Pushpa 2 Review: ಫೈಟ್ ಮೂಲಕ ವೈಲ್ಡ್ಫೈಯರ್ ಹಚ್ಚೋ ಪುಷ್ಪರಾಜ್ಗೆ ಶ್ಯಾನೆ ಫೀಲಿಂಗ್ಸ್
ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಅವರದ್ದು ಹಿಟ್ ಜೋಡಿ. ಇವರು ‘ಪುಷ್ಪ’ ಯಶಸ್ಸಿನ ಬಳಿಕ ‘ಪುಷ್ಪ 2’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಸಿನಿಮಾದ ಬಜೆಟ್ ದೊಡ್ಡದಿದೆ. ಅದೇ ರೀತಿ ಸಿನಿಮಾದ ಪಾತ್ರವರ್ಗ ಕೂಡ ಹಿರಿದಾಗಿದೆ. ಆ ಚಿತ್ರದ ವಿಮರ್ಶೆ ಇಲ್ಲಿದೆ.
ಸಿನಿಮಾ: ‘ಪುಷ್ಪ 2’. ಪಾತ್ರವರ್ಗ: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ರಾವ್ ರಮೇಶ್, ಜಗಪತಿ ಬಾಬು ಮೊದಲಾದವರು. ನಿರ್ದೇಶನ: ಸುಕುಮಾರ್. ನಿರ್ಮಾಣ: ಮೈತ್ರಿ ಮೂವೀ ಮೇಕರ್ಸ್.
‘ಪುಷ್ಪ’ ಚಿತ್ರದಲ್ಲಿ ಸಾಮಾನ್ಯ ವ್ಯಕ್ತಿಯಾಗಿದ್ದ ಪುಷ್ಪರಾಜ್ ನಂತರ ರಕ್ತಚಂದನ ಕಳ್ಳಸಾಗಣೆಯಲ್ಲಿ ಸಾಕಷ್ಟು ಹೆಸರು ಮಾಡುತ್ತಾನೆ. ಆತ, ರಕ್ತಚಂದನ ಉದ್ಯಮದ ಸಿಂಡಿಕೇಟ್ಗೆ ಮುಖ್ಯಸ್ಥನೂ ಆಗುತ್ತಾನೆ. ಈಗ ಚಿತ್ರದ ಸೀಕ್ವೆಲ್ ಆಗಿ ‘ಪುಷ್ಪ 2’ ಚಿತ್ರ ಮೂಡಿ ಬಂದಿದೆ. ಡಿಸೆಂಬರ್ 5ರಂದು ರಿಲೀಸ್ ಆದ ಸಿನಿಮಾ ಹೇಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
‘ಪುಷ್ಪ’ ಚಿತ್ರದಲ್ಲಿ ‘ಪುಷ್ಪರಾಜ್ (ಅಲ್ಲು ಅರ್ಜುನ್) ಕೇವಲ ಕೂಲಿ ಮಾಡಿಕೊಂಡು ಇದ್ದವನು. ಆದರೆ, ಆತ ಯಾವ ಮಟ್ಟಕ್ಕೆ ಬೆಳೆಯುತ್ತಾನೆ ಎಂದರೆ ಇಡೀ ಸಿಂಡಿಕೇಟ್ಗೆ ಮುಖ್ಯಸ್ಥನಾಗುತ್ತಾನೆ. ಈತನ ಬೆಳವಣಿಗೆ ನೋಡಿ ಹುಟ್ಟಿಕೊಂಡ ವೈರಿಗಳು ಒಬ್ಬಿಬ್ಬರಲ್ಲ. ಅವಮಾನ ಮಾಡಿದ್ದಕ್ಕೆ ಮೊದಲ ಕಮೀಷನ್ನಲ್ಲಿ ಕಾರನ್ನೇ ಖರೀದಿ ಮಾಡಿದವನು ಪುಷ್ಪರಾಜ್. ಈಗ ದ್ವೀತೀಯಾರ್ಧದಲ್ಲೂ ಪುಷ್ಪರಾಜ್ಗೆ ಅದೇ ಆ್ಯಟಿಟ್ಯೂಡ್ ಇದೆ. ಅದು ಬದಲಾಗಿಲ್ಲ. ಈತನ ಬಳಿ ದುಡ್ಡಿಗೆ ಬೆಲೆ ಇಲ್ಲ, ಅಧಿಕಾರಕ್ಕೆ ಹೆದರಲ್ಲ. ಈ ಮೊದಲು ಒಮಿನಿ ಖರೀದಿಸುತ್ತಿದ್ದ ಪುಷ್ಪರಾಜ್ ಈಗ ಹೆಲಿಕ್ಯಾಪ್ಟರ್ ಕೊಂಡುಕೊಳ್ಳುತ್ತಾನೆ.
