Mango Pachcha Review: ಆ ಕಾಲದ ಮೈಸೂರಿನ ಮಾಫಿಯಾ ತೋರಿಸುವ ‘ಮ್ಯಾಂಗೋ ಪಚ್ಚ’

Mango Pachcha Review: ಆ ಕಾಲದ ಮೈಸೂರಿನ ಮಾಫಿಯಾ ತೋರಿಸುವ ‘ಮ್ಯಾಂಗೋ ಪಚ್ಚ’
Mango Pachcha Review
ಮ್ಯಾಂಗೋ ಪಚ್ಚ
A
  • Time - 95 Minutes
  • Released - June 05, 2026
  • Language - Kannada
  • Genre - Crime, Drama
Cast - ಸಂಚಿತ್ ಸಂಜೀವ್, ಕಾಜಲ್ ಕುಂದರ್, ಪ್ರಶಾಂತ್ ಹಿರೇಮಠ್, ಮಯೂರ್ ಪಟೇಲ್, ಹರಿಣಿ ಶ್ರೀಕಾಂತ್, ಉಗ್ರಂ ಮಂಜು ಮುಂತಾದವರು.
Director - ವಿವೇಕ
3
Critic's Rating

Updated on: Jun 05, 2026 | 2:28 PM

ಕನ್ನಡ ಚಿತ್ರರಂಗಕ್ಕೆ ಹೊಸ ಹೀರೋ ಸಂಚಿತ್ ಸಂಜೀವ್ (Sanchith Sanjeev) ಎಂಟ್ರಿ ಆಗಿದೆ. ಕಿಚ್ಚ ಸುದೀಪ್ ಅವರ ಕುಟುಂಬದ ಹುಡುಗ ಎಂಬ ಕಾರಣಕ್ಕೆ ಪ್ರೇಕ್ಷಕರಿಗೆ ಸಂಚಿತ್ ಮೇಲೆ ವಿಶೇಷ ನಿರೀಕ್ಷೆ ಇತ್ತು. ‘ಮ್ಯಾಂಗೋ ಪಚ್ಚ’ (Mango Pachcha) ಸಿನಿಮಾ ಮೂಲಕ ಅವರು ಹೀರೋ ಆಗಿದ್ದಾರೆ. ಹೀರೋ ಹೊಸಬನಾದರೂ ಈ ಸಿನಿಮಾದಲ್ಲಿ ತೋರಿಸಿರುವ ಕಥೆ ಹಳೇ ಮೈಸೂರಿನದ್ದು. ಆ ಕಾಲದ ಮೈಸೂರಿನ ಮಾಫಿಯಾ ಯಾವ ರೀತಿ ಇತ್ತು ಎಂಬುದರ ಚಿತ್ರಣ ಈ ಸಿನಿಮಾದಲ್ಲಿದೆ. ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ’ ಮತ್ತು ‘ಕೆಆರ್​ಜಿ ಸ್ಟುಡಿಯೋಸ್’ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ. ಒಟ್ಟಾರೆ ಸಿನಿಮಾ ಹೇಗಿದೆ ಎಂಬುದನ್ನು ತಿಳಿಯಲು ಈ ವಿಮರ್ಶೆ ಓದಿ.

ಸಂಚಿತ್ ಸಂಜೀವ್ ಅವರು ಪಕ್ಕಾ ಮಾಸ್ ಸಿನಿಮಾಗೆ ಸೂಕ್ತ ಆಗುವಂತಹ ನಟ. ಅವರಿಗೆ ತಕ್ಕಂತೆಯೇ ‘ಮ್ಯಾಂಗೋ ಪಚ್ಚ’ ಸಿನಿಮಾದ ಕಥೆ ಇದೆ. ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರದ ಕಥೆ ಸಿದ್ಧವಾಗಿದೆ. 2000ನೇ ಇಸವಿ ಸಂದರ್ಭದಲ್ಲಿ ಮೈಸೂರಿನಲ್ಲಿ ಹಬ್ಬಿದ್ದ ಮಾದಕ ವಸ್ತು ಜಾಲದ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ.

ನಿರ್ದೇಶಕ ವಿವೇಕ ಅವರು ಕಟ್ಟಿಕೊಟ್ಟಿರುವ ‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಒಂದು ಡಿಫರೆಂಟ್ ಫ್ಲೇವರ್ ಇದೆ. ಕಥೆಯಲ್ಲಿ ಅತಿ ಸಣ್ಣ ವಿವರಗಳ ಕಡೆಗೆ ಅವರು ಗಮನ ಹರಿಸಿಲ್ಲ. ಬದಲಿಗೆ, ಎಲ್ಲವನ್ನೂ ಮೇಲ್ಮಟ್ಟದಲ್ಲೇ ತೋರಿಸುತ್ತಾ ಸಾಗಿದ್ದಾರೆ. ಇದರಿಂದಾಗಿ ಸಿನಿಮಾದ ಅವಧಿ ಕೇವಲ 1 ಗಂಟೆ 35 ನಿಮಿಷ ಇದೆ. ಅಷ್ಟು ಸಮಯದ ಒಳಗೆ ಅವರು ಮ್ಯಾಂಗೋ ಪಚ್ಚನ ಕಹಾನಿಯನ್ನು ವಿವರಿಸಲು ಪ್ರಯತ್ನಿಸಿದ್ದಾರೆ.

