ದಕ್ಷಿಣ ಭಾರತದ ನಟ ಸಿದ್ಧಾರ್ಥ್ (Siddharth) ‘ರಂಗ್ ದೇ ಬಸಂತಿ’ ಚಿತ್ರದ ಮೂಲಕ ಎಲ್ಲೆಡೆ ಗುರುತಿಸಿಕೊಂಡವರು. ಆದರೆ ಇತ್ತೀಚೆಗೆ ಅವರು ನಟನೆಯ ಹೊರತಾದ ಕಾರಣಗಳಿಂದ ದೇಶಾದ್ಯಂತ ಸುದ್ದಿಯಾಗಿದ್ದಾರೆ. ಭಾರತೀಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಟ್ವೀಟ್ ಒಂದಕ್ಕೆ ಪ್ರತಿಕ್ರಿಯಿಸುವ ಭರದಲ್ಲಿ ಸಿದ್ಧಾರ್ಥ್ ಕೀಳು ಮಟ್ಟದ ಪದಗಳನ್ನು ಬಳಸಿದ್ದು ವಿವಾದ ಸೃಷ್ಟಿಸಿತ್ತು. ಇದೀಗ ಈ ಟ್ವೀಟ್ ಕುರಿತಂತೆ ಸೈನಾ ನೆಹ್ವಾಲ್ ತಂದೆ ಹರ್ವೀರ್ ಸಿಂಗ್ ನೆಹ್ವಾಲ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಸೈನಾ ದೇಶಕ್ಕೆ ಪದಕಗಳನ್ನು ಗೆದ್ದುಕೊಟ್ಟಿದ್ದಾಳೆ. ಆ ನಟ ದೇಶಕ್ಕೆ ಏನು ಮಾಡಿದ್ದಾರೆ? ಎಂದು ಹರ್ವೀರ್ ಪ್ರಶ್ನಿಸಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಹರ್ವೀರ್, ‘‘ನನ್ನ ಮಗಳ ಕುರಿತಾಗಿ ಅಂತಹ ಮಾತುಗಳನ್ನು ಕೇಳಿದಾಗ ಬಹಳ ಖೇದವಾಯಿತು. ಆಕೆ ದೇಶದ ಪರ ಆಟವಾಡಿ ಪದಕಗಳನ್ನು ಗೆದ್ದಿದ್ದಾಳೆ. ದೇಶದ ಹೆಮ್ಮೆ ಹೆಚ್ಚಿಸಿದ್ದಾಳೆ. ಅವರು ದೇಶಕ್ಕಾಗಿ ಏನು ಮಾಡಿದ್ದಾರೆ?’’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗ ಸಿದ್ಧಾರ್ಥ್ ಹೇಳಿಕೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮಹಾರಾಷ್ಟ್ರ ಡಿಜಿಪಿಗೆ ನಟನ ವಿರುದ್ಧ ಪ್ರಕರಣ ದಾಖಲಿಸುವಂತೆ ಪತ್ರ ಬರೆದಿದೆ. ಈ ಕುರಿತು ಪ್ರತಿಕ್ರಿಯಿಸಿದ ಹರ್ವೀರ್, ‘‘ಆಯೋಗದ ನಿರ್ಧಾರ ಸ್ವಾಗತಾರ್ಹ. ಸಿದ್ಧಾರ್ಥ್ ಕ್ಷಮೆ ಕೋರಬೇಕು. ನಿನ್ನೆಯ ಪ್ರಕರಣಕ್ಕೂ ಮೊದಲು ಅವರು ಯಾರೆಂದೇ ಗೊತ್ತಿರಲಿಲ್ಲ’’ ಎಂದಿದ್ಧಾರೆ.
ಪ್ರಕರಣವೇನು?
ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಲೋಪ ಪ್ರಕರಣದ ಕುರಿತಂತೆ ಸೈನಾ ಪ್ರತಿಕ್ರಿಯಿಸುತ್ತಾ, ಕಳವಳ ವ್ಯಕ್ತಪಡಿಸಿದ್ದರು. ಇದಕ್ಕೆ ಸಿದ್ಧಾರ್ಥ್ ಪ್ರತಿಕ್ರಿಯೆ ನೀಡಿ, ‘‘ಸೂಕ್ಷ್ಮ ಕಾಕ್ ವಿಶ್ವ ಚಾಂಪಿಯನ್, ಭಾರತವು ರಕ್ಷಕರನ್ನು ಹೊಂದಿರುವುದಕ್ಕೆ ದೇವರಿಗೆ ಧನ್ಯವಾದಗಳು. ಶೇಮ್ ಆನ್ ಯೂ ರಿಹಾನ್ನಾ’’ ಎಂದಿದ್ದರು. ಅವರು ಬಳಸಿದ ಆಕ್ಷೇಪಾರ್ಹ ಪದಗಳಿಗೆ ವಿರೋಧ ವ್ಯಕ್ತವಾಗಿತ್ತು. ನಂತರದಲ್ಲಿ ಸಿದ್ಧಾರ್ಥ್ ಸಮರ್ಥನೆ ನೀಡುತ್ತಾ, ತಾವು ‘ಕಾಕ್ ಮತ್ತು ಬುಲ್’ ಈ ಅರ್ಥದಲ್ಲಿ ಪದ ಬಳಿಸಿದ್ದೆ. ಅದನ್ನು ಬೇರೆ ರೀತಿ ಓದುವುದು ಸರಿಯಲ್ಲ ಎಂದಿದ್ದರು. ಸಿದ್ಧಾರ್ಥ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸೈನಾ, ‘‘ನಾನು ನಟನೆಯಲ್ಲಿ ಸಿದ್ಧಾರ್ಥ್ರಂತೆ ಆಗಬೇಕು ಎಂದು ಕನಸು ಕಂಡಿದ್ದೆ. ಆದರೆ ಈ ಹೇಳಿಕೆ ಸರಿಯಲ್ಲ. ಅವರು ಉತ್ತಮ ಪದಗಳ ಮೂಲಕ ಪ್ರತಿಕ್ರಿಯಿಸಬಹುದಿತ್ತು’’ ಎಂದಿದ್ದರು.
ಸಿದ್ಧಾರ್ಥ್ ಟ್ವೀಟ್ ಇಲ್ಲಿದೆ:
Subtle cock champion of the world… Thank God we have protectors of India. ??
Shame on you #Rihanna https://t.co/FpIJjl1Gxz
— Siddharth (@Actor_Siddharth) January 6, 2022
ಸೈನಾ ಬೆಂಬಲಕ್ಕೆ ನಿಂತ ಕ್ರೀಡಾ ಸಚಿವ ಕಿರಣ್ ರಿಜಿಜು:
ದೇಶಾದ್ಯಂತ ಸಿದ್ಧಾರ್ಥ್ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದ್ದು, ಹಲವರು ಸೈನಾ ಬೆಂಬಲಕ್ಕೆ ನಿಂತಿದ್ದಾರೆ. ಕೇಂದ್ರ ಕ್ರೀಡಾಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿ, ‘‘ಸೈನಾ ದೇಶದ ಹೆಮ್ಮೆಯ ಪ್ರತಿಭೆ. ಅವರ ವಿರುದ್ಧ ಕೀಳು ರೀತಿಯ ಹೇಳಿಕೆ ನೀಡುವುದು ಕೆಟ್ಟ ಮನಸ್ಥತಿ ತೋರಿಸುತ್ತದೆ’’ ಎಂದಿದ್ದಾರೆ.
ಇದನ್ನೂ ಓದಿ:
Pushpa The Rise: ರಶ್ಮಿಕಾರಂತೆ ಹೆಜ್ಜೆಹಾಕಿ ಎಲ್ಲರನ್ನೂ ದಂಗಾಗಿಸಿದ ಸ್ಪೈಡರ್ಮ್ಯಾನ್! ಇಲ್ಲಿದೆ ವಿಡಿಯೋ ಸಾಕ್ಷಿ