ಅಲ್ಲು ಅರ್ಜುನ್ ಜೊತೆ ಹೊಸ ಸಿನಿಮಾ ಘೋಷಿಸಿದ ಮೈತ್ರಿ: ನಿರ್ದೇಶಕ ಯಾರು?

Allu Arjun next movie: ಅಲ್ಲು ಅರ್ಜುನ್ ಪ್ರಸ್ತುತ ಅಟ್ಲಿ ನಿರ್ದೇಶನ ಮಾಡುತ್ತಿರುವ ಭಾರಿ ಬಜೆಟ್​ನ ಸಿನಿಮಾನಲ್ಲಿ ನಟಿಸುತ್ತಿದ್ದು, ದೀಪಿಕಾ ಪಡುಕೋಣೆ ಆ ಸಿನಿಮಾದ ನಾಯಕಿ. ಅಲ್ಲು ಅರ್ಜುನ್ ನಟಿಸಿದ್ದ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾ ನಿರ್ಮಿಸಿದ್ದ ಮೈತ್ರಿ ಮೂವಿ ಮೇಕರ್ಸ್ ಇದೀಗ ಅಲ್ಲು ಅರ್ಜುನ್ ಜೊತೆಗೆ ಹೊಸ ಸಿನಿಮಾ ಘೋಷಿಸಿದ್ದಾರೆ. ನಿರ್ದೇಶಕ ಯಾರು?

ಅಲ್ಲು ಅರ್ಜುನ್ ಜೊತೆ ಹೊಸ ಸಿನಿಮಾ ಘೋಷಿಸಿದ ಮೈತ್ರಿ: ನಿರ್ದೇಶಕ ಯಾರು?
Allu Arjun

Updated on: Jan 14, 2026 | 6:34 PM

‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳ ಮೂಲಕ ಅಲ್ಲು ಅರ್ಜುನ್ (Allu Arjun) ಅಂತರಾಷ್ಟ್ರೀಯ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರ ಸಿನಿಮಾಗಳಿಗೆ ಈಗ ಅಮೆರಿಕ, ಅರಬ್ ದೇಶಗಳಲ್ಲಿ ಮಾತ್ರವಲ್ಲದೆ, ರಷ್ಯಾ, ಜಪಾನ್, ಚೀನಾ ಇನ್ನೂ ಕೆಲವು ದೇಶಗಳಲ್ಲಿ ಬೇಡಿಕೆ ಇದೆ. ಅಲ್ಲು ಅರ್ಜುನ್ ಅವರ ಸ್ಟಾರ್ ಗಿರಿಯನ್ನು ಇಂಟರ್ನ್ಯಾಷನಲ್ ಲೆವೆಲ್​​ಗೆ ಕೊಂಡೊಯ್ದ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳ ನಿರ್ಮಾಪಕರಾದ ಮೈತ್ರಿ ಮೂವಿ ಮೇಕರ್ಸ್ ಇದೀಗ ಮತ್ತೊಮ್ಮೆ ಅಲ್ಲು ಅರ್ಜುನ್ ಜೊತೆಗೆ ಕೈಜೋಡಿಸಿದೆ. ಅಲ್ಲು ಅರ್ಜುನ್ ಜೊತೆಗೆ ಹೊಸದೊಂದು ಸಿನಿಮಾವನ್ನು ಇಂದಷ್ಟೆ ಮೈತ್ರಿ ಮೂವಿ ಮೇಕರ್ಸ್ ಘೋಷಣೆ ಮಾಡಿದೆ.

ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಲಿರುವ ಈ ಸಿನಿಮಾವನ್ನು ನಿರ್ದೇಶನ ಮಾಡಲಿರುವುದು ತಮಿಳಿನ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್. ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ನಿರ್ದೇಶಿಸಿದ್ದ ಲೋಕೇಶ್ ಕನಗರಾಜ್ ಇದೀಗ ಅಲ್ಲು ಅರ್ಜುನ್ ನಟನೆಯ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಇದೀಗ ಮೈತ್ರಿ ಅನಿಮೇಟೆಡ್ ಟೀಸರ್ ಒಂದನ್ನು ಹಂಚಿಕೊಂಡಿದ್ದು, ಟೀಸರ್​​ನಲ್ಲಿ ಅಲ್ಲು ಅರ್ಜುನ್, ಕುದುರೆಯ ಮೇಲೆ ಕೂತಿದ್ದಾರೆ. ಸಾಕಷ್ಟು ಪ್ರಾಣಿಗಳು ಟೀಸರ್​​ನಲ್ಲಿವೆ. ಸಿನಿಮಾದ ಕತೆ ಅರಣ್ಯದಲ್ಲಿ ನಡೆಯುತ್ತದೆ ಎಂಬ ಸುಳಿವನ್ನು ಟೀಸರ್ ನೀಡುತ್ತಿದೆ.

