Kaalapatthar Review: ಅಣ್ಣಾವ್ರ ಅಭಿಮಾನಿಯ ಒಂದು ಮೂರ್ತಿಯ ಕಥೆ ‘ಕಾಲಾಪತ್ಥರ್​’

‘ಕಾಲಾಪತ್ಥರ್​’ ಸಿನಿಮಾದಲ್ಲಿ ವಿಕ್ಕಿ ವರುಣ್​ ಅವರು ಅಣ್ಣಾವ್ರ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ಆರಂಭದಿಂದ ಕೊನೇ ತನಕ ಆ ಅಭಿಮಾನವೇ ಒಂದು ಪಾತ್ರದ ರೀತಿ ಕಾಣಿಸಿದೆ. ನಾಯಕನಾಗಿ, ನಿರ್ದೇಶಕನಾಗಿ ವಿಕ್ಕಿ ವರುಣ್​ ಅವರು ಒಂದು ಡಿಫರೆಂಟ್​ ಆದಂತಹ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಿದ್ದಾರೆ. ‘ಕಾಲಾ ಪತ್ಥರ್​’ ಸಿನಿಮಾದ ವಿಮರ್ಶೆ ಇಲ್ಲಿದೆ..

Kaalapatthar Review: ಅಣ್ಣಾವ್ರ ಅಭಿಮಾನಿಯ ಒಂದು ಮೂರ್ತಿಯ ಕಥೆ ‘ಕಾಲಾಪತ್ಥರ್​’
ವಿಕ್ಕಿ ವರುಣ್​
Follow us
|

Updated on: Sep 13, 2024 | 4:21 PM

ಸಿನಿಮಾ: ಕಾಲಾಪತ್ಥರ್​. ನಿರ್ಮಾಣ: ಸುರೇಶ್​, ನಾಗರಾಜು. ನಿರ್ದೇಶನ: ವಿಕ್ಕಿ ವರುಣ್​. ಪಾತ್ರವರ್ಗ: ವಿಕ್ಕಿ ವರುಣ್​, ಧನ್ಯಾ ರಾಮ್​ ಕುಮಾರ್​, ಟಿ.ಎಸ್​. ನಾಗಾಭರಣ, ರಾಜೇಶ್​ ನಟರಂಗ, ಸಂಪತ್​ ಮೈತ್ರೇಯಾ, ಗಿಲ್ಲಿ ನಟ ಮುಂತಾದವರು. ಸ್ಟಾರ್​: 3/5

ಪ್ರತಿ ವಾರ ಎಲ್ಲ ಭಾಷೆಗಳಿಂದ ಹಲವಾರು ಸಿನಿಮಾಗಳು ಬಿಡುಗಡೆ ಆಗುತ್ತವೆ. ಪ್ರತಿ ಸಿನಿಮಾದಲ್ಲೂ ಹೊಸ ಬಗೆಯ ಕಥೆ ಇರಬೇಕು ಎಂದು ಪ್ರೇಕ್ಷಕ ಬಯಸುತ್ತಾನೆ. ಮಾಮೂಲಿ ಕಹಾನಿಗಳನ್ನು ಬದಿಗಿಟ್ಟು ಡಿಫರೆಂಟ್​ ಆಗಿರುವ ಏನಾದರೂ ಒಂದನ್ನು ಪ್ರೇಕ್ಷಕರಿಗೆ ತೋರಿಸುವುದು ಸವಾಲಿನ ಕೆಲಸ. ಆ ವಿಚಾರದಲ್ಲಿ ‘ಕಾಲಾಪತ್ಥರ್​’ ಸಿನಿಮಾ ಭಿನ್ನ ಎನಿಸಿಕೊಳ್ಳುತ್ತದೆ. ಮನುಷ್ಯನ ಜನಪ್ರಿಯತೆ ಮತ್ತು ಅಹಂಕಾರಕ್ಕೆ ಸಂಬಂಧಿಸಿದ ಕಥೆಯನ್ನು ಈ ಸಿನಿಮಾ ಆಯ್ದುಕೊಂಡಿದೆ. ಸೈನಿಕನೊಬ್ಬನ ಜೀವನದಲ್ಲಿ ನಡೆಯುವ ಘಟನೆಗಳನ್ನು ಕೇಂದ್ರವಾಗಿ ಇಟ್ಟುಕೊಂಡು ‘ಕಾಲಾ ಪತ್ಥರ್​’ ಸಿನಿಮಾವನ್ನು ಮಾಡಲಾಗಿದೆ.

