‘ರೋಣ’ ಸಿನಿಮಾ ವಿಮರ್ಶೆ: ಹಳ್ಳಿ ಜಾತ್ರೆಯಲ್ಲಿ ಧರ್ಮ ವರ್ಸಸ್ ಅಧರ್ಮ

- Time - 126 Minutes
- Released - November 7, 2025
- Language - Kannada
- Genre - Action, Drama
‘ರೋಣ’ ಸಿನಿಮಾದಲ್ಲಿ ಹೊಸ ನಟ ರಘು ರಾಜ ನಂದ (Raghu Raja Nanda) ಅವರು ಹೀರೋ ಆಗಿ ಅಭಿನಯಿಸಿದ್ದಾರೆ. ನವೆಂಬರ್ 7ರಂದು ಈ ಸಿನಿಮಾ ಬಿಡುಗಡೆ ಆಗಿದೆ. ಸತೀಶ್ ಕುಮಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಧರ್ಮದ ಹಾದಿಯಲ್ಲಿ ನಡೆಯುವವರಿಗೆ ಅಧರ್ಮದ ಜನರು ಹೇಗೆಲ್ಲ ಕಾಟ ಕೊಡುತ್ತಾರೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಅಂತಿಮವಾಗಿ ಧರ್ಮವೇ ಗೆಲ್ಲುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಆ ಗೆಲುವಿಗಾಗಿ ಎಷ್ಟೆಲ್ಲ ಹೋರಾಟ ನಡೆಯುತ್ತದೆ ಎಂಬುದೇ ‘ರೋಣ’ (Rona Movie) ಸಿನಿಮಾದ ಸಾರಾಂಶ.
ರಾಜಕೀಯದ ಗಾಳಿ ಸೋಕಿದಲ್ಲೆಲ್ಲ ಭ್ರಷ್ಟಾಚಾರ ಇದ್ದೇ ಇರುತ್ತದೆ. ಹಳ್ಳಿ ಪಂಚಾಯಿತಿಯಿಂದ ದಿಲ್ಲಿಯ ಸಂಸತ್ ತನಕವೂ ಅವ್ಯವಹಾರ ಕಾಣಬಹುದು. ‘ರೋಣ’ ಸಿನಿಮಾದ ನಿರ್ದೇಶಕ ಸತೀಶ್ ಅವರು ಹಳ್ಳಿಗಾಡಿನಲ್ಲಿ ನಡೆಯುವ ರಾಜಕೀಯದ ಘಟನೆಗಳನ್ನೇ ಕೇಂದ್ರವಾಗಿಟ್ಟುಕೊಂಡು ಈ ಚಿತ್ರ ಮಾಡಿದ್ದಾರೆ. ಭೂಮಿ ಉಳಿಸಿಕೊಳ್ಳುವ ರೈತರು ಕಷ್ಟಪಡುವ ದೃಶ್ಯದಿಂದ ಸಿನಿಮಾ ಶುರು ಆಗುತ್ತದೆ. ಆರಂಭದಿಂದ ಕೊನೆಯ ತನಕ ಒಳಿತಿಗಾಗಿ ಹೀರೋ ಹೋರಾಡುತ್ತಲೇ ಇರುತ್ತಾನೆ.
ರಾಜಕಾರಣಿ ಅಲ್ಲದೇ ಇದ್ದರೂ ಜನಸೇವೆ ಮಾಡಲು ಸದಾ ಮುಂದಿರುವ ಊರಿನ ಹಿರಿಯನ ಪಾತ್ರದಲ್ಲಿ ಶರತ್ ಲೋಹಿತಾಶ್ವ ಅವರು ನಟಿಸಿದ್ದಾರೆ. ಅವರ ಪುತ್ರನ ಪಾತ್ರದಲ್ಲಿ ರಘು ರಾಜ ನಂದ ಅವರು ಅಭಿನಯಿಸಿದ್ದಾರೆ. ಇವರಿಬ್ಬರ ಜೊತೆಯಲ್ಲಿ ಬಾಲ ರಾಜವಾಡಿ ಅವರು ಕೂಡ ಅನೇಕ ದೃಶ್ಯಗಳಲ್ಲಿ ಸಾಥ್ ನೀಡಿದ್ದಾರೆ. ಹೀರೋ ಆಗಿ ಕಾಣಿಸಿಕೊಂಡ ಮೊದಲ ಸಿನಿಮಾದಲ್ಲೇ ಹಿರಿಯ ನಟರ ಜೊತೆ ತೆರೆಹಂಚಿಕೊಳ್ಳಲು ಸಿಕ್ಕ ಅವಕಾಶವನ್ನು ರಘು ರಾಜ ನಂದ ಅವರು ಸದ್ಬಳಕೆ ಮಾಡಿಕೊಂಡಿದ್ದಾರೆ.
