
ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯನ್ನು ‘ಚಂದ್ರಹಾಸ’ ಸಿನಿಮಾದಲ್ಲಿ ತೋರಿಸಲಾಗಿದೆ. ನಿರ್ದೇಶಕ ಆನಂದ್ ಕಲಕಬಂಡಿ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಹರೀಶ್ ಹಿರಿಯೂರು, ಛಾಯಶ್ರೀ ಉಮೇಶ್, ನಿಂಗರಾಜು ಮಂಡ್ಯ, ಸಂತೋಷ್ ಕೇರಿ, ಸೂರ್ಯಕಲಾ, ಜ್ಯೋತಿ ಲಕ್ಷ್ಮಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಸಂತಗೌಡ ಪಾಟೀಲ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ.
‘ಚಂದ್ರಹಾಸ’ ಸಿನಿಮಾಗಾಗಿ ನಿರ್ದೇಶಕ ಆನಂದ್ ಕಲಕಬಂಡಿ ಅವರು ಜನಸಾಮಾನ್ಯರಿಗೆ ಬೇಗನೆ ಕನೆಕ್ಟ್ ಆಗುವಂತಹ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮನೆಯ ಜವಾಬ್ದಾರಿ ವಹಿಸಿಕೊಳ್ಳದೇ ಇರುವ ಯುವಕನ ಜೀವನದಲ್ಲಿ ಏನೆಲ್ಲ ತೊಂದರೆಗಳು ಎದುರಾಗುತ್ತವೆ ಎಂಬುದನ್ನು ಅವರು ಎಳೆಎಳೆಯಾಗಿ ತೋರಿಸಿದ್ದಾರೆ. ಈ ಕಥೆಯ ಮೂಲಕ ಪ್ರೇಕ್ಷಕರಿಗೆ ಸಂದೇಶ ನೀಡುವ ಪ್ರಯತ್ನವೂ ಆಗಿದೆ.
ಈ ಚಿತ್ರದ ಕಥಾನಾಯಕ ಸೋಮ (ಹರೀಶ್ ಹಿರಿಯೂರು) ಕಿಂಚಿತ್ತೂ ಜವಾಬ್ದಾರಿ ಇಲ್ಲದ ವ್ಯಕ್ತಿ. ಅವನಿಗೆ ಒಂದು ಮದುವೆ ಮಾಡಿದರೆ ಸರಿ ಆಗುತ್ತಾನೆ ಎಂಬ ಕಾರಣಕ್ಕೆ ಮಾವನ ಮಗಳು ಸಿರಿ (ಛಾಯಶ್ರೀ ಉಮೇಶ್) ಜೊತೆ ಮದುವೆ ಮಾಡಿಸಲಾಗುತ್ತದೆ. ಆದರೆ ಮದುವೆ ಆದ ಬಳಿಕ ಅವನ ಜೀವನ ಇನ್ನಷ್ಟು ಹದಗೆಡುತ್ತದೆ. ಮನೆಯ ಆರ್ಥಿಕ ಪರಿಸ್ಥಿತಿ ಮತ್ತು ಕುಟುಂಬ ಸದಸ್ಯರ ಆರೋಗ್ಯ ಹದಗೆಟ್ಟಾಗ ಹೇಗಾದರೂ ಮಾಡಿ ಬದುಕು ಕಟ್ಟಿಕೊಳ್ಳಬೇಕು ಎಂದು ಸೋಮ ಕಷ್ಟಪಡುತ್ತಾನೆ. ಆದರೆ ಹಣದ ಅನಿವಾರ್ಯತೆಯ ಕಾರಣಕ್ಕೆ ಅಡ್ಡದಾರಿ ಹಿಡಿಯುತ್ತಾನೆ. ಬೆಟ್ಟಿಂಗ್ ಚಟಕ್ಕೆ ಬಿದ್ದು ಜೀವನ ಹಾಳುಮಾಡಿಕೊಳ್ಳುತ್ತಾನೆ. ಇಷ್ಟೆಲ್ಲ ಸೋಲು ಕಂಡ ಆತ ಅಂತಿಮವಾಗಿ ಗೆಲ್ಲುತ್ತಾನೆ. ಅದು ಹೇಗೆ ಎಂಬುದನ್ನು ಸಿನಿಮಾದಲ್ಲೇ ನೋಡಿ ತಿಳಿಯಬೇಕು.
