Shakhahaari Review: ‘ಶಾಖಾಹಾರಿ’ ಸಿನಿಮಾದಲ್ಲಿ ಹಲವು ಟ್ವಿಸ್ಟ್​; ರಂಗಾಯಣ ರಘು ಬೆಸ್ಟ್​

|

Updated on: Feb 16, 2024 | 6:19 PM

ತೀರ್ಥಹಳ್ಳಿಯ ಸಣ್ಣ ಗ್ರಾಮವೊಂದರಲ್ಲಿ ನಡೆಯುವ ರೋಚಕವಾದ ಕಹಾನಿ ‘ಶಾಖಾಹಾರಿ’ ಚಿತ್ರದಲ್ಲಿದೆ. ರಂಗಾಯಣ ರಘು ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಇನ್ನುಳಿದ ಕಲಾವಿದರ ನಟನೆ ಕೂಡ ಚನ್ನಾಗಿದೆ. ಕೊನೇ ದೃಶ್ಯದ ತನಕ ಕೌತುಕ ಕಾಪಾಡಿಕೊಳ್ಳುವಂತಹ ಗುಣ ಈ ಸಿನಿಮಾಗಿದೆ. ‘ಶಾಖಾಹಾರಿ’ ಸಿನಿಮಾದ ವಿಮರ್ಶೆ ಇಲ್ಲಿದೆ..

Shakhahaari Review: ‘ಶಾಖಾಹಾರಿ’ ಸಿನಿಮಾದಲ್ಲಿ ಹಲವು ಟ್ವಿಸ್ಟ್​; ರಂಗಾಯಣ ರಘು ಬೆಸ್ಟ್​
ರಂಗಾಯಣ ರಘು
Follow us on

ಚಿತ್ರ: ಶಾಖಾಹಾರಿ. ನಿರ್ಮಾಣ: ರಾಜೇಶ್​ ಕೀಲಂಬಿ, ರಂಜಿನಿ ಪ್ರಸನ್ನ. ನಿರ್ದೇಶನ: ಸಂದೀಪ್​ ಸುಂಕದ್​. ಪಾತ್ರವರ್ಗ: ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ವಿನಯ್​ ಯು.ಜೆ, ನಿಧಿ ಹೆಗಡೆ, ಸುಜಯ್​ ಶಾಸ್ತ್ರಿ ಮುಂತಾದವರು. ಸ್ಟಾರ್​: 3.5/5

ಯಾವುದೇ ಸಿನಿಮಾದಲ್ಲಿ ರಂಗಾಯಣ ರಘು (Rangayana Raghu) ಅವರು ಪೋಷಕ ಪಾತ್ರ ಮಾಡಿದರೆ ಆ ಚಿತ್ರದ ತೂಕ ಹೆಚ್ಚುತ್ತದೆ. ಹೀಗಿರುವಾಗ ಅವರೇ ಮುಖ್ಯ ಭೂಮಿಕೆ ನಿಭಾಯಿಸಿದರೆ? ಇನ್ನೂ ಸೂಪರ್​. ಅವರ ಅಭಿನಯವನ್ನು ಮನಸಾರೆ ಎಂಜಾಯ್​ ಮಾಡಬೇಕು ಎಂಬ ಅಭಿಮಾನಿಗಳಿಗೆ ಮೆಚ್ಚುಗೆ ಆಗುವಂತಿದೆ ‘ಶಾಖಾಹಾರಿ’ (Shakhahaari) ಸಿನಿಮಾ. ಈ ಚಿತ್ರದಲ್ಲಿ ಅವರೇ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅವರಿಗೆ ಅನೇಕ ಪ್ರತಿಭಾವಂತ ಕಲಾವಿದರು ಕೈ ಜೋಡಿಸಿದ್ದಾರೆ. ಮಲೆನಾಡಿನ ಹಳ್ಳಿಯೊಂದರಲ್ಲಿ ನಡೆಯುವ ಕ್ರೈಂ ಕಹಾನಿಯನ್ನು ‘ಶಾಖಾಹಾರಿ’ ಸಿನಿಮಾದಲ್ಲಿ ನಿರ್ದೇಶಕ ಸಂದೀಪ್​ ಸುಂಕದ್​ ಅವರು ತೆರೆದಿಟ್ಟಿದ್ದಾರೆ. ವಿನಯ್​ ಯುಜೆ, ಗೋಪಾಲಕೃಷ್ಣ ದೇಶಪಾಂಡೆ, ನಿಧಿ ಹೆಗಡೆ ಮುಂತಾದ ಕಲಾವಿದರಿಂದಾಗಿ ಈ ಸಿನಿಮಾ ಇನ್ನಷ್ಟು ಚಂದವಾಗಿದೆ.