ಈ ಚಿತ್ರದಲ್ಲಿ ನಟ ವಿಕ್ಕಿ ವರುಣ್​ ಅವರು ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ನಿರ್ದೇಶನವನ್ನೂ ಅವರೇ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ಧನ್ಯಾ ರಾಮ್​ ಕುಮಾರ್​ ಅವರು ನಟಿಸಿದ್ದಾರೆ. ವಿಕ್ಕಿ ವರುಣ್​ ಅವರು ಶಂಕರ ಎಂಬ ಸೈನಿಕನಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ ಈ ಶಂಕರ್​ ಸದಾ ಕಾಲ ಗಡಿಯಲ್ಲಿ ನಿಂತು ಯುದ್ಧ ಮಾಡುವ ಸೈನಿಕನಲ್ಲ. ಆತನ ಯುದ್ಧ ಮನಸ್ಸಿಗೆ ಸಂಬಂಧಿಸಿದ್ದು!

‘ಕಾಲಾಪತ್ಥರ್​’ ಕಥೆ ಹೀಗಿದೆ.. ಭಯೋತ್ಪಾದಕರನ್ನು ಒಂಟಿಯಾಗಿ ಎದುರಿಸಿ ನೂರಾರು ಸೈನಿಕರ ಜೀವ ಉಳಿಸಿದ ಕಾರಣಕ್ಕೆ ಸೈನಿಕ ಶಂಕರನಿಗೆ ರಾಷ್ಟ್ರ ಮಟ್ಟದಲ್ಲಿ ಜನಪ್ರಿಯತೆ ಸಿಗುತ್ತದೆ. ಆತನ ಹಳ್ಳಿಯಲ್ಲಿ ಒಂದು ಮೂರ್ತಿಯನ್ನೂ ಕೆತ್ತಿಸಲಾಗುತ್ತದೆ. ಬದುಕಿರುವಾಗಲೇ ಇಷ್ಟೆಲ್ಲ ಪ್ರಶಂಸೆ, ಗೌರವ ಸಿಕ್ಕಿದ್ದರಿಂದ ಶಂಕರನ ಮನಸ್ಸಿನಲ್ಲಿ ಒಂದಷ್ಟು ಬದಲಾವಣೆಗಳು ಆಗುತ್ತವೆ. ಕಡೆಕಡೆಗೆ ಆತನ ಗಮನವೆಲ್ಲ ಮೂರ್ತಿ ಮೇಲೆಯೇ ಇರುತ್ತದೆ. ಮೂರ್ತಿಗೆ ಏಟಾದರೆ ಶಂಕರನ ದೇಹದಲ್ಲಿ ರಕ್ತ ಬರುತ್ತದೆ! ಮೂರ್ತಿ ಗಲೀಜಾದರೆ ಶಂಕನದ ಮೈ ಕೊಳೆಯಾಗುತ್ತದೆ. ಈ ಮಾಯೆಯ ಹಿಂದಿರುವ ಸತ್ಯ ಏನು ಎಂಬುದು ತಿಳಿಯಬೇಕಿದ್ದರೆ ಪೂರ್ತಿ ಸಿನಿಮಾ ನೋಡಬೇಕು.

ವ್ಯಕ್ತಿಯೊಬ್ಬನ ಜನಪ್ರಿಯತೆಯ ಕುರಿತ ಮೂಡಿಬಂದ ಸಿನಿಮಾಗಳು ವಿರಳ. ಅವುಗಳ ಸಾಲಿಗೆ ‘ಕಾಲಾ ಪತ್ಥರ್​’ ಕೂಡ ಸೇರ್ಪಡೆ ಆಗಿದೆ. ಕನ್ನಡದ ಮಟ್ಟಿಗೆ ಒಂದು ಅಪರೂಪದ ಪ್ರಯತ್ನವಾಗಿ ಗಮನ ಸೆಳೆಯುತ್ತದೆ. ವಿಕ್ಕಿ ವರುಣ್​ ಅವರು ಇಂಥ ಡಿಫರೆಂಟ್​ ಆದಂತಹ ಕಥೆಯಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಅವರ ಪಾತ್ರದ ಸುತ್ತವೇ ಇಡೀ ಸಿನಿಮಾ ಸಾಗುತ್ತದೆ. ಆ್ಯಕ್ಷನ್​ ದೃಶ್ಯಗಳಲ್ಲಿಯೂ ಅವರು ಗಮನ ಸೆಳೆದಿದ್ದಾರೆ. ದೇಶ ಕಾಯುವ ಸೈನಿಕನ ತವರಿನಲ್ಲಿ ಎಷ್ಟೆಲ್ಲ ಸಮಸ್ಯೆಗಳು ಇರುತ್ತವೆ ಎಂಬುದನ್ನು ಕೂಡ ಈ ಸಿನಿಮಾ ತೆರೆದಿಡುತ್ತದೆ.

