ ಅವಕಾಶ ನೀಡಿರುವುದಕ್ಕೆ ಅರುಣ್ ಗೋವಿಲ್ ಅವರು ಬಿಜೆಪಿ (BJP) ಹಾಗೂ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ದಿನದಿಂದ ದಿನಕ್ಕೆ ಚುನಾವಣೆಯ ಕಾವು ಹೆಚ್ಚುತ್ತಿದೆ.
‘ಆಯ್ಕೆ ಸಮಿತಿ ಮತ್ತು ನರೇಂದ್ರ ಮೋದಿ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಮೀರತ್ ಕ್ಷೇತ್ರದಿಂದ ನನ್ನನ್ನು ಸಂಸದ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮೂಲಕ ದೊಡ್ಡ ಜವಾಬ್ದಾರಿ ನೀಡಿದ್ದೀರಿ. ಭಾರತೀಯ ಜನತಾ ಪಕ್ಷ ಮತ್ತು ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಸಂಪೂರ್ಣ ಪ್ರಯತ್ನ ಮಾಡುತ್ತೇನೆ. ಜೈ ಶ್ರೀರಾಮ್’ ಎಂದು ಅರುಣ್ ಗೋವಿಲ್ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
आ. श्री नरेंद्र मोदी जी और चयन समिति का बहुत-बहुत हार्दिक आभार जिन्होंने मुझे मेरठ का सांसद प्रत्याशी बनाकर इतना बड़ा कार्यभार सौंपा है। मैं भारतीय जनता पार्टी के विश्वास और जनमानस की अपेक्षाओं पर पूर्णत: खरा उतरने का संपूर्ण प्रयास करूँगा…🙏🏼
जय श्री राम 🙏🏼@narendramodi…— Arun Govil (@arungovil12) March 24, 2024
72 ವರ್ಷ ಪ್ರಾಯದ ಅರುಣ್ ಗೋವಿಲ್ ಅವರು ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ಸ್ವಕ್ಷೇತ್ರವಾದ ಮೀರತ್ನಲ್ಲೇ ಅವರಿಗೆ ಟಿಕೆಟ್ ಸಿಕ್ಕಿದೆ. ಸಿನಿಮಾ ಮಂದಿ ರಾಜಕೀಯಕ್ಕೆ ಕಾಲಿಡುವುದು ಹೊಸದೇನೂ ಅಲ್ಲ. ಈ ಬಾರಿ ಕಂಗನಾ ರಣಾವತ್, ಅರುಣ್ ಗೋವಿಲ್ ಸೇರಿದಂತೆ ಒಂದಷ್ಟು ಮಂದಿ ಸೆಲೆಬ್ರಿಟಿಗಳು ಲೋಕಸಭಾ ಚುನಾವಣೆಯ ಕಣಕ್ಕೆ ಇಳಿಯುತ್ತಿದ್ದಾರೆ. ಕಂಗನಾ ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ನಟಿ ಕಂಗನಾ ರಣಾವತ್ಗೆ ಬಿಜೆಪಿ ಟಿಕೆಟ್; ಮಂಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ
ನಟ ಅರುಣ್ ಗೋವಿಲ್ ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. 1987-1988ರಲ್ಲಿ ಪ್ರಸಾರವಾದ ‘ರಾಮಾಯಣ’ ಧಾರಾವಾಹಿಯಲ್ಲಿ ರಾಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಅವರು ದೇಶಾದ್ಯಂತ ಫೇಮಸ್ ಆದರು. ದೂರದರ್ಶನದಲ್ಲಿ ಆ ಸೀರಿಯಲ್ ಪ್ರಸಾರ ಕಂಡಿತ್ತು. ಲಾಕ್ಡೌನ್ ಸಮಯದಲ್ಲಿ ಮತ್ತೆ ಮರು ಪ್ರಸಾರ ಮಾಡಲಾಗಿತ್ತು. ಇತ್ತೀಚೆಗೆ ಬಿಡುಗಡೆ ಆದ ಬಾಲಿವುಡ್ನ ‘ಆರ್ಟಿಕಲ್ 370’ ಸಿನಿಮಾದಲ್ಲಿ ಅರುಣ್ ಗೋವಿಲ್ ನಟಿಸಿದ್ದು, ನರೇಂದ್ರ ಮೋದಿಯವರ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಆ ಸಿನಿಮಾ ಹಿಟ್ ಆಗಿದೆ. 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.