
ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಹೆಸರು ಮಾಡಿರುವ ನಂದ ಕಿಶೋರ್ ಅವರು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಮಲಯಾಳಂ ಸ್ಟಾರ್ ನಟ ಮೋಹನ್ಲಾಲ್ ಅಭಿನಯದ ‘ವೃಷಭ’ (Vrusshabha) ಸಿನಿಮಾಗೆ ನಂದ ಕಿಶೋರ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಕೊಚ್ಚಿಯಲ್ಲಿ ಅದ್ದೂರಿಯಾಗಿ ನಡೆಯಿತು. ಮೋಹನ್ಲಾಲ್ (Mohanlal), ಸಮರ್ಜಿತ್ ಲಂಕೇಶ್, ರಾಗಿಣಿ ದ್ವಿವೇದಿ, ನಯನ್ ಸಾರಿಕಾ, ನಂದ ಕಿಶೋರ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
‘ಕನೆಕ್ಟ್ ಮೀಡಿಯಾ’, ‘ಬಾಲಾಜಿ ಟೆಲಿಫಿಲ್ಮ್ಸ್’, ‘ಅಭಿಷೇಕ್ ಎಸ್. ವ್ಯಾಸ್ ಸ್ಟುಡಿಯೋಸ್’ ಜೊತೆಗೂಡಿ ‘ವೃಷಭ’ ಸಿನಿಮಾ ನಿರ್ಮಾಣ ಮಾಡಿವೆ. ಶೋಭಾ ಕಪೂರ್, ಏಕ್ತಾ ಕಪೂರ್, ಸಿ.ಕೆ. ಪದ್ಮ ಕುಮಾರ್, ವರುಣ್ ಮಾಥುರ್, ಸೌರಭ್ ಮಿಶ್ರಾ, ಅಭಿಷೇಕ್ ಎಸ್. ವ್ಯಾಸ್, ಪ್ರವೀರ್ ಸಿಂಗ್, ವಿಶಾಲ್ ಗುರ್ನಾನಿ, ಜೂಹಿ ಪರೇಖ್ ಮೆಹ್ತಾ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಡಿಸೆಂಬರ್ 25ಕ್ಕೆ ವಿಶ್ವದಾದ್ಯಂತ ‘ವೃಷಭ’ ಸಿನಿಮಾ ರಿಲೀಸ್ ಆಗಲಿದೆ.
ವಿಶೇಷ ಎಂದರೆ ‘ವೃಷಭ’ ಸಿನಿಮಾದಲ್ಲಿ ಕನ್ನಡದ ಕಲಾವಿದರು ಹೆಚ್ಚಾಗಿ ನಟಿಸಿದ್ದಾರೆ. ಹೀರೋ ಮಗನ ಪಾತ್ರದಲ್ಲಿ ಸಮರ್ಜಿತ್ ಲಂಕೇಶ್ ಅಭಿನಯಿಸಿದ್ದಾರೆ. ರಾಗಿಣಿ ದ್ವಿವೇದಿ, ಗರುಡ ರಾಮ್, ಕಿಶೋರ್, ಅಯ್ಯಪ್ಪ ಪಿ. ಶರ್ಮಾ ಮುಂತಾದವರು ಮೋಹನ್ಲಾಲ್ ಜೊತೆ ನಟಿಸಿರುವುದು ವಿಶೇಷ. ಟ್ರೇಲರ್ನಲ್ಲಿ ಈ ಎಲ್ಲರ ಪಾತ್ರಗಳ ಝಲಕ್ ತೋರಿಸಲಾಗಿದೆ.
ದ್ವಿಪಾತ್ರದಲ್ಲಿ ಮೋಹನ್ಲಾಲ್ ನಟಿಸಿದ್ದಾರೆ. ರಾಜನಾಗಿ ಮತ್ತು ಉದ್ಯಮಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಟ್ರೇಲರ್ ಆ್ಯಕ್ಷನ್ ದೃಶ್ಯಗಳಿಂದ ಕೂಡಿದೆ. ನಿರ್ಮಾಪಕಿ ಏಕ್ತಾ ಆರ್. ಕಪೂರ್ ಮಾತನಾಡಿ, ‘ನಮಗೆ ಈ ಅವಕಾಶ ನೀಡಿದ್ದಕ್ಕಾಗಿ ಮೋಹನ್ಲಾಲ್ ಸರ್ ಅವರಿಗೆ ನಾನು ತುಂಬ ಕೃತಜ್ಞನಾಗಿದ್ದೇನೆ. ನಂದ ಕಿಶೋರ್ ಅವರ ದೃಷ್ಟಿಕೋನದಡಿಯಲ್ಲಿ ಕೆಲಸ ಮಾಡುವುದು ನಿಜವಾಗಿಯೂ ಪ್ರತಿಫಲದಾಯಕವಾಗಿದೆ’ ಎಂದರು.
ಇದನ್ನೂ ಓದಿ: ಮೋಹನ್ಲಾಲ್ಗೆ ಸನ್ಮಾನ ಮಾಡಿದ ಮಮ್ಮೂಟಿ
‘ಮೋಹನ್ಲಾಲ್ ಸರ್ ಜೊತೆ ಕೆಲಸ ಮಾಡುವುದು ಪ್ರತಿಯೊಬ್ಬ ನಿರ್ದೇಶಕನ ಕನಸು. ಅವರು ಕಥೆಗೆ ಸಂಪೂರ್ಣವಾಗಿ ಶರಣಾಗುತ್ತಾರೆ. ಈ ಕಥೆಯನ್ನು ಜೀವಂತಗೊಳಿಸಲು ಅವಿಶ್ರಾಂತವಾಗಿ ಶ್ರಮಿಸಿದ ತಂತ್ರಜ್ಞರ ಇಡೀ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ನಿರ್ದೇಶಕ ನಂದ ಕಿಶೋರ್ ಹೇಳಿದರು. ಡಿಸೆಂಬರ್ 25ರಂದು ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.