ಅಲ್ಲು ಅರ್ಜುನ್ ನಟಿಸಿ, ಲೋಕೇಶ್ ಕನಗರಾಜ್ ನಿರ್ದೇಶನ ಮಾಡಲಿರುವ ಈ ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಲಿದ್ದಾರೆ. ಇವುಗಳ ಹೊರತಾಗಿ ಟೀಸರ್​​ನಲ್ಲಿ ಹೆಚ್ಚಿನ ಅಂಶಗಳು ಬಹಿರಂಗವಾಗಿಲ್ಲ. ಸಿನಿಮಾದ ನಾಯಕಿ, ಇತರೆ ಪಾತ್ರಗಳು ಇನ್ನಷ್ಟೆ ಘೋಷಣೆ ಆಗಬೇಕಿದೆ. ಆದರೆ ಸಿನಿಮಾದ ಚಿತ್ರೀಕರಣ ಇದೇ ವರ್ಷ ಆರಂಭವಾಗಲಿದೆ ಎಂದು ಸಹ ಟೀಸರ್​​ನಲ್ಲಿ ಹೇಳಲಾಗಿದೆ.

ಇದನ್ನೂ ಓದಿ:ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಮಲ್ಟಿಪ್ಲೆಕ್ಸ್

ಅಲ್ಲು ಅರ್ಜುನ್ ಪ್ರಸ್ತುತ ಅಟ್ಲಿ ನಿರ್ದೇಶಿಸುತ್ತಿರುವ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಸಿನಿಮಾವನ್ನು ಹಾಲಿವುಡ್​ನ ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ಮಾದರಿಯಲ್ಲಿ ಅಟ್ಲಿ ಕಟ್ಟುತ್ತಿದ್ದಾರೆ. ಆ ಸಿನಿಮಾದ ಬಳಿಕ ತ್ರಿವಿಕ್ರಮ್ ಜೊತೆಗೆ ಮತ್ತೊಂದು ಸಿನಿಮಾನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಮೈತ್ರಿ ಘೋಷಿಸಿರುವಂತೆ ಅಲ್ಲು ಅರ್ಜುನ್ ಮೊದಲಿಗೆ ಅಟ್ಲಿ ನಿರ್ದೇಶನದ ಸಿನಿಮಾನಲ್ಲಿಯೇ ನಟಿಸಲಿದ್ದಾರೆ.

ಇನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದ ‘ಕೂಲಿ’ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣಲಿಲ್ಲ ಹಾಗೆಂದು ಪೂರ್ಣ ನಿರಾಸೆ ಮಾಡಿಲ್ಲ. ಲೋಕೇಶ್ ಕನಗರಾಜ್ ಕೈಯಲ್ಲಿ ಸಹ ಹಲವು ಸಿನಿಮಾಗಳಿವೆ. ‘ಡಿಸಿ’ ಹೆಸರಿನ ಸಿನಿಮಾನಲ್ಲಿ ಅವರು ನಾಯಕರಾಗಿ ನಟಿಸುತ್ತಿದ್ದಾರೆ. ‘ಖೈದಿ 2’ ನಿರ್ದೇಶನ ಮಾಡಬೇಕಿದೆ. ಆಮಿರ್ ಖಾನ್ ಅವರಿಗಾಗಿ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ‘ವಿಕ್ರಂ 2’ ಮಾಡಬೇಕಿದೆ. ಸೂರ್ಯ ಅವರಿಗಾಗಿ ಸಿನಿಮಾ ಮಾಡುವುದಾಗಿಯೂ ಘೋಷಿಸಿದ್ದಾರೆ. ಆದರೆ ಇದೆಲ್ಲದರ ನಡುವೆ ಇದೀಗ ಅಲ್ಲು ಅರ್ಜುನ್ ಸಿನಿಮಾ ಒಪ್ಪಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:34 pm, Wed, 14 January 26