Mr. Natwarlal Review: ಹಲವು ಗೆಟಪ್​ ಧರಿಸಿ ಚಾಲಾಕಿತನ ತೋರಿದ ‘ನಟ್ವರ್​ಲಾಲ್​’

ಶುರುವಿನಿಂದಲೇ ‘ಮಿಸ್ಟರ್​ ನಟ್ವರ್​ಲಾಲ್​’ ಸಿನಿಮಾ ಕುತೂಹಲ ಹುಟ್ಟಿಸುತ್ತದೆ. ಪೊಲೀಸ್ ಆಫೀಸರ್​ ಒಬ್ಬರ ಕೊಲೆಯ ಮೂಲಕ ಕಹಾನಿ ಆರಂಭ ಆಗುತ್ತದೆ. ಆ ಹತ್ಯೆಯ ಹಿಂದಿನ ಮಿಸ್ಟರಿ ಏನು ಎಂಬುದು ತಿಳಿಯಲು ಹೊರಟರೆ ಇನ್ನೂ ಅನೇಕ ಕ್ರೈಮ್​ ಕಥೆಗಳು ಕಣ್ಣೆದುರಿಗೆ ಬರುತ್ತವೆ. ಈ ಸಿನಿಮಾದಲ್ಲಿ ನಟ ತನುಷ್​ ಶಿವಣ್ಣ ಅವರಿಗೆ ಹಲವು ಗೆಟಪ್​ಗಳಿವೆ.

Mr. Natwarlal Review: ಹಲವು ಗೆಟಪ್​ ಧರಿಸಿ ಚಾಲಾಕಿತನ ತೋರಿದ ‘ನಟ್ವರ್​ಲಾಲ್​’
ತನುಷ್​ ಶಿವಣ್ಣ
Follow us
ಮದನ್​ ಕುಮಾರ್​
|

Updated on: Feb 24, 2024 | 1:37 PM

ಚಿತ್ರ: ಮಿಸ್ಟರ್​ ನಟ್ವರ್​ಲಾಲ್​. ನಿರ್ಮಾಣ: ತನುಷ್​​ ಶಿವಣ್ಣ ನಿರ್ದೇಶನ: ವಿ. ಲವ. ಪಾತ್ರವರ್ಗ: ತನುಷ್​ ಶಿವಣ್ಣ, ಸೋನಲ್​ ಮಾಂಥೆರೋ, ರಾಜೇಶ್​ ನಟರಂಗ, ನಾಗಭೂಷಣ್​, ಯಶ್​ ಶೆಟ್ಟಿ, ಕಾಕ್ರೋಚ್​ ಸುಧಿ, ಸುಜಯ್​ ಶಾಸ್ತ್ರೀ, ಹರಿಣಿ ಶ್ರೀಕಾಂತ್​, ಬಾಲರಾಜ್​ ವಾಡಿ ಮುಂತಾದವರು. ಸ್ಟಾರ್: 3/5

‘ಮಡಮಕ್ಕಿ’, ‘ನಂಜುಂಡಿ ಕಲ್ಯಾಣ’ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ ನಟ ತನುಷ್​ ಶಿವಣ್ಣ (Tanush Shivanna) ಅವರು ಈಗ ‘ಮಿಸ್ಟರ್​ ನಟ್ವರ್​ಲಾಲ್​’ ಸಿನಿಮಾ ಮೂಲಕ ಜನರ ಎದುರು ಬಂದಿದ್ದಾರೆ. ಈ ಬಾರಿ ಅವರು ಒಂದು ಬೇರೆಯದೇ ರೀತಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರಿಗೆ ಜೋಡಿಯಾಗಿ ಸೋನಲ್​ ಮಾಂಥೆರೋ (Sonal Monteiro) ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅನೇಕ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ರಾಜೇಶ್ ನಟರಂಗ, ಬಾಲರಾಜ್​ ವಾಡಿ, ಹರಿಣಿ ಶ್ರೀಕಾಂತ್​ ಮುಂತಾದವರು ಸಾಥ್​ ನೀಡಿದ್ದಾರೆ. ವಿ. ಲವ ಅವರು ‘ಮಿಸ್ಟರ್​ ನಟ್ವರ್​ಲಾಲ್​’ (Mr. Natwarlal) ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ತನುಷ್​ ಅವರು ಹೀರೋ ಆಗಿ ನಟಿಸುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಮೇಕಿಂಗ್​ನಲ್ಲಿ ಯಾವುದೇ ಕೊರತೆ ಇಲ್ಲದಂತೆ ಅವರು ನಿರ್ಮಾಣ ಮಾಡಿದ್ದಾರೆ.

