ಚಿತ್ರ: ರವಿ ಬೋಪಣ್ಣ
ನಿರ್ಮಾಣ: ಶ್ರೀ ಈಶ್ಚರಿ ಪ್ರೊಡಕ್ಷನ್ಸ್
ನಿರ್ದೇಶನ: ರವಿಚಂದ್ರನ್
ಪಾತ್ರವರ್ಗ: ರವಿಚಂದ್ರನ್, ಕಾವ್ಯಾ ಶೆಟ್ಟಿ, ರಾಧಿಕಾ ಕುಮಾರಸ್ವಾಮಿ, ಮೋಹನ್, ಕಿಚ್ಚ ಸುದೀಪ್ ಮುಂತಾದವರು.
ಸ್ಟಾರ್: 2.5/5
ಬಣ್ಣದ ಲೋಕದಲ್ಲಿ ರವಿಚಂದ್ರನ್ (Ravichandran) ಓರ್ವ ಕನಸುಗಾರ. ವಿಭಿನ್ನವಾದ ಪ್ರಯತ್ನಗಳನ್ನು ಮಾಡುವಲ್ಲಿ ಅವರಿಗೆ ಹೆಚ್ಚು ಉತ್ಸಾಹ. ಆ ಪ್ರಯತ್ನದಲ್ಲಿ ಅವರು ಸೋಲು-ಗೆಲುವಿನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಅದು ಸಾಬೀತಾಗಿದೆ. ಈಗ ಮತ್ತೆ ‘ರವಿ ಬೋಪಣ್ಣ’ (Ravi Bopanna) ಚಿತ್ರದಲ್ಲಿ ಅವರು ತಮ್ಮತನವನ್ನು ಇಟ್ಟುಕೊಂಡು ಭಿನ್ನವಾದ ರೀತಿಯಲ್ಲಿ ಕಥೆ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರೊಂದು ಅತಿಥಿ ಪಾತ್ರ ಮಾಡಿದ್ದಾರೆ. ಕಾವ್ಯಾ ಶೆಟ್ಟಿ, ರಾಧಿಕಾ ಕುಮಾರಸ್ವಾಮಿ ಅವರು ಗ್ಲಾಮರ್ ಗಂಧದಲ್ಲಿ ಮಿಂದೆದ್ದಿದ್ದಾರೆ. ಕೌತುಕ ಮೂಡಿಸುವ ಒಂದು ಕೊಲೆ ಕೇಸ್ ಈ ಚಿತ್ರದಲ್ಲಿದೆ. ಹಾಗಿದ್ದರೂ ಕೂಡ ಏನೋ ಒಂದು ಕೊರತೆ ಎದ್ದು ಕಾಣುತ್ತದೆ.
ರವಿ ಬೋಪಣ್ಣ (ರವಿಚಂದ್ರನ್) ಓರ್ವ ನಿವೃತ್ತ ಪೊಲೀಸ್ ಅಧಿಕಾರಿ. ಒಂದು ಕಾಲದಲ್ಲಿ ಯಾವುದೇ ಕೊಲೆ ಪ್ರಕರಣವನ್ನೂ ಕೆಲವೇ ನಿಮಿಷಗಳಲ್ಲಿ ಭೇದಿಸುವ ಚತುರು ಬುದ್ಧಿಯವನಾಗಿದ್ದ ಆತ ನಂತರ ಮದ್ಯದ ದಾಸನಾಗುತ್ತಾನೆ. ಮನೆಯಲ್ಲಿ ಒಂಟಿಯಾಗಿ ಕಾಲ ಕಳೆಯುತ್ತಾನೆ. ಇಂಥ ಸಂದರ್ಭದಲ್ಲಿಯೂ ಪೊಲೀಸ್ ಇಲಾಖೆಗೆ ಆತನ ಸಹಾಯ ಬೇಕಾಗುತ್ತದೆ. ಬೇರೆಯವರ ಕೊಲೆ ಪ್ರಕರಣವನ್ನು ಭೇದಿಸುವ ರವಿ ಬೋಪಣ್ಣನಿಗೆ ಮುಂದೆ ತನ್ನದೇ ಪ್ರೇಯಸಿಯ ಹತ್ಯೆಯ ಕೇಸ್ ತನಿಖೆ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಆ ಕೊಲೆಗೆ ಕಾರಣ ಯಾರು ಎಂಬುದು ಇಲ್ಲಿನ ಸಸ್ಪೆನ್ಸ್.