ರಘು ರಾಜ ನಂದ ಅವರಿಗೆ ಜೋಡಿಯಾಗಿ ನಟಿ ಪ್ರಕೃತಿ ಪ್ರಸಾದ್ ಅವರು ಅಭಿನಯಿಸಿದ್ದಾರೆ. ವಿದ್ಯಾವಂತೆಯಾದರೂ ಹಳ್ಳಿಯಲ್ಲಿ ಇದ್ದು ಬಡವರಿಗೆ ಸಹಾಯ ಮಾಡಬೇಕು ಎಂಬ ಮನಸ್ಥಿತಿ ಇರುವ ಯುವತಿಯ ಪಾತ್ರದಲ್ಲಿ ಪ್ರಕೃತಿ ಅವರು ಕಾಣಿಸಿಕೊಂಡಿದ್ದಾರೆ. ರಘು ರಾಜ ನಂದ ಮತ್ತು ಪ್ರಕೃತಿ ಪ್ರಸಾದ್ ಅವರ ಕೆಮಿಸ್ಟ್ರಿ ಚೆನ್ನಾಗಿದೆ. ಹಾಡುಗಳಲ್ಲಿ ಮಿಂಚಿದ್ದು ಮಾತ್ರವಲ್ಲದೇ ಎಮೋಷನಲ್ ದೃಶ್ಯಗಳಲ್ಲೂ ಅವರು ಸೈ ಎನಿಸಿಕೊಂಡಿದ್ದಾರೆ.
ಹೊಸ ನಟನ ಪರಿಚಯಕ್ಕೆ ಬೇಕಾದ ಎಲ್ಲ ಅಂಶಗಳು ‘ರೋಣ’ ಸಿನಿಮಾದಲ್ಲಿ ಇವೆ. ನಟನೆ, ಡ್ಯಾನ್ಸ್, ಫೈಟ್ ಯಾವುದರಲ್ಲೂ ರಘು ರಾಜ ನಂದ ಅವರು ಹಿಂದೆ ಬಿದ್ದಿಲ್ಲ. ಕ್ಲಾಸ್ ಹಾಗೂ ಮಾಸ್ ಶೇಡ್ ಇರುವ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಮುಖ್ಯಮಂತ್ರಿಯಾಗಿ ಕಥೆಗೆ ಟ್ವಿಸ್ಟ್ ನೀಡುವಂತಹ ಪಾತ್ರದಲ್ಲಿ ಕೆ.ಎಸ್. ಶ್ರೀಧರ್ ಅವರು ಅಭಿನಯಿಸಿದ್ದಾರೆ.
ಇದನ್ನೂ ಓದಿ: I Am God Review: ರಿಯಲ್ ಸ್ಟಾರ್ ಫ್ಯಾನ್ಸ್ ಇಷ್ಟಪಡುವಂತಿದೆ ಉಪ್ಪಿ ಶಿಷ್ಯನ ‘ಎ’ ಫ್ಲೇವರ್ ಸಿನಿಮಾ
ಈ ಸಿನಿಮಾದ ಬಹುತೇಕ ಕಥೆ ಗ್ರಾಮೀಣ ಪರಿಸರದಲ್ಲಿ ನಡೆಯುತ್ತದೆ. ಹಳ್ಳಿ ಎಂದಮೇಲೆ ಹಬ್ಬ, ಜಾತ್ರೆ ಇರಲೇಬೇಕು. ಕಾಳಿ ದೇವಿಯ ಜಾತ್ರೆಯನ್ನೇ ಹಿನ್ನೆಲೆಯಾಗಿ ಇಟ್ಟುಕೊಂಡು ಒಳಿತು ಮತ್ತು ಕೆಡುಕಿನ ನಡುವಿನ ಯುದ್ಧವನ್ನು ‘ರೋಣ’ ಚಿತ್ರದಲ್ಲಿ ತೋರಿಸಲಾಗಿದೆ. ಆದರೆ ಒಟ್ಟಾರೆ ಸಿನಿಮಾದಲ್ಲಿ ಹೆಚ್ಚೇನೂ ಹೊಸತನ ನಿರೀಕ್ಷಿಸಲು ಆಗದು. ಅದು ಈ ಚಿತ್ರಕ್ಕೆ ಮೈನಸ್ ಆಗಿದೆ. ಸಿದ್ಧಸೂತ್ರದ ಒಂದು ಕಮರ್ಷಿಯಲ್ ಸಿನಿಮಾ ರೀತಿ ‘ರೋಣ’ ಮೂಡಿಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