ತೀರ್ಥಹಳ್ಳಿಯಲ್ಲಿನ ಒಂದು ಪುಟ್ಟ ಗ್ರಾಮದಲ್ಲಿ ನಡೆಯುವ ಬಲು ರೋಚಕವಾದ ಕಥೆ ‘ಶಾಖಾಹಾರಿ’ ಸಿನಿಮಾದಲ್ಲಿದೆ. ಈ ಸಿನಿಮಾದ ಕಥಾನಾಯಕ ಸುಬ್ಬಣ್ಣ (ರಂಗಾಯಣ ರಘು) ಒಂದು ವೆಜಿಟೇರಿಯನ್​ ಹೋಟೆಲ್​ ನಡೆಸುತ್ತಾನೆ. ಆದರೆ ಅಲ್ಲಿ ನಡೆಯುವ ಕೆಲವು ಘಟನೆಗಳಿಂದಾಗಿ ಶಾಕಾಹಾರಿ ಹೋಟೆಲ್​ನ ಇಮೇಜ್​ ‘ಶಾಖಾಹಾರಿ’ಯಾಗಿ ಬದಲಾಗುತ್ತದೆ. ಇಂಥ ಒಗಟಿನಂತಹ ಟೈಟಲ್​ನ ಹಿಂದಿರುವ ಸಿನಿಮಾದ ಕಥೆ ಏನು ಎಂಬುದು ತಿಳಿಯಬೇಕಾದರೆ ಪೂರ್ತಿ ಚಿತ್ರ ನೋಡಬೇಕು. ಅರೆಬರೆ ಸುಳಿವು ಬಿಟ್ಟುಕೊಟ್ಟರೂ ಕಥೆಯ ಕೌತುವನ್ನೇ ತೆರೆದಿಟ್ಟಂತೆ ಆಗುತ್ತದೆ.

ಈಗಾಗಲೇ ಅನೇಕ ಮರ್ಡರ್​ ಮಿಸ್ಟ್ರಿ ಸಿನಿಮಾಗಳು ಬಂದು ಹೋಗಿವೆ. ಅವುಗಳ ನಡುವೆ ಒಂದು ಭಿನ್ನ ಪ್ರಯತ್ನವಾಗಿ ‘ಶಾಖಾಹಾರಿ’ ಸಿನಿಮಾ ಗಮನ ಸೆಳೆಯುತ್ತದೆ. ಈ ಸಿನಿಮಾದಲ್ಲಿನ ಕಥೆ ನಿಜಕ್ಕೂ ಡಿಫರೆಂಟ್​ ಆಗಿದೆ. ಪರಿಸ್ಥಿತಿಯ ಕೈಯಲ್ಲಿ ಸಿಕ್ಕಿ ಒದ್ದಾಡುವ ಪಾತ್ರಗಳು ಈ ಸಿನಿಮಾದಲ್ಲಿವೆ. ತನ್ನ ಪಾಡಿಗೆ ತಾನು ಹೋಟೆಲ್​ ನಡೆಸುವ ಸುಬ್ಬಣ್ಣ ಏಕಾಏಕಿ ಮಚ್ಚು ಹಿಡಿಯಬೇಕಾಗುವಂತಹ ಸಂದರ್ಭ ಎದುರಾಗುತ್ತದೆ. ಇನ್ನೊಂದೆಡೆ, ಮುದ್ದಿನ ಮಡದಿಯನ್ನು ಕಳೆದುಕೊಂಡು, ತನ್ನದಲ್ಲದ ತಪ್ಪಿಗೆ ನೋವು ಅನುಭವಿಸುವ ಯುವಕನ ಕಥೆಯೂ ತೆರೆದುಕೊಳ್ಳುತ್ತದೆ. ಈ ಎರಡೂ ಕಥೆಗಳಿಗೆ ಏನಾದರೂ ಲಿಂಕ್​ ಇದೆಯೇ ಎಂಬ ಕುತೂಹಲದ ಹುಳವನ್ನು ತಲೆಯಲ್ಲಿ ಬಿಟ್ಟುಕೊಂಡು ಪ್ರೇಕ್ಷಕರು ಈ ಸಿನಿಮಾ ನೋಡಬೇಕು.

ಇದನ್ನೂ ಓದಿ: KTM Movie Review: ದೀಕ್ಷಿತ್​ ಶೆಟ್ಟಿ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾದ ‘ಕೆಟಿಎಂ’

ಬೇರೆ ಸಿನಿಮಾಗಳಲ್ಲಿ ಕಥಾನಾಯಕನಿಗೆ ತಂದೆ ಅಥವಾ ಅಣ್ಣನಾಗಿ ಕಾಣಿಸಿಕೊಳ್ಳುವ ರಂಗಾಯಣ ರಘು ಅವರು ‘ಶಾಖಾಹಾರಿ’ ಸಿನಿಮಾದಲ್ಲಿ ಒಬ್ಬಂಟಿಯಾದ ಸುಬ್ಬಣ್ಣನಾಗಿ ಕಾಣಿಸಿಕೊಂಡಿದ್ದಾರೆ. ಐವತ್ತರ ಆಸುಪಾಸಿನಲ್ಲಿ ಇರುವ ಸುಬ್ಬಣ್ಣನಿಗೂ ಪ್ರೀತಿ ಚಿಗುರಿದರೆ ಏನಾಗಬಹುದು ಎಂಬ ಸಣ್ಣ ಎಳೆ ಕೂಡ ಈ ಚಿತ್ರದಲ್ಲಿದೆ. ಈ ಸಿನಿಮಾದಲ್ಲಿ ರಂಗಾಯಣ ರಘು ಅವರೇ ಹೀರೋ. ಹಾಗಂತ ಇದು ನಟಿಯ ಜೊತೆ ಡ್ಯುಯೆಟ್​ ಹಾಡುವ ಪಾತ್ರವಲ್ಲ. ಸುಬ್ಬಣ್ಣನ ಪ್ರೇಮದ ಕಹಾನಿ ಬಹಳ ಭಿನ್ನವಾಗಿದೆ. ಕಥೆ ಅಂತ್ಯವಾದಾಗ ಆ ಕಹಾನಿ ಎಲ್ಲರನ್ನೂ ಕಾಡುತ್ತದೆ.