ಮೇಲ್ನೋಟಕ್ಕೆ ಇದೊಂದು ಮೂಮೂಲಿ ಮರ್ಡರ್ ಮಿಸ್ಟರಿ ಕಥೆ ಎನಿಸಿದರೂ ಕ್ಲೈಮ್ಯಾಕ್ಸ್ನಲ್ಲಿ ಬೇರೆಯದೇ ಲೋಕ ತೆರೆದುಕೊಳ್ಳುತ್ತದೆ. ಅದರ ಮೂಲಕ ಪ್ರೇಕ್ಷಕರಿಗೆ ಒಂದು ಮುಖ್ಯವಾದ ಸಂದೇಶ ರವಾನಿಸಲಾಗಿದೆ. ಆದರೆ ಇಡೀ ಸಿನಿಮಾವನ್ನು ರವಿಚಂದ್ರನ್ ಅವರು ಬೇರೆಯದೇ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ತೀರಾ ಗಂಭೀರವಾದ ವಿಚಾರವನ್ನು ಹೇಳುವ ಅವರು ಹಾಡು ಮತ್ತು ಗ್ಲಾಮರ್ಗೆ ಹೆಚ್ಚು ಮಹತ್ವ ನೀಡಿದ್ದಾರೆ. ಇದರಿಂದ ಸಿನಿಮಾದ ಸ್ವರೂಪವೇ ಬದಲಾಗಿದೆ.
ಕಥಾನಾಯಕ ರವಿ ಬೋಪಣ್ಣನಿಗೆ ಇಬ್ಬರು ಪ್ರೇಯಸಿಯರು ಇದ್ದರು ಎಂಬುದು ಕಥೆಯಲ್ಲಿ ಬರುವ ಒಂದು ಫ್ಲ್ಯಾಶ್ ಬ್ಯಾಕ್. ಕೇವಲ ಅದನ್ನು ಹೇಳುವ ಸಲುವಾಗಿ ಎರಡ್ಮೂರು ಅತಿ ರೊಮ್ಯಾಂಟಿಕ್ ಹಾಡಿನ ಮೊರೆ ಹೋಗಿದ್ದಾರೆ. ತುಂಬ ಶೃಂಗಾರಮಯವಾಗಿ ಈ ಗೀತೆಗಳು ಮೂಡಿಬಂದಿವೆ. ಆದರೆ ಅಸಲಿ ಕಥೆಯನ್ನೇ ಇದು ಸೈಡ್ಲೈನ್ ಮಾಡಿದಂತೆ ಭಾಸವಾಗುತ್ತದೆ.
ರಾಧಿಕಾ ಕುಮಾರಸ್ವಾಮಿ ಮತ್ತು ಕಾವ್ಯಾ ಶೆಟ್ಟಿ ಅವರು ನಟನೆಗಿಂತಲೂ ಹೆಚ್ಚಾಗಿ ಗ್ಲಾಮರ್ ಕಾರಣಕ್ಕಾಗಿಯೇ ಕಣ್ಣು ಕುಕ್ಕುತ್ತಾರೆ. ಇನ್ನುಳಿದ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೋಹನ್, ಧರ್ಮ, ರಮೇಶ್ ಭಟ್, ರಾಮ ಕೃಷ್ಣ, ಜೈ ಜಗದೀಶ್ ಮುಂತಾದವರು ಸಹಜಾಭಿನಯ ನೀಡಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸಿದ್ದಾರೆ ಎಂಬ ಕಾರಣಕ್ಕೆ ಅವರ ಅಭಿಮಾನಿಗಳಿಗೆ ನಿರೀಕ್ಷೆ ಇರುವುದು ಸಹಜ. ಆದರೆ ಅದೊಂದು ಚಿಕ್ಕ ಅತಿಥಿ ಪಾತ್ರವಷ್ಟೇ. ಕ್ಲೈಮ್ಯಾಕ್ಸ್ನಲ್ಲಿ ಬರುವ ಅವರು ಇಡೀ ಕಥೆಯ ಸಾರಾಂಶವನ್ನು ವಿವರಿಸುತ್ತಾರೆ. ಲಾಯರ್ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದ ಬಹುತೇಕ ದೃಶ್ಯಗಳನ್ನು ಒಳಾಂಗಣದಲ್ಲಿ ಚಿತ್ರೀಕರಿಸಲಾಗಿದೆ. ರವಿಚಂದ್ರನ್ ಅವರು ತಮ್ಮದೇ ಮ್ಯಾನರಿಸಂನಲ್ಲಿ ಹತ್ತು ಹಲವು ಬಗೆಯ ಫಿಲಾಸಫಿ ಹೇಳಲು ಪ್ರಯತ್ನಿಸಿದ್ದಾರೆ. ಆದರೆ ಪದೇ ಪದೇ ಗಾಜು ಪುಡಿಪುಡಿ ಆಗುವುದು, ಪರದೆ ಮೇಲೆ ಇಂಗ್ಲಿಷ್ ಪದಗಳು ರಾರಾಜಿಸುವುದು, ಮದ್ಯದ ಬಾಟಲಿ ಒಡೆಯುವುದು ಏಕತಾನತೆ ಮೂಡಿಸುತ್ತದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.