ಆರಂಭದಿಂದಲೇ ‘ಮಿಸ್ಟರ್​ ನಟ್ವರ್​ಲಾಲ್​’ ಸಿನಿಮಾ ಕುತೂಹಲ ಮೂಡಿಸುತ್ತದೆ. ಪೊಲೀಸ್ ಅಧಿಕಾರಿಯೊಬ್ಬರ ಕೊಲೆಯ ಮೂಲಕ ಕಥೆ ಶುರುವಾಗುತ್ತದೆ. ಆ ಮರ್ಡರ್​ ಹಿಂದಿನ ರಹಸ್ಯ ಏನು ಎಂಬುದು ತಿಳಿಯಲು ಹೊರಟರೆ ಇನ್ನೂ ಕೆಲವು ಕ್ರೈಂಗಳು ಗೋಚರಿಸುತ್ತವೆ. ಅಚ್ಚರಿ ಎಂದರೆ ಇದನ್ನೆಲ್ಲ ಮಾಡಿದ್ದು ಯಾರೋ ವಿಲನ್​ ಅಲ್ಲ! ಬದಲಿಗೆ, ಹೀರೋನೇ ಇಲ್ಲಿ ನೆಗೆಟಿವ್​ ಅವತಾರ ತಾಳಿದ್ದಾನೆ. ಅಸಾಧಾರಣ ಕ್ರಿಮಿನಲ್​ ಆಗಿ ಆ ಪಾತ್ರದ ಪರಿಚಯ ಆಗುತ್ತದೆ. ಅದಕ್ಕೆ ಕಾರಣ ಏನು ಎಂಬ ಕೌತುಕದ ಪ್ರಶ್ನೆ ಪ್ರೇಕ್ಷಕರ ಮನದಲ್ಲಿ ಹುಟ್ಟಿಕೊಳ್ಳುತ್ತದೆ. ಅಲ್ಲಿಂದ ಸಿನಿಮಾದ ಅಸಲಿ ಕಹಾನಿ ತೆರೆದುಕೊಳ್ಳುತ್ತದೆ.

ಮಹಾನಗರದಲ್ಲಿ ಇಂಥ ಕೃತ್ಯ ನಡೆಸಿದ ಕಥಾನಾಯಕನ ಹಿನ್ನೆಲೆ ಕೆದಕಿದರೆ ಹಳ್ಳಿ ಪರಿಸರ ಕಣ್ಣೆದುರು ಬರುತ್ತದೆ. ಗೌಡರ ಮಗನಾಗಿ, ಯುವ ರೈತನಾಗಿ ಆತ ಓರ್ವ ಸಿಂಪಲ್ ವ್ಯಕ್ತಿ. ಅಂಥ ಮನುಷ್ಯ ಏಕಾಏಕಿ ಮಹಾ ಹ್ಯಾಕರ್​ ಆಗುತ್ತಾನೆ, ಮೋಸ್ಟ್​ ವಾಂಟೆಂಡ್​ ಕ್ರಿಮಿನಲ್​ ಆಗುತ್ತಾನೆ. ಅದಕ್ಕೆಲ್ಲ ಕಾರಣ ಆಗುವುದು ಆತನ ಫ್ಯಾಮಿಲಿ ಸಂಘರ್ಷ ಮತ್ತು ಸಮಾಜದಲ್ಲಿನ ದುಷ್ಟರ ಕಾಟ. ಒಟ್ಟಿನಲ್ಲಿ ಮೇಲ್ನೋಟಕ್ಕೆ ಒಬ್ಬ ಕ್ರಿಮಿನಲ್​ ರೀತಿ ಕಾಣಿಸುವ ಕಥಾನಾಯಕ ನಟ್ವರ್​ಲಾಲ್​ನ ಅಸಲಿ ಉದ್ದೇಶ ಮತ್ತು ಮುಖ ಬೇರೆಯದೇ ಇದೆ. ಪೂರ್ತಿ ಸಿನಿಮಾ ನೋಡಿದರೆ ಅದೇನು ಎಂಬುದು ತಿಳಿಯುತ್ತದೆ.