‘ಪುಷ್ಪರಾಜ್’ ಸಿಂಡಿಕೇಟ್ ಮುಖ್ಯಸ್ಥ. ಆತನಿಗೆ ಎಲ್ಲರೂ ಸಲಾಂ ಹೊಡೆಯುತ್ತಾರೆ. ಸ್ಮಗ್ಲಿಂಗ್ ಜೊತೆಗೆ ಕುಟುಂಬಕ್ಕೂ ಆದ್ಯತೆ ನೀಡುತ್ತಾನೆ. ತನ್ನ ಹುಟ್ಟಿಗೆ ಅಂಟಿರೋ ಕಳಂಕ ಅಳಿಸಲು ಹೆಣಗಾಡುತ್ತಾನೆ. ಈತನಲ್ಲಿ ಹಣಕ್ಕೆ ಇಲ್ಲದ ಬೆಲೆ ಭಾವನೆಗಳಿಗೆ ಇದೆ. ಪತ್ನಿ ಶ್ರೀವಲ್ಲಿಯನ್ನು (ರಶ್ಮಿಕಾ ಮಂದಣ್ಣ) ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದಾನೆ. ಪತ್ನಿಯ ಮಾತೇ ವೇದ ವಾಕ್ಯ. ಪತ್ನಿಯ ಆಸೆ ಈಡೇರಿಸಲು ನೂರಾರು ಕೋಟಿ ಸುರಿದು ಸಿಎಂನೇ ಬದಲಿಸುವಷ್ಟು ಪ್ರೀತಿ ಪುಷ್ಪರಾಜ್ಗೆ. ಪ್ರೀತಿ ಒಂದು ಕಡೆಯಾದರೆ, ಪೊಲೀಸ್ ಅಧಿಕಾರಿ ಶೇಖಾವತ್ (ಫಹಾದ್ ಫಾಸಿಲ್) ದ್ವೇಷ ಮತ್ತೊಂದು ಕಡೆ. ಪ್ರೀತಿ-ದ್ವೇಷಗಳ ಮಧ್ಯೆ ಸಾಗುವ ಕಥೆ ಹಲವು ತಿರುವುಗಳನ್ನು ಪಡೆದು ಸಾಗುತ್ತದೆ. ಅಂತಿಮವಾಗಿ ಪ್ರೀತಿ ಗೆಲ್ಲುತ್ತದೆಯೋ ಅಥವಾ ದ್ವೇಷವೋ? ಇದಕ್ಕೆ ಥಿಯೇಟರ್ನಲ್ಲಿ ಉತ್ತರ ಕಂಡುಕೊಳ್ಳಬೇಕು.
ಸಿನಿಮಾ ಉದ್ದಕ್ಕೂ ಕಾಣಿಸಿಕೊಳ್ಳುವ ಅಲ್ಲು ಅರ್ಜುನ್ ಡಬಲ್ ಮಾಸ್ ಆಗಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಅವರು ಮಿಂಚುತ್ತಾರೆ. ವರ್ಚಸ್ಸಿಗೆ ಹೊಡೆತ ಬೀಳುತ್ತದೆ ಎಂದರೆ ಪುಷ್ಪರಾಜ್ ವೈಲೆಂಟ್ ಆಗುತ್ತಾನೆ. ಜಾತ್ರಾ ಮಹೋತ್ಸವದಲ್ಲಿ ನಡೆಯುವ ಹಾಡು ಹಾಗೂ ಫೈಟ್ ದೃಶ್ಯಗಳ ಮೂಲಕ ಅವರು ಹೆಚ್ಚಿನ ಅಂಕ ಪಡೆಯುತ್ತಾರೆ. ಮಾಸ್ ದೃಶ್ಯಗಳು, ಡೈಲಾಗ್ಗಳು ಫ್ಯಾನ್ಸ್ಗೆ ಭರ್ಜರಿ ಬಾಡೂಟ ನೀಡುತ್ತವೆ. ‘ಪುಷ್ಪ’ ಚಿತ್ರದಲ್ಲಿ ಇದ್ದ ಪುಷ್ಪರಾಜ್ ಗತ್ತು ಎರಡನೇ ಭಾಗದಲ್ಲಿ ಎರಡರಷ್ಟಾಗಿದೆ.
