Nanu Kusuma Review: ರಿಯಲಿಸ್ಟಿಕ್ ಶೈಲಿಯಲ್ಲಿ ಮೂಡಿಬಂದ ‘ನಾನು ಕುಸುಮ’; ಅಸಹಾಯಕ ಹೆಣ್ಣಿನ ನೋವಿಗೆ ಹಿಡಿದ ಕನ್ನಡಿ
Nanu Kusuma Kannada Movie: ‘ನಾನು ಕುಸುಮ’ ಚಿತ್ರದ ಎಲ್ಲ ಸನ್ನಿವೇಶಗಳನ್ನು ತುಂಬ ನೈಜವಾಗಿ ಚಿತ್ರಿಸಲಾಗಿದೆ. ಹಾಗಿದ್ದರೂ ಕಥೆಯನ್ನು ಕುತೂಹಲಭರಿತವಾಗಿ ನಿರೂಪಿಸುವ ಕೆಲಸ ಈ ಚಿತ್ರದಲ್ಲಾಗಿದೆ.
ಸಿನಿಮಾ: ನಾನು ಕುಸುಮ
ನಿರ್ಮಾಣ: ಸಪ್ತಗಿರಿ ಕ್ರಿಯೇಷನ್ಸ್
ನಿರ್ದೇಶನ: ಕೃಷ್ಣೇ ಗೌಡ
ಪಾತ್ರವರ್ಗ: ಗ್ರೀಷ್ಮಾ ಶ್ರೀಧರ್, ಕೃಷ್ಣೇ ಗೌಡ, ಸನಾತನಿ ಜೋಶಿ, ಪ್ರತಿಭಾ ಸಂಶಿಮಠ್ ಮುಂತಾದವರು.
ಸ್ಟಾರ್ 3/5
ಹಲವು ಕಾರಣಗಳಿಗಾಗಿ ಕನ್ನಡ ಚಿತ್ರರಂಗ ಗಮನ ಸೆಳೆಯುತ್ತಿದೆ. ಒಂದೆಡೆ ಹೈಬಜೆಟ್ನ ಅದ್ದೂರಿ ಸಿನಿಮಾಗಳು, ಇನ್ನೊಂದೆಡೆ ಸಿಂಪಲ್ ಆದಂತಹ ರಿಯಲಿಸ್ಟಿಕ್ ಸಿನಿಮಾಗಳು. ಈ ಎರಡೂ ಪ್ರಕಾರದ ಚಿತ್ರಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತಿವೆ. ಕೆಲವೇ ದಿನಗಳ ಹಿಂದೆ ‘ಪಿಂಕಿ ಎಲ್ಲಿ’ ಸಿನಿಮಾ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಒಂದಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಆ ಸಿನಿಮಾಗೆ ಬಂಡವಾಳ ಹೂಡಿದ್ದ ಕೃಷ್ಣೇ ಗೌಡ ಅವರು ‘ನಾನು ಕುಸುಮ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಸಹ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿ ಮೆಚ್ಚುಗೆ ಗಳಿಸಿದೆ. ಈಗ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ. ಅಸಹಾಯಕ ಹೆಣ್ಣುಮಗಳೊಬ್ಬಳ ಕಥೆಯನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ತುಂಬ ರಿಯಲಿಸ್ಟಿಕ್ ಆದಂತಹ ರೀತಿಯಲ್ಲಿ ‘ನಾನು ಕುಸುಮ’ ಮೂಡಿಬಂದಿದೆ.