ಇದನ್ನೂ ಓದಿ: For Regn Review: ಡಿಫರೆಂಟ್​ ಜೋಡಿಯ ಸಂಸಾರದ ಕಥೆಯಲ್ಲಿ ಕೊನೆವರೆಗೂ ಸಸ್ಪೆನ್ಸ್​

ತನುಷ್​ ಶಿವಣ್ಣ ಅವರು ಈ ಸಿನಿಮಾದಲ್ಲಿ ಹತ್ತು ಹಲವು ಗೆಟಪ್​ ಪ್ರಯತ್ನಿಸಿದ್ದಾರೆ. ಅಘೋರಿಯಾಗಿ, ಲಾಯರ್​ ಆಗಿ, ರೊಮ್ಯಾಂಟಿಕ್​ ಪ್ರೇಮಿಯಾಗಿ, ಹ್ಯಾಕರ್​ ಆಗಿ ಅಷ್ಟೇ ಅಲ್ಲದೇ ಶೌಚಾಲಯ ಸ್ವಚ್ಚ ಮಾಡುವ ಕೆಲಸಗಾರನಾಗಿಯೂ ಅವರು ಕಾಣಿಸಿಕೊಂಡಿದ್ದಾರೆ. ಆ ಮೂಲಕ ತಮ್ಮ ಅಭಿನಯ ತೋರಿಸಲು ಅವರಿಗೆ ಈ ಸಿನಿಮಾದಲ್ಲಿ ಉತ್ತಮ ಅವಕಾಶ ಸಿಕ್ಕಿದೆ. ಇನ್ನು, ನಿರ್ದೇಶಕ ಲವ ಅವರು ಈ ಸಿನಿಮಾದ ಹೀರೋ ಪಾತ್ರವನ್ನು ಓರ್ವ ಸೂಪರ್​ ಹೀರೋ ರೀತಿ ಕಟ್ಟಿಕೊಟ್ಟಿದ್ದಾರೆ. ಯಾಕೆಂದರೆ, ನಟ್ವರ್​ಲಾಲ್​ ಏನು ಬೇಕಾದರೂ ಮಾಡಬಲ್ಲ. ಯಾರ ವೆಬ್​ಸೈಟ್​, ಸರ್ವರ್​, ಸಿಸಿಟಿವಿಯನ್ನು ಬೇಕಿದ್ದರೂ ಹ್ಯಾಕ್​ ಮಾಡಬಲ್ಲ. ಬಾಂಬ್​ ತಯಾರಿಸಬಲ್ಲ. ಶಾರ್ಪ್​ ಶೂಟರ್​ ರೀತಿ ಸಾಯಿಸಬಲ್ಲ. ಅವನಿಗೆ ಇಷ್ಟೆಲ್ಲ ಸೂಪರ್​ ಪವರ್​ ಹೇಗೆ ಬಂತು ಎಂಬುದಕ್ಕೆ ಉತ್ತರವಿಲ್ಲ. ಲಾಜಿಕ್​ ಹುಡುಕದೇ ನೋಡಿದರೆ ಈ ಪಾತ್ರ ಇಷ್ಟ ಆಗುತ್ತದೆ.

‘ಮಿಸ್ಟರ್​ ನಟ್ವರ್​ಲಾಲ್​’ ಸಿನಿಮಾದ ಅವಧಿ 2 ಗಂಟೆ 10 ನಿಮಿಷ ಮಾತ್ರ. ಈ ಅವಧಿಯಲ್ಲಿ ಕಥೆಯನ್ನು ಚುಟುಕಾಗಿ ಹೇಳಿಮುಗಿಸಲಾಗಿದೆ. ಆದರೂ ನಡುವೆ ಬರುವ ಹಾಡಿನಿಂದ ಪ್ರೇಕ್ಷಕರ ಗಮನ ಬೇರೆಡೆಗೆ ಹರಿದಂತೆ ಆಗುತ್ತದೆ. ತನುಷ್​ ಶಿವಣ್ಣ ಅವರು ಬೇರೆ ಬೇರೆ ರೀತಿಯಲ್ಲಿ ಡೈಲಾಗ್​ ಹೊಡೆದಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ತಮ್ಮ ಅಭಿನಯದಲ್ಲಿ ಅವರು ಬೇರೆ ಬೇರೆ ಶೇಡ್​ ತೋರಿಸಿದ್ದಾರೆ. ಅವರನ್ನು ಮಾಸ್​ ಆಗಿ ನೋಡಬೇಕು ಎಂದುಕೊಳ್ಳುವವರಿಗೆ ಇಲ್ಲಿ ಹಲವು ದೃಶ್ಯಗಳಿವೆ. ಹಾಗೆಯೇ ಕ್ಲಾಸ್​ ಆಗಿಯೂ ಅವರು ಗಮನ ಸೆಳೆಯುತ್ತಾರೆ. ಸೋನಲ್​ ಮಾಂಥೆರೋ ಮತ್ತು ತನುಷ್​ ಶಿವಣ್ಣ ಅವರು ಜೋಡಿಯಾಗಿ ತೆರೆಮೇಲೆ ಕಾಣಿಸಿಕೊಳ್ಳುವುದು ಕೆಲವೇ ದೃಶ್ಯಗಳಲ್ಲಿ ಮಾತ್ರ. ಹಾಗಿದ್ದರೂ ಅವರಿಬ್ಬರ ಕಾಂಬಿನೇಷನ್​ ಚೆನ್ನಾಗಿದೆ. ಒಂದು ರೊಮ್ಯಾಂಟಿಕ್​ ಸಾಂಗ್ ಬಳಿಕ ಕಥೆಗೆ ಮೇಜರ್​ ಟ್ವಿಸ್ಟ್​ ಸಿಗುತ್ತದೆ.

