ಬಾಯಿ ಬಿಟ್ಟರೆ ಬರೀ ಸುಳ್ಳು, ಮೋಸದ ಆಟ: ಚೈತ್ರಾ ಮೇಲೆ ಆರೋಪ; ದೇವರ ಮುಂದೆ ಕಣ್ಣೀರು
‘ಬಿಗ್ ಬಾಸ್ ಕನ್ನಡ ಸೀಸನ್ 12’ ಆಟದಲ್ಲಿ ಚೈತ್ರಾ ಕುಂದಾಪುರ ಮೇಲೆ ಆರೋಪಗಳ ಮಳೆ ಸುರಿಸಲಾಗಿದೆ. ಸಿಕ್ಕಾಪಟ್ಟೆ ಸುಳ್ಳು ಹೇಳುತ್ತಾರೆ, ಆಟದಲ್ಲಿ ಮೋಸ ಮಾಡುತ್ತಾರೆ ಎಂದು ಆರೋಪ ಮಾಡಲಾಗಿದೆ. ರಜತ್ ಮತ್ತು ಗಿಲ್ಲಿಯ ಮಾತಿನ ಕಾಟ ತಾಳಲಾರದೇ ಚೈತ್ರಾ ಅವರು ದೇವರ ಮುಂದೆ ಕಣ್ಣೀರು ಸುರಿಸಿದ್ದಾರೆ.

ಈ ಮೊದಲು ಚೈತ್ರಾ ಕುಂದಾಪುರ (Chaithra Kundapura) ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಅವರು ನಾಟಕ ಮಾಡಿ, ಸುಳ್ಳು ಹೇಳಿ ಟೀಕೆಗೆ ಗುರಿ ಆಗಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಅವರು ವೈಲ್ಡ್ ಕಾರ್ಡ್ ಸ್ಪರ್ಧಿ ಆಗಿದ್ದಾರೆ. ಅವರು ಆಟ ಆಡುತ್ತಿರುವ ರೀತಿ ಅನೇಕರಿಗೆ ಇಷ್ಟ ಆಗುತ್ತಿಲ್ಲ. ಈ ಬಾರಿ ಕೂಡ ಅವರ ಮೇಲೆ ಸುಳ್ಳಿ ಎಂಬ ಆರೋಪ ಬಂದಿದೆ. ಮೋಸದಿಂದ ಆಟ ಆಡುತ್ತಾರೆ ಎಂದು ಕೂಡ ಆರೋಪಿಸಲಾಗಿದೆ. ಇದನ್ನೆಲ್ಲ ಸಹಿಸಿಕೊಳ್ಳಲಾಗದೇ ಚೈತ್ರಾ ಕುಂದಾಪುರ ಅವರು ದೇವರ ಮುಂದೆ ಹೋಗಿ ಕಣ್ಣೀರು ಹಾಕಿದ್ದಾರೆ.
ಡಿಸೆಂಬರ್ 17ರ ಸಂಚಿಕೆಯಲ್ಲಿ ಟಾಸ್ಕ್ ಆಡುವಾಗ ಚೈತ್ರಾ ಕುಂದಾಪುರ ಅವರು ಕೆಲವು ನಿಯಮ ಮುರಿದರು. ಅದನ್ನು ಉಸ್ತುವಾರಿ ರಾಶಿಕಾ ಶೆಟ್ಟಿ ಅವರು ಪ್ರಶ್ನಿಸಿದಾಗ ‘ನನಗೆ ಆ ನಿಯಮ ಗೊತ್ತಿರಲಿಲ್ಲ’ ಎಂದು ಹೇಳಿದರು. ಹಾಗಾಗಿ ಚೈತ್ರಾ ಕುಂದಾಪುರ ಅವರು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಲಾಯಿತು. ಅಲ್ಲದೇ ರಜತ್ ಅವರು ಇಂಥ ಸುಳ್ಳುಗಳನ್ನೇ ಟಾರ್ಗೆಟ್ ಮಾಡಿದ್ದಾರೆ.