ಹೊಸ ಹೀರೋ ಸಂಚಿತ್ ಅವರ ಪ್ರತಿಭೆ ಏನು ಎಂಬುದನ್ನು ಪ್ರೇಕ್ಷಕರಿಗೆ ಪರಿಚಯಿಸಲು ಅನುಕೂಲ ಆಗುವಂತಹ ಹಲವು ದೃಶ್ಯಗಳು ಈ ಸಿನಿಮಾದಲ್ಲಿವೆ. ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಆ ಪಾತ್ರಕ್ಕೆ ತಾಳ್ಮೆ ಮತ್ತು ಆವೇಗ ಎರಡೂ ಇದೆ. ಅದೇ ರೀತಿ ಇತಿ-ಮಿತಿಗಳು ಕೂಡ ಇವೆ. ಎಲ್ಲವನ್ನೂ ಸಂಚಿತ್ ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಗಮನ ಸೆಳೆದಿದ್ದಾರೆ.

ಲವರ್ ಬಾಯ್ ಆಗಿಯೂ ಸಂಚಿತ್ ಅವರು ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ಕಾಜಲ್ ಕುಂದರ್ ನಟಿಸಿದ್ದಾರೆ. ಆದರೆ ಅವರಿಬ್ಬರ ಪ್ರೇಮಕಥೆಗೆ ಇನ್ನಷ್ಟು ಒತ್ತು ಸಿಗಬೇಕಿತ್ತು ಅನಿಸುತ್ತದೆ. ತಾಯಿಯ ಪಾತ್ರದಲ್ಲಿ ಹರಿಣಿ ಶ್ರೀಕಾಂತ್ ಅವರು ಅಭಿನಯಿಸಿದ್ದಾರೆ. ಅಲ್ಲಿಯೂ ಕೂಡ ಸೆಂಟಿಮೆಂಟ್ ಮತ್ತಷ್ಟು ಹೆಚ್ಚಿದ್ದರೆ ಚೆನ್ನಾಗಿ ಇರುತ್ತಿತ್ತು. ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ಪ್ರಶಾಂತ್ ಹಿರೇಮಠ್, ಮ್ಯಾಕ್ಸ್ ಮಂಜು, ಹಂಸಾ, ಮಯೂರ್ ಪಟೇಲ್, ಜೈ ಮುಂತಾದವರು ಉತ್ತಮ ಅಭಿನಯ ನೀಡಿದ್ದಾರೆ. ಪ್ರಶಾಂತ್ ಹಿರೇಮಠ್ ಅವರಿಗೆ ಹೆಚ್ಚು ಚಪ್ಪಾಳೆ ಸಲ್ಲಬೇಕು.

ಇದನ್ನೂ ಓದಿ: ‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚನಿಗೆ ನೀಡಲಾಗಿದೆ ಟ್ರಿಬ್ಯೂಟ್; ಇದು ಪ್ರಿಯಾ ಸುದೀಪ್ ಸರ್ಪ್ರೈಸ್

2000ನೇ ಇಸವಿಯ ಆಸುಪಾಸಿನಲ್ಲಿದ್ದ ಮೈಸೂರನ್ನು ತೋರಿಸುವುದು ಅಷ್ಟು ಸುಲಭವಲ್ಲ. ಕಲಾ ನಿರ್ದೇಶಕ ವಿಶ್ವಾಸ್ ಕಶ್ಯಪ್ ಅವರ ತಂಡ ಆ ವಿಚಾರದಲ್ಲಿ ಉತ್ತಮವಾಗಿ ಕೆಲಸ ಮಾಡಿದೆ. ಚರಣ್ ರಾಜ್ ಅವರ ಹಿನ್ನೆಲೆ ಸಂಗೀತದಿಂದ ಸಿನಿಮಾದ ಮೆರುಗು ಹೆಚ್ಚಿದೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಕೂಡ ಮೆಚ್ಚುವಂತಿದೆ. ತಾಂತ್ರಿಕವಾಗಿ ಈ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ.

ಈ ಚಿತ್ರದಲ್ಲಿ ತೀರಾ ಹೊಸತನವನ್ನು ನಿರೀಕ್ಷಿಸುವಂತಿಲ್ಲ. ಸಾಮಾನ್ಯ ಹುಡುಗನೊಬ್ಬ ಮಾಫಿಯಾದೊಳಗೆ ಎಂಟ್ರಿ ನೀಡಿ, ತನ್ನದೇ ಸಾಮ್ರಾಜ್ಯ ಕಟ್ಟುವ ಕಥೆ ಇಲ್ಲಿದೆ. ಆದರೆ ಇದು ಮೈಸೂರಿನ ನೆಲದ ಕಥೆ ಎಂಬ ಕಾರಣಕ್ಕೆ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತದೆ. ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಒಂದಷ್ಟು ವಿಶೇಷತೆಗಳಿವೆ. ಚಿತ್ರತಂಡ ಗೌಪ್ಯವಾಗಿ ಇಟ್ಟಿದ್ದ ಒಂದು ಸ್ಪೆಷಲ್ ಪಾತ್ರದ ಎಂಟ್ರಿ ಕೂಡ ಕೊನೆಯಲ್ಲಿ ಆಗುತ್ತದೆ. ಮ್ಯಾಂಗೋ ಪಚ್ಚನ ಕಥೆ ಇನ್ನೂ ಮುಂದುವರಿಯುತ್ತದೆ ಎಂಬುದರ ಸುಳಿವು ಅಲ್ಲಿ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us