ವೃದ್ಧಾಶ್ರಮದಲ್ಲಿರುವ ಹಿರಿಯ ನಟ ಮೋಹನ್ ಶರ್ಮಾ ನೆರವಿಗೆ ಧಾವಿಸಿದ ನಟ ಮೋಹನ್‌ ಲಾಲ್

ಹಿರಿಯ ನಟ ಹಾಗೂ ನಿರ್ಮಾಪಕ ಮೋಹನ್ ಶರ್ಮಾ ವೃದ್ಧಾಶ್ರಮದಲ್ಲಿ ಆರ್ಥಿಕ ಹಾಗೂ ಆರೋಗ್ಯ ಸಮಸ್ಯೆಯಿಂದ ಕಷ್ಟಪಡುತ್ತಿದ್ದಾರೆ. ಈ ಸುದ್ದಿ ಕೇಳಿ ಕಳವಳಗೊಂಡ ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್, ಅವರಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಮತ್ತು ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಚಿತ್ರರಂಗದ ಈ ಪರಿಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ವೃದ್ಧಾಶ್ರಮದಲ್ಲಿರುವ ಹಿರಿಯ ನಟ ಮೋಹನ್ ಶರ್ಮಾ ನೆರವಿಗೆ ಧಾವಿಸಿದ ನಟ ಮೋಹನ್‌ ಲಾಲ್
ಮೋಹನ್​ಲಾಲ್-ಮೋಹನ್
Edited By:

Updated on: Aug 08, 2026 | 8:02 AM

ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ಮಾಪಕ ಮೋಹನ್ ಶರ್ಮಾ ಪ್ರಸ್ತುತ ತೀವ್ರ ಆರ್ಥಿಕ ಸಂಕಷ್ಟ ಮತ್ತು ಆರೋಗ್ಯ ಸಮಸ್ಯೆಯಿಂದಾಗಿ ವೃದ್ಧಾಶ್ರಮದಲ್ಲಿ ದಿನ ದೂಡುತ್ತಿದ್ದಾರೆ. ತಿಂಗಳ ವೈದ್ಯಕೀಯ ವೆಚ್ಚವನ್ನೂ ಭರಿಸಲಾಗದೆ ಕಷ್ಟಪಡುತ್ತಿರುವ ಅವರ ಪರಿಸ್ಥಿತಿಗೆ ಈಗ ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಸ್ಪಂದಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ನಟ ಮೋಹನ್‌ಲಾಲ್, ‘ನಾನು ಅವರು ನಿರ್ಮಿಸಿದ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ನಾನು ಅವರೊಂದಿಗೆ ಮಾತನಾಡಿದ್ದು, ನಮ್ಮ ತಂಡದ ಸದಸ್ಯರೊಬ್ಬರು ಅವರನ್ನು ಶೀಘ್ರವೇ ಭೇಟಿಯಾಗಲಿದ್ದಾರೆ. ಅವರಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ನಾವು ಮಾಡುತ್ತೇವೆ. ಚಿತ್ರರಂಗ ಎಂಬುದು ಒಂದು ರೀತಿಯ ಮಾಯಾಲೋಕ. ಇಂತಹ ಪರಿಸ್ಥಿತಿ ಬಂದಾಗ ಅದನ್ನು ಕರ್ಮ ಅಥವಾ ವಿಧಿ ಎಂದು ಕರೆಯುತ್ತಾರೆ. ಅವರ ಸ್ಥಿತಿ ಕೇಳಿ ನನಗೆ ತುಂಬಾ ಬೇಸರವಾಯಿತು’ ಎಂದಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ‘ಯಾರಿಗಾದರೂ ಸಹಾಯ ಮಾಡುವುದು ಎಂದರೆ ಅದನ್ನು ಎಲ್ಲರಿಗೂ ಪ್ರಚಾರ ಮಾಡುವುದಲ್ಲ. ಶಬ್ದವಿಲ್ಲದೆ ಸಹಾಯ ಮಾಡುವ ಅನೇಕ ಜನರಿದ್ದಾರೆ. ನಾವು ಹಿಂದೆ ‘ನೆಲ್ಲು’, ‘ಚಟ್ಟಕ್ಕಾರಿ’ ಮತ್ತು ಅವರು ನಿರ್ಮಿಸಿದ ‘ಇವೈಡ್ ತೊಡಂಗುನ್ನು’ ಮುಂತಾದ ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೆವು. ಚಿತ್ರರಂಗದಲ್ಲಿ ಇಂತಹ ಸಂಕಷ್ಟದಲ್ಲಿರುವವರು ಇನ್ನೂ ಅನೇಕರಿರಬಹುದು’ ಎಂದು ಹೇಳಿದರು.

ಮೋಹನ್ ಶರ್ಮಾ ಅವರ ಕಷ್ಟದ ಕಥೆ:

ಆರೋಗ್ಯ ಸಮಸ್ಯೆ ಹಾಗೂ ವೈದ್ಯಕೀಯ ವೆಚ್ಚ: ಕಾಲಿನ ಶಸ್ತ್ರಚಿಕಿತ್ಸೆ ಮತ್ತು ಲಿಗಮೆಂಟ್ ಸಮಸ್ಯೆಯಿಂದಾಗಿ ಸುಮಾರು 4 ರಿಂದ 5 ಲಕ್ಷ ರೂಪಾಯಿ ವೆಚ್ಚವಾಗಿದೆ. ಇದರ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ವರ್ಟಿಗೋ ಸಮಸ್ಯೆಯಿದ್ದು, ಪ್ರತಿದಿನ ಇನ್ಸುಲಿನ್ ಪಡೆಯಬೇಕಾಗಿದೆ. ಕೇವಲ ಔಷಧಗಳಿಗಾಗಿಯೇ ತಿಂಗಳಿಗೆ ಸುಮಾರು 35,000 ರೂಪಾಯಿ ಬೇಕಾಗುತ್ತದೆ.

ಸಿನಿಮಾ ನಷ್ಟ ಮತ್ತು ಆಸ್ತಿ ಮಾರಾಟ:

ತಮ್ಮ ಕೊನೆಯ ದ್ವಿಭಾಷಾ ಚಿತ್ರ ‘ಗ್ರಾಮಮ್’ ನಿರ್ಮಾಣಕ್ಕೆ ಅಂದಾಜಿಸಿದ್ದ 1.25 ಕೋಟಿ ರೂ. ಬಜೆಟ್ ಏರಿ 2 ಕೋಟಿ ರೂ. ತಲುಪಿತ್ತು. ಸಾಲ ತೀರಿಸಲು ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿದ್ದ ತಮ್ಮ ಮನೆಯನ್ನೇ ಮಾರಾಟ ಮಾಡಬೇಕಾಯಿತು.

ಇದನ್ನೂ ಓದಿ: ನನಗೆ ’ಕಾಂತಾರ’ ಚಿತ್ರದಲ್ಲಿ ಅವಕಾಶ ಕೊಡಿ ಎಂದ ಮೋಹನ್​ ಲಾಲ್ 

ನೆರವಿನ ಹಸ್ತ

ಪ್ರಸ್ತುತ ರೋಟರಿ ಕ್ಲಬ್ ಸ್ನೇಹಿತರ ಸಲಹೆಯಂತೆ ವೃದ್ಧಾಶ್ರಮದಲ್ಲಿ ನೆಲೆಸಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಈಗಾಗಲೇ ಅವರಿಗೆ ಆರ್ಥಿಕ ನೆರವು ನೀಡಿದ್ದಾರೆ. ಪ್ರಸ್ತುತ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿ ನೆರವು ಕೋರಲು ಪ್ರಯತ್ನಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us