ರಜತ್ ಮತ್ತು ಗಿಲ್ಲಿ ಅವರು ಒಟ್ಟಿಗೆ ಸೇರಿ ಚೈತ್ರಾ ಕುಂದಾಪುರ ಅವರನ್ನು ರೇಗಿಸಿದ್ದಾರೆ. ಈ ಸೀಸನ್ ವಿಚಾರ ಮಾತ್ರವಲ್ಲದೇ ಕಳೆದ ಸೀಸನ್ನ ವಿವಾದಗಳನ್ನು ಕೂಡ ಇಟ್ಟುಕೊಂಡು ಟ್ರೋಲ್ ಮಾಡಲಾಗಿದೆ. ಗಿಲ್ಲಿ ಆಡಿದ ಮಾತುಗಳನ್ನು ಕೇಳಿ ಚೈತ್ರಾ ಕುಂದಾಪುರ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದಾರೆ. ‘ಇನ್ನೊಮ್ಮೆ ನನ್ನ ವಿಷಯಕ್ಕೆ ಬರಬೇಡ’ ಎಂದು ಗಿಲ್ಲಿಗೆ ಚೈತ್ರಾ ಎಚ್ಚರಿಕೆ ನೀಡಿದ್ದಾರೆ.
ಟಾಸ್ಕ್ ಕಾರಣಕ್ಕೆ ಉಂಟಾದ ಜಗಳದಲ್ಲಿ ಚೈತ್ರಾ ಕುಂದಾಪುರ ಅವರು ಸಿಕ್ಕಾಪಟ್ಟೆ ಕಿರುಚಾಡಿದ್ದಾರೆ. ಅವರ ಎದುರು ನಿಂತು ರಜತ್ ಅವರು ಟಕ್ಕರ್ ನೀಡಿದ್ದಾರೆ. ಈ ಎಲ್ಲ ಘಟನೆಗಳಿಂದ ಚೈತ್ರಾ ಕುಂದಾಪುರ ಕುಗ್ಗಿ ಹೋಗಿದ್ದಾರೆ. ದೇವರ ಮುಂದೆ ನಿಂತು ಏನೇನೋ ಪ್ರಾರ್ಥನೆ ಮಾಡಿಕೊಂಡು ಕಣ್ಣೀರು ಸುರಿಸಿದ್ದಾರೆ. ಇದು ಕೂಡ ಡ್ರಾಮಾ ಎಂದು ರಾಶಿಕಾ ಮುಂತಾದವರು ಹೇಳಿದ್ದಾರೆ.
ಇದನ್ನೂ ಓದಿ: ರಜತ್ ಫ್ಯಾಮಿಲಿ ಬಗ್ಗೆ ಮಾತನಾಡಿದ ಚೈತ್ರಾ ಕುಂದಾಪುರ: ದೊಡ್ಮನೆಯಲ್ಲಿ ಬಿಗ್ ಫೈಟ್
ಬಿಗ್ ಬಾಸ್ ಮನೆಯಲ್ಲಿ ಈಗ 80 ದಿನಗಳು ಕಳೆದಿವೆ. ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರು ಸೀಕ್ರೆಟ್ ರೂಮ್ನಲ್ಲಿ ಇದ್ದಾರೆ. ಅವರಿಬ್ಬರು ಎಲಿಮಿನೇಟ್ ಆಗಿದ್ದಾರೆ ಎಂದು ಬಿಗ್ ಬಾಸ್ ಮನೆಯ ಸದಸ್ಯರು ಭಾವಿಸಿದ್ದಾರೆ. ಯಾವ ಸಂದರ್ಭದಲ್ಲಿ ಅವರಿಬ್ಬರು ಬಿಗ್ ಬಾಸ್ ಮನೆಗೆ ಮತ್ತೆ ಕಾಲಿಡುತ್ತಾರೆ ಎಂಬುದನ್ನು ತಿಳಿಯಲು ವೀಕ್ಷಕರು ಕಾದಿದ್ದಾರೆ. ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಕೂಡ ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