‘ಕಲ್ಲು ಪುಡಿಯಾದರೆ ಮಣ್ಣಾಗುತ್ತದೆ. ಮನಸ್ಸು ಪುಡಿಯಾದರೆ ಕಲ್ಲಾಗುತ್ತೆ’, ‘ಒಬ್ಬ ವಿಲನ್​ ಕಥೆ ಹೇಳ್ತಿದ್ದಾನೆ ಎಂದರೆ ಆ ಕಥೆಗೆ ಅವನೇ ಹೀರೋ ಆಗಿರುತ್ತಾನೆ’ ಎಂಬಂತಹ ಮೊನಚಾದ ಡೈಲಾಗ್​ಗಳು ‘ಶಾಖಾಹಾರಿ’ ಸಿನಿಮಾದಲ್ಲಿವೆ. ಇಡೀ ಸಿನಿಮಾಗೆ ಒಂದು ಬಗೆಯ ಕಲಾತ್ಮಕ ಸ್ಪರ್ಶ ನೀಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಅವರ ಆಶಯಕ್ಕೆ ಸಾಥ್​ ನೀಡುವಂತೆ ಎಲ್ಲ ಕಲಾವಿದರು ಅಭಿನಯಿಸಿದ್ದಾರೆ. ರಂಗಾಯಣ ರಘು ಅವರ ರೀತಿಯೇ ಗೋಪಾಲಕೃಷ್ಣ ದೇಶಪಾಂಡೆ ಕೂಡ ಸಿನಿಮಾದಲ್ಲಿ ಹೈಲೈಟ್​ ಆಗಿದ್ದಾರೆ. ಆಗಾಗ ಕಾಣಿಸಿಕೊಳ್ಳುವ ನಿಧಿ ಹೆಗಡೆ, ನಿನಯ್​, ಹರ್ಷ ಗೋಭಟ್​ ಸಹ ಈ ಸಿನಿಮಾದಲ್ಲಿ ಗಮನ ಸೆಳೆಯುವಂತೆ ಅಭಿನಯಿಸಿದ್ದಾರೆ.

ಇದನ್ನೂ ಓದಿ: Review: ಸರಳವಾದರೂ ತುಂಬ ವಿರಳವಾದ ಪ್ರೇಮಕಥೆಯಾಗಿ ಮೆಚ್ಚುಗೆ ಪಡೆಯುವ ಸುನಿ ಸಿನಿಮಾ

ಪ್ರತಿ ದೃಶ್ಯದಲ್ಲೂ ಲಾಜಿಕ್​ ಹುಡುಕಿದರೆ ‘ಶಾಖಾಹಾರಿ’ ಚಿತ್ರ ಕೊಂಚ ಪೇಲವ ಎನಿಸಬಹುದು. ಪೂರ್ತಿ ಕಥೆ ತೀರ್ಥಹಳ್ಳಿಯ ಮೃಗವಧೆ ಸುತ್ತಮುತ್ತ ನಡೆದರೂ ಕೂಡ ಅಲ್ಲಿನ ಭಾಷೆಯನ್ನು ಸೂಕ್ತವಾಗಿ ಬಳಸಿಕೊಳ್ಳಲು ಈ ಚಿತ್ರಕ್ಕೆ ಸಾಧ್ಯವಾಗಿಲ್ಲ. ವಿಶ್ವಜಿತ್​ ರಾವ್​ ಛಾಯಾಗ್ರಹಣದಿಂದ ಈ ಸಿನಿಮಾದ ಕಥೆಗೆ ರಿಯಲಿಸ್ಟಿಕ್​ ಸ್ಪರ್ಶ ಸಿಕ್ಕಿದೆ. ಮಯೂರ್ ಅಂಬೆಕಲ್ಲು ಅವರ ಸಂಗೀತ ನಿರ್ದೇಶನದಿಂದ ಚಿತ್ರದ ತೀವ್ರತೆ ಹೆಚ್ಚಿದೆ. ನಿರ್ದೇಶಕ ಸಂದೀಪ್​ ಸುಂಕದ್ ಅವರು ಅನಗತ್ಯವಾಗಿ ಏನನ್ನೂ ತುರುಕದೆ ಅಚ್ಚುಕಟ್ಟಾಗಿ ‘ಶಾಖಾಹಾರಿ’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.