Ponnambalam: ಆಲ್ಕೋಹಾಲ್ನಲ್ಲಿ ವಿಷ ಬೆರೆಸಿದ ಸಹೋದರ; ಖ್ಯಾತ ನಟನ ಕೊಲ್ಲಲು ಕುಟುಂಬದವರಿಂದಲೇ ಸಂಚು
ಬಿಯರ್ನಲ್ಲಿ ವಿಷ ಬೆರೆಸಿದ್ದು ಮಾತ್ರವಲ್ಲ ಆಹಾರದಲ್ಲೂ ವಿಷ ಬೆರೆಸುವ ಕೆಲಸ ಆಗಿತ್ತು. ಸಹೋದರನನ್ನು ಅತಿಯಾಗಿ ನಂಬಿದ್ದರಿಂದ ಪೊನ್ನಂಬಲಂ ಅವರಿಗೆ ಈ ಬಗ್ಗೆ ಅನುಮಾನ ಬರಲೇ ಇಲ್ಲ.

ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿ ಫೇಮಸ್ ಆದ ನಟ ಪೊನ್ನಂಬಲಂ ಅವರು ಈಗ ಶಾಕಿಂಗ್ ವಿಚಾರ ಒಂದನ್ನು ಬಿಚ್ಚಿಟ್ಟಿದ್ದಾರೆ. ಅವರು ಇತ್ತೀಚೆಗೆ ಕಿಡ್ನಿ ಕಸಿಗೆ ಒಳಗಾದರು. ಪೊನ್ನಂಬಲಂ (Ponnambalam) ಹೆಚ್ಚು ಕುಡಿಯುತ್ತಾರೆ, ಈ ಕಾರಣಕ್ಕೆ ಕಿಡ್ನಿ ವೈಫಲ್ಯ ಆಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅಸಲಿ ಕಥೆ ಬೇರೆಯೇ ಇದೆ. ಮದ್ಯದಲ್ಲಿ ಸಹೋದರ ವಿಷ ಬೆರೆಸಿದ್ದರಿಂದ ಕಿಡ್ನಿ ಫೇಲ್ ಆಯಿತಂತೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ. ಈ ಮಾತು ಅನೇಕರಿಗೆ ಅಚ್ಚರಿ ಮೂಡಿಸಿದೆ.
‘ಕುಡಿತದಿಂದ ನನ್ನ ಕಿಡ್ನಿ ಹಾಳಾಗಿಲ್ಲ. ಇದಕ್ಕೆ ಕಾರಣ ನನ್ನ ಸಹೋದರ. ನನ್ನ ತಂದೆಗೆ ನಾಲ್ಕು ಹೆಂಡತಿಯರು. ಮೂರನೇ ಹೆಂಡತಿಯ ಮಗ ಅಂದರೆ ಮಲ ಸಹೋದರ ನನ್ನ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಅವನ ಮೇಲೆ ಸಾಕಷ್ಟು ನಂಬಿಕೆ ಇತ್ತು. ನಾನು ಕುಡಿಯುತ್ತಿದ್ದ ಬಿಯರ್ನಲ್ಲಿ ಸ್ಲೋ ಪಾಯ್ಸನ್ ಬೆರೆಸಿದ. ಇದರಿಂದ ನನ್ನ ಕಿಡ್ನಿ ವೈಫಲ್ಯ ಕಂಡಿತು’ ಎಂದು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ ಪೊನ್ನಂಬಲ.
‘ಶ್ರಮವಹಿಸಿ 1500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಇಷ್ಟೆಲ್ಲ ಗಳಿಕೆ ಮಾಡಿದ್ದು ನನ್ನ ಕುಟುಂಬಕ್ಕಾಗಿ. ಆದರೆ, ನನ್ನ ಸಹೋದರನೇ ಈ ರೀತಿ ಮಾಡಿದ ಎಂದಾಗ ಬೇಸರ ಆಗುತ್ತದೆ’ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಕಬ್ಜ ಸಿನಿಮಾ ಆಗಲು ಮುಖ್ಯ ಕಾರಣ ಯಾರು? ಬಹಿರಂಗಪಡಿಸಿದ ನಿರ್ದೇಶಕ ಆರ್.ಚಂದ್ರು
ಬಿಯರ್ನಲ್ಲಿ ವಿಷ ಬೆರೆಸಿದ್ದು ಮಾತ್ರವಲ್ಲ ಆಹಾರದಲ್ಲೂ ವಿಷ ಬೆರೆಸುವ ಕೆಲಸ ಆಗಿತ್ತು. ಸಹೋದರನನ್ನು ಅತಿಯಾಗಿ ನಂಬಿದ್ದರಿಂದ ಪೊನ್ನಂಬಲಂ ಅವರಿಗೆ ಈ ಬಗ್ಗೆ ಅನುಮಾನ ಬರಲೇ ಇಲ್ಲ. ವೈದ್ಯರ ಬಳಿ ಪರೀಕ್ಷೆಗೆ ಒಳಗಾದಾಗಲೇ ವಿಷ ಉಣಿಸಿರುವ ವಿಚಾರ ಗೊತ್ತಾಯಿತು. ಇನ್ನು, ಪೊನ್ನಂಬಲಂ ಮೇಲೆ ಮಾಟಮಂತ್ರ ಕೂಡ ಮಾಡಲಾಗಿದೆಯಂತೆ. ಇದನ್ನು ಮಾಡಿದ್ದೂ ತನ್ನ ಸಹೋದರ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Kabzaa Movie: ಈ ವಾರ ‘ಕಬ್ಜ’ ಎದುರು ತೊಡೆತಟ್ಟಲು ರೆಡಿ ಆದ ಸಿನಿಮಾಗಳು ಇವೇ ನೋಡಿ..
ಸ್ಟಂಟ್ ಮ್ಯಾನ್ ಆಗಿ, ಹಿರಿತೆರೆ ಹಾಗೂ ಕಿರುತೆರೆ ನಟನಾಗಿ ಪೊನ್ನಂಬಲಂ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 1988ರಿಂದ ಚಿತ್ರರಂಗದಲ್ಲಿ ಅವರು ಆ್ಯಕ್ಟೀವ್ ಆಗಿದ್ದಾರೆ. ಕನ್ನಡದ ‘ಚಿನ್ನ’, ‘ಲೇಡಿ ಕಮಿಷನರ್’, ‘ಕಿಚ್ಚ’, ‘ಗುನ್ನ’, ‘ಮಸ್ತಿ’ ಮೊದಲಾದ ಕನ್ನಡ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ತಮಿಳಿನಲ್ಲಿ ಕಾಮಿಡಿಯನ್ ಆಗಿ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