ಇದು ಸಿಂಪಲ್ ಕಥೆ ಆಗಿದ್ದರೂ ಕೂಡ ಸಾಕಷ್ಟು ಅಂಶಗಳನ್ನು ಪ್ರೇಕ್ಷಕರಿಗೆ ಮನವರಿಕೆ ಮಾಡಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಬೆಟ್ಟಿಂಗ್ ಭೂತದ ಬಗ್ಗೆ ಗಟ್ಟಿಯಾದ ಸಂದೇಶವನ್ನು ನೀಡಲಾಗಿದೆ. ಜೀವನದಲ್ಲಿ ಉತ್ತಮವಾದ ಸ್ನೇಹಿತರು ಇರುವುದು ಎಷ್ಟು ಮುಖ್ಯ ಎಂಬುದನ್ನು ಈ ಸಿನಿಮಾ ಮೂಲಕ ತೋರಿಸಲಾಗಿದೆ. ಹಣ ಗಳಿಸಲು ಅಕ್ರಮ ಮಾರ್ಗಗಳನ್ನು ಅನುಸರಿಸುವುದು ಎಂದಿಗೂ ಸೂಕ್ತವಲ್ಲ ಎಂದು ಬುದ್ಧಿ ಹೇಳಲಾಗಿದೆ. ಹಾಗಂತ ಸಿನಿಮಾವನ್ನು ಬೋರಿಂಗ್ ಆಗಿ ನಿರೂಪಿಸಿಲ್ಲ. ಸಾಧ್ಯವಾದಷ್ಟು ಲವಲವಿಕೆಯಿಂದಲೇ ಕಥೆಯನ್ನು ಕಟ್ಟಿಕೊಡಲಾಗಿದೆ.
ಮೊದಲಾರ್ಧದಲ್ಲಿ ನಿರ್ದೇಶಕರು ಹಾಸ್ಯಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಂಭಾಷಣೆಗಳ ಮೂಲಕ ನಗು ಮೂಡಿಸಲಾಗಿದೆ. ಚುರುಕಾದ ಸಂಭಾಷಣೆಗಳಿಂದ ಚಿತ್ರಕ್ಕೆ ಮರುಗು ಬಂದಿದೆ. ಕಥೆ ಮುಂದಕ್ಕೆ ಸಾಗಿದಂತೆಲ್ಲ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ. ಮಧ್ಯಂತರದ ಬಳಿಕ ಹಾಸ್ಯಕ್ಕಿಂತಲೂ ಹೆಚ್ಚಾಗಿ ಜೀವನ ಮೌಲ್ಯಗಳನ್ನು ತಿಳಿಸಲು ಪ್ರಯತ್ನಿಸಲಾಗಿದೆ.
ಇದನ್ನೂ ಓದಿ: ‘418’ ವಿಮರ್ಶೆ: ಸೈಕಲಾಜಿಕಲ್ ಥ್ರಿಲ್ಲರ್ ಜೊತೆ ಹಾರರ್ ಅನುಭವ ನೀಡುವ ಸಿನಿಮಾ
ಒಳ್ಳೆಯ ದಾರಿಯಲ್ಲಿ ಹಣ ಸಂಪಾದನೆ ಮಾಡಿ, ಕುಟುಂಬದವರನ್ನು ಚೆನ್ನಾಗಿ ನೋಡಿಕೊಂಡರೆ ಮಾತ್ರ ಮನೆಯಲ್ಲಿ ಮತ್ತು ಸಮಾಜದಲ್ಲಿ ಗೌರವ ಸಿಗುತ್ತದೆ ಎಂಬ ಸಂದೇಶವನ್ನು ಯುವಕರಿಗೆ ಈ ಸಿನಿಮಾದ ಮೂಲಕ ನೀಡಲಾಗಿದೆ. ಬುದ್ಧಿಹೇಳುವ ಸ್ನೇಹಿತರನ್ನು ಎಂದಿಗೂ ಕಳೆದುಕೊಳ್ಳಬಾರದು ಎಂಬ ಕಿವಿಮಾತನ್ನು ಕೂಡ ಹೇಳಲಾಗಿದೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳು ಕಥೆಗೆ ಪೂರಕವಾಗಿವೆ.
ಹರೀಶ್ ಹಿರಿಯೂರು ಅವರು ಸೋಮನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಛಾಯಶ್ರೀ ಉಮೇಶ್ ಅವರು ಎರಡು ಶೇಡ್ ಇರುವ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆಗಾಗ ಮಾತ್ರ ಕಾಣಿಸಿಕೊಂಡರೂ ಕೂಡ ನಿಂಗರಾಜು ಮಂಡ್ಯ ಅವರ ಪಾತ್ರಕ್ಕೆ ಈ ಚಿತ್ರದಲ್ಲಿ ಹೆಚ್ಚು ತೂಕವಿದೆ. ಸಂತೋಷ್ ಕೇರಿ ಕೂಡ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.