ಇದನ್ನೂ ಓದಿ: Saramsha Review: ಅವರವರ ಗ್ರಹಿಕೆಗೆ ತಕ್ಕಂತಿದೆ ಬದುಕಿನ ಫಿಲಾಸಫಿ ಹೇಳುವ ‘ಸಾರಾಂಶ’

ನಿರ್ದೇಶಕ ಲವ ಅವರು ಈ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಕೌತುಕ ಹೆಚ್ಚುವಂತೆ ಮಾಡಿದ್ದಾರೆ. ಕಡೆಗೂ ಹೀರೋ ಸಿಕ್ಕಿಬೀಳುತ್ತಾನಾ? ಅವನ ಉದ್ದೇಶಗಳು ಅಂತ್ಯವಾಗುತ್ತಾ? ಪೊಲೀಸರು ಹೇಗೆ ಚಾಲಾಕಿತನ ತೋರಿಸುತ್ತಾರೆ? ಅವರಿಗಿಂತಲೂ ಹೆಚ್ಚು ಸ್ಮಾರ್ಟ್​ ಆಗಿ ಹೀರೋ ಹೇಗೆ ಯೋಚಿಸುತ್ತಾನೆ ಎಂಬುದನ್ನು ವಿವರಿಸುತ್ತಲೇ ‘ಮಿಸ್ಟರ್​ ನಟ್ವರ್​ಲಾಲ್​’ ಸಿನಿಮಾದ ಕ್ಲೈಮ್ಯಾಕ್ಸ್​ ಅನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ರಿಯಲಿಸ್ಟಿಕ್ ಆಗಿ ಏನನ್ನೂ ನಿರೀಕ್ಷಿಸದೇ, ಲಾಜಿಕ್​ಗಳ ಬಗ್ಗೆ ತಕರಾರು ಎತ್ತದೇ ವೀಕ್ಷಿಸಿದರೆ ಈ ಸಿನಿಮಾ ಒಂದು ಕಮರ್ಷಿಯಲ್​ ಎಂಟರ್​ಟೇನರ್​ ಆಗಿ ಗಮನ ಸೆಳೆಯುತ್ತದೆ. ಹರಿಣಿ ಶ್ರೀಕಾಂತ್​, ಕಾಕ್ರೋಶ್​ ಸುಧಿ, ಯಶ್​ ಶೆಟ್ಟಿ ಮುಂತಾದ ಕಲಾವಿದರು ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಹೀರೋ ಫ್ರೆಂಡ್​ ಆಗಿ ನಾಗಭೂಷಣ ಅವರ ಪಾತ್ರಕ್ಕೆ ದ್ವಿತೀಯಾರ್ಧದಲ್ಲಿ ಸ್ಕ್ರೀನ್​ ಸ್ಪೇಸ್​ ಸಿಕ್ಕಿದೆ. ಪೊಲೀಸ್​ ಅಧಿಕಾರಿಯಾಗಿ ರಾಜೇಶ್​ ನಟರಂಗ ಅವರು ಎಂದಿನಂತೆ ಗಮನ ಸೆಳೆದಿದ್ದಾರೆ. ಹಾಸ್ಯದ ಪಾತ್ರಗಳಲ್ಲಿ ವಿಜಯ್​ ಚಂಡೂರು, ರಘು ರಮಣಕೊಪ್ಪ, ಗಿರಿ ಮುಂತಾದವರು ನಗುಸುವ ಪ್ರಯತ್ನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.