ರಶ್ಮಿಕಾ ಮಂದಣ್ಣ ಸಿನಿಮಾ ಉದ್ದಕ್ಕೂ ಕಾಣಿಸಿಕೊಳ್ಳುತ್ತಾರೆ. ಅವರ ಪಾತ್ರಕ್ಕೂ ಸಾಕಷ್ಟು ತೂಕ ನೀಡಿದ್ದಾರೆ ಸುಕುಮಾರ್. ಈ ಚಿತ್ರದಲ್ಲಿ ಡ್ಯಾನ್ಸ್ ಮೂಲಕ ಅವರು ಗಮನ ಸೆಳೆಯುತ್ತಾರೆ. ನಟನೆಗೆ ಒತ್ತು ಸಿಗೋ ಪಾತ್ರ ಅವರಿಗೆ ಸಿಕ್ಕಿರುವುದರಿಂದ ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಖುಷಿ ಆಗಲಿದೆ. ಫಹಾದ್ ಫಾಸಿಲ್ ಅವರು ವಿಲನ್ ಪಾತ್ರದಲ್ಲಿ ಭರ್ಜರಿಯಾಗಿ ಮಿಂಚು ಹರಿಸುತ್ತಾರೆ. ಅವರು ಮಾಡಿರೋ ಎಸ್ಪಿ ಬನ್ವರ್ ಸಿಂಗ್ ಶೇಖಾವತ್ಗೆ ಈ ಬಾರಿ ದ್ವೇಷ ಹೆಚ್ಚಿದೆ. ಶೇಖಾವತ್ ಹಾಗೂ ಪುಷ್ಪರಾಜ್ ನಡುವಿನ ವರ್ಚಸ್ಸಿನ ಕಿತ್ತಾಟ ಪ್ರೇಕ್ಷಕನಿಗೆ ಮಜ ನೀಡುತ್ತದೆ.
ಉಳಿದಂತೆ ಜಗದೀಶ್, ಜಗಪತಿ ಬಾಬು, ಸುನೀಲ್, ರಾವ್ ರಮೇಶ್ ಮೊದಲಾದವರು ಉತ್ತಮ ಅಂಕ ಪಡೆಯುತ್ತಾರೆ. ತಾರಕ್ ಪೊನ್ನಪ್ಪ ಮಾಡಿದ ಪಾತ್ರಕ್ಕೂ ತೂಕ ಇದೆ. ಡಾಲಿ ಧನಂಜಯ್ ಯಾವಾಗ ಬರುತ್ತಾರೆ? ಯಾಕೆ ಬರುತ್ತಾರೆ ಎಂಬುದಕ್ಕೆ ಸಿನಿಮಾದಲ್ಲೇ ಉತ್ತರ ಕಂಡುಕೊಳ್ಳಬೇಕು. ‘ಕಿಸ್ಸಿಕ್’ ಹಾಡಿನ ಮೂಲಕ ಪಡ್ಡೆಗಳ ನಿದ್ದೆ ಕದಿಯುತ್ತಾರೆ ಶ್ರೀಲೀಲಾ.
ಇದನ್ನೂ ಓದಿ: ಹೇಗಿದೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಚಿತ್ರ? ಇಲ್ಲಿದೆ ಮೊದಲಾರ್ಧದ ಹೈಲೈಟ್
ಸುಕುಮಾರ್ ನಿರ್ದೇಶನದಲ್ಲಿ ಒಂದೊಳ್ಳೆಯ ಪ್ರಯತ್ನ ಮಾಡಿದ್ದಾರೆ. ಅವರು ಅಲ್ಲಲ್ಲಿ ಎಡವಿದಂತೆ ಕಂಡರೂ ಸಂಪೂರ್ಣವಾಗಿ ನೋಡಿದಾಗ ಅವರು ಹೆಚ್ಚಿನ ಅಂಕ ಪಡೆಯುತ್ತಾರೆ. ರಕ್ತ ಚಂದನ ಕಳ್ಳಸಾಗಣೆ ದೃಶ್ಯಗಳ ಮೂಲಕ ಅವರು ಥ್ರಿಲ್ ನೀಡುತ್ತಾರೆ. ಅರ್ಜುನ್ ಪಾತ್ರಕ್ಕೆ ಹೈಪ್ ನೀಡಲು ಅವರು ಸಾಕಷ್ಟು ಶ್ರಮ ಹಾಕಿದಂತೆ ಕಾಣಿಸುತ್ತದೆ. ‘ಪುಷ್ಪ 2’ ಕೊನೆಯಲ್ಲಿ ಮೂರನೇ ಭಾಗಕ್ಕೆ ಲಿಂಕ್ ಕೊಡೋದನ್ನು ಮರೆಯಲ್ಲ. ಹಿನ್ನೆಲೆ ಸಂಗೀತದ ಕಡೆ ಇನ್ನಷ್ಟು ಗಮನ ಹರಿಸಿದ್ದರೆ ಸಿನಿಮಾ ಇನ್ನಷ್ಟು ಉತ್ತಮವಾಗಿ ಮೂಡಿ ಬರುತ್ತಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:57 am, Thu, 5 December 24