ಬಡ ಕುಟುಂಬದಲ್ಲಿ ಹುಟ್ಟಿದ ಹುಡುಗಿಯರು ಹಲವು ಸವಾಲುಗಳನ್ನು ಎದುರಿಸಿ ಬೆಳೆಯಬೇಕಾಗುತ್ತದೆ. ಅಂಥ ಓರ್ವ ಹುಡುಗಿಯ ಕಥೆಯೇ ‘ನಾನು ಕುಸುಮ’ ಸಿನಿಮಾ. ಡಾಕ್ಟರ್ ಆಗಬೇಕು ಎಂದು ಕನಸು ಕಾಣುತ್ತಾಳೆ ಈ ಚಿತ್ರದ ಕಥಾನಾಯಕಿ ಕುಸುಮ. ಆಕೆಯ ತಂದೆ ಪೋಸ್ಟ್ ಮಾರ್ಟಮ್ ವಿಭಾಗದಲ್ಲಿ ಕೆಲಸ ಮಾಡುವ ನೌಕರ. ತನ್ನ ಮಗಳು ವೈದ್ಯೆಯಾಗಿ ಜನರ ಸೇವೆ ಮಾಡಬೇಕು ಎಂಬುದು ಆತನ ಆಸೆ. ಆದರೆ ವಿಧಿಯ ಲೆಕ್ಕಾಚಾರ ಬೇರೆಯೇ ಇರುತ್ತದೆ. ರಸ್ತೆ ಅಪಘಾತದಲ್ಲಿ ತಂದೆ ಸಾವಿಗೀಡಾಗುತ್ತಾನೆ. ಡಾಕ್ಟರ್ ಆಗಬೇಕು ಎಂದುಕೊಂಡಿದ್ದ ಕುಸುಮ ಬರೀ ನರ್ಸ್ ಆಗುವಷ್ಟಕ್ಕೇ ಸಮಾಧಾನಪಟ್ಟುಕೊಳ್ಳುತ್ತಾಳೆ. ಅಲ್ಲಿಂದ ಅವಳಿಗೆ ಶುರುವಾಗುವುದು ಅಸಲಿ ಸಂಕಷ್ಟ. ಕೆಲಸ ಮಾಡುವ ಜಾಗದಲ್ಲಿ ಕಾಮುಕರ ಕಾಟ ಮತ್ತು ಹಿರಿಯ ಅಧಿಕಾರಿಗಳ ದಬ್ಬಾಳಿಕೆಯಿಂದ ಆಕೆ ನಲುಗುತ್ತಾಳೆ. ಅದರಿಂದ ಕುಸುಮ ಹೊರಬರುತ್ತಾಳಾ? ಅಂತಿಮವಾಗಿ ಆಕೆಗೆ ನ್ಯಾಯ ಸಿಗುತ್ತಾ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.
ಇದನ್ನೂ ಓದಿ: Dhoomam Review: ಸಿಗರೇಟ್ ಬಗ್ಗೆ ಸಂದೇಶ ನೀಡಲು ಎಷ್ಟೆಲ್ಲ ಸರ್ಕಸ್; ಸರಳವಾಗಿಲ್ಲ ‘ಧೂಮಂ’
‘ನಾನು ಕುಸುಮ’ ಚಿತ್ರದ ಎಲ್ಲ ಸನ್ನಿವೇಶಗಳನ್ನು ತುಂಬ ನೈಜವಾಗಿ ಚಿತ್ರಿಸಲಾಗಿದೆ. ಯಾವುದೇ ಕಮರ್ಷಿಯಲ್ ಅಂಶಗಳನ್ನು ಸೇರಿಸುವ ಪ್ರಯತ್ನ ಆಗಿಲ್ಲ. ಎಲ್ಲ ಕಲಾವಿದರು ಸಹಜಾಭಿನಯ ನೀಡಿದ್ದಾರೆ. ಮನರಂಜನೆ ನೀಡಬೇಕು ಎಂಬ ಉದ್ದೇಶದಿಂದ ಹಾಸ್ಯವನ್ನಾಗಲಿ, ಪಂಚಿಂಗ್ ಡೈಲಾಗ್ಗಳನ್ನಾಗಲಿ, ಅನಗತ್ಯ ರೋಚಕತೆಯನ್ನಾಗಲಿ ಬೆರೆಸುವ ಗೋಜಿಗೆ ನಿರ್ದೇಶಕರು ಕೈ ಹಾಕಿಲ್ಲ. ಫ್ಲ್ಯಾಶ್ ಬ್ಯಾಕ್ ತಂತ್ರವನ್ನು ಬಳಸಿಕೊಂಡು ಕಥೆಯನ್ನು ಕುತೂಹಲ ಭರಿತವಾಗಿ ನಿರೂಪಿಸುವ ಕೆಲಸ ಈ ಚಿತ್ರದಲ್ಲಾಗಿದೆ. ಯಾವುದೇ ಅತಿರೇಕಗಳಿಗೂ ಇಲ್ಲಿ ಜಾಗವಿಲ್ಲ. ಇಂಥ ಸಿಂಪಲ್ ಮತ್ತು ರಿಯಲಿಸ್ಟಿಕ್ ಶೈಲಿಯ ಸಿನಿಮಾಗಳನ್ನು ಇಷ್ಟಪಡುವವರಿಗೆ ‘ನಾನು ಕುಸುಮ’ ಚಿತ್ರ ಉತ್ತಮ ಆಯ್ಕೆ. ಬೆಸಗರಹಳ್ಳಿ ರಾಮಣ್ಣ ಅವರು ಬರೆದ ಕಥೆಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ.