ಡಾ. ರಾಜ್​ಕುಮಾರ್​ ಅವರ ಇಮೇಜ್​ ಕೂಡ ‘ಕಾಲಾಪತ್ಥರ್​’ ಸಿನಿಮಾದಲ್ಲಿ ಒಂದು ಪಾತ್ರದ ರೀತಿ ಕಾಣಿಸಿಕೊಂಡಿದೆ. ಅದು ಈ ಚಿತ್ರದ ಹೈಲೈಟ್​. ಕರುನಾಡಿನಲ್ಲಿ ಜನಪ್ರಿಯತೆಯ ವಿಚಾರಕ್ಕೆ ಬಂದರೆ ಅಣ್ಣಾವ್ರನ್ನು ಮೀರಿಸುವಂತಹ ಮತ್ತೊಬ್ಬ ವ್ಯಕ್ತಿ ಇಲ್ಲ. ಅಷ್ಟೆಲ್ಲ ಜನಪ್ರಿಯತೆ ಇದ್ದರೂ ಕೂಡ ಅವರು ತಮ್ಮತನವನ್ನು ಕಳೆದುಕೊಂಡಿರಲಿಲ್ಲ. ಅವರ ಕೆಲಸಕ್ಕೆ ಆ ಜನಪ್ರಿಯತೆ ಅಡ್ಡಿ ಆಗಲಿಲ್ಲ. ಈ ಅಂಶವನ್ನು ಒಂದು ಸಂದೇಶದ ರೀತಿ ‘ಕಾಲಾ ಪತ್ಥರ್​’ ಸಿನಿಮಾದಲ್ಲಿ ವಿವರಿಸಲಾಗಿದೆ. ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಡಾ. ರಾಜ್​ಕುಮಾರ್​ ಅವರ ಧ್ವನಿ ಕೂಡ ಕೇಳಿಸುತ್ತದೆ. ಅಣ್ಣಾವ್ರ ಅಭಿಮಾನಿಗಳಿಗೆ ಇದು ಸಖತ್ ಖುಷಿ ನೀಡುವ ವಿಷಯ.

ಇದನ್ನೂ ಓದಿ: Ibbani Tabbida lleyali Review: ಇಬ್ಬನಿಯಂತೆ ತಂಪಾದರೂ ದೀರ್ಘ ಎನಿಸುವ ಎಮೋಷನಲ್ ಪ್ರೇಮಕಥೆ

ತಾಂತ್ರಿಕವಾಗಿ ‘ಕಾಲಾಪತ್ಥರ್​’ ಸಿನಿಮಾ ಅಚ್ಚುಕಟ್ಟಾಗಿದೆ. ಅನೂಪ್​ ಸಿಳೀನ್​ ಅವರು ಹಿನ್ನೆಲೆ ಸಂಗೀತದ ಮೂಲಕ ಸಿನಿಮಾದ ಮೆರುಗು ಹೆಚ್ಚಿಸಿದ್ದಾರೆ. ಛಾಯಾಗ್ರಾಹಕ ಸಂದೀಪ್​ ಕುಮಾರ್​ ಅವರ ಕೆಲಸಕ್ಕೂ ಮೆಚ್ಚುಗೆ ಸಲ್ಲಬೇಕು. ಅನುಭವಿ ಕಲಾವಿದರಾದ ರಾಜೇಶ್​ ನಟರಂಗ, ಸಂಪತ್​ ಮೈತ್ರೇಯಾ, ಟಿ.ಎಸ್​. ನಾಗಾಭರಣ ಮುಂತಾದವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ನಟಿ ಧನ್ಯಾ ರಾಮ್​ಕುಮಾರ್​ ಅವರು ಸಿಂಪಲ್​ ಹುಡುಗಿಯಾಗಿ ಇಷ್ಟವಾಗುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.