ಬಜೆಟ್ 70 ಕೋಟಿ, ಒಟ್ಟಾರೆ ಕಲೆಕ್ಷನ್ 1.5 ಕೋಟಿ; ದೊಡ್ಡ ದುರಂತ ಕಂಡ ಮೋಹನ್ಲಾಲ್ ಸಿನಿಮಾ
ಮೋಹನ್ಲಾಲ್ ಅಭಿನಯದ 'ವೃಷಭ' ಸಿನಿಮಾ 70 ಕೋಟಿ ಬಜೆಟ್ ಹೊಂದಿದ್ದು, ಕೇವಲ 1.5 ಕೋಟಿ ರೂಪಾಯಿ ಗಳಿಸಿ ದೊಡ್ಡ ದುರಂತ ಕಂಡಿದೆ. ಸ್ಟಾರ್ ಹೀರೋ ಇದ್ದರೂ ಸಿನಿಮಾ ಹೀನಾಯವಾಗಿ ಸೋತಿದೆ. ಹಳೆಯ ಕಥೆ ಮತ್ತು ನಿರೂಪಣಾ ಶೈಲಿ ಜನರನ್ನು ಸೆಳೆಯುವಲ್ಲಿ ವಿಫಲವಾಗಿರುವುದು ಇದಕ್ಕೆ ಮುಖ್ಯ ಕಾರಣ. ನಿರ್ಮಾಪಕರಿಗೆ ಅಪಾರ ನಷ್ಟ ಉಂಟಾಗಿದೆ.

ಸ್ಟಾರ್ ಹೀರೋಗಳು ಸಿನಿಮಾದಲ್ಲಿ ನಟಿಸಿದ್ದಾರೆ ಎಂದರೆ ಬಹುತೇಕ ಸಂದರ್ಭಗಳಲ್ಲಿ ಹಾಕಿದ ಬಂಡವಾಳ ಮರಳಿ ಬರುತ್ತದೆ ಎಂಬ ನಂಬಿಕೆ ನಿರ್ಮಾಪಕರಿಗೆ ಇರುತ್ತದೆ. ನಿರ್ಮಾಪಕರು ಸೇಫ್ ಆಗುತ್ತಾರೆ. ಸಲ್ಮಾನ್ ಖಾನ್, ದಳಪತಿ ವಿಜಯ್, ರಜನಿಕಾಂತ್ ಸೇರಿದಂತೆ ಅನೇಕರ ಸಿನಿಮಾ ವಿಮರ್ಶೆಯಲ್ಲಿ ಸೋತರೂ ಒಳ್ಳೆಯ ಗಳಿಕೆ ಮಾಡಿದ ಉದಾಹರಣೆ ಇದೆ. ಈಗ ‘ವೃಷಭ’ ಸಿನಿಮಾದಲ್ಲಿ ಅದು ಸುಳ್ಳಾಗಿದೆ. ಡಿಸೆಂಬರ್ 25ರಂದು ರಿಲೀಸ್ ಆದ ಮೋಹನ್ಲಾಲ್ (Mohanlal) ಅಭಿನಯದ ಈ ಚಿತ್ರದ ಬಜೆಟ್ 70 ಕೋಟಿ ರೂಪಾಯಿ. ಭಾರತದ ಒಟ್ಟಾರೆ ಗಳಿಕೆ ಒಂದೂವರೆ ಕೋಟಿ ರೂಪಾಯಿ.
ಕನ್ನಡದ ನಂದ ಕಿಶೋರ್ ಅವರು ‘ವೃಷಭ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅವರು ಕನ್ನಡದಲ್ಲಿ ‘ಪೊಗರು’ ರೀತಿಯ ಸಿನಿಮಾಗಳನ್ನು ನೀಡಿದ್ದಾರೆ. ಈಗ ಅವರು ಮಲಯಾಳಂಗೆ ತೆರಳಿದ್ದು ಅಲ್ಲಿ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ಸಿನಿಮಾದಲ್ಲಿ ಮೋಹನ್ಲಾಲ್ ಜೊತೆ ಕನ್ನಡದವರಾದ ಸಮರ್ಜಿತ್ ಲಂಕೇಶ್, ರಾಗಿಣಿ ದ್ವಿವೇದಿ, ಗರುಡ ರಾಮ್ ಮೊದಲಾದವರು ನಟಿಸಿದ್ದಾರೆ.
‘ವೃಷಭ’ ಸಿನಿಮಾ ಪುನರ್ಜನ್ಮದ ಕಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ರಾಜರ ಕಥೆ ಕೂಡ ಬರುತ್ತದೆ. ಹೀಗಾಗಿ, ಅದ್ದೂರಿ ಸೆಟ್ಗಳ ನಿರ್ಮಾಣ ಮಾಡಲಾಗಿತ್ತು. ಇದಕ್ಕೆ ಸಾಕಷ್ಟು ಹಣ ವ್ಯಯಿಸಲಾಗಿದೆ. ಒಂದು ಅಂದಾಜಿನ ಪ್ರಕಾರ ಸಿನಿಮಾದ ಬಜೆಟ್ 70 ಕೋಟಿ ರೂಪಾಯಿ. ಈ ಸಿನಿಮಾ ಭಾರತದ ಒಟ್ಟೂ ಕಲೆಕ್ಷನ್ 1.60 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ವಿಶ್ವ ಮಟ್ಟದಲ್ಲಿ ಚಿತ್ರದ ಗಳಿಕೆ 2 ಕೋಟಿ ರೂಪಾಯಿ ಆಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಮೋಹನ್ಲಾಲ್ ತಾಯಿ ಶಾಂತಕುಮಾರಿ ನಿಧನ; ಅಂತಿಮ ನಮನ ಸಲ್ಲಿಸಿದ ಮಮ್ಮುಟಿ
ಅಂದಹಾಗೆ ಈ ಸಿನಿಮಾಗೆ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 9 ನಿರ್ಮಾಪಕರಿದ್ದಾರೆ. ಬಾಲಿವುಡ್ನ ಏಕ್ತಾ ಕಪೂರ್, ಶೋಭಾ ಕಪೂರ್ ಸೇರಿದಂತೆ ಅನೇಕರು ಹಣ ಹೂಡಿದ್ದಾರೆ. ಹಾಕಿದ ಹಣಕ್ಕೆ ಸಾಕಷ್ಟು ನಷ್ಟ ಉಂಟಾಗಿದೆ. ಸಿನಿಮಾದ ಕಥೆ ಹಾಗೂ ಮೇಕಿಂಗ್ ವಿಷಯದಲ್ಲಿ ಹಳೆಯ ಟೆಕ್ನಿಕ್ ಬಳಸಲಾಗಿದೆ. ಈ ಕಾರಣಕ್ಕೆ ಜನರಿಗೆ ಸಿನಿಮಾ ಇಷ್ಟ ಆಗಿಲ್ಲ. ಸಿನಿಮಾದ ಕಥೆಯಲ್ಲಿ ಗಟ್ಟಿತನ ಇಲ್ಲ. ನಿರೂಪಣೆ ಕೂಡ ಅಷ್ಟು ಉತ್ತಮವಾಗಿಲ್ಲ. ಈ ಎಲ್ಲಾ ಕಾರಣದಿಂದ ಸಿನಿಮಾ ಇಷ್ಟು ಹೀನಾಯ ಕಲೆಕ್ಷನ್ ಮಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