ಇದನ್ನೂ ಓದಿ: Adipurush Review: ಗ್ರಾಫಿಕ್ಸ್ ನಂಬಿಕೊಂಡು ಯುದ್ಧ ಮಾಡಿದ ರಾಮ-ರಾವಣ; ಇದು ಓಂ ರಾವತ್ ರಾಮಾಯಣ
ಯುವತಿಯೊಬ್ಬಳ ಅಸಹಾಯಕ ಪರಿಸ್ಥಿತಿಯನ್ನು ‘ನಾನು ಕುಸುಮ’ ಸಿನಿಮಾದಲ್ಲಿ ಕಣ್ಣಿಗೆ ಕಟ್ಟುವಂತೆ ವಿವರಿಸಲಾಗಿದೆ. ಇದು ಕೇವಲ ಓರ್ವ ಕುಸುಮಾಳ ಕಥೆ ಎನಿಸುವುದಿಲ್ಲ. ಈ ಚಿತ್ರದ ಕಥಾನಾಯಕಿಯ ರೀತಿ ಅಸಂಖ್ಯಾತ ಹೆಣ್ಣುಮಕ್ಕಳು ಕಷ್ಟ ಅನುಭವಿಸಿದ್ದಾರೆ. ಆ ಎಲ್ಲರ ಕಣ್ಣೀರು, ನೋವಿನ ಪ್ರತಿಬಿಂಬದಂತೆ ಈ ಚಿತ್ರ ಮೂಡಿಬಂದಿದೆ. ಕೆಲಸದ ಜಾಗದಲ್ಲಿ ಮಹಿಳೆಯರು ಎದುರಿಸಬಹುದಾದ ಶೋಷಣೆಗಳ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲುತ್ತದೆ.
ಇದನ್ನೂ ಓದಿ: Pinki Elli Review: ನಾಟಕೀಯ ತಂತ್ರಗಳಿಲ್ಲದೆ ಮಂತ್ರಮುಗ್ಧ ಆಗಿಸುವ ನೈಜ ಸಿನಿಮಾ
ನಟಿ ಗ್ರೀಷ್ಮಾ ಶ್ರೀಧರ್ ಅವರು ಕುಸುಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನೇಕ ತಲ್ಲಣಗಳನ್ನು ಅನುಭವಿಸುವ ಬಡ ಕುಟುಂಬದ ಹುಡುಗಿಯಾಗಿ ಅವರು ಪ್ರೇಕ್ಷಕರನ್ನು ಆವರಿಸಿಕೊಂಡಿದ್ದಾರೆ. ತಂದೆಯ ಪಾತ್ರದಲ್ಲಿ ನಟಿಸಿರುವ ಕೃಷ್ಣೇ ಗೌಡ ಕೂಡ ಗಮನ ಸೆಳೆಯುತ್ತಾರೆ. ಸನಾತನಿ ಜೋಶಿ, ಪ್ರತಿಭಾ ಸಂಶೀಮಠ್ ಮುಂತಾದವರ ನಟನೆಗೂ ಮೆಚ್ಚುಗೆ ಸಲ್ಲುತ್ತದೆ. ಸಿಂಕ್ ಸೌಂಡ್ ಮೂಲಕ ಇಡೀ ಸಿನಿಮಾ ಮೂಡಿಬಂದಿದೆ. ಛಾಯಾಗ್ರಾಹಕ ಅರ್ಜುನ್ ರಾಜಾ ಅವರು ನೈಜತೆಗೆ ಹೆಚ್ಚು ಮಹತ